ಹಿರಿಯರ ಹುಟ್ಟುಹಬ್ಬದ ಆಚರಿಸಿದ ಧನ್ಯತೆ ,ಅವಿಭಕ್ತ ಕುಟುಂಬದಲೊಂದು ಸ್ಮರಣಿಯ ಕಾರ್ಯಕ್ರಮ..


ಮಾರ್ಗದರ್ಶನಕ್ಕೆ ತಲೆದೂಗಿದ ನವಪೀಳಿಗೆ ಅವಿಭಕ್ತ ಕುಟುಂಬದ ಕಲ್ಪನೆ ಕ್ರಮೇಣ ಮರೆಯಾಗಿದೆ. ಇದ್ದರೂ ಅವು ಕೈ ಬೆರಳಿನಿಂದ ಎನಿಸುವಷ್ಟು ಸಿಗುತ್ತವೆ. ಹೀಗಾಗಿ ಅಜ್ಜ– ಅಜ್ಜಿಯ ಮುಖ ಪರಿಚಯವೂ ಚಿಕ್ಕ ಮಕ್ಕಳಿಗೆ ಆಗುತ್ತಿಲ್ಲ. ಈಗೀನ ಅವಿಭಕ್ತ ಕುಟುಂಬವೆಂದರೆ ಗಂಡ–ಹೆಂಡತಿ ಮಕ್ಕಳು. ದೊಡ್ಡವರಾದ ಮೇಲೆ ಮಕ್ಕಳು ರೆಕ್ಕೆ ಬಲಿತ ಹಕ್ಕಿಯಂತೆ ದೂರದ ಊರಿಗೆ ಅಥವಾ ವಿದೇಶಕ್ಕೆ ಹಾರಿ ಹೋದರೆ ಮತ್ತೆ ಗಂಡ–ಹೆಂಡತಿ ಇಬ್ಬರೇ. ಆಗ ಜೀವನದ ಗತಕಾಲದ ನೆನಪುಗಳ ಸರಣಿ ಅವರನ್ನು ನಿತ್ಯ ಪುಟ ತಿರುವಿ ಹಾಕಿದಂತೆ ಇರುತ್ತದೆ.
ಇದು ಒಬ್ಬರ ಕಥೆಯಲ್ಲ…. ಇಷ್ಟೆಲ್ಲಾ ಹೇಳಿದ್ದು ಏಕೆಂದರೆ ಕುಟುಂಬದಲ್ಲಿ ಹಿರಿಯರಿದ್ದರೆ ಅವರಿಂದ ಮಕ್ಕಳಿಗೆ ಸಿಗುವ ಅನುಭವದ ಪಾಠ, ಜಗತ್ತಿನ ಯಾವ ಶಾಲೆ– ಕಾಲೇಜುಗಳಿಂದ ಸಿಗಲಾರದು. ಅದೇ ರೀತಿ ವಿವಿಧ ಕುಟುಂಬಕ್ಕೆ ಸಂಬಂಧಿಸಿದ ಹಿರಿಯರು ಒಟ್ಟಿಗೆ ಸೇರಿದಾಗ ಅವರಾಡುವ ಸಹಜ ಮಾತುಗಳೂ ರಸಾಮೃತವೇ. ಆದರೆ, ಇಂದಿನ ಜೀವನ ಅತಿವೇಗ ಹಾಗೂ ಯಾಂತ್ರಿಕವಾಗಿ ಬಿಟ್ಟಿದೆ. ಯಾರಿಗೂ ಯಾರೂ ಟೈಮ್ ಕೊಡುವ ಸ್ಥಿತಿಯಲ್ಲಿ ಇಲ್ಲ, ಭೇಟಿಯಾಗಬೇಕಾದರೂ ಫೋನ್ ಮಾಡಿ ಬರಬೇಕು ಎನ್ನುವಂತಾಗಿದೆ.
ಹಬ್ಬ ಹರಿದಿನಕ್ಕೂ ಕುಟುಂಬದವರು, ಸಂಬಂಧಿಕರು ಸೇರುತ್ತಿಲ್ಲ. ಭೇಟಿಯಾಗಬೇಕೆಂದರೂ ಸಮಾರಂಭ ನಡೆಯಲೇಬೇಕು. ಚಿಕ್ಕ ಮಕ್ಕಳಿಗೆ ಮೊಬೈಲ್, ಟ್ಯಾಬ್, ಕಂಪ್ಯೂಟರ್, ವಿಡಿಯೊ ಗೇಮ್ಸ್, ಟಿ.ವಿ ಇವೇ ಜಗತ್ತು ಎನ್ನುವಂತಾಗಿದೆ.
ಏನಾದರೂ ಹೇಳಿದರೆ, ಕೇಳಿದರೆ ಅದಕ್ಕೆ ಏಕೆ ತಲೆ ಕೆಡಿಸಿಕೊಳ್ಳಬೇಕು, ಗೂಗಲ್ ಇದೆಯಲ್ಲಾ ಎಂದು ಹೇಳುತ್ತಾರೆ. ಏಕೆಂದರೆ ಅಜ್ಜ–ಅಜ್ಜಿಯ ಪ್ರೀತಿ, ಹಿತನುಡಿ, ಮಾರ್ಗದರ್ಶನ ಅವರಿಗೆ ಸಿಕ್ಕಿಲ್ಲ, ತಂದೆ–ತಾಯಿಯ ಸಂಪೂರ್ಣ ಪ್ರೀತಿ ಸಿಗುತ್ತಿಲ್ಲ. ಹೀಗಾಗಿ ಜಡ ವಸ್ತುಗಳು ಅಪ್ಯಾಯಮಾನವಾಗಿವೆ ಎಂದರೆ ಅತಿಶಯೋಕ್ತಿ ಆಗಲಾರದು.


ಮಕ್ಕಳು ಸೇರಿದಂತೆ ಯುವಪೀಳಿಗೆಗೂ ಇಂಥದ್ದೊಂದು ಅವಕಾಶ ಈಚೆಗೆ ವಾಣಿಜ್ಯ ನಗರಿಯಲ್ಲಿ ಸಿಕ್ಕಿದ್ದು ಹಿರಿಯರ ಹುಟ್ಟುಹಬ್ಬದ ಆಚರಣೆಯಲ್ಲಿ. ಹುಟ್ಟುಹಬ್ಬವನ್ನು ಈಗ ಎಲ್ಲರೂ ಆಚರಿಸಿಕೊಳ್ಳುತ್ತಾರೆ. ಆದರೆ, ಹಿರಿಯ ಗೆಳೆಯರನ್ನು (70 ವರ್ಷ ದಾಟಿದ) ಒಂದೆಡೆ ಸೇರಿಸಿ ಅವರ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು,

ಪ್ರೀತಿಸುವವರು, ಸಂಬಂಧಿಕರು ಸೇರಿ ಆಚರಿಸಿದರು.
ಆಗ ಅಲ್ಲಿ, ಬರೀ ಸಂಭ್ರಮವಲ್ಲ, ಆದರೊಂದಿಗೆ ಹಳೆಯ ನೆನಪುಗಳ ಮೆರವಣಿಗೆ, ಮಕ್ಕಳಿಗೆ ಮಾರ್ಗದರ್ಶನ ಸಿಕ್ಕಿದ್ದು ಎದ್ದು ಕಾಣುತ್ತಿತ್ತು. ಹಿರಿಯರು ಅವರು ಜೀವನದಲ್ಲಿ ಕಂಡ, ಅನುಭವಿಸಿದ ಕಷ್ಟಗಳು ಅವರನ್ನು ಗಟ್ಟಿಗರನ್ನಾಗಿ ಮಾಡಿರುತ್ತವೆ. ಆಷ್ಟೇ ಅಲ್ಲ, ಜೀವನದ ಸುಖ ಯಾವುದು? ದುಃಖ ಯಾವುದು? ಆರಾಮವಾಗಿ ಇರುವುದು ಸುಖವಲ್ಲ. ದಣಿವಾದರೂ ದುಡಿಯುವ ಹಂಬಲವಿರಲಿ, ಇನ್ನೊಬ್ಬರ ನೋವಿಗೆ ಸ್ಪಂದಿಸಿ, ಎಲ್ಲರನ್ನು ತಮ್ಮವರು ಎಂಬಂತೆ ಪ್ರೀತಿ, ವಿಶ್ವಾಸದಿಂದ ಕಾಣಬೇಕು ಎಂಬ ಹಿತನುಡಿ ಒಂಥರಾ ಟಾನಿಕ್ ನೀಡಿದಂತಿತ್ತು.
ಕನ್ನಡ ಪ್ರಾಧ್ಯಾಪಕ ಎಸ್.ಎಂ.ಗೌಡರ, ಸರ್ಜನ್ ಡಾ.ವಿಲಾಸ ಬಿ. ನಾಯಕವಾಡಿ, ಸದ್ಯ ಗೋಕಾಕ ತಾಲ್ಲೂಕು ಘಟಪ್ರಭಾದಲ್ಲಿ ಆಸ್ಪತ್ರೆ ತೆರೆದು ಸೇವೆ ಸಲ್ಲಿಸುತ್ತಿರುವ ಇವರು, ಹುಬ್ಬಳ್ಳಿ ಕೋ–ಆಪರೇಟಿವ್ ಆಸ್ಪತ್ರೆಯಲ್ಲಿ 24 ವರ್ಷ ಸಿಇಒ ಆಗಿದ್ದರು.


