ಸಖೀಗೀತ-13 : ಕಿಚ್ಚಿಲ್ಲದ ಬೇಗೆಯ ‘ಕುದಿ ಎಸರು’, ಡಾ.ವಿಜಯಮ್ಮ ಅವರ ಆತ್ಮಕಥೆ…- ಗೀತಾ ವಸಂತ ಅಂಕಣ.


ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ
ಏರಿಲ್ಲದ ಗಾಯದಲ್ಲಿ ನೊಂದೆನವ್ವಾ
ಸುಖವಿಲ್ಲದೆ ಧಾವತಿಗೊಂಡೆನವ್ವಾ

ಎನ್ನುವ ಅಕ್ಕಮಹಾದೇವಿಯ ಆರ್ತಮೊರೆ ಕಾಲಚಕ್ರದಲ್ಲಿ ಉರುಳುತ್ತಾ ಇಂದಿಗೂ ಹೆಣ್ಣಿನ ತಪ್ತ ಹೃದಯಗಳಲ್ಲಿ ಮಾರ್ದನಿಸುತ್ತಲೇ ಇರುವುದು ಕಾಲದ ವ್ಯಂಗ್ಯ. ಸಂಸ್ಕøತಿ, ಸಮಾಜ, ಕುಟುಂಬ, ಸಂಬಂಧ ಎಲ್ಲೆಡೆಯೂ ಹೆಣ್ಣು ತನ್ನ ದೇಹ-ಮನಸ್ಸುಗಳ ಗಾಯವನ್ನು ಮುಚ್ಚಿಟ್ಟುಕೊಳ್ಳುತ್ತ ಹಾಗಿರುವುದೇ ಹೆಣ್ತನದ ಘನತೆಯೆಂದು ನಂಬುತ್ತ, ನಂಬಿಸುತ್ತ ಅನೇಕ ಶತಮಾನಗಳಲ್ಲಿ ಹಾಯ್ದು ಬಂದಾಗಿದೆ. ಅಗ್ನಿದಿವ್ಯಗಳಲ್ಲಿ ಮತ್ತೆಮತ್ತೆ ತನ್ನ ಪಾವಿತ್ರ್ಯ, ಪಾತಿವೃತ್ಯಗಳನ್ನು ಸಾಬೀತುಪಡಿಸಲು ತನ್ನನ್ನೇ ಸುಟ್ಟುಕೊಳ್ಳುವ ಹೆಣ್ಣುಜೀವದ ಸಂಕಟ ದೊಡ್ಡದೊಡ್ಡ ಮೌಲ್ಯಗಳಡಿಯಲ್ಲಿ ಮರೆಮಾಚಿಹೋಗಿದೆ. ಕರುಣಾಳು ರಾಘವನಲ್ಲಿ ತಪ್ಪಿಲ್ಲ, ಹರಿಶ್ಚಂದ್ರನ ಸತ್ಯದಲ್ಲಿ ಕೇಡಿಲ್ಲ, ಧರ್ಮರಾಯನ ಧರ್ಮದಲ್ಲಿ ಚ್ಯುತಿಯಿಲ್ಲ, ಹೀಗೆಲ್ಲ ಸಮರ್ಥಿಸುತ್ತ ದುಷ್ಯಂತನಿಗೊದಗಿದ ಮರೆವಿನ ಶಾಪಕ್ಕಾಗಿ ಮರುಗುತ್ತ ಪುರುಷಪ್ರಧಾನ ಮೌಲ್ಯಗಳನ್ನು ಕೊಂಡಾಡುತ್ತಲೇ ಅದಕ್ಕೆ ಸಮರ್ಥನೆಗಳನ್ನು, ಕತೆ-ಉಪಕತೆಗಳನ್ನು ಸೃಷ್ಟಿಸುವ ಜಾಣ ಉಪಾಯಗಳನ್ನು ಹೆಣ್ಣು ಎದುರಿಸಲಾಗದೇ ಹೋಗಿದ್ದಾಳೆ. ನಮ್ಮ ಸಂಸ್ಕøತಿ ದ್ರೌಪದಿಯ ಪ್ರತಿಭಟಿಸುವ ಕೆಚ್ಚನ್ನು ಅಷ್ಟಾಗಿ ಮೆಚ್ಚಿಕೊಂಡಂತಿಲ್ಲ. ಮುತ್ಸದ್ದಿ ಕೃಷ್ಣನಿಗೆ ಪ್ರಿಯಳಾದ ಕೃಷ್ಣೆಯ ಬೌದ್ಧಿಕತೆ, ಸೀತೆಯ ಮಹತ್ವ ಪಡೆದಿಲ್ಲ. ಸಂಸ್ಕøತಿಯ ಸಿದ್ಧ ಚೌಕಟ್ಟುಗಳಿಗೆ ಒಗ್ಗುವ ಸ್ತ್ರೀಯರಷ್ಟೇ ದೇವಿಯರನ್ನಾಗಿ, ಉಳಿದವರನ್ನು ರಾಕ್ಷಸಿಯರನ್ನಾಗಿ ಚಿತ್ರಿಸುವ ಸಂಸ್ಕøತಿ ರಾಜಕಾರಣದ ಹುನ್ನಾರಗಳು ಅರಿಯದವೇನಲ್ಲ. ಇಂಥ ಹುನ್ನಾರಗಳಿಗೆ ಪ್ರತಿತಂತ್ರಗಳನ್ನು ಹೆಣ್ಣು ಹುಡುಕಿಯೇ ಇಲ್ಲವಾ? ಎಂದು ಪ್ರಶ್ನಿಸಿದರೆ, ಕುತೂಹಲಕರ ಉತ್ತರಗಳು ದೊರೆಯುತ್ತವೆ. ನೇರ ಪ್ರತಿಭಟನೆ ಸಾಧ್ಯವಾಗದ ಸಂದರ್ಭಗಳಲ್ಲಿ ಪರೋಕ್ಷವಾಗಿ ತನ್ನನ್ನು ರಕ್ಷಿಸಿಕೊಳ್ಳುವ ಸ್ವಯಂ ರಕ್ಷಣಾ ತಂತ್ರಗಳನ್ನು ಹೆಣ್ಣು ಸೃಷ್ಟಿಸಿಕೊಂಡಿದ್ದಾಳೆ. ಜನಪದ ಹೆಣ್ಣಿನ ಜಾಣ್ಮೆಯ ಕತೆಗಳನ್ನು ಜನಪದ ಮಹಾಕಾವ್ಯಗಳಲ್ಲಿ ನಾವು ಕಾಣುತ್ತೇವೆ. ಸಿರಿ, ಸಂಕಮ್ಮ ಇವರೆಲ್ಲ ಅಂತಹ ಉದಾಹರಣೆಗಳು. ಇವರ ಪ್ರತಿಭಟನೆಯ ಪರಿ ರೂಪಕಾತ್ಮಕವಾಗಿ ಅಂಥ ಕಾವ್ಯಗಳಲ್ಲಿ ಅಭಿವ್ಯಕ್ರವಾಗಿದೆ. ಪ್ರಸ್ತುತ ಆಧುನಿಕ ಸಂದರ್ಭಕ್ಕೆ ಬಂದರೆ ಕಾವ್ಯ-ಕಥನಗಳಲ್ಲಿ ನೇರವಾಗಿಯೂ-ರೂಪಕಾತ್ಮಕವಾಗಿಯೂ ಬಂದ ಸ್ತ್ರೀಯಾತ್ಮಕ ಅಭಿವ್ಯಕ್ತಿ ‘ಆತ್ಮಚರಿತ್ರೆಯ’ ಪ್ರಕಕಾರದಲ್ಲಿ ಬಂದಾಗ ಪರ್ಯಾಯ ಚರಿತ್ರೆಯಾಗಿ, ಪರ್ಯಾಯ ದೇಹ ಮೀಮಾಂಸೆಯಾಗಿ ಕಂಡು ಅಚ್ಚರಿಗೊಳಿಸಿದೆ. ಅಂಥ ಸಾಲಿಗೆ ಬಹುಮುಖ್ಯ ಸೇರ್ಪಡೆ ಡಾ.ವಿಜಯಮ್ಮ ಅವರ ‘ಕುದಿ ಎಸರು’.

ಹೆಣ್ಣಿನ ಚರಿತ್ರೆಯ ಕುರಿತು ಯೋಚಿಸುವಾಗ ಅಲ್ಲೊಂದು ಶೂನ್ಯ ಎದುರಾಗುತ್ತದೆ. ಯುದ್ಧ, ಅಧಿಕಾರ, ವಾಣಿಜ್ಯ ವ್ಯವಹಾರಗಳೇ ಮೊದಲಾದ ಮುಖ್ಯವಾದ ಪುರುಷ ನಿರ್ಮಿತ ಚರಿತ್ರೆಗಳಲ್ಲಿ ಸ್ತ್ರೀಯ ದೃಷ್ಟಿಕೋನವು ಅಪ್ರಧಾನವಾಗಿದೆ. ಅವಳ ಮೈಯ ತುಡಿತ, ಮನಸ್ಸಿನ ಹಂಬಲ, ಅವಳ ಜೀವನಾನುಭವ, ಅವಳ ಕ್ರಿಯಾಶಕ್ತಿಗಳು ಮೂಡಿಸುವ ತಾತ್ವಿಕತೆಯ ಚರಿತ್ರೆಯನ್ನು ಕಟ್ಟುವಿಕೆಯಲ್ಲಿ ಹಿನ್ನೆಲೆಗೆ ಸರಿದಿದೆ. ಇದು ಅಧಿಕಾರ ರಾಜಕಾರಣವೂ ಹೌದು. ಜ್ಞಾನದ ಮೂಲಕ ಅಧಿಕಾರವನ್ನು ನಿಯಂತ್ರಿಸುವ ‘ಬುದ್ಧಿಕೇಂದ್ರಿತ’ ರಾಜಕಾರಣವೂ ಹೌದು. ಇಷ್ಟೇ ಅಲ್ಲ ತೋಳ್ಬಲದಿಂದ ತಾನು ಪರಾಕ್ರಮಿಯೆಂಬ ಮೇಲರಿಮೆ ಹೊಂದಿದ ಪುರುಷ ಹೆಣ್ಣುದೇಹವನ್ನು ಸದಾ ಕೀಳಾಗಿ, ದುರ್ಬಲವಾಗಿ ಪರಿಭಾವಿಸುವ ಮೂಲಕ ಅವಳನ್ನು ಸದಾ ಕೀಳರಿಮೆಯಲ್ಲಿ, ಭಯ-ಲಜ್ಜೆಗಳ ಹೊರೆಯಲ್ಲಿ ಮುಚ್ಚಿಹಾಕಿದ್ದಿದೆ. ಇಂಥ ಚಾರಿತ್ರಿಕ, ಸಾಂಸ್ಕøತಿಕ, ಸಾಮಾಜಿಕ ಸಂದರ್ಭಗಳಲ್ಲಿ ಬದುಕುತ್ತ ಬಂದ ಹೆಣ್ಣಿನ ಅಭಿವ್ಯಕ್ತಿ ಎಂಬುದು ಸಹಜವಾಗಿ ಅರಳಲೇ ಇಲ್ಲ. ಅವಳು ಒಪ್ಪಿಕೊಂಡು ಬದುಕುವ ಮೌಲ್ಯಗಳಿಗೂ ಅವಳ ಸಂವೇದನಾ ವಲಯಕ್ಕೂ ಸದಾ ಸಂಘರ್ಷ ನಡೆಯುತ್ತಲೇ ಇದ್ದರೂ ಅದನ್ನು ಅದುಮಿಡುವ ತರಬೇತಿ ಅವಳಿಗೆ ಪಾರಂಪರಿಕವಾಗಿ ಸಿಗುತ್ತ ಹೋಯಿತು. ಕೊನೆಗೆ ರಕ್ತಗತವಾಯಿತು. ಆಧುನಿಕ ಶಿಕ್ಷಣದ ಮಿತಿಗಳೇನೇ ಇರಲಿ ಅದು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ, ಸಮಾನ ಅವಕಾಶಗಳ ಪರಿಕಲ್ಪನೆಯು ಹೆಣ್ಣು ತನ್ನ ಚಿಪ್ಪಿನಿಂದ ಹೊರಬಂದು ರೆಕ್ಕೆಬಿಚ್ಚಿ ಹಾರಲು ಪೂರಕವಾದದ್ದು ಸುಳ್ಳಲ್ಲ. ‘ಕುದಿ ಎಸರು’ ಆತ್ಮಕಥಾನಕವು ಹೆಣ್ಣೊಬ್ಬಳ ಇಂಥ ವಿಕಾಸವನ್ನು ದೇಹ, ಮನಸ್ಸು, ಸಮಾಜ, ಸಂಸ್ಕøತಿ, ಅಧಿಕಾರ ರಾಜಕಾರಣಗಳ ಹಿನ್ನೆಲೆಯಲ್ಲಿ ನಿರೂಪಿಸುತ್ತ ಹೋಗುವ ಬಗೆಯಿಂದಾಗಿ ಮುಖ್ಯವಾಗುತ್ತದೆ.

 

ಹೆಣ್ಣೊಬ್ಬಳು ಬರೆಯುವುದೆಂದರೇ ಬಯಲಲ್ಲಿ ಬೆತ್ತಲೆ ನಿಂತಂತೆ ಎಂದು ಒಂದು ಕಡೆ ಪ್ರತಿಭಾ ನಂದಕುಮಾರ್ ಹೇಳುತ್ತಾರೆ. ತನ್ನ ಒಡಲಲ್ಲಿ ಬಚ್ಚಿಕಟ್ಟುಕೊಂಡ ಪುಳಕ, ಸಂಭ್ರಮ, ನೋವು, ಹಿಂಸೆ, ಸಂಕಟ, ಅವಮಾನಗಳನ್ನು ಅವಳು ಬಯಲು ಮಾಡಿದರೆ ಒಂದು ಭೂಕಂಪದ ಅನುಭವವಾಗುವುದು ನಿಶ್ಚಿತ! ರಹಸ್ಯವಾಗಿರಬೇಕಾದ ದೇಹ, ದೇಹ ಸಂಬಂಧಿ ಲೈಂಗಿಕಾನುಭವಗಳು, ಆ ಮೂಲಕ ಜಾಗೃತಗೊಳ್ಳುವ ಹೆಣ್ತನದ ಪ್ರಜ್ಞೆ, ಅದರ ಸುತ್ತಲೂ ಕೋಟೆಕಟ್ಟಿಕೊಂಡು ನಿಲ್ಲುವ ಪಾವಿತ್ರ್ಯ-ಪಾತಿವೃತ್ಯದ ಗೋಜಲುಗಳು, ಸೋಕಾಲ್ಡ್ ನೈತಿಕತೆಯ ಒಜ್ಜೆ ಇವೆಲ್ಲವನ್ನು ಬದಿಗಿಟ್ಟು ಹಗುರಾಗುತ್ತ ಹೋಗುವ ಭಾವವೊಂದು ಅವಳಿಗೆ ಬರವಣಿಗೆಯ ಮೂಲಕ ದಕ್ಕುವುದೇ ಸೋಜಿಗ. ಆದರೆ ಅದು ಅವಳಿಗೊಂದು ಸವಾಲಿನ-ಸಂಘರ್ಷದ ಕ್ರಿಯೆಯೆಂಬುದೂ ಅಷ್ಟೇ ನಿಜ. ವೈಯಕ್ತಿಕ ಅನುಭವಗಳನ್ನು ಹೀಗೆ ಬಟಾಬಯಲಾಗಿಸಿ ಬಿಚ್ಚಿಟ್ಟು ವಿಶ್ಲೇಷಿಸುತ್ತ ಹೋಗುವಾಗ ಆತ್ಮರತಿಯಾಗದಂತೆ, ಸ್ವಸಮರ್ಥನೆಯ ಹುಸಿ ಪ್ರಯತ್ನವಾಗದಂತೆ, ಯಾವುದೋ ‘ಇಸಂ’ಗಳ ಕಣ್ಣಲ್ಲಿ ಕಟ್ಟಿದ ಕಥನವಾಗದಂತೆ ನೋಡಿಕೊಳ್ಳುವ ಸೂಕ್ಷ್ಮ ಜಾಗೃತಪ್ರಜ್ಞೆ ಇರಬೇಕಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಅನುಭವಗಳಿಗೆ ಹಾಗೂ ಅಭಿವ್ಯಕ್ತಿಗೆ ಪ್ರಾಮಾಣಿಕವಾಗಿರಬೇಕಾದ ಸವಾಲು ದೊಡ್ಡದು. ಈ ಕಾಲದ ಸಾಮಾಜಿಕ-ಸಾಂಸ್ಕøತಿಕ ನಿರೀಕ್ಷೆಗಳು, ಬರವಣಿಗೆಯ ಫಾರ್ಮ್‍ನ ಸೃಜನಶೀಲ ನಿರೀಕ್ಷೆಗಳು ಎಲ್ಲವನ್ನೂ ಸಮತೋಲನಗೊಳಿಸುತ್ತಲೇ ಒಳಗನ್ನು ಬಗೆದಿಡುವಾಗ ಸಂವೇದನೆಯ ಮೊರೆತವನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸದೇ ಕಟ್ಟಬೇಕಾಗುತ್ತದೆ. ಎಲ್ಲ ಕಟ್ಟುಗಳನ್ನು ಮೀರಿ ಬರುವ ಆತ್ಮದ ಮೊರೆತದಂಥ ಅಭಿವ್ಯಕ್ತಿಯನ್ನು ಭಾಷೆಯ ಚೌಕಟ್ಟುಗಳಲ್ಲಿ ಹಿಡಿದಿಡುವುದು ಅನಿವಾರ್ಯ. ವಿಜಯಮ್ಮ ಇಂಥ ಬಿಕ್ಕಟ್ಟಿನ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.”ಮತ್ತೆ ಹೇಳುವಾಗ ಸ್ವಪ್ರತಿಷ್ಠೆ ತೂರಬಹುದು. ಸ್ವವಿಮರ್ಶೆ ಮೆರೆಯಬಹುದು. ಒಂದೇ ದೃಷ್ಟಿಕೋನ ಆದರೆ ನಾವು ಮಾಡಿದ್ದೆಲ್ಲ ಸರಿ ಎಂಬಂಥ ನಿಲುವುಗಳೇ ತುಂಬಿಬಿಡಬಹುದು. ಹಾಗಾಗಬಾರದು ಎಂಬ ಆತಂಕ. ಇವತ್ತಿನ ಪಾತಳಿಯಲ್ಲಿ ನಿಂತು ಮೊನ್ನೆ ನಿನ್ನೆಗಳನ್ನು ಅವಲೋಕಿಸುವಾಗ ಹೊಸ ಅರ್ಥಗಳನ್ನು ಕೊಟ್ಟುಕೊಳ್ಳುತ್ತೇನಲ್ಲ…. ಆಗ ಅದು ನೇರ ನಿರೂಪಣೆಯಾಗದೆ ನನಗೆ ಸರಿಕಂಡ ನನ್ನ ಮೂಗಿನ ನೇರಕ್ಕೆ ಹೊಂದಿಕೊಂಡ ಮಾತಾಗಿಬಿಡುತ್ತದೆ….” ಎನ್ನುತ್ತಲೇ ಆತ್ಮಕಥಾನಕದ ನಿರೂಪಣೆಗಿಳಿಯುತ್ತಾರೆ.

 

ಅನುಭವದ ಸಂಕೀರ್ಣತೆ ಹಾಗೂ ಸಮಗ್ರತೆಗಳ ಅರಿವಿಲ್ಲದಿದ್ದರೆ ಆತ್ಮಕಥಾನಕ ಒಂದೋ ಗೊಳುತೊಡಿಕೊಳ್ಳುವಿಕೆಯಾಗುತ್ತದೆ ಅಥವಾ ಪಾಶ್ರ್ವಿಕ ನೋಟದಿಂದ ಕಂಡ ಪೂರ್ವಗ್ರಹಗಳ ನಿರೂಪಣೆಯಾಗಿಬಿಡುತ್ತದೆ. ವಿಜಯಮ್ಮ ಹೆಜ್ಜೆಹೆಜ್ಜೆಗೆ ಹಾಗಾಗಬಾರದೆಂಬ ಎಚ್ಚರ ಇರಿಸಿಕೊಳ್ಳುತ್ತಾರೆ. ತಮ್ಮೊಳಗೇ ತಾವು ಮೈಮರೆಯದಂತೆ ಪ್ರಜ್ಞೆಯನ್ನು ತಟ್ಟಿ ಎಚ್ಚರಿಸಿಕೊಳ್ಳುತ್ತಾರೆ. ಆದ್ದರಿಂದ ಇಲ್ಲಿ ಬರುವ ಯಾವುದೇ ಮನುಷ್ಯರು ಬ್ಲಾಕ್ ಆ್ಯಂಡ್ ವೈಟ್‍ನಲ್ಲಿ ಮೂಡಿಲ್ಲ. ಯಾವ ಸಂದರ್ಭ, ಘಟನೆಗಳ ಬಗ್ಗೆಯೂ ಇಲ್ಲಿ ತೀರ್ಮಾನದ ಮಾತುಗಳಿಲ್ಲ. ಅವುಗಳನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದಿತ್ತೇನೋ, ನಿರ್ವಹಿಸಬಹುದಿತ್ತೇನೋ ಎಂಬ ಪ್ರಾಮಾಣಿಕ ಆತ್ಮವಿಮರ್ಶೆ ಅಲ್ಲಲ್ಲಿ ರಿಂಗಣಿಸುತ್ತ ಹೋಗುತ್ತದೆ. ವ್ಯಕ್ತಿ ಏಕೆ ಕ್ರೂರಿಯಾಗುತ್ತಾನೆ? ಅವನಲ್ಲಿ ಹಿಂಸೆ ಹೇಗೆ ಮೊಳೆಯುತ್ತದೆ? ಎಂದೆಲ್ಲ ಆಳಕ್ಕಿಳಿದು ಮನಃಶ್ಶಾಸ್ತ್ರೀಯ ನೆಲೆಯನ್ನು ಕಾಣಲು ವಿಜಯಮ್ಮ ಪ್ರಯತ್ನಿಸುತ್ತಾರೆ. ಅಥವಾ ಪಕ್ವ ಜೀವನದರ್ಶನದಿಂದ ಹುಟ್ಟುವ ವಿವೇಕವೆಂದರೂ ಸರಿಯೇನೊ. ಮಕ್ಕಳ ಸಿಟ್ಟಿನ ಹಿಂದಿನ ಹತಾಶೆ, ಸೋಲು, ಆತಂಕಗಳನ್ನು ಗಮನಿಸಿ ಸಂತೈಸುವ ಅಮ್ಮನಂತೆ, ಅವಳ ಅಭಯ ಹಸ್ತದಂತೆ, ನಿರುಮ್ಮಳತೆಯ ನಾದವೊಂದು ಕೃತಿಯಲ್ಲಿ ನಿನದಿಸುತ್ತದೆ. ಅಮೂಲಾಗ್ರ ಸಿಟ್ಟು, ದ್ವೇಷ, ಪ್ರತೀಕಾರ ಭಾವನೆಗಳು ಇಲ್ಲೆಲ್ಲೂ ಭುಸುಗುಡುವುದಿಲ್ಲ. “ಇಷ್ಟಾದರೂ ನನಗೆ ಯಾರನ್ನಾದರೂ ಬೈಯಬೇಕೆನಿಸಲಿಲ್ಲ. ನನಗೆ ಸಿಟ್ಟು ಬರುವುದಿಲ್ಲ. ಯಾರ ಬಗೆಗಾದರೂ ಹೋಗಲಿ ನನ್ನ ಗಂಡನ ಬಗ್ಗೆಯೇ ನನಗೆ ಸಿಟ್ಟು ಬರುವುದಿಲ್ಲ”. ಸಂಬಂಧಗಳು ವಿಕಾಸಗೊಳ್ಳುವಾಗ ಸಂಘರ್ಷಗಳೂ ಸಹಜವೇನೋ! ಬೇರೆಬೇರೆ ಕೌಟುಂಬಿಕ, ಸಾಮಾಜಿಕ, ಭಾವನಾತ್ಮಕ ಪರಿಸರದಲ್ಲಿ ಬೆಳೆದ ಎರಡು ಜೀವಗಳು ಸಾಮರಸ್ಯದ ಹದದಲ್ಲಿ ಕರಗುವುದು ಸುಲಭದ ಮಾತಲ್ಲ. ಒಣ ಪ್ರತಿಷ್ಠೆ, ಶುಷ್ಕ ಮೌಲ್ಯಗಳು, ಜೊತೆಗೆ ಪುರುಷಾಹಂಕಾರವೂ ಸೇರಿ ಹೋದಾಗ ಸಂಬಂಧದಲ್ಲಿ ಹಿಂಸೆಯ ಆಯಾಮ ಪ್ರವೇಶಿಸಿ ಬಿಡುತ್ತದೆ. ಅಲ್ಲಿ ಹಿಂಸಿಸುವ ವ್ಯಕ್ತಿಯೂ ಸ್ವಯಂ ಹಿಂಸೆಗೊಳಗಾಗುತ್ತಿರುತ್ತಾನೆ. ‘ಪೌರುಷ’ದ ಸಿದ್ಧ ಪರಿಕಲ್ಪನೆಯನ್ನೇ ಬದುಕಬೇಕಾದ ಒತ್ತಡದಲ್ಲಿರುವ ಪುರುಷ ಕೂಡಾ ಪೌರುಷವನ್ನು ಸ್ಥಾಪಿಸಲಾಗದ ಹತಾಶ ಸ್ಥಿತಿ ತಲುಪಿದಾಗ ಹಿಂಸ್ರಮೃಗದಂತಾಗುತ್ತಾನೆ. ಈ ಎಲ್ಲ ಒತ್ತಡಗಳನ್ನು ಮಾನವೀಯವಾಗಿ ಗ್ರಹಿಸುವ ಕಣ್ಣು ‘ಕುದಿ ಎಸರ’ ಕಟ್ಟಿದೆ. ಸಾಂಪ್ರದಾಯಿಕ ಬ್ರಾಹ್ಮಣ್ಯದ ಪರಿಸರ, ಆ ಜೀವನಕ್ರಮ, ಅಲ್ಲಿ ಆಧುನಿಕ ಜೀವನಕ್ರಮದ ಪ್ರವೇಶದಿಂದ ಉಂಟಾದ ಪಲ್ಲಟಗಳು, ತಲ್ಲಣಗಳು ಎಲ್ಲವನ್ನೂ ಸಾವಧಾನವಾಗಿ ಗ್ರಹಿಸುವ ಮನಸ್ಸು ಇಲ್ಲಿ ಕೆಲಸ ಮಾಡಿದೆ. ಆದ್ದರಿಂದಲೇ ಇದನ್ನು ಸ್ತ್ರೀವಾದಿ ಓದು, ಸಮಾಜಶಾಸ್ತ್ರೀಯ ಓದು, ಮನಃಶ್ಶಾಸ್ತ್ರೀಯ ಓದು…. ಹೀಗೆ ಯಾವುದೇ ಏಕದೃಷ್ಟಿಯಿಂದ ನೋಡದೇ ಸಮಗ್ರತೆಯಲ್ಲಿ ಗ್ರಹಿಸಬೇಕಾದ ಅಗತ್ಯವನ್ನು ಕೃತಿ ತನ್ನ ನಿರೂಪಣೆಯ ಮೂಲಕವೇ ಓದುಗರಿಗೆ ಮನವರಿಕೆಮಾಡಿಕೊಡುತ್ತ ಹೋಗುತ್ತದೆ.

 

ಇದನ್ನೊಂದು ಜೀವನಯಾತ್ರೆಯೆಂದು ವಿಜಯಮ್ಮ ಭಾವಿಸುತ್ತಾರೆ. ಒಳಿತು-ಕೆಡಕು, ಸಿಹಿ-ಕಹಿಗಳೆಲ್ಲವೂ ಅಲ್ಲಿ ಸಹಜ. ಆದರೆ ಈ ಸಹಯಾನದಲ್ಲಿ ತುಂಬ ಅಸಹಜಗಳು ಘಟಿಸಿವೆ. ಓದುತ್ತ ಓದುತ್ತ ದಿಗ್ಭ್ರಮೆಗೊಳ್ಳುವಂತೆ ಮಾಡುವ ವಿವರಗಳು ಇಲ್ಲಿವೆ. ಮುಚ್ಚಿದ ಬಾಗಿಲುಗಳ ಹಿಂದೆ ಇಂಥ ಪರಮ ಹಿಂಸೆಯ ಬದುಕೊಂದು ಅಡಗಿರುವುದು ಸಾಧ್ಯವಾ? ಎಂದು ನಾವು ವಿಹ್ವಲಗೊಳ್ಳುವಂತೆ ಮಾಡುತ್ತದೆ. ಗಂಡನಿಂದ ಪರಿತ್ಯಕ್ತೆಯಾಗುವವರೆಗಿನ ಬದುಕಿನ ತಲ್ಲಣಗಳು ಒಂದು ಹಂತವಾದರೆ, ಆಮೇಲೆ ಬದುಕು ಕಟ್ಟಿಕೊಳ್ಳುವ ಛಲದ, ಹೋರಾಟದ ಕತೆ ಮತ್ತೊಂದು ಹಂತ. ಆದ್ದರಿಂದ ಈ ಬರಹ ಪ್ರಾರಂಭವಾಗುವುದೇ ಬದುಕು ವಿಘಟನೆಗೊಳ್ಳುವ ಘಟನೆಗಳಿಂದ. ಇಂಥ ವಿಘಟನೆಗಳು, ಹಠಾತ್ ತಿರುವುಗಳು, ಅನಿರೀಕ್ಷಿತವಾಗಿ ಎದುರಾಗುವ ಸಂಕಟಗಳು, ತಬ್ಬಲಿತನ, ಅನಾಥಪ್ರಜ್ಞೆ, ಹಸಿವು-ದುಡಿತ, ಅನಾದರ, ಪ್ರೀತಿಕಾಣದ ಜಡಸ್ಥಿತಿಗಳು ಒಂದನ್ನೊಂದು ಹಿಂಬಾಲಿಸುತ್ತವೆ. ಸ್ವಪ್ರಜ್ಞೆ ಜಾಗೃತಗೊಳ್ಳುವ ಮೊದಲೇ ತಾಯಿಯನ್ನು ಕಳೆದುಕೊಂಡು, ಕಂಡವರ ಹಂಗಿನಲ್ಲಿ, ಅನಾಸ್ಥೆಯಲ್ಲಿ ಅರಳದೇ ಬೆಳೆಯುವ ಹೆಣ್ಣೊಬ್ಬಳ ಜೀವನಗಾಥೆ ಮನಸ್ಸನ್ನು ಹಿಂಡಿಹಾಕುತ್ತದೆ. ಇಂಥ ಹೆಣ್ಣಿನ ಬದುಕಿನಲ್ಲಿ ಪ್ರವೇಶಿಸುವ ಅತಿಕಾಮಿ ಗಂಡಸಿಗೆ ಅವಳು ಬರಿಯ ದೇಹ ಮಾತ್ರ! ಯಾವ ಸಹಜ ಪುಲಕಗಳನ್ನೂ ಕಾಣದೇ ಕೊರಡಿನಂತೆ ಬಿದ್ದುಕೊಳ್ಳುವ ದೇಹ, ಆದೇಹದ ಮೇಲೆ ನಿರಂತರ ನಡೆಯುವ ಕ್ರೌರ್ಯ, ವಿಕೃತ ಲೈಂಗಿಕ ಕ್ರಿಯೆಗಳು…. ಇದನ್ನೆಲ್ಲ ಯಾರಬಳಿಯೂ ಹೇಳಿಕೊಳ್ಳಲಾಗದೇ ಕರ್ತವ್ಯವೆಂಬಂತೆ ಸಹಿಸಬೇಕಾದ ಅನಿವಾರ್ಯತೆ…. ಬೇಡದ ಬಸಿರುಗಳು…. ಬಸಿರನ್ನು ಹಿಂಸ್ರವಿಧಾನದಲ್ಲಿ ನಿವಾರಿಸುವ ಗಂಡ…. ವಿಪರೀತ ರಕ್ತಸ್ರಾವ, ನೋವು, ತಲ್ಲಣಗಳು…. ಪ್ರಾಣಿಗೂ ಕಡೆಯಾದ ನರಕ ಸದೃಶ ಬದುಕು! ನಿಜಕ್ಕೂ ಅವಳ ದೇಹವೇ ಅವಳ ವಿಧಿ! ಎಂಬ ಮಾತನ್ನು ನೆನಪಿಸುತ್ತ ನಮ್ಮನ್ನು ಕಲಕಿಬಿಡುತ್ತವೆ. ಇಪ್ಪತ್ತನೆಯ ಶತಮಾನದಲ್ಲೂ ಬೆಂಗಳೂರಿನಂತಹ ‘ಸುಸಂಸ್ಕøತ ನಗರ’ದಲ್ಲೂ ಇಂಥ ಅನಾಗರಿಕ ಬದುಕು ಇತ್ತಾ? ಎಂಬ ಪ್ರಶ್ನೆಗೆಳೆಸುತ್ತದೆ.

 

 

ದೊಡ್ಡ ಕುಂಕುಮ, ಕೆನ್ನೆತುಂಬಾ ಅರಿಶಿಣ, ಕತ್ತಿನಲ್ಲಿ ಅರಿಶಿನ ದಾರಕ್ಕೆ ತೂಗಾಡುವ ನಾಲ್ಕೈದು ತಾಳಿಗಳು…. ಹೀಗೆ ದೇವಿಯನ್ನು ನೆನಪಿಸುವ ಲೇಖಕಿಯ ‘ಮುತ್ತೈದೆ’ತನದ ಚಿತ್ರಗಳನ್ನು ಇಲ್ಲಿ ಕಾಣುತ್ತೇವೆ. ಆದರೆ ಈ ದೇವಿಯ ಹಿಂದಿರುವ ಅಸಹಾಯಕ ಹೆಂಗಸು, ನೋವು ತಾಳಿತಾಳಿ ಸಂವೇದನೆಯನ್ನೇ ಕಳೆದುಕೊಂಡು ದಡ್ಡುಬಿದ್ದ ಹೆಂಗಸು, ಚಲಿಸುತ್ತಿರುವ ಲೋಕಪ್ರವಾಹದ ಪರಿವೆಯೇ ಇಲ್ಲದೇ ಸಾಂಪ್ರದಾಯಿಕ ಜಡತೆಯಲ್ಲಿ ಹೆಪ್ಪುಗಟ್ಟಿದ ಹೆಂಗಸೊಬ್ಬಳು ಉಸಿರಾಡಲಾರದೇ ಉಸಿರಾಡುತ್ತಿದ್ದಳೆಂಬ ಸತ್ಯದ ದರ್ಶನವು ಓದುಗರನ್ನು ದಿಗ್ಭ್ರಮೆಗೀಡುಮಾಡುತ್ತದೆ. ಕಾಲ-ದೇಶಗಳನ್ನು ಫ್ರೀಸ್ ಮಾಡಿ, ಬೌದ್ಧಿಕ-ಮಾನಸಿಕ ನಿರ್ವಾತವೊಂದನ್ನು ಸೃಷ್ಟಿಸಿ ಅಲ್ಲಿ ಹೆಣಗಳಂತೆ ಬದುಕಿದ ಎಷ್ಟೋ ಹೆಣ್ಣುಗಳ ಆತ್ಮದ ಆರ್ತನಾದವನ್ನು ಈ ‘ಕುದಿ ಎಸರು’ ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆಯೆನಿಸುತ್ತದೆ. ಭಾರತೀಯ ಸಂಸ್ಕøತಿಯ ವಿಜ್ರಂಭಣೆಯನ್ನು ಮಾತ್ರ ಕೇಳುತ್ತ ಬಂದ ಕಿವಿಗಳಿಗೆ ಸಂಸ್ಕøತಿಯ ಹಿಂದಿರುವ ವಿಕೃತಿಗಳನ್ನೂ ಇದು ಎಗ್ಗಿಲ್ಲದೆ ದರ್ಶನಮಾಡಿಸುತ್ತದೆ. ಗಂಡನಿಗೆ ‘ಬೇಕಾದ ಹಾಗೆ’ ಇರಬೇಕಾದ ಪತಿವೃತಾ ಧರ್ಮದ ಉಪದೇಶವನ್ನೇ ಕೇಳುತ್ತ ಸ್ವಯಂ ನಾಶದ ಹಾದಿಯಲ್ಲಿ ನಡೆವ ಸಾಧ್ವೀಮಣಿಗಳ ಇನ್ನೊಂದು ಸುಪ್ತಮುಖವನ್ನಿಲ್ಲಿ ಅನಾವರಣ ಮಾಡಲಾಗಿದೆ.

ಪಾತಿವೃತ್ಯದ ಪರಿಕಲ್ಪನೆಯ ಮೂಲವೇ ಹೆಣ್ಣಿನ ಲೈಂಗಿಕತೆಯನ್ನು ನಿರ್ಬಂಧಿಸುವುದು. ಅದನ್ನು ಪುರುಷನ ‘ಒಡೆತನ’ಕ್ಕೆ ಒಳಪಡಿಸುವುದು. ಇಲ್ಲಿ ಸಾಂಗತ್ಯದ ಭಾವ ಕ್ಷೀಣವಾಗಿ ‘ಒಡೆತನ’ದ ಭಾವವೇ ಅಬ್ಬರಿಸತೊಡಗಿದಾಗ ನಿರ್ಬಂಧ-ಹಿಂಸೆ ಛಿಲ್ಲನೆ ಮೇಲೇಳುತ್ತದೆ. ನೀಲಿಚಿತ್ರಗಳನ್ನು ನೋಡುತ್ತಾ ಅದರ ವಿಕೃತಿಗಳನ್ನೆಲ್ಲ ದಿನವಿಡೀ ದುಡಿದು ಹೆಣವಾದ ಹೆಂಡತಿಯ ಮೇಲೆ ಪ್ರಯೋಗಿಸುವ ಗಂಡ, ಇದನ್ನೆಲ್ಲ ಯಾರಬಳಿಯೂ ಹೇಳಿಕೊಳ್ಳಲಾಗದ ಮೂಕ ವೇದನೆ, ತನಗಾಗಿ ಯೋಚಿಸಲು ಸಮಯ, ಸ್ಥಳ ಎರಡೂ ಇಲ್ಲದ ಕೂಡುಕುಟುಂಬದ ಅಸಹನೀಯ ಬದುಕು, ಬೆಲೆಯಿಲ್ಲದ, ಅಲ್ಪ ಕೃತಜ್ಞತೆಯೂ ಇಲ್ಲದ ಗಾಣದೆತ್ತಿನಂತಹ ದುಡಿಮೆ…. ತನ್ನನ್ನು ಹೇಗೆ ಅಸಹಾಯಕತೆಯ ಪಾತಾಳಕ್ಕೆ ತಳ್ಳುತ್ತಹೋಯಿತೆಂಬುದನ್ನು ಇಲ್ಲಿ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ ವಿಜಯಮ್ಮ. ಬದುಕಿಡೀ ಸಂಶಯದಿಂದ ಪೀಡಿತನಾದ ಗಂಡ, ಅದೇ ಸಂಶಯ, ಕೀಳರಿಮೆಗಳಿಂದ ನಲುಗುತ್ತಾ ಹಿಂಸೆಯನ್ನು ಹೆಚ್ಚುಮಾಡುತ್ತಲೇ ಹೋಗುತ್ತಾನೆ. ಕೊನೆಗೆ ಅದೇ ಅವನ ಅಭಿವ್ಯಕ್ತಿಯ ಭಾಷೆಯಾಗಿಬಿಡುತ್ತದೆ! ನಾಲ್ಕು ಗೋಡೆಗಳ ನಡುವೆ ನಡೆವ ಈ ಹಿಂಸಾಕ್ರಿಯೆ ಬಹಿರಂಗವಾಗಿ ನಡೆದಾಗ ವಿಜಯಮ್ಮನ ಬದುಕಿನಲ್ಲಿ ಹಠಾತ್ ತಿರುವು ಹಾಗೂ ಅಚಾನಕ್ ಧೈರ್ಯದ ಪ್ರವೇಶವಾಗಿಬಿಡುತ್ತದೆ. “ಆತ ನನ್ನನ್ನು ಎಳೆದಾಡಿದ… ತನ್ನ ಬೂಟುಗಾಲಿನಿಂದ ನನ್ನನ್ನು ರಸ್ತೆಯಲ್ಲಿ ಉರುಳಿಸತೊಡಗಿದ. ಟ್ಯಾಕ್ಸಿಸ್ಟ್ಯಾಂಡಿನಿಂದ ಹತ್ತಿರ ಹತ್ತಿರ ಕೃಷ್ಣರಾವ್ ಪಾರ್ಕ್‍ವರೆಗೂ ಉರುಳಿಸುತ್ತಲೇ ಇದ್ದ. ರಸ್ತೆಯ ಎರಡೂ ಬದಿ ಓಡಾಡುತ್ತಿದ್ದ ವಾಹನಗಳು ಬ್ರೇಕ್ ಹಾಕಿದವು…. ಸಾಲುಗಟ್ಟಿ ನಿಂತವು…. ಜನ ನುಗ್ಗಿ ನುಗ್ಗಿ ಬಂದರು. ನನ್ನ ಕೈಯಲ್ಲಿ ಆಗಷ್ಟೇ ಅಂಗಡಿಯಲ್ಲಿ ಬದಲಾಯಿಸಿ ತಂದಿದ್ದ ನನ್ನ ಮಗನ ಬೂಟುಗಳಿದ್ದವು….ಗಟ್ಟಿಯಾಗಿ ಹಿಡಿದಿದ್ದೆ. ಅದು ಬಿದ್ದು ಹಾಳಾಗಬಾರದು, ಮಗನಿಗೆ ಶಾಲೆಗೆ ಹೋಗಲು ತೊಂದರೆ ಆಗುತ್ತೆ ಎಂಬ ಒಳಗಿನ ಆತಂಕವಿರಬಹುದೇನೋ. ಆನರ ಹಾಹಾಕಾರ-ನನ್ನ ಚೀರಾಟ-ದಿಗ್ಭ್ರಮೆ… ಆತ ದೂಡುತ್ತಲೇ ಇದ್ದ. ಅದ್ಯಾವ ದೈತ್ಯ ಆತನ ಒಳಗೆ ಹೊಕ್ಕಿದ್ದನೋ…. ಹೀಗೆ ವಿಜಯಮ್ಮ ಬದುಕಿನ ಕರಾಳ ಮುಖಗಳನ್ನು ತೆರೆದಿಡುತ್ತಲೇ ಹೋದಂತೆ ಯಾರೇ ಆದರೂ ಒಂದು ಸಲ ಸ್ತಬ್ಧರಾಗದೇ ಇರಲು ಸಾಧ್ಯವಿಲ್ಲ!

ಅಲ್ಲಿಗೆ ಮರ್ಯಾದೆ, ಪ್ರತಿಷ್ಠೆ, ಪರಂಪರೆ… ಏನೆಲ್ಲ ಸಮರ್ಥನೆಗೂ ತಾಳದ ತಾಳಿ ಕಳಚಿಬೀಳುತ್ತದೆ. ಆ ಕ್ರೌರ್ಯದ ಉತ್ತುಂಗದಲ್ಲೇ ಸ್ವಾತಂತ್ರ್ಯದ ಬದುಕಿನ ಬೀಜ ಮೊಳಕೆಯೊಡೆಯುತ್ತದೆ. ‘ಇನ್ನು ಸಾಕು’ ಎಂಬ ನಿರ್ಧಾರವೊಂದು ಸದ್ದಿಲ್ಲದೆ ಹುಟ್ಟುತ್ತದೆ. ಇದಕ್ಕೆ ಪೂರಕವಾಗಿ ಅನೇಕ ಪುರುಷರ ಬೆಂಬಲ-ಸಹಕಾರಗಳು ಅವರಿಗೆ ಲಭಿಸುತ್ತವೆ. ಅದರಲ್ಲಿ ಅಪ್ಪ, ಚಿಕ್ಕಪ್ಪರಂಥವರೂ ಇದ್ದರು. ನಾಟಕ-ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಪುರುಷರೂ ಇದ್ದರು. ಆದರೂ ಅನುದಿನದ ಹೋರಾಟ ಮಾತ್ರ ಹೆಣ್ಣಿನದೇ. ಎಂಥ ಸವಾಲಿಗೂ ಮೈಕೊಡುವ ಛಲ. ಆ ಛಲದ ಹಿಂದೆ ಪ್ರೇರಣೆಯಾಗಿ ನಿಂತ ಇಬ್ಬರು ಗಂಡುಮಕ್ಕಳು. ಅವರ ಬದುಕಿನ ಕ್ಷಿತಿಜವನ್ನು ಹಿಗ್ಗಿಸಿದ ಸಂಜೆ ಕಾಲೇಜಿನ ಶಿಕ್ಷಣ, ಪತ್ರಕರ್ತೆಯಾಗಿ ದುಡಿಯಲು ಅವಕಾಶಕೊಟ್ಟ ಪತ್ರಿಕೆಗಳು, ರಂಗಭೂಮಿ, ಸಾಹಿತ್ಯಕ್ಷೇತ್ರ ಎಲ್ಲ! ನಂತರದ ಬದುಕಿನ ಈ ಬಗೆಯ ಬೆಳವಣಿಗೆ ಮಾತ್ರ ಬೆರಗು ಹುಟ್ಟಿಸುತ್ತದೆ. ಇಷ್ಟುದಿನ ಈ ಧೈರ್ಯ, ಈ ಪ್ರತಿಭೆ ಎಲ್ಲಿ ಅಡಗಿತ್ತು ಎಂಬ ಬೆರಗು ಅದು. ಹೌದು, ಪ್ರತಿ ಹೆಣ್ಣಿನಲ್ಲೂ ಒಬ್ಬ ವಿಜಯಮ್ಮ ಇರುತ್ತಾಳೆ. ಅವಳನ್ನು ಕಾಣುವ, ಅವಳನ್ನು ಬಿಡುಗಡೆಗೊಳಿಸುವ ಸಂಕಲ್ಪ ಬೇಕು ಅಷ್ಟೆ! ಆ ಕ್ಷಣಗಳೇ ಬದುಕಿನ ನಿರ್ಣಾಯಕ ಘಟ್ಟ.

ಇದನ್ನು ಪರಿತ್ಯಕ್ತ ಮಹಿಳೆಯ ಜೀವನಗಾಥೆ ಎಂದುಕೊಳ್ಳಲು ಮನಸ್ಸೊಪ್ಪುವುದಿಲ್ಲ, ನಾನೇ ಗಂಡನಿಂದ ದೂರ ಸರಿದೆ ಎಂದು ಈಗ ನಿರಾಳವಾಗಿ ಹೇಳುತ್ತಾರೆ ವಿಜಯಮ್ಮ. “ಮುಂದಿನ ಜೀವನಯಾತ್ರೆ ‘ಸಾಗಾ ಆಫ್ ಡೆಸರ್ಟೆಡ್ ವುಮನ್ ಅನ್ನಲೇ? ನನಗೆ ಈ ತ್ಯಕ್ತ, ಡೆಸರ್ಟೆಡ್‍ನಂಥ ಶಬ್ದಗಳು ಹಿಡಿಸುವುದಿಲ್ಲ. ಓದುಗರು ಇದೆಂಥ ಪ್ರಯಾಣ ಎಂದು ನಿರ್ಧರಿಸಲಿ”. “ಹಾಗೆ ನೋಡಿದರೆ ನಾನು ಏನನ್ನಾದರೂ ಆಯ್ಕೆ ಮಾಡಿಕೊಂಡೆನೇ? ಆಯ್ಕೆ-ಅಗತ್ಯಗಳ ಬಗ್ಗೆ ಯೋಚಿಸುವುದಕ್ಕೂ ಮೊದಲೇ ಅವೆಲ್ಲ ನನ್ನ ಉಡಿಗೆ ಬಿದ್ದವು. ಉಡಿಯಲ್ಲಿ ಕೆಂಡ ತುಂಬಿತ್ತೋ ಕೆಂಡಸಂಪಿಗೆಯೇ ತುಂಬಿತ್ತೋ ನೋಡಲೂ ಇಲ್ಲ. ಹೊಟ್ಟೆಗೆ ಒತ್ತಿ ಕಟ್ಟಿಕೊಂಡೆ, ಒಡಲು ಬೆಂದದ್ದೂ ಹೌದು…. ಆಗ ಈಗ ಹಿತವೆನಿಸುವ ಬೆಚ್ಚಗಿನ ಅನುಭವವೂ ಆಗಿರಬಹುದು!…. ‘ಗಂಡಬಿಟ್ಟವಳು’ ಎಂಬ ಪಟ್ಟಹೊರಲು ಹೆದರಿ ಎಲ್ಲ ಹಿಂಸೆಗಳನ್ನೂ ಸಹಿಸಿಕೊಳ್ಳುವ ಅನಿವಾರ್ಯತೆ ಹೆಣ್ಣಿಗೆ. ಜೊತೆಗೆ ಆರ್ಥಿಕ ಅವಲಂಬನೆ ಬೇರೆ. ಸ್ವತಂತ್ರ ದುಡಿಯುವ ಹೆಣ್ಣನ್ನು ಒಪ್ಪಿಕೊಳ್ಳಲು ಅಂದಿನ ಸಮಾಜದ ಮನಸ್ಥಿತಿ ಸಿದ್ಧವಾಗಿರಲೂ ಇಲ್ಲ. ಬೆನ್ನಿಗೆ ನಿಂತವರೆಲ್ಲ ಹಿಂದೆಸರಿದರೂ ನೆಲಕಚ್ಚಿ, ಹಠತೊಟ್ಟು ನಿಲ್ಲುವ ಮರದಂತೆ ವಿಜಯಮ್ಮ ಭಾಸವಾಗುತ್ತಾರೆ. ನಾಶವಾಗಿ ಹೋಗಬಹುದಾಗಿದ್ದ ಬದುಕನ್ನು ಅತ್ಯಂತ ಕ್ರಿಯಾಶೀಲವಾಗಿ ಕಟ್ಟಿಕೊಂಡಿದ್ದು ಅವರ ಈ ಜೀವನಯಾನದ ಹಿರಿಮೆ. ರಂಗಭೂಮಿ, ಸಾಹಿತ್ಯ, ಸಿನಿಮಾ, ಪತ್ರಿಕೋದ್ಯಮ ಹೀಗೆ ಹಲವು ರಂಗಗಳಲ್ಲಿ ವಿಸ್ತರಿಸಿಕೊಂಡಿರುವ ವಿಜಯಮ್ಮ ಸ್ವಯಂ ವಿಕಾಸದ ಒಂದು ಮಾದರಿ ನಮಗೆ.

‘ಕುದಿ ಎಸರು’ ಎಂಬ ಆತ್ಮಕಥಾನಕವನ್ನು ಕಟ್ಟುವಾಗಲೂ ಅವರ ವಿಕಾಸಶೀಲ ಮನಸ್ಸಿನ ಪಕ್ವತೆ ಅನುಭವಕ್ಕೆ ಬರುತ್ತದೆ. ಆದ್ದರಿಂದಲೇ ಅವರಿಗೆ ಬದುಕು ಕಪ್ಪು-ಬಿಳುಪುಗಳಲ್ಲಿ ಮಾತ್ರ ಕಾಣುವುದಿಲ್ಲ. ಸರ್ವಚಟಗಳಿಗೂ ದಾಸನಾಗಿದ್ದ ತಂದೆಯಲ್ಲೂ ಉಜ್ವಲ ಮಾನವೀಯತೆ, ತಾಯಿಯ ಮಮತೆಯನ್ನವರು ಕಾಣುತ್ತಾರೆ. ಗಂಡನ ಕ್ರೌರ್ಯದಲ್ಲೂ ಅವನ ಅಸಹಾಯಕತೆಯನ್ನು ಗುರುತಿಸುತ್ತಾರೆ. ಅಜ್ಞಾನದಿಂದ ಕ್ಷುಲ್ಲಕವಾಗಿ ವರ್ತಿಸುವ ಬಂಧುಗಳನ್ನೂ ಅವರು ಕ್ಷಮಿಸುತ್ತಾರೆ. ಸಿದ್ಧ ನೈತಿಕತೆಗಿಂತ ಮಾನವೀಯ ತುಡಿತಗಳು ಅವರಿಗೆ ಮುಖ್ಯವಾಗುತ್ತವೆ. ತಮ್ಮ ಬದುಕಿನ ದಾರುಣತೆಯನ್ನು ಚಿತ್ರಿಸುತ್ತಲೇ ಆ ಬದುಕಿ ಸಾಂಸ್ಕøತಿಕ ಸೌಂದರ್ಯವನ್ನು ತೋರಿಸಲು ಅವರು ಮರೆಯುವುದಿಲ್ಲ. ಅಡಿಗೆ, ಉಡುಗೆ, ಹಬ್ಬ, ಹರಿದಿನ ಆಚರಣೆಗಳಲ್ಲಿ ಸಮೃದ್ಧ ಸಾಂಸ್ಕøತಿಕ ವಿವರಗಳಿವೆ. ಅಂದಿನ ಬೆಂಗಳೂರಿನ ಸಾಂಸ್ಕøತಿಕ ಲೋಕದ ಚಿತ್ರಗಳಿವೆ. ಸಾಹಿತ್ಯ, ಪತ್ರಿಕೋದ್ಯಮ…ಅಲ್ಲಿನ ಒಳಸುಳಿಗಳು ತೆರೆದುಕೊಳ್ಳುತ್ತವೆ. ಕರ್ನಾಟಕ ಲೇಖಕಿಯರ ಸಂಘದ ಬೆಳವಣಿಗೆ… ಸ್ತ್ರೀಯರು ಸಾಹಿತ್ಯ ಹಾಗೂ ಕಲಾಕ್ಷೇತ್ರಗಳ ನಾಯಕತ್ವ ವಹಿಸುವಂತಹ ವಾತಾವರಣ ನಿಧಾನವಾಗಿ ವಿಕಾಸವಾಗುತ್ತಿರುವ ವಿವರಗಳೆಲ್ಲ ಅಲ್ಲಿ ಲಭ್ಯವಾಗುತ್ತದೆ. ಮಾಸ್ತಿ, ಕಂಬಾರರಂತಹ ಹಿರಿ ಜೀವಗಳ ಔದಾರ್ಯ, ಕಿರಿಯರ ಬೆಂಬಲಗಳು ಮನತುಂಬುತ್ತವೆ. ತೆಲಗು-ತಮಿಳು ಭಾಷಿಕ ಪರಿಸರ, ಸಾಮಾಜಿಕ ರಾಜಕೀಯ ಚಿತ್ರಗಳೂ ಅಲ್ಲಲ್ಲಿ ಬೆರೆಯುತ್ತ ಆ ಕಾಲದ ಚರಿತ್ರೆಯನ್ನು ಕಟ್ಟುವಲ್ಲಿ ಒಂದು ಭಾಗವಾಗಿ ಬೆರೆಯತ್ತವೆ.

ಇನ್ನು ‘ಕುದಿ ಎಸರು’ ಎಂಬ ಶೀರ್ಷಿಕೆ! ಇದೂ ಕೂಡ ಕುದಿದು ಕುದಿದೇ ಅನ್ನವಾಗಿ ವಿಕಾಸವಾಗಬೇಕಾದ ಸತ್ಯವನ್ನು ಹೇಳುತ್ತಿದೆ. ಕುದಿಯುವುದು ನೋವಿನ ಅನುಭವವಾದರೂ ಮನಸ್ಸು-ಪ್ರಜ್ಞೆಗಳ ವಿಕಾಸದಲ್ಲಿ ಕುದಿತದ ಪಾಲೂ ಇದೆಯಲ್ಲ! ಓದಿನ ಕೊನೆಗೊಂದು ಆಹ್! ಎಂಬ ಉದ್ಘಾರ ಹೊಮ್ಮುತ್ತದೆ. ವಿಜಯಮ್ಮನ ಚೈತನ್ಯಕ್ಕೊಂದು ಸಲಾಂ.

****

One thought on “ಸಖೀಗೀತ-13 : ಕಿಚ್ಚಿಲ್ಲದ ಬೇಗೆಯ ‘ಕುದಿ ಎಸರು’, ಡಾ.ವಿಜಯಮ್ಮ ಅವರ ಆತ್ಮಕಥೆ…- ಗೀತಾ ವಸಂತ ಅಂಕಣ.

  • October 18, 2017 at 12:04 PM
    Permalink

    I’ve recently started a web site, the info you offer on this site has helped me tremendously. Thank you for all of your time & work.

Comments are closed.

Social Media Auto Publish Powered By : XYZScripts.com