ಮೂರನೇ ಕಣ್ಣು : ಎಲ್ಲಿಂದ ಶುರು ಮಾಡ್ಲಿ ಬೆಳಗ್ಗೆ ಎದ್ದಾಗಿಂದಲಾ ರಾತ್ರಿ ಮಲ್ಗೋದ್ರಿಂದ್ಲಾ….

 ಬೆಳಗ್ಗೆ ಎಳೋದು ಲೇಟು. ಎಷ್ಟು ಅಂದ್ರೆ ಅದು ರಾತ್ರಿ ಎಷ್ಟೋತ್ತಿಗೆ ಮಲ್ಗಿದೆ ಅನ್ನೋದನ್ನ ಅವಲಂಬಿಸಿರುತ್ತೆ. ಹೌದು ಬೆಳಗ್ಗೆ ರಾತ್ರಿ ಎರಡು ಒಂದನ್ನೊಂದು ಅವಲಂಬಿಸಿರುತ್ತೆ. ಕಷ್ಟು ಸುಖಗಳಂತೆ. ರಾತ್ರಿ ಚೆನ್ನಾಗಿ ನಿದ್ರೆ ಬಂದ್ರೆ ಬೆಳಗ್ಗೆ ಸುಲಲಿತವಾಗಿ ಕಳೆದುಹೋಗುತ್ತೆ. ಬೆಳಗ್ಗೆ ಸುಂದರವಾಗಿದ್ರೆ ರಾತ್ರಿ ಸುಖನಿದ್ರೆ. ಹೌದು ಬೆಳಗ್ಗೆ 9 ಗಂಟೆಗೆ ಎದ್ರೆ ಒಂದಷ್ಟು ಕಸ, ಪಾತ್ರೆ ತೊಳೆಯೋದು, ಕಾಫಿ, ರಾಗಿ ಗಂಜಿ, ಸಾಧ್ಯ ಆದ್ರೆ ಒಂದು ತಿಂಡಿ ಅಥವಾ ಒಂದು ಅಡುಗೆ ಅಂದ್ರೆ ರಾತ್ರಿ ಮಧ್ಯಾಹ್ನಕ್ಕೆ ಒಂದು ಅನ್ನ ಸಾಂಬರ್, ಅಥವಾ ಚಪಾತಿ ಪಲ್ಯ. ಇದಷ್ಟು ಮಾಡಿ, ಆಫೀಸ್ ಹೋರಡೋ ಅಷ್ಟ್ರಲ್ಲಿ ಮಧ್ಯಾಹ್ನ 2 ಗಂಟೆ ಆಗಿರುತ್ತೆ. ಯಾಕೆ 10 ನಿಮಿಷ ಜಾಸ್ತಿ ಆಗಿರುತ್ತೆ. ಇನ್ನು ಮನೆಲೇ ಇರ್ತೆನೆ. ಅಲ್ಲಿಗೆ ಕಾಲು ಗಂಟೆ 20 ನಿಮಿಷ ಆಫೀಸ್‍ಗೆ ಲೇಟು. ಸರಿ ಇನ್ನು ಒಂದೇ ಉಸಿರಿಗೆ ಆಫೀಸ್‍ಲ್ಲಿ ಕೆಲ್ಸ ಶುರು ಆದ್ರೆ ಮುಗಿಯೋದು 10 ಗಂಟೆ ರಾತ್ರಿ ಈ ಅವಧಿಯಲ್ಲೇ ಅಂದು ಅಷ್ಟೋಂದು ಬಹುಮುಖ್ಯವೆನ್ನಿಸುವಂಥ ಸುದ್ದಿಗಳಿಲ್ಲದೇ ಇದ್ದಲ್ಲಿ ಆಫೀಸ್ ಫ್ರೆಂಡ್ಸ್ ಜತೆ ಒಂದು ಟೀ, 10 ರಿಂದ 15 ನಿಮಿಷದ ಬ್ರೇಕ್ ಒಂದಷ್ಟು ಹರಟೆ ಇಷ್ಟರ ಹೊರತಾಗಿ ಇನ್ನೇನು