ಸಖೀಗೀತ-12 : ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ …..ಗೀತಾ ವಸಂತ ಅಂಕಣ…


“ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ” ಎಂಬ ದಾಸವಾಣಿಯ ಮೂಲಕ ಕೆ.ಎಸ್.ನರಸಿಂಹಸ್ವಾಮಿ ಅವರ ‘ಮನೆಯಿಂದ ಮನೆಗೆ’ ಕವಿತೆಯನ್ನು ಪ್ರವೇಶಿಸುವುದು ಅದರ ಅರ್ಥವಲಯವನ್ನು ವಿಸ್ತರಿಸುವಲ್ಲಿ ನೆರವಾಗುತ್ತದೆಯೆಂಬುದು ನನ್ನ ನಂಬಿಕೆ. ಮನೆಯೆಂಬುದು ಇಲ್ಲಿ ಶಕ್ತಿಶಾಲಿಯಾದ ರೂಪಕ. ಕನ್ನಡ ಕಾವ್ಯದ ಸಂದರ್ಭದಲ್ಲಿಯೂ ಈ ರೂಪಕ ಬಹುವಾಗಿ ಕಾಡಿದೆ. ಮನೋರಚನೆಗಳನ್ನು ಕಳಚಿಕೊಳ್ಳುತ್ತ ಬಯಲಾಗುವ ಅಲ್ಲಮನ ಪರಿಕಲ್ಪನೆ, ಲೌಕಿಕದ ಸಂಬಂಧಗಳ ಚೌಕಟ್ಟುಗಳನ್ನು ದಾಟಿ ಪಾರಮಾರ್ಥಿಕ ನೆಲೆಗೆ ಸಾಗುವ ಪುರಂದರ ದಾಸರ ಪರಿಕಲ್ಪನೆ, ಬಯಲು ಆಲಯಗಳು ಬೆರೆತ ಬೆರಗನ್ನು ನಿರೂಪಿಸುವ ಕನಕದಾಸರ ರಚನೆ, ಹಾಗೂ ಆಧುನಿಕ ಸಂದರ್ಭದಲ್ಲಿ ಕುವೆಂಪು ಪ್ರತಿಪಾದಿಸಿದ ‘ಅನಿಕೇತನ’ ತತ್ವದ ಸಮಾಜೋ-ಆಧ್ಯಾತ್ಮಿಕ ನೆಲೆಗಳನ್ನು ಪ್ರಾತಿನಿಧಿಕವಾಗಿ ಗಮನಿಸಬಹುದು. ಇಲ್ಲೆಲ್ಲ ಮನೆ ಎಂಬುದು ಮನವನ್ನೂ ಸಂಕೇತಿಸುತ್ತದೆ. ಆ ಮೂಲಕ ಮನುಷ್ಯನ ಆಳದಲ್ಲಿರುವ ಅಗೋಚರವಾದ ಆಕೃತಿಗಳನ್ನು ಸೂಚಿಸುತ್ತದೆ. ಅಂತೆಯೇ ನಮ್ಮ ಬದುಕನ್ನು ನಿಯಂತ್ರಿಸುತ್ತಿರುವ ಭೌತಿಕ-ಬೌದ್ಧಿಕ ಆಕೃತಿಗಳನ್ನೂ ಏಕಕಾಲದಲ್ಲಿ ಸಂಕೇತಿಸುತ್ತದೆ. ಅಲ್ಲಮನ ಬೆಡಗಿನ ಭಾಷೆಯಲ್ಲಿ ಬಯಲಾಗುವುದೆಂದರೆ ಈ ಎರಡೂ, ಆಂತರಿಕ-ಬಾಹ್ಯರಚನೆಗಳಿಂದ ಹೊರಗಾಗುವುದು. ಬಯಲಿಗೆ ಚೌಕಟ್ಟು ಹಾಕಿದರೆ ಮನೆ. ಬಿಚ್ಚಿದರೆ ಮತ್ತೆ ಬಯಲು. ಈ ಚೋದ್ಯವನ್ನು ಅರಿತರೆ ನಮ್ಮ ನೋಟದ ಕ್ರಮವೇ ಬದಲಾಗಬಲ್ಲದು. ‘ಬಯಲು ಆಲಯದೊಳಗೋ, ಆಲಯವು ಬಯಲೊಳಗೋ’ ಎಂದು ಕನಕದಾಸರು ಬೆರಗಾಗುವುದು ಕೂಡ ಈ ಬದಲಾದ ಗ್ರಹಿಕೆಯ ಕ್ರಮದಿಂದಲೇ. ನಮ್ಮೊಳಗೆ ಇಣುಕಿದರೂ ಸಹ ಅಲ್ಲಿ ಪ್ರಜ್ಞೆಯನ್ನು ನಿಯಂತ್ರಿಸುವ ಅನೇಕ ಸಂಗತಿಗಳಿರುವಂತೆಯೇ ಅನಿರ್ಬಂಧಿತವಾದ ಸ್ಪೇಸ್ ಕೂಡ ಇದೆ. ಆಗಾಗ ಆ ಬಯಲಿನ ಅನುಭವವನ್ನು ಹೊಂದುವುದು ಮನುಷ್ಯರ ಪಾಲಿಗೆ ದಿವ್ಯವಾದುದು. ‘ಅಲ್ಲಿರುವುದು ನಮ್ಮನೆ’ ಎಂಬುದನ್ನು ದಾಸರು ಪಾರಮಾರ್ಥಿಕ ನೆಲೆಯಲ್ಲಿ ಸೂಚಿಸುತ್ತಿರುವಾಗಲೂ, ಲೋಕದ ಬದುಕಿನ ಜಂಜಾಟಗಳಲ್ಲಿ ‘ಸುಮ್ಮನೆ’ ಸಿಲುಕಿ ಒದ್ದಾಡುವ ಜೀವಗಳನ್ನು ಬಿಡುಗಡೆಗೊಳಿಸಿ ಇನ್ನೊಂದು ನೆಲೆಯನ್ನು ಕಾಣಿಸುವ ಉದ್ದೇಶವಿದೆ. ಅಲ್ಲಿರುವ ‘ಆ’ ಮನೆಯು ಭೂಮಿಯ ಗುರುತ್ವವು ಸೆಳೆಯುವ ಎಲ್ಲಾ ಸುಳಿಗಳಿಗೆ ಅತೀತವಾದದ್ದೆಂಬ ನಿಲುವು ಕಾಣುತ್ತದೆ. ಇನ್ನು ಕುವೆಂಪು ಅವರ ಅನಿಕೇತನ ತತ್ವಕ್ಕೆ ಬಂದರೆ, ಮನುಷ್ಯ ಚೇತನವು ಜಾತಿ, ಮತ, ತತ್ವಗಳ ಮಿತಿಗೆ ಸಿಲುಕಿ ಸಂಕುಚಿತಗೊಳ್ಳದೇ ಅನಂತವಾಗಿ ವಿಸ್ತರಿಸುತ್ತಾ ವಿಕಾಸಗೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿದೆ. ಇಂಥ ವಿಕಸಿತ ಪ್ರಜ್ಞೆಯು ಸಮಾಜದ ಭೇದ ರಾಜಕಾರಣಗಳಿಗೆ ಪರಿಹಾರವೂ ಆಗಬಹುದೆಂಬ ಆಧುನಿಕ ದೃಷ್ಟಿಯೂ ಇಲ್ಲಿದೆ. ಈ ಎಲ್ಲ ಗ್ರಹಿಕೆಗಳ ನಡುವೆ ಕೆ.ಎಸ್.ನ ಅವರ ‘ಮನೆಯಿಂದ ಮನೆಗೆ’ ಕವಿತೆ ತನ್ನ ಭಿನ್ನತೆಯನ್ನು ಅಚ್ಚೊತ್ತುವಷ್ಟು ಪರಿಣಾಮಕಾರಿಯಾಗಿದೆ.

