Mysore : BJP working committee ; ಪರಸ್ಪರ ಮುಖ ನೋಡದ ನಾಯಕರು…

ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಮತ ಶಮನಕ್ಕೆ ರಾಜ್ಯ ಕಾರ್ಯಕಾರಿಣಿ ಸಭೆ ವೇದಿಕೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಉಭಯ ನಾಯಕರು ಒಂದೇ ವೇದಿಕೆ ಹಂಚಿಕೊಂಡರು ಪರಸ್ಪರ ಮುಖವನ್ನು ನೋಡಲಿಲ್ಲ. ಉದ್ಘಾಟನೆ ಕಾರ್ಯಕ್ರಮಕ್ಕಾಗಿ ವೇದಿಕೆ ಏರಿದ ಈಶ್ವರಪ್ಪರನ್ನು ಸದಾನಂದಗೌಡ ಮತ್ತು ಅನಂತಕುಮಾರ ಸೇರಿದಂತೆ ಪ್ರಮುಖ ನಾಯಕರು ಎದ್ದು ನಿಂತು ಸ್ವಾಗತಿಸಿದ್ರು.ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತ್ರ ಈಶ್ವರಪ್ಪರನ್ನು ಕಣ್ಣೆತ್ತಿಯೂ ಸಹ ನೋಡಲಿಲ್ಲ.

ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಮೇಲಿನ ಕೋಪವನ್ನು ಈಶ್ವರಪ್ಪ ಇಂದಿನ ಸಭೆಯಲ್ಲಿಯೂ ಮುಂದುವರೆಸಿದ್ರು. ರಾಜ್ಯ ಬಿಜೆಪಿ ಘಟಕ ಮುರುಳಿಧರ್ ರಾವ್ ರನ್ನು ಸನ್ಮಾಮಿಸಿದ ಸಂದರ್ಭದಲ್ಲಿ ಪ್ರಮುಖ ನಾಯಕರು ಎದ್ದು ನಿಂತು ಗೌರವಿಸಿದ್ರು. ಆದ್ರೆ ಈಶ್ವರಪ್ಪ ಮಾತ್ರ ತಮ್ಮ ಆಸನಬಿಟ್ಟು ಏಳದೆ ಮುರುಳಿಧರ್ ರಾವ್ ಮೇಲಿನ ಕೋಪ ಮುಂದುವರೆಸಿದ್ರು. ಇನ್ನು ಉದ್ಘಾಟನೆ ವೇಳೆ ಈಶ್ವರಪ್ಪರಿಗೆ ದೀಪ ಬೆಳಗುವ ಅವಕಾಶದಿಂದ ವಂಚಿತರಾದ್ರು. ಇದರಿಂದ ಕುಪಿತರಾದ ಈಶ್ವರಪ್ಪ ಎಲ್ಲರಿಗಿಂತ ಮುಂಚೆ ಹಿಂದೆ ಸರಿದ್ರು.

ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಸಾರುವ ಸಲುವಾಗಿ ಜೂನ್ ೧೮ ರಿಂದ ರಾಜ್ಯ ಪ್ರವಾಸ ಮಾಡುವುದಾಗಿ ಘೋಷಣೆ ಮಾಡಿದ ಬಿಎಸ್ ವೈ ಎಲ್ಲ ನಾಯಕರ ಸಹಕಾರ ಕೋರಿದ್ರು. ಈ ಸಂದರ್ಭದಲ್ಲಿ ಅನಂತಕುಮಾರ, ಸದಾನಂದಗೌಡ, ಸೇರಿದಂತೆ ಬಿಜೆಪಿ ಜನಪ್ರತಿನಿಧಿಗಳ ಸಹಕಾರ ಕೋರಿದ್ರು. ಆದ್ರೆ ಭಾಷಣದ ಆರಂಭದಲ್ಲಿಯೂ ಈಶ್ವರಪ್ಪ ಹೆಸರು ಪ್ರಸ್ತಾಪಿಸದ ಯಡಿಯೂರಪ್ಪ ತಮ್ಮ ಪ್ರವಾಸಕ್ಕು ಈಶ್ವರಪ್ಪರ ನೆರವು ಕೋರಲಿಲ್ಲ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಪಕ್ಷದ ಹಿರಿಯ ಮುಖಂಡ ಕೆ.ಬಿ.ಶಾಣಪ್ಪ ಸರ್ಕಾರದ ವೈಫಲ್ಯಗಳ ಮೇಲಿನ ನಿರ್ಣಯ ಗೋಷ್ಠಿ ವೇಳೆ ಉಭಯ ನಾಯಕರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ರು ಎನ್ನಲಾಗಿದೆ. ಅಲ್ಲದೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧವು ಶಾಣಪ್ಪ ಅಸಮಧಾನ ವ್ಯಕ್ತಪಡಿಸಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ರು.

