ಅಕ್ರಮ ಗಣಿಗಾರಿಕೆ, ವಿಶೇಷ ತನಿಖಾ ತಂಡದ ವರದಿ ಆಧರಿಸಿ ಕ್ರಮ : CM ಸಿದ್ದರಾಮಯ್ಯ ..

ಬೆಂಗಳೂರು, ಮೇ 12 : ರಾಜ್ಯದ ಜನತೆಗೆ ನೀಡಿರುವ ಭರವಸೆಯಂತೆ ಅಕ್ರಮ ಗಣಿಕಾರಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತೀರ್ಮಾನಕ್ಕೆ ಸರ್ಕಾರ ಬದ್ಧ. ವಿಶೇಷ ತನಿಖಾ ತಂಡ ಈ ಕುರಿತು ನಡೆಸುತ್ತಿರುವ ಪರಿಶೀಲನೆಯ ನಂತರ ಸ್ವೀಕೃತವಾಗುವ ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಸ್ಪಷ್ಟಪಡಿಸಿದರು.


ತಮ್ಮ ನೇತೃತ್ವದ ರಾಜ್ಯ ಸರ್ಕಾರವು ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಐದನೇ ವರ್ಷದೆಡೆಗೆ ಭರವಸೆಯ ನಡಿಗೆ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಅಕ್ರಮ ಗಣಿಗಾರಿಕೆಯಲ್ಲಿ ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಲೂಟಿ ಮಾಡಿದ ಗಣಿ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ವರದಿ ಆಧರಿಸಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ವರದಿಯಲ್ಲಿನ ಕೆಲವು ಅಂಶಗಳು ತಿಳಿಗೊಂಡಿತ್ತು. ಇದೀಗ ವಿಶೇಷ ತನಿಖಾ ತಂಡ ತನಿಖೆಯನ್ನು ಚುರುಕುಗೊಳಿಸಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಜನತೆಗೆ ನೀಡಿರುವ 165 ಭರವಸೆಗಳ ಪೈಕಿ ತಮ್ಮ ಸರ್ಕಾರ ಈಗಾಗಲೇ 155 ಭರವಸೆಗಳನ್ನು ಈಡೇರಿಸಿದೆ. ಇನ್ನೂ ಬಾಕಿ ಇರುವ ಒಂದು ವರ್ಷದ ಅವಧಿಯಲ್ಲಿ ಮಂಡಿಸುವ ಆಯವ್ಯಯದಲ್ಲಿ ಉಳಿದ ಭರವಸೆಗಳನ್ನೂ ಈಡೇರಿಸಲಿದೆ.


ಸಾಮಾನ್ಯವಾಗಿ ಚುನಾವಣಾ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಭರವಸೆ ನೀಡುವುದು ಸಹಜ. ಆದರೆ, ಎಲ್ಲಾ ಭರವಸೆಗಳನ್ನೂ ಅನುಷ್ಠಾನಗೊಳಿಸುವುದು ಅಸಾಧ್ಯದ ಮಾತು. ಇಂತಹ ಸನ್ನಿವೇಶದಲ್ಲಿ ತಮ್ಮ ನೇತೃತ್ವದ ರಾಜ್ಯ ಸರ್ಕಾರ ಭರವಸೆಗಳನ್ನು ಈಡೇರಿಸಲು ಪ್ರಾಮಾಣೀಕ ಪ್ರಯತ್ನ ಮಾಡಿದ್ದಲ್ಲದೇ ಪ್ರತಿವರ್ಷವೂ ಅದರ ಅನುಷ್ಠಾನಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಹಾಗೂ ನೂತನ ವಿನೂತನ ಕಾರ್ಯಕ್ರಮಗಳನ್ನು ಪ್ರಕಟಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಜನತೆ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಎರಡು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಆರ್ಶೀವಾದ ಮಾಡಿರುವುದೇ ಇದಕ್ಕೆ ಸಾಕ್ಷಿ. ಇದು ತಮ್ಮ ಸರ್ಕಾರದ ಸಾಧನೆಗೆ ಕೈಗನ್ನಡಿಯಾಗಿದೆ. ಮುಂದಿನ ವರ್ಷ ಅಂದರೆ 2018 ರಲ್ಲಿನ ರಾಜ್ಯ ವಿಧಾನ ಸಭಾ ಚುನಾವಣೆ ತಮ್ಮ ನಾಯಕತ್ವದಲ್ಲೇ ನಡೆಯಲಿದೆ. ತಮ್ಮ ಪಕ್ಷವು ಪುನಃ ಅಧಿಕಾರಕ್ಕೆ ಬರುವುದೂ ಕೂಡಾ ನಿಶ್ಚಿತ ಎಂದು ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಪಕ್ಷ ಗೆದ್ದರೆ ಮುಂದಿನ ಮುಖ್ಯಮಂತ್ರಿ ಯಾರು ? ಎಂಬ ಪತ್ರಕರ್ತರ ಪ್ರಶ್ನೆಗೆ ಶಾಸಕಾಂಗ ಪಕ್ಷವು ನಾಯಕನನ್ನು ಆಯ್ಕೆ ಮಾಡುತ್ತದೆ. ಪಕ್ಷದ ವರಿಷ್ಠ ಮಂಡಳಿಯ ಸಹಪಡೆದ ಆ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದು ಉತ್ತರಿಸಿದರು.