ಕವಿತೆಯು ‘ನಗರ ಸಂವೇದನೆ’ಯೊಂದನ್ನು ಅನುಭವಕ್ಕೆ ತರುತ್ತಾ, ಸುಶಿಕ್ಷಿತ ಮಧ್ಯಮವರ್ಗದ ತೊಳಲಾಟಗಳು ಹಾಗೂ ಅವುಗಳನ್ನು ಕಟ್ಟಿಕೊಡುವ ಚಿತ್ರಗಳ ಮೂಲಕ ತೆರೆದುಕೊಳ್ಳುತ್ತದೆ. ವಸಾಹತುಶಾಹಿಯ ಆಗಮನವು ಭಾರತದಲ್ಲಿ ಯಂತ್ರಸಂಸ್ಕøತಿಯ ಜೊತೆಗೆ ನಗರಗಳ ಬೆಳವಣಿಗೆಗೂ ಕಾರಣವಾಯಿತು. ತನ್ನಷ್ಟಕ್ಕೇ ತಾನು ಸಂಪೂರ್ಣವಾದ ಗ್ರಾಮ್ಯ ಜೀವನಕ್ಕಿಂತ ಭಿನ್ನವಾದ ಬದುಕಿನ ಚಹರೆಯೊಂದು ಮೂಡತೊಡಗಿತು. ಸುಶಿಕ್ಷಿತ ಮಧ್ಯಮವರ್ಗವೊಂದು ಉದಯಿಸಿ, ಆ ಬದುಕಿನಲ್ಲಿ ಹೊಸ ಸಂವೇದನೆಯು ಮೂಡತೊಡಗಿತು. ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವವು ನೆಲೆಗೊಂಡು ಸರಕಾರವು ಸ್ಥಾಪನೆಯಾಗಿ, ‘ಸರ್ಕಾರಿ ನೌಕರಸ್ಥರ’ ವಲಯವೊಂದು ರೂಪುಗೊಂಡಿತು. ಊರಿಂದೂರಿಗೆ ವರ್ಗಾವಣೆಗೊಳ್ಳುತ್ತ ಮನೆಯಿಂದ ಮನೆಗೆ ಚಲಿಸುವ ಅನಿವಾರ್ಯತೆಯು ಹೊಸ ಅನುಭವ ಲೋಕವೊಂದನ್ನು ಕಟ್ಟಿಕೊಟ್ಟಿತು. ಕಾಲದ ವಿಶಿಷ್ಟ ಬಿಂದುವಿನಲ್ಲಿ ಅನಿವಾರ್ಯತೆಯಾಗಿ ಹುಟ್ಟಿಕೊಂಡ ಮನೆವಂತರು-ಬಾಡಿಗೆದಾರರು ಎಂಬ ಆರ್ಥಿಕ ಪರಿಕಲ್ಪನೆ ಸಾಮಾಜಿಕ ಚಲನಶೀಲತೆಗೂ ಕಾರಣವಾಯಿತು. ನರಸಿಂಹಸ್ವಾಮಿಯವರ ಪ್ರಸ್ತುತ ಕವಿತೆಯಲ್ಲಿ ಈ ಹೊರಗಿನ ಚಲನೆಯಿಂದ ಕಟ್ಟುತ್ತಹೋದ ಅನುಭವವು ನಿಧಾನವಾಗಿ ಒಳಮುಖಿಯಾಗಿ ಸರಿಯುತ್ತಾ ಬದುಕಿನ ಗೂಢಗಳನ್ನು ಸ್ಪರ್ಷಿಸುತ್ತದೆ. ಮೇಲ್ನೋಟಕ್ಕೆ ಕ್ಷುಲ್ಲಕವೆಂದೆನಿಸುವ ನಗರ ಮಧ್ಯಮವರ್ಗದ ದೈನಂದಿನ ಅನುಬವಗಳ ಮೂಲಕವೇ ಅನುಭಾವಿಕ ಕ್ಷಣಗಳನ್ನು ಹಾದುಬರುವುದು ಕವಿತೆಗೆ ಸಾಧ್ಯವಾಗಿದೆ. ಕವಿತೆಯ ವೈಶಿಷ್ಟ್ಯವಿರುವುದು ಲೌಕಿಕ ಹಾಗೂ ಅಲೌಕಿಕಗಳನ್ನು ಒಂದಾಗಿ ಬೆಸೆಯುವ ಸಂಕೇತ ಸರಣಿಗಳನ್ನು ರೂಪಿಸುವಲ್ಲಿ. ಅಂತೆಯೇ ಹೊರಲೋಕ ಹಾಗೂ ಒಳಲೋಕಗಳಲ್ಲಿ ಹೊಕ್ಕು ಹೊರಡುವ ನಿರಾಳತೆಯಲ್ಲಿ.