ಕಾರ್ಯಕಾರಿಣಿ ಸಭೆಯ ಇಡೀ ದಿನದ ಕಲಾಪಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಸಂಜೆ ವೇಳೆ ಸುದ್ದಿಗೋಷ್ಟಿ ಆಯೋಜಿಸಲಾಗಿತ್ತು. ಕೇವಲ ಒಂದೆರಡು ವಿಚಾರಗಳನ್ನು ಹಂಚಿಕೊಂಡ ಮಾಜಿ ಸಚಿವ ಅರವಿಂದ ಲಿಂಬಾವಳಿ ಪಕ್ಷದ ಭಿನ್ನಮತ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಲೇ ಸುದ್ದಿಗೋಷ್ಟಿಯಿಂದ ಕಾಲ್ಕಿತ್ತರು.

ಮೊದಲ ದಿನದ ಕಾರ್ಯಕಾರಿಣಿ ಸಭೆಯಲ್ಲಿ ಪ್ರಮುಖ ನಾಯಕರು ಗೈರಾಗಿದ್ರು. ಸಂತೋಶ್ ಜಿ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಮಾಜಿ ಡಿಸಿಎಂ ಆರ್.ಅಶೋಕ್, ಇತ್ತೀಚೆಗೆ ಬಿಜೆಪಿ ಜವಾಬ್ದಾರಿಯಿಂದ ಮುಕ್ತರಾದ ಭಾನುಪ್ರಕಾಶ್, ನಿರ್ಮಲಕುಮಾರ ಸುರಾನಾ, ಎಂ.ಪಿ.ರೇಣುಕಾಚಾರ್ಯ ಮತ್ತು ಗೋ.ಮಧುಸೂದನ ಗೈರಾಗಿದ್ರು. ಆದ್ರೆ ಅತೃಪ್ತ ನಾಯಕರಾದ ಸೊಗಡು ಶಿವಣ್ಣ, ಸೋಮಣ್ಣ ಬೇವಿನಮರದ, ರಾಯಣ್ಣ ಬ್ರಿಗೇಡ್ ಅಧ್ಯಕ್ಷ ವಿರುಪಾಕ್ಷಪ್ಪ ಸೇರಿದಂತೆ ಅತೃಪ್ತ ನಾಯಕರು ಸಭೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಇನ್ನು ಮುಂಜಾನೆಯಿಂದಲೂ ಕಾರ್ಯಕಾರಿಣಿ ಸಭೆಯಲ್ಲಿ ಕಾಣಿಸಿಕೊಳ್ಳದ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಸಂಜೆ ವೇಳೆಗೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟರು. ಇನ್ನು ಬೆಳಿಗ್ಗೆಯಿಂದಲೂ ಗೆಲುವಿಗೆ ಸಂತೋಷವೇ ಸೂತ್ರ ಎಂಬ ಧ್ಯೇಯ ವಾಕ್ಯವುಳ್ಳ ಪ್ಲೆಕ್ಸಗಳು ಚರ್ಚೆಗೆ ಗ್ರಾಸವಾಗಿದ್ವು. ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರೆ ತೆರವುಗೊಳಿಸೋ ಮೂಲಕ ಚರ್ಚೆಗೆ ತೆರೆ ಎಳೆದ್ರು. ಒಟ್ಟಾರೆಯಾಗಿ ಮೊದಲ ದಿನದ ಕಾರ್ಯಕಾರಿಣಿ ಸಭೆ ಹಲವು ಘಟನೆಗಳಿಗೆ ಸಾಕ್ಷಿಯಾಯಿತು.

Comments are closed.

Social Media Auto Publish Powered By : XYZScripts.com