ನಿವೃತ್ತ ಪ್ರಾಚಾರ್ಯ ಡಾ.ವಿನೋದ ಬಿ. ನಾಯಕವಾಡಿ, ಇವರು ಕನ್ನಡ ಮಾಧ್ಯಮದಲ್ಲಿ ಕಲಿತಿದ್ದು. ಆದರೆ, ಕೊಲ್ಹಾಪುರ ಜಿಲ್ಲೆ, ಗಡಿಂಗ್ಲಜ ತಾಲ್ಲೂಕು ನೂಲನಲ್ಲಿ ಮರಾಠಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು. ಡಾ.ಚಂದ್ರಶೇಖರ್ ಎಲ್. ಪಾಟೀಲ, ಇವರು ಸದ್ಯ ಹುಬ್ಬಳ್ಳಿಯಲ್ಲಿ ಆಸ್ಪತ್ರೆ ತೆರೆದಿದ್ದಾರೆ. ಇವರೆಲ್ಲರ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದವರ ಸಂಖ್ಯೆ ಬಹಳವಿತ್ತು.
‘ಮಾಮರ ಎಲ್ಲೋ ಕೋಗಿಲೆ ಎಲ್ಲೋ..’ ಗೀತೆಯೊಂದಿಗೆ ಡಾ.ಚಂದ್ರಶೇಖರ್ ಹಿತನುಡಿ ಆಡಿದರೆ, ಡಾ.ವಿನೋದ, ‘ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವುದು ಎಷ್ಟು ಕಷ್ಟ ಎಂಬುದು ತಂದೆ–ತಾಯಿಗೆ ಗೊತ್ತು. ನನ್ನ ತಂದೆಯೇ ನನಗೆ ಆದರ್ಶ’ ಎಂದರು. ವಿದ್ಯಾರ್ಥಿಗಳಿಗೆ ಕಲಿಸುವುದರಲ್ಲಿ ಮುಳುಗಿದ್ದ ನಾನು ಅಲ್ಲಿಯೇ ಜೀವನದ ಹಲವು ಸಂಗತಿ ತಿಳಿದುಕೊಂಡೆ. ನನ್ನ ನಿಜವಾದ ಸಂತೋಷಕ್ಕೆ ಮೊಮ್ಮಕ್ಕಳೇ ಕಾರಣ. ಅವರೇ ನನ್ನ ಜೀವನದ ಬಹುಮುಖ್ಯ ಅಂಗವಾಗಿದ್ದರೆ’ ಎಂದರು.
ಎಸ್.ಎಂ.ಗೌಡರ. ಡಾ.ವಿಲಾಸ, ‘ನನಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ದೊರೆತಿವೆ. ಆದರೆ, ಇಂದು ನಮ್ಮವರು ಪ್ರೀತಿಯಿಂದ ಗೌರವಿಸಿದ್ದು, ಹೆಚ್ಚು ಖುಷಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ ಫೈನಾನ್ಸಿಯಲ್ ಟ್ರಸ್ಟ್ ಆರಂಭಿಸಿ ಎಂದು ಸಲಹೆ ನೀಡಿದ ಅವರು, ಇದರಲ್ಲಿರುವ ಹಣವಿಡಿ, ಕುಟುಂಬದಲ್ಲಿ ಯಾರಿಗೆ ನಿಜವಾಗಿ ಅವಶ್ಯವಿದೆಯೋ ಅವರಿಗೆ ನೀಡಿ, ಇದರಿಂದ ಮತ್ತೊಬ್ಬರ ಬಳಿ ಸಹಾಯ ಕೇಳುವುದು ತಪ್ಪುವುದು’ ಎಂದರು.

Comments are closed.

Social Media Auto Publish Powered By : XYZScripts.com