‘ಮನೆಯಿಂದ ಮನೆಗೆ’ ಕವಿತೆಯು ಮನೆಯ ಅನುಭವಲೋಕವನ್ನೇ ವಿಸ್ತರಿಸುತ್ತ ಆಧ್ಯಾತ್ಮಿಕ ನೆಲೆಯನ್ನು ಥಟ್ಟನೆ ಸ್ಪರ್ಷಿಸುತ್ತದೆ. ಹಾಗೆಂದು ಮನೆಯ ಮೂಲಕ ಸಾಧ್ಯವಾಗುವ ಲೌಕಿಕ ಅನುಭವಗಳನ್ನು ನಿರಾಕರಿಸುವ ದೃಷ್ಟಿ ಇಲ್ಲಿಲ್ಲ. ಅನುಭವಗಳ ಕುಲುಮೆಯಲ್ಲಿ ಬೆಂದಾಗಲೇ ಹದಗೊಳ್ಳುವ ಜೀವದ ಯಾತ್ರೆಯೊಂದನ್ನು ಕವಿತೆ ದಾಖಲಿಸುತ್ತದೆ. ಆರಂಭದಲ್ಲಿ ಹೇಳಿದಂತೆ, ನಗರಸಂವೇದನೆಯ ಮೂಲಕ ಈ ಯಾತ್ರೆಗೊಂದು ಹೊಸತನ ಪ್ರಾಪ್ತವಾಗಿದೆ. ಅಸಂಗತ ಅನುಭವಗಳನ್ನು ಏಕಸೂತ್ರದಲ್ಲಿ ಬೆಸೆಯುವ ನವ್ಯದ ಕಸುಬುಗಾರಿಕೆಯೂ ಈ ಕವಿತೆಯನ್ನು ಅವರ ಇತರ ಮನೆ ಕೇಂದ್ರಿತ ಕವಿತೆಗಳಿಗಿಂತ ಭಿನವಾಗಿಸಿದೆ. ಇಲ್ಲಿಯೂ ಮನೆಯೊಳಗಿನ ಪದಾರ್ಥ ಪ್ರಪಂಚವಿದೆ. ನಲ್ಲಿ, ದೀಪ, ಹೂಗಿಡ, ಜರಡಿ, ತೊಟ್ಟಿಲು, ಒನಕೆ, ಚಾಪೆ, ಕಾಲೊರಸಿ ಮುಂತಾದ ಸರಕುಗಳ ಸಾಂಗತ್ಯವಿದೆ. ಈ ಎಲ್ಲ ಸರಕುಗಳೇ ಮನೆಯನ್ನು ರೂಪಿಸುತ್ತ ಕೊನೆಯಲ್ಲಿ ಮನೆಯಿಂದ ಮನೆಗೆ ಚಲಿಸುತ್ತ ಹಲವು ತಾತ್ವಿಕ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಕಾಲದ ಜೊತೆಗೆ ಕಾಲಿಡುತ್ತ ಚಲಿಸುವ ಬದುಕಿನ ಈ ಚಲನೆಗೆ ಅರ್ಥವಾದರೂ ಏನು? ಈ ಚಲನೆ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ? ಇದರ ಕೊನೆಯಲ್ಲಿ ಕಾಣುವುದೇನು? ಎಂಬ ಪ್ರಶ್ನೆಗಳನ್ನೂ ಬದುಕಿನಾಳದ ನಿಗೂಢತೆ, ಅನೂಹ್ಯತೆಗಳ ಅನುಭವಗಳನ್ನೂ ಕವಿತೆಯು ತನ್ನ ಗರ್ಭದಲ್ಲಿರಿಸಿಕೊಂಡಿದೆ. ಈ ಅಮೂರ್ತವಾದ ಹುಡುಕಾಟವನ್ನು ಮೂರ್ತವಾದ ವಸ್ತುಪ್ರಪಂಚದ ಮೂಲಕವೇ ಕವಿತೆ ಸಾಧ್ಯವಾಗಿಸುತ್ತದೆ. ಕವಿತೆಯಲ್ಲಿ ಕಾಣುವ ತಳಮಳವು ನÀವ್ಯ ಸಂವೇದನೆಯಿಂದ ಹುಟ್ಟಿದಂತೆ ಮೇಲ್ನೋಟಕ್ಕೆ ಕಂಡರೂ ಹುಟ್ಟು-ಸಾವು, ಬಂಧನ-ಬಿಡುಗಡೆಯ ಪ್ರತೀಕಗಳು ನಮಗೆ ಹೊಸತಲ್ಲ. ಇವುಗಳ ನಡುವೆ ತೊಳಲಾಡುವ ಮನುಷ್ಯನ ವಿಹ್ವಲತೆಯೂ ಹೊಸದಲ್ಲ. ಆದರೆ ಅದನ್ನು ಅಭಿವ್ಯಕ್ತಿಸಿದ ರೂಪಕಗಳು ನಗರದ ಮಧ್ಯಮವರ್ಗದ ಜೀವನಶೈಲಿಯಿಂದ ಮೂಡಿದಂಥವು. ಆಮೂಲಕ ಸಮಕಾಲೀನವಾದವು.
ವರುಷ ತುಂಬಿದರೆ ಹೊರಮನೆಯಿಂದ ಹೊರಮನೆಗೆ
ವರ್ಗ. ವರ್ಗವೆಂದರೆ ಮತ್ತೆ
ಗಂಟುಮೂಟೆಯ ಬಿಗಿತ, ಇನ್ನಷ್ಟು ಆಯಾಸ
ತಿರುಪಿರದ ಲಾಂದ್ರಗಳು, ತಳವಿರದ ಗೂಡೆಗಳು
ಜರಡಿ, ತೊಟ್ಟಿಲು, ಒನಕೆ ಇವುಗಳ ಮೆರವಣಿಗೆ!
(ಮನೆಯಿಂದ ಮನೆಗೆ, ಸಮಕಾಲೀನ ಕನ್ನಡ ಕವಿತೆ, ಪು.116)

ವರ್ಗಾವಣೆಯಾಗುವ ನೌಕರಿ ಮಾಡುವವರಿಗೆ ‘ಇದು ನಮ್ಮ ಮನೆ’ ಎಂಬ ಭಾವ ತಾತ್ಕಾಲಿಕ. ಆದರೂ ಸತ್ಯ! ಹಾಗೆ ಸ್ಥಾಪಿತಗೊಳ್ಳುತ್ತಿದ್ದಂತೆಯೇ ವರುಷ ಕಳೆದು ವರ್ಗವಾದಾಗ ಇನ್ನೊಂದು ಮನೆಗೆ ಸಾಗಲೇ ಬೇಕಾದ ಅನಿವಾರ್ಯತೆ. ಇದುವರೆಗೂ ಸತ್ಯವೆಂದು ತಿಳಿದದ್ದು ಸತ್ಯವಾಗಿರಲಿಲ್ಲವೆಂಬ ಆಘಾತ ಒಳಲೋಕಕ್ಕೆ ಉಂಟಾದರೂ, ಸಾಮಾನುಗಳನ್ನು ಸಾಗಿಸುವ ಕೆಲಸ ನಿರಂತರ. ‘ತಿರುಪಿರದ ಲಾಂದ್ರಗಳು, ತಳವಿರದ ಗೂಡೆಗಳು’ ಬದುಕಿನ ಅಸಂಗತವನ್ನು ತೋರಿಸುತ್ತ ಕಸಿವಿಸಿಯನ್ನು ಹುಟ್ಟುಹಾಕುತ್ತವೆ. ಆದರೆ ಇದನ್ನೆಲ್