ಮಾಡಲಾಗಲ್ಲ. ಬೆಳಗ್ಗೆ ಬೇಗ ಎದ್ದು ಅಡುಗೆ ಮಾಡಿಕೊಂಡಿದ್ರೆ ಬಾಕ್ಸ್ ಊಟ. ಇಲ್ಲದಿದ್ದರೆ ಅದೇ ರಸ್ತೆ ಬದಿ ಇಡ್ಲಿ, ದೋಸೆ. ಇದಿಷ್ಟು ಅಂದಿನ ನಮ್ಮ ದಿನಚರಿ. ಅಲ್ಲಿಗೆ ರಾತ್ರಿ 10 ರಿಂದ 11 ಗಂಟೆ. ಮನೆಗೆ ಬಂದ್ರೆ ಬಂದ ಕೂಡಲೇ ನಿದ್ದೆ ಬರಲ್ಲ. ಕೆಲವೊಮ್ಮೆ ಯಾವುದೋ ಒಂದು ಪುಸ್ತಕ ಹಿಡಿಯುತ್ತೇನೆ. ಅದು ಮುಗಿಯಲ್ಲ ನಾನು ಬಿಡಲ್ಲ. ಅಲ್ಲಿಗೆ ಸರಿ ಹೊತ್ತು ಎರಡು, ಮೂರು ಗಂಟೆ ಮತ್ತೆ ಬೆಳಗ್ಗೆ ಏಳೋದು ಲೇಟೇ… ಹ್ಮು. ಹಲವು ಸಲ ಪುಸ್ತಕದ ಸಮಯವನ್ನು ಫಿಲ್ಮಂಗಳು, ಒಂದಷ್ಟು ಹಾಡು, ಸ್ನೇಹಿತರು, ಕುಟುಂಬದವರ ಜತೆ ಹರಟೆ, ಫೋನ್, ನೆಟ್ ಹೀಗೂ ಒಂದಷ್ಟು ಟೈಮ್ ಕಳೆಯುತ್ತೇನೆ. ಇನ್ನು ವಾರದ ರಜೆಗಳು ಊರು-ಕೇರಿ, ಜ್ವರಕ್ಕೆ ಮೀಸಲು.

ಇನ್ನು ಕೆಲಸದ ವಿಷಯಕ್ಕೆ ಬಂದ್ರೆ ನಾವು ಡಿಸಿಪ್ಲೀನ್ ಅಲ್ಲದಿದ್ರೂ ತಕ್ಕ ಮಟ್ಟಿಗೆ ಡೆಡಿಕೇಕೆಟೆಡ್. ಹೌದು ಮಾಡೋ ಕೆಲ್ಸದಲ್ಲಿ ಅಚ್ಚುಕಟ್ಟೆ. ಯಾಕಂದ್ರೆ ಬದುಕು ಒಂದು ಲಯದಲ್ಲಿ ಸಾಗ್ತಿದೆ ಅಂದ್ರೆ ಅದು ನಮ್ಮ ಕೆಲ್ಸದಿಂದ್ಲೇ ಅಂಥ ನಂಬಿಕೊಂಡವರು ನಾವು. ಹೌದು ಬಹಳಷ್ಟು ಜನ ನನ್ನ ಕೆಲ್ಸದ ಬಗ್ಗೆ ಗೊತ್ತಿಲ್ಲದವರು ಗೊತ್ತಿರೋ ಕೆಲವೊಬ್ರು ಒಂದಷ್ಟು ಪ್ರಶ್ನೆ ಕೇಳ್ತಾರೆ. ಏನು ಕೆಲ್ಸ ಪೇಪರ್ ಆಫೀಸ್‍ನಲ್ಲಿ ಅಂಥಾ. ಆಗೆಲ್ಲಾ ನನಗೆ ವಿವರಿಸಿ ಹೇಳೋಕೆ ಇರಿಸು ಮುರಿಸಾಗುತ್ತೆ. ಯಾಕೆಂದ್ರೆ ಹೀಗೆ ಕೇಳೋರ ಧ್ವನಿಯಲ್ಲೇ ಒಂದು