ತ್ರಿವಳಿ ತಲಾಖ್: ಎಲ್ಲರ ನೋಟ ಸುಪ್ರೀಂ ಕೋರ್ಟ್ ಕಡೆ, ಬದಲಾಗುತ್ತಾ ಮುಸ್ಲಿಂ ಮಹಿಳೆಯರ ಹಣೆಬರಹ ?

ತ್ರಿವಳಿ ತಲಾಖ್ ರದ್ಧತಿ ವಿಚಾರಣೆ ಸದ್ಯ ಎಲ್ಲೆಲ್ಲೂ ಚರ್ಚೆಯಾಗುತ್ತಿರುವ ಪ್ರಮುಖ ವಿಚಾರ. ಮುಸ್ಲಿಂ ಧರ್ಮದ ಷರಿಯತ್ ಕಾನೂನಿನಡಿಯಲ್ಲಿ ಮೂರು ಬಾರಿ ‘ತಲಾಖ್’ ಹೇಳಿಬಿಟ್ಟ ಮಾತ್ರಕ್ಕೆ ದಂಪತಿ ವಿಚ್ಛೇದನ ಪಡೆಯಬಹುದು. ಇದನ್ನು ವಿರೋಧಿಸಿ ಕಾನೂನಾತ್ಮಕ ಹಕ್ಕುಗಳ ಅಡಿಪಾಯದಲ್ಲಿ ತ್ರಿವಳಿ ತಲಾಖ್ ರದ್ದುಪಡಿಸಬೇಕು ಎನ್ನುವ ವಿಚಾರ ಸದ್ಯ ಸರ್ವೋಚ್ಛ ನ್ಯಾಯಾಲಯದ ಎದುರಿಗಿದೆ.

ಮುಖ್ಯ ನ್ಯಾಯಮೂರ್ತಿ ಜೆ ಖೇಹರ್ ನೇತೃತ್ವದ 5 ನ್ಯಾಯಮೂರ್ತಿಗಳ ಸಂವಿಧಾನ ಪೀಠ 7 ಅರ್ಜಿಗಳ ವಿಚಾರಣೆ ನಡೆಸಲಿದೆ. ತಮ್ಮ ಸಮುದಾಯದಲ್ಲಿರುವ ತ್ರಿವಳಿ ತಲಾಖ್ ಪದ್ಧತಿ ಅಸಂವಿಧಾನಿಕ ಎಂದು ವಾದಿಸಿರುವ ಮುಸ್ಲಿಂ ಮಹಿಳೆಯರ 5 ಪ್ರತ್ಯೇಕ ಅರ್ಜಿಗಳೂ ಇದರಲ್ಲಿ ಸೇರಿವೆ.

 

ನ್ಯಾಯಪೀಠದಲ್ಲಿ ನ್ಯಾ ಜೆ ಖೇಹರ್, ನ್ಯಾ ಕುರಿಯನ್ ಜೋಸೆಫ್, ನ್ಯಾ. ಆರ್ ಎಫ್ ನಾರಿಮನ್, ನ್ಯಾ ಯು ಯು ಲಲಿತ್ ಮತ್ತು ನ್ಯಾ ಅಬ್ದುಲ್ ನಜೀರ್ ಅವರಿದ್ದಾರೆ. 5 ವಿವಿಧ ಧರ್ಮಗಳಿಗೆ ಸೇರಿದ ನ್ಯಾಯಾಧೀಶರಿರುವ ನ್ಯಾಯಪೀಠ ಮತ್ತೊಂದು ಧರ್ಮದ ಪ್ರಮುಖ ವಿಚಾರದ ವಿಚಾರಣೆ ನಡೆಸುತ್ತಿರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಮೂರು ಬಾರಿ ತಲಾಖ್ ಹೇಳುವ ಈ ಪದ್ಧತಿಯಿಂದ ಅನೇಕ ಮುಸ್ಲಿಂ ಕುಟುಂಬಗಳು ಛಿದ್ರವಾಗಿವೆ. ದೂರದೇಶದಲ್ಲಿ ಇರುವ ಪತಿ ಕೇವಲ ದೂರವಾಣಿ ಮೂಲಕ ಮೂರು ಬಾರಿ ತಲಾಖ್ ಹೇಳಿ ವಿವಾಹವನ್ನು ರದ್ದು ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇದೆಲ್ಲವುಗಳನ್ನು ತಡೆಯಲು ಸಂವಿಧಾನದಲ್ಲಿ ತಿದ್ದುಪಡಿ ತರುವ ಅವಶ್ಯಕತೆ ಇದೆ ಎನ್ನುವ ಬಲವಾದ ವಾದ ಕೇಳಿಬರುತ್ತಿವೆ. ಒಟ್ಟು 6 ದಿನಗಳ ಕಾಲ ನಡೆಯುವ ಈ ವಿಚಾರಣೆ ಯಾವ ತೀರ್ಪಿಗೆ ದಾರಿ ಮಾಡಿಕೊಡುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

Comments are closed.