ಸೈಬರ್ ಅಟ್ಯಾಕ್ :ತತ್ತರಿಸಿದ ವಿಶ್ವ,ಸಿಸ್ಟಂ ಅಪ್ ಡೇಟ್ ಗೆ ಆರ್ ಬಿಐ ಸೂಚನೆ, ಎಟಿಎಂಗಳಲ್ಲಿ ಹಣವಿಲ್ಲ..

ನವದೆಹಲಿ: ವಿಶ್ವಾದ್ಯಂತ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸೈಬರ್ ದಾಳಿ ನಡೆದಿರುವ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳ ಸಾಫ್ಟ್ ವೇರ್ ಅಪ್ ಡೇಟ್ ಮಾಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಎಟಿಎಂ ಗಳ ಸಿಸ್ಟಂ ಅಪ್ ಡೇಟ್ ಆಗುವವರೆಗೂ ಎಟಿಎಂಗಳಿಗೆ ಹಣ ತುಂಬದಂತೆಯೂ ಸೂಚಿಸಿರುವುದರಿಂದ ಎಟಿಎಂಗಳಲ್ಲಿ ಮತ್ತೆ ಹಣಸಿಗದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸೈಬರ್ ದಾಳಿಯಿಂದಾಗಿ ಬ್ಯಾಂಕ್ ಗಳ ಎಟಿಎಂಗಳ ಮೇಲೆ ತೀವ್ರತರ ಪರಿಣಾಮ ಬೀರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಟಿಎಂ ಗಳಲ್ಲಿನ ಸಿಸ್ಟಮ್​ ಅಪ್​ ಡೇಟ್​ ಕಾರ್ಯಕ್ಕೆ ಆರ್ ಬಿಐ ಮುಂದಾಗಿದೆ. ಈ ಬಗ್ಗೆ ಎಲ್ಲ ಬ್ಯಾಂಕುಗಳಿಗೂ ಸೂಚನೆ ರವಾನಿಸಿದ್ದು, ಸಿಸ್ಟಮ್ ಅಪ್ ಡೇಟ್ ಆಗುವವರೆಗೆ ದೇಶಾದ್ಯಂತ ಎಟಿಎಂಗೆ ಹಣ ತುಂಬಿಸುವ ಕಾರ್ಯ ಸ್ಥಗಿತವಾಗಿದೆ.

ಇದರಿಂದಾಗಿ ಎಟಿಎಂಗಳಲ್ಲಿ ಮತ್ತೆ ನೋ ಕ್ಯಾಶ್​​ ಬೋರ್ಡ್​​​​​ ರಾರಾಜಿಸತೊಡಗಿವೆ. ನಗದು ಹಣಕ್ಕಾಗಿ ಮತ್ತೆ ಹಾಹಾಕಾರ ಏಳುವ ಸಾಧ್ಯತೆ ಇದೆ. ಸದ್ಯ ದೇಶದಲ್ಲಿರುವ 2.25 ಲಕ್ಷ ಎಟಿಎಂಗಳ ಪೈಕಿ ಶೇಕಡಾ 60% ಎಟಿಎಂಗಳಲ್ಲಿ ಔಟ್ ಡೇಟೆಡ್ ವಿಂಡೋಸ್ ಸಾಫ್ಟ್​ವೇರ್ ಅನ್ನು ಬಳಸಲಾಗುತ್ತಿದ್ದು, ಈ ಎಲ್ಲಾ ಎಟಿಎಂಗಳು ಅಪ್​ಡೇಟ್ ಆಗೋವರೆಗೆ ಇದೇ ಸ್ಥಿತಿ ಮುಂದುವರೆಯಲಿದೆ.

ಇನ್ನು ಸೈಬರ್ ದಾಳಿ ಬೆನ್ನಲ್ಲೇ ಬ್ಯಾಂಕ್ ಗ್ರಾಹಕರ ಖಾತೆಗೂ ಕನ್ನ ಹಾಕಲಾಗಿದೆ ಎಂಬ ಊಹಾಪೋಹಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆರ್ ಬಿಐ, ಗ್ರಾಹಕರ ದಾಖಲೆಗಳು ಸುರಕ್ಷಿತವಾಗಿದ್ದು, ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಸಾಫ್ಟ್ ವೇರ್ ಅಪ್ ಡೇಟ್ ಬಳಿಕ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದೆ.

ಸೈಬರ್ ದಾಳಿಗೆ ತುತ್ತಾಗಿರುವ ದೇಶಗಳಲ್ಲಿ ಬಹುತೇಕ ಕಾರ್ಯಗಳು ಸ್ಥಗಿತಗೊಂಡಿವೆ…

Comments are closed.

Social Media Auto Publish Powered By : XYZScripts.com