ಮೆಸೆಜ್ ನನಗೆ ಸಿಕ್ಕಿರುತ್ತೆ. ಅವರ ಗತ್ತಲ್ಲಿ ನೀವೇನು ಕೆಲ್ಸ ಮಾಡ್ತೀರಿ, ಆಂಕರ್ ಆಗ್ಬೇಕಿತ್ತು. ರಿಪೋರ್ಟಿಂಗ್ ಮಾಡ್ಬೇಕಿತ್ತು. ನಿಮ್ಮ ಹೆಸರು ಬರುತ್ತಾ, ಪ್ರಮೋಷನ್ ಅಂದ್ರೆ ಪತ್ರಿಕೆ ಎಡಿಟರ್ ಆಗ್ತಿರಾ, ಅದೂ ಹೆಣ್ಣು ಮಕ್ಕಳಿಗೆ ಆ ಅವಕಾಶ ಕಡಿಮೆ ಹೀಗೆ ಏನೇನೋ ಕೇಳ್ತಾರೆ. ಅವರ ಪ್ರಶ್ನೆಗಳು ಫ್ರೌಢಿಮೆ ಹಾಗೂ ಆಳವಾದ ಜ್ಞಾನಕ್ಕೆ ಸಂಬಂಧಪಟ್ಟವು ಎಂಬ ಅರಿವು ನನಗೆ ಇದೆ. ಆದರೂ ತೋರಿಕೆ ಬದುಕಿಗೆ ಒಗ್ಗಿಕಂಡವರು ಹೇಗೆಲ್ಲ ನಮ್ಮ ಆತ್ಮಬಲವನ್ನು ಕುಗ್ಗಿಸುವ ಯತ್ನ ಮಾಡುತ್ತಾರೆ ಎಂಬುದನ್ನಷ್ಟೇ ನಾನಿಲ್ಲಿ ಹೇಳಬಯಸೋದು.

 

ಹೌದು ನನಗೆ ನಾನು ಮಾಡುವ ಕೆಲಸದಲ್ಲಿ ಆತ್ಮತೃಪ್ತಿ ಇದೆ. ಬಯಸಿ ಇದನ್ನೇ ಓದಬೇಕೆಂದು ಓದಿ, ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಬಂದವಳು. ಆದ ಕಾರಣ 10 ವರ್ಷಗಳಿಂದ ಕೆಲಸ ಮಾಡ್ತಿದ್ದೇನೆ ಈ ಕ್ಷೇತ್ರದಲ್ಲಿ ಇನ್ನೂ ಮಾಡುವ ಕಲಿವ ಹಪಹಪಿಯೂ ಇದೆ. ನಾನೊಬ್ಬ ಆಂಕರ್ ಆಗಲು ಬಯಸಲಿಲ್ಲ. ನನ್ನ ಹೆಸರು ದಿನನಿತ್ಯ ಬರುತ್ತಿಲ್ಲ, ಅಂಥದ್ದನ್ನೇನೂ ನಾನು ಬರೆಯಲಿಲ್ಲ. ಹಾಗಂತ ನನ್ನ ತಲೆಯಲ್ಲಿ ಲದ್ದಿ ತುಂಬಿದೆ ಎಂದು ಭಾವಿಸಿದರೆ ನೀವು ನಾನೇನು ಮಾಡಲಿ. ನನಗೆ ಕಚೇರಿಯಲ್ಲಿ ಬಿಡುವಿಲ್ಲದಷ್ಟು ಕೆಲಸವಿದೆ. ಇದರ ನಡುವೆ ಕುಟುಂಬ, ನನ್ನ ವೈಯಕ್ತಿಕ ಬದುಕಿದೆ. ಇದೆಲ್ಲವನ್ನೂ ನಾನು ಸರಿದೂಗಿಸಬೇಕು.

ಒಂದು ಜಿಲ್ಲೆಯ ಐದಾರು ತಾಲೂಕುಗಳ ಸುದ್ದಿಗಳನ್ನು ನಾನು ನೋಡುತ್ತೇನೆ. ಅವರು ಕಳಿಸುವ ಅಷ್ಟೂ ಸುದ್ದಿಗಳನ್ನು ನಾನು ಓರಣ ಮಾಡುತ್ತೇನೆ. ಕೊಂಬು, ಇಳಿ ಎಲ್ಲವನ್ನೂ ಅಕ್ಷರ ಅಕ್ಷರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸರಿಮಾಡುತ್ತೇನೆ. ಸುಂದರವಾಗಿ ಒಳ್ಳೆ ಶೀರ್ಷಿಕೆ ಅವರು ಬರೆದದ್ದಕ್ಕಿಂತಲೂ ಸುಂದರ ರೂಪು ಕೊಟ್ಟು ಓದಲು ಕಳಿಸುತ್ತೇನೆ. ಓದುವಾಗಿ ನಿಸ್ಸಾರವೆನ್ನಿಸಿದರೆ ನೀವು ಪತ್ರಿಕೆಯನ್ನೇ ತೆಗೆದುಕೊಳ್ಳುವುದಿಲ್ಲ. ಈ ಮಧ್ಯೆ ನನಗೆ ನನ್ನದೇ ಆದ ಲಿಮಿಟ್ಸ್‍ಗಳಿರುತ್ತವೆ. ಹೌದು ಇರುವ ಅದನ್ನು ಪತ್ರಿಕೆ ಸ್ಟೈಲ್ ಶೀಟ್ ಎನ್ನುತ್ತೇವೆ. ಡೆಡ್‍ಲೈನ್ ಇರುತ್ತೆ. ಹೀಗೆ ಸಾಕಷ್ಟು ಜವಾಬ್ದಾರಿಗಳನ್ನು ನನ್ನ ಹಂತದಲ್ಲಿ ನಾನು ನಿಭಾಯಿಸುತ್ತೇನೆ. ಹಾಗೇ ನನ್ನ ಸಹೋದ್ಯೋಗಿಗಳೂ ಕೂಡ. ಸಬ್ ಎಡಿಟರ್, ಸೀನಿಯರ್ ಸಬ್ ಎಡಿಟರ್ಸ್, ಡಿಸೈನರ್ಸ್, ವಿಭಾಗದ ಮುಖ್ಯಸ್ಥರು, ಮುಖ್ಯ ಉಪ ಸಂಪಾದಕರು, ರಿಪೋರ್ಟರ್ಸ್ ಹೀಗೆ ಎಲ್ಲರೂ ಅವರ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಅವರ ಕೆಲಸದಲ್ಲಿ ತೃಪ್ತರಾಗಿರುತ್ತಾರೆ. ಇಲ್ಲಿ ಯಾರ ಕೆಲಸವೂ ಮೇಲು ಕೀಳಲ್ಲ. ಅವರವರ ಕರ್ತವ್ಯಗಳಿಗೆ ಬದ್ಧರಾಗಿರುತ್ತಾರೆ. ಆದರೆ ಈ ಜನರಿಗೆ ಮಾಧ್ಯಮದವರೆಂದರೆ ಕಾಣೋದು ಬರೀ ಆಂಕರ್‍ಗಳು. ಅಬ್ಬರಿಸಿ ಬೊಬ್ಬಿರಿಯೋ ಅವರೂ ಕೂಡ ನಮ್ಮಂಥೆ ಅವರ ಕರ್ತವ್ಯ ಮಾಡುತ್ತಾರೆ. ಅದು ಅವರ ಆತ್ಮತೃಪ್ತಿಗೆ ಬಿಟ್ಟ ವಿಚಾರ.

ಜೀವನ ಹೀಗೆ ಒಬ್ಬೊಬ್ಬರದ್ದು ಒಂದೊಂದು ದಿಕ್ಕು ಸಾಗ್ತಾ ಇರುತ್ತೆ. ಹೊಟ್ಟೆಪಾಡು. ರೊಟೀನ್ ಜೀವನ ಚಕ್ರದಲ್ಲಿ ಸಿಕ್ಕಿಕೊಂಡವರು ಕುದುರೆಗೆ ಮುಖವಾಡ ಕಟ್ಟಿದ ಮಾದರಿಯಲ್ಲಿ ಏಗುತ್ತಿರುತ್ತಾರೆ. ಕಚೇರಿ ಕೆಲಸ, ಅಡುಗೆ, ಕುಟುಂಬ ನಿರ್ವಹಣೆ, ಅನಾರೋಗ್ಯ, ಮನೆ, ಮದ್ವೆ ಲೋನ್, ಪಾಲಕರ ಸೇವೆ, ಊರು, ಹೊಲ, ವಾಹನ, ಸೈಟು ಹೀಗೆ ಒಬ್ಬೊಬ್ಬರದ್ದೂ ಒಂದೊಂದು ರೀತಿಯಲ್ಲಿ ಸಾಗುತ್ತಿರುತ್ತೆ. ಆದರೆ ದುಡಿಮೆ ವಿಚಾರದಲ್ಲಿ ಎಲ್ಲರಿಗೂ ಅನಿವಾರ್ಯ. ಅವರವರ ತಾಕತ್ತಿನಂತೆ ದುಡಿವ ಮಾರ್ಗ ಕಂಡುಕೊಂಡಿರುತ್ತಾರೆ. ಕೆಲವರು ಅದರಲ್ಲೇ ತಮ್ಮ ತಂತ್ರಗಳಿಂದ ಕ್ರಿಯೇಟಿವ್ ಅನ್ನಿಸಿಕೊಳ್ತಾರೆ. ಇನ್ನೂ ಕೆಲವರು ದುಡೀತಾರೆ. ತಮ್ಮ ತೃಪ್ತಿ ಹಾಗೂ ಅವಶ್ಯಕತೆಗಳಿಗಾಗಿ ದುಡಿಮೆಯನ್ನು ಕಂಡುಕೊಂಡಿರುತ್ತಾರೆ ಇವರು. ಇಂಥವರು ತಮ್ಮಷ್ಟಕ್ಕೆ ತಮ್ಮನ್ನು ಅಡ್ವರ್ಟೈಸ್ ಮಾಡಿಕೊಳ್ಳೋಲ್ಲ. ಇಂಥವರ ಗುಂಪುಲ್ಲಿ ನಮ್ಮ ದಿನನಿತ್ಯದ ಹಾಲು, ಸೊಪ್ಪು ಮಾರುವ, ಕಿರಾಣಿ ಅಂಗಡಿಯವ, ಬಸ್ ಕಂಡಕ್ಟರ್, ಆಟೋ ಚಾಲಕ, ಚಪ್ಪಲಿ ಹೊಲೆಯುವವ, ನಮ್ಮ ತಂದೆ, ಸಾಕಾಯ್ತು ಎಂದು ಹೇಳದೇ ಮುಂಜಾನೆಯಿಂದ ರಾತ್ರಿವರೆಗೆ ದುಡಿವ ಅಮ್ಮ ಎಲ್ಲರೂ ಬರ್ತಾರೆ.

ಇವರೆಲ್ಲಾ ಒಂದು ದೃಷ್ಟಿಯಲ್ಲಿ ತಮ್ಮ ಹೊಟ್ಟೆಪಾಡಿನ ದುಡುಮೆಯಾದರೆ ತಮ್ಮ ಆತ್ಮತೃಪ್ತಿಯ ಜತೆಗೆ ಕೆಲಸವನ್ನು ಹೆಣೆದುಕೊಂಡು ಯಾರ ಹೊಗಳಿಕೆಯನ್ನೂ ಬಯಸದೇ ಮಾಡಿ ಮುಗಿಸುತ್ತಿರುತ್ತಾರೆ. ಕೊನೆ ಕೊನೆಗೆ ಇದು ಯಾಂತ್ರಿಕ ಬದುಕಾಗುತ್ತದೆ. ಮಾಡುವ ಕೆಲಸ ಮಾಡದಿದ್ದರೆ ಅವರು ಚಟಪಡಿಸುತ್ತಾರೆ. ಅಷ್ಟು ಆ ಬದುಕಿಗೆ ಒಗ್ಗಿಕೊಂಡು ಬಿಡುತ್ತಾರೆ. ಇವರು ನಮಗೆ ಮಾದರಿಯೇ ಆಗೋದಿಲ್ಲ. ಇವರಲ್ಲಿ ನಮಗೆ ಯಾವೊಬ್ಬ ಸೆಲಬ್ರೆಟಿ ಕಾಣರು. ಯಾಕೆಂದ್ರೆ ನಮಗೆ ಬೇಕಿರೋದು ಬಣ್ಣದ ಪ್ರಪಂಚ. ಬಣ್ಣ ಹಚ್ಚಿಕೊಂಡವರು. ರಾಜಕೀಯ ಲೋಭದ ಕಪಟನಾಟಕ ಸೂತ್ರಧಾರಿಗಳು. ಮನೆ ಕೆಲಸದವಳು, ನಮ್ಮ ಊರಿನ ಶಾಲೆಗೆ ಬರೋ ಟೀಚರ್, ಆಟೋ ಓಡಿಸಿ ಸಂಸಾರ ದೂಡುವ ಆಟೋ ಚಾಲಕ, ಇದ್ದ ಎರಡು ಡ್ರೆಸ್‍ಗಳಲ್ಲೇ ಪಿಯು ಟಾಪರ್ ಆದ ಪಕ್ಕದ ಮನೆ ಹುಡುಗಿ ಚೇ ಇಂಥವರ ಜತೆ ಒಂದು ಸೆಲ್ಫಿ ತೆಗೆದುಕೊಳ್ಳಿ ನೋಡೋಣ. ಚೇ ಇವರಾರೂ ನಮ್ಮ ಪಾಲಿಗೆ ಸೆಲಬ್ರಿಟಿಗಳಲ್ಲ. ಹೌದು ಇವರೂ ಸೆಲಬ್ರಿಟಿಗಳೇ…. ದಿನ ನಿತ್ಯದ ತಮ್ಮ ಕೆಲಸಕ್ಕೆ ಬೇಕಾದಂತೆ ತಮ್ಮ ಸುತ್ತಮುತ್ತಲ ಜನಜೀವನಕ್ಕೆ ತಕ್ಕಂತೆ ತಲೆಗೆ ಕೊಬ್ಬರಿ ಎಣ್ಣೆ ಹಾಕಿಯೋ, ಜಡೆ ಹೆಣೆದೋ, ಸೀರೆ ಉಟ್ಟು ಕೆಲಸ ಮಾಡ್ತಾರೆ. ಇವರದ್ದೂ ಮೇಕಪ್ಪೇ. ಇವರ ಬದುಕಿಗೆ ಪಾತ್ರಕ್ಕೆ ತಕ್ಕಂಥ ಮೇಕಪ್. ವಿಪರ್ಯಾಸವೆಂದ್ರೆ ಇವರ ಬಗ್ಗೆ ನಮಗಿರೋ ತಾತ್ಸಾರ. ಕಲರ್‍ಫುಲ್ ಜಗತ್ತಿನವರಲ್ಲ ಇವರು.

ಇನ್ನು ಕೆಲವರು ಕಡ್ಡಿಯನ್ನು ಗುಡ್ಡದಂತೆ ಬಿಂಬಿಸಿಕೊಳ್ಳುತ್ತಾ ತಮ್ಮ ವೀರಾವೇಶ ಮೆರೆಯುತ್ತಾರೆ. ನಾನು ಹೇಳಿದ ಜನರ ಪೈಕಿ ಇಂಥಾ ವೀರಾವೇಶ ಯಾರಿಗೂ ಇರುವುದಿಲ್ಲ. ಇವರು ನನ್ನ ಪ್ರಕಾರ ಅಪ್ಪಟ ಶ್ರಮಿಕರು.

Comments are closed.

Social Media Auto Publish Powered By : XYZScripts.com