ದಿಡ್ಡಳ್ಳಿಯಲ್ಲಿ ಗುಡಿಸಲು ತೆರವು ಕಾರ್ಯಾಚರಣೆ ಮುಂದಾದ ಜಿಲ್ಲಾಡಳಿತ : ಆದಿವಾಸಿಗಳಿಂದ ಪ್ರತಿಭಟನೆ..

ಕೊಡಗು: ಕೊಡಗು ಜಿಲ್ಲಾಡಳಿತ ಶನಿವಾರ ದಿಡ್ಡಳ್ಳಿಯಲ್ಲಿ ಮತ್ತೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು, ಪೊಲೀಸ್ ಭದ್ರತೆಯೊಂದಿಗೆ ಅರಣ್ಯ ಇಲಾಖೆ ತೆರವು ಕಾರ್ಯ ಆರಂಭಿಸಿದೆ. ಕೆಎಸ್ಆರ್‌ಪಿ, ಜಿಲ್ಲಾ‌ಮೀಸಲು ಪೊಲೀಸ್, ಸಿವಿಲ್‌ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಸುಮಾರು 300 ಕ್ಕೂ ಅಧಿಕ ಭದ್ರತಾ ತಂಡದಿಂದ ದಿಡ್ಡಳ್ಳಿಯಲ್ಲಿ ಕಾರ್ಯಾಚರಣೆ ಆರಂಭವಾಗಿದೆ. ಕಾರ್ಯಾಚರಣೆ ವಿರುದ್ಧ ದಿಡ್ಡಳ್ಳಿ ಹಾಡಿಯ ನಿರಾಶ್ರಿತರೂ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ದಿಡ್ಡಳ್ಳಿಯ ಮುತ್ತಮ್ಮ ಮತ್ತೆ ಮರವೇರಿ ಕುಳಿತಿದ್ದಾಳೆ. ಅಲ್ಲದೆ ‌ಕಾರ್ಯಾಚರಣೆ ನಿಲ್ಲಿಸದಿದ್ದಲ್ಲಿ ಮರದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾಳೆ.⁠⁠⁠⁠
ತಮಗೆ ಭೂಮಿ, ವಸತಿ ದೊರಕುವವರೆಗೂ ಅರಣ್ಯದಲ್ಲಿಯೇ ವಾಸ ಮಾಡುತ್ತೇವೆ ಎಂದು ಬುಧವಾರವಷ್ಟೇ ದಿಡ್ಡಳ್ಳಿ ಆದಿವಾಸಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಲ್ಲದೆ,  ದಿಡ್ಡಳ್ಳಿ ಅರಣ್ಯದಲ್ಲಿ ಮತ್ತೆ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದರು. ಅರಣ್ಯ ಇಲಾಖೆಗೆ ಸೇರಿದ ಜಾಗ ಇದಾಗಿದ್ದು, ಕಳೆದ ನಾಲ್ಕು ತಿಂಗಳುಗಳ ಹಿಂದೆಯಷ್ಟೇ, ದಿಡ್ಡಳ್ಳಿ ಆದಿವಾಸಿಗಳನ್ನ ಇಲ್ಲಿಂದ ಸರ್ಕಾರ ತೆರವುಗೊಳಿಸಿತ್ತು. ಆದರೆ ಸರ್ಕಾರ ತಮ್ಮನ್ನ ಕಡೆಗಣಿಸಿದೆ ಎಂದು ಆರೋಪಿಸುತ್ತಿರುವ ಆದಿವಾಸಿಗಳು ಮತ್ತೆ ದೆವಮಚ್ಚಿ ಅರಣ್ಯದ ದಿಡ್ಡಳ್ಳಿಯಲ್ಲಿ ಗುಡಿಸಲು ಹಾಕಿಕೊಂಡಿದ್ದರು. ವಿಷಯ ತಿಳಿದ  ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ದಿಡ್ಡಳ್ಳಿಯಲ್ಲಿ ಮತ್ತೆ ಬೀಡುಬಿಟ್ಟು, ಅರಣ್ಯದಲ್ಲಿ ಆದಿವಾಸಿಗಳು ನಿರ್ಮಿಸಿರುವ ಗುಡಿಸಲುಗಳನ್ನ ತೆರವುಗೊಳಿಸಲು ಮುಂದಾಗಿದ್ದಾರೆ.
ಕೊಡಗು ಜಿಲ್ಲಾಡಳಿತ ವಿರಾಜಪೇಟೆಯ ಕೆಡಮುಳ್ಳೂರಿನಲ್ಲಿ ನಿರ್ಮಿಸಿರುವ ಮನೆಗಳಿಗೆ ತೆರಳಲು ಆದಿವಾಸಿ ಜನಾಂಗ ನಿರಾಕರಿಸಿದ್ದು, ಇದು ಗುಡ್ಡಗಾಡು ಪ್ರದೇಶವಾಗಿದ್ದರಿಂದ ವಾಸಿಸಲು ಯೋಗ್ಯವಾಗಿಲ್ಲ ಎಂದಿದ್ದಾರೆ.  ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿತ್ತು.  ಹಾಗೂ ಯುವ ಜನರ ಸ್ವ ಉದ್ಯೋಗ ಕೈಗೊಳ್ಳಲು ಕೌಶಲ್ಯ ತರಬೇತಿ ಹಾಗೂ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ಕೊಡಿಸಿ ಉದ್ಯೋಗ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿತ್ತು. ಆದರೂ ತಮಗೆ ದಿಡ್ಡಳ್ಳಿಯಲ್ಲಿಯೇ ವಸತಿ ನಿರ್ಮಿಸಿಕೊಡಿ ಎಂದು ಈ ಆದಿವಾಸಿಗಳು ಪಟ್ಟುಹಿಡಿದಿದ್ದಾರೆ.

Comments are closed.