ತಾವು 2013 ರಲ್ಲಿ ಅಧಿಕಾರ ವಹಿಸಿಕೊಂಡ ಮೊದಲನೇ ದಿನವೇ ಅನ್ನಭಾಗ್ಯ ಯೋಜನೆ ಒಳಗೊಂಡಂತೆ ಐದಾರು ಮಹತ್ವಾಕಾಂಕ್ಷೀ ಯೋಜನೆಗಳ ಘೋಷಣೆ ಮಾತ್ರವಲ್ಲದೆ, ಅವುಗಳನ್ನು ಅನುಷ್ಠಾನಗೊಳಿಸಿ ಪಕ್ಷದ ಪ್ರಣಾಳಿಕೆಯಲ್ಲಿದ್ದ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸುವ ಸ್ಪಷ್ಟ ಸಂದೇಶವನ್ನು ನಾಡಿನ ಜನತೆಗೆ ರವಾನೆ ಮಾಡಿರುವುದು ಗಮನಾರ್ಹ. ತಮ್ಮ ಸರ್ಕಾರವು ಎಲ್ಲಾ ವರ್ಗಗಳ ಕಡು ಬಡವರಿಗೂ ಒಂದಲ್ಲ ಒಂದು ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಕೇವಲ ಅಹಿಂದ ವರ್ಗಕ್ಕೆ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಸಬ್ ಕ ಸಾಥ್ ಸಬ್ ಕ ವಿಕಾಸ್ ಎಂಬ ಘೋಷಣೆಯ ಮೊಳಗಿಸುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕರು ರಾಷ್ಟ್ರದ ಜನಸಂಖ್ಯೆಯಲ್ಲಿ ಶೇಕಡಾ 13 ರಷ್ಟು ಜನಸಂಖ್ಯೆ ಇರುವ ಮುಸಲ್ಮಾನ ಸಮುದಾಯವನ್ನು ಹಾಗೂ ಶೇಕಡಾ 2 ರಷ್ಟು ಕ್ರೈಸ್ತ ಸಮುದಾಯವನ್ನು ಹೊರಗಿಟ್ಟು, ಅಭ್ಯುದಯದ ಮಾತನಾಡಿ ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ತಮ್ಮ ಸರ್ಕಾರ ಅಂತಹ ಕಾರ್ಯವನ್ನು ಹಿಂದೆಂದೂ ಮಾಡಿಲ್ಲ, ಮುಂದೆಯೂ ಕೂಡಾ ಮಾಡುವುದಿಲ್ಲ. ಎಲ್ಲರಿಗೂ ನ್ಯಾಯವನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದೆ. ಭಾರತೀಯ ಜನತಾ ಪಕ್ಷದ ಮಾಡುತ್ತಿರುವ ಎಲ್ಲಾ ಆರೋಪಗಳನ್ನೂ ಸಾರ ಸಗಟಾಗಿ ತಳ್ಳಿ ಹಾಕಿದ ಅವರು ಒಂದು ಸುಳ್ಳನ್ನು ಒಂದು ನೂರು ಬಾರಿ ಪುನರುಚ್ಛರಿಸಿ ಜೈಲಿಗೆ ಹೋಗಿ ಬಂದವರು ಹಾಗೂ ಬೇಲ್ ಮೇಲೆ ಇರುವವರು ಆಧಾರ-ರಹಿತ ಆರೋಪಗಳನ್ನು ಮಾಡಬಾರದು ಎಂದು ಸಲಹೆ ನೀಡಿದರು.


ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿಯಲ್ಲಿ ವ್ಯಾಸಂಗ ಮಾಡುವ ಎಲ್ಲಾ ವರ್ಗಗಳ ಒಂದೂವರೆ ಲಕ್ಷ ಕಡುಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡುವುದಾಗಿ ಘೋಷಿಸಿದರು. ಇದು ತಮ್ಮ ಸರ್ಕಾರ ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಧ್ಯೋತಕ ಎಂದರು.
ರಾಜ್ಯದಲ್ಲಿ ಎರಡೂವರೆ ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ರೈತ ಸಮುದಾಯಕ್ಕೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಬರಗಾಲವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಎದುರಿಸುತ್ತಿದೆ. ಸಮಾಜದ ಎಲ್ಲಾ ವರ್ಗದವರ ಹಿತ ಕಾಪಾಡಲು ತಮ್ಮ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದÀರು.
ಬರಗಾಲ ವಿಚಾರ ಪ್ರಸ್ತಾಪವಾದಾಗ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ಲೋಕಸಭಾ ಸದಸ್ಯರಾಗಿ ಮೂರು ವರ್ಷವಾದರೂ ಜ್ಯದ ಬರ ವಿಚಾರವನ್ನು ಸಂಸತ್‍ನಲ್ಲಿ ಪ್ರಸ್ತಾಪ ಮಾಡಿಲ್ಲ. ಕೇಂದ್ರದಿಂದ ನೆರವೂ ಕೋರಿಲ್ಲ. ಸಹಕಾರ ಸಂಸ್ಥೆಗಳಿಂದ ಸಾಲ ಪಡೆದ ರೈತರ ಸಾಲ ಮನ್ನಾ ಮಾಡಬೇಕೆಂಬ ಆಗ್ರಹ ಮಾಡುತ್ತಿದ್ದಾರೆ. ಶೇಕಡಾ 22 ಪ್ರತಿಶತ ರೈತರು ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಶೇಕಡಾ 78 ರಷ್ಟು ರೈತರು ವಾಣಿಜ್ಯ ಬ್ಯಾಂಕ್‍ನಿಂದ ಸಾಲ ಪಡೆದಿದ್ದಾರೆ. ರೈತರು ಪಡೆದ ಸಾಲದ ಒಟ್ಟಾರೆ ಮೊತ್ತ 52,000 ಕೋಟಿ ರೂ ಆಗಿದೆ. ಕೇಂದ್ರ ಸರ್ಕಾರ ಶೇಕಡಾ 50 ರಷ್ಟು ಸಾಲ ಮನ್ನಾ ಮಾಡಿದರೆ ರಾಜ್ಯ ಸರ್ಕಾರವೂ ಕೂಡಾ ಸಹಕಾರ ಬ್ಯಾಂಕುಗಳಿಂದ ರೈತರು ಪಡೆದ ಸಾಲದ ಪ್ರಮಾಣದ ಶೇಕಡಾ 50 ರಷ್ಟು ಮೊತ್ತವನ್ನು ಮನ್ನಾ ಮಾಡುವುದಾಗಿ ಪುನರುಚ್ಚರಿಸಿದರು.
ಕಳೆದ ನಾಲ್ಕು ವರ್ಷಗಳಿಂದಲೂ ಹಗರಣ ಮುಕ್ತ ಆಡಳಿತವನ್ನು ನೀಡಿದ್ದೇವೆ. ಪ್ರತಿಪಕ್ಷಗಳು ಮಾಡುತ್ತಿರುವ ಎಲ್ಲಾ ಆರೋಪಗಳೂ ಸತ್ಯಕ್ಕೆ ದೂರವಾದವು. ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ವಿವಿಧ ಇಲಾಖೆಗಳಿಗೆ ಒದಗಿಸಲಾಗಿರುವ ನೆರವಿನ ಮೊತ್ತದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ ಅವರು ಹಿಂದಿನ ಭಾರತೀಯ ಜನತಾ ಪಕ್ಷ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿನ ಆಡಳಿತದಲ್ಲಿ ಬಿಡುಗಡೆ ಮಾಡಿದ ಮೊತ್ತಕ್ಕಿಂತಲೂ ತಮ್ಮ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಮುಖ ಇಲಾಖೆಗಳಿಗೆ ಅಧಿಕ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿ ಸದ್ಭಳಕೆಯಾಗುವಂತೆ ಕ್ರಮ ವಹಿಸಿರುವುದಾಗಿ ತಿಳಿಸಿದರು.
ರಾಜ್ಯ ವಿಧಾನ ಸಭಾ ಸದಸ್ಯರಾದ ಅಶೋಕ್ ಪಟ್ಟಣ್ ಮತ್ತು ಪಿ ಎಂ ನರೇಂದ್ರ ಸ್ವಾಮಿ, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ವಿ. ಎಸ್. ಉಗ್ರಪ್ಪ ಮತ್ತು ಕೆ ಗೋವಿಂದರಾಜ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರೂ ಪತ್ರಿಕಾಗೋಷ್ಠಿಯಲ್ಲಿದ್ದರು

Comments are closed.

Social Media Auto Publish Powered By : XYZScripts.com