ಕಿರುತೆರೆಯಲ್ಲಿ ಶಿವಗಾಮಿ ಸ್ಟೋರಿ…ನಿರ್ದೇಶಿಸಲಿದ್ದಾರೆ ರಾಜಮೌಳಿ

ಬಾಹುಬಲಿ 2 ಸಿನಿಮಾ ನೋಡಿದವರಿಗೆಲ್ಲಾ ರಾಜಮಾತಾ ಶಿವಗಾಮಿ ಮೇಲೆ ವಿಪರೀತ ಕೋಪ ಬಂದಿರುತ್ತದೆ. ಅಷ್ಟೊಂದು ಉತ್ತಮ ಆಡಳಿತ ಮಾಡುತ್ತಿದ್ದ ರಾಜಮಾತೆ ಅದ್ಹೇಗೆ ಸ್ವಲ್ಪವೂ ಯೋಚಿಸಿ-ಪರಾಮರ್ಶಿಸಿ ನೋಡದೇ ಬಾಹುಬಲಿಯ ಸಾವಿಗೆ ಕಾರಣವಾಗ್ತಾಳೆ ಅಂತ.
ಆದ್ರೆ ನಿಜವಾಗ್ಲೂ ಶಿವಗಾಮಿಯ ಪಾತ್ರ ಬಾಹುಬಲಿ ಚಿತ್ರದಲ್ಲಿ ಕಂಡಷ್ಟು ಮಾತ್ರ ಅಲ್ಲವಂತೆ. ಅದೊಂದು ಬಹು ಸವಿಸ್ತಾರವಾದ ಪಾತ್ರ. ಆಕೆ ಆ ತೀರ್ಮಾನ ತೆಗೆದುಕೊಂಡಿದ್ದು ಹೇಗೆ, ತೀರ್ಮಾನ ತೆಗೆದುಕೊಳ್ಳುವ ಮುನ್ನ ಅವಳ ತಲೆಯಲ್ಲಿ ಏನು ಓಡುತ್ತಿತ್ತು ಎನ್ನುವುದೆಲ್ಲಾ ಚಿತ್ರದಲ್ಲಿ ತೋರಿಸಲು ಸಾಧ್ಯವಾಗ್ಲಿಲ್ಲ ಎನ್ನುತ್ತಾರೆ ರಾಜಮೌಳಿ.
ಆದ್ರೆ ಅತ್ಯುತ್ತಮ ಪಾತ್ರವೊಂದರ ಕಥೆಯನ್ನು ಹಾಗೇ ಬಿಡಲು ಅವರಿಗೆ ಸಾಧ್ಯವಿಲ್ಲವಂತೆ. ಸಿನಿಮಾ ಇಂತಿಷ್ಟು ಸಮಯದಲ್ಲಿ ಮುಗಿಯಬೇಕು. ಹಾಗಾಗಿ ಪಾತ್ರಗಳಿಗೆ ಕತ್ತರಿ ಅನಿವಾರ್ಯ. ಆದ್ದರಿಂದ ಶಿವಗಾಮಿಯ ಕಥೆಯನ್ನು ಕಿರುತೆರೆಯ ಮೇಲೆ ತರೋದಿಕ್ಕೆ ನಿರ್ದೇಶಕ ರಾಜಮೌಳಿ ಸಜ್ಜಾಗ್ತಿದ್ದಾರಂತೆ.
ಸುಮಾರು 13ರಿಂದ 15 ಸಂಚಿಕೆಗಳಲ್ಲಿ ಶಿವಗಾಮಿಯ ದೃಷ್ಟಿಯಲ್ಲಿ ಬಾಹುಬಲಿಯ ಕಥೆಯನ್ನು ಮತ್ತೆ ಹೇಳಲು ರಾಜಮೌಳಿ ನಿರ್ಧರಿಸಿದ್ದಾರೆ. ಇದು ಯಾವಾಗ, ಹೇಗೆ, ಯಾವ ಚಾನೆಲ್ ನಲ್ಲಿ ಬರುತ್ತದೆ ಎನ್ನುವುದು ನಿರ್ಧಾರವಾಗಿಲ್ಲ. ಆದ್ರೆ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂಡ ಎನ್ನುವ ಪ್ರಶ್ನೆಯಂತೆಯೇ ಶಿವಗಾಮಿ ಯಾಕೆ ಬಾಹುಬಲಿಯ ಮರಣಕ್ಕೆ ಆದೇಶವಿತ್ತಳು ಎನ್ನುವ ಪ್ರಶ್ನೆಗೂ ಸಿನಿರಸಿಕರು ಉತ್ತರ ಕೇಳ್ತಿದ್ದಾರೆ. ಆ ಉತ್ತರವನ್ನು ಕಿರುತೆರೆಯ ಮೇಲೆ ಅವರು ಪಡೆಯಬಹುದು ಎಂದಿದ್ದಾರೆ ರಾಜಮೌಳಿ.

Comments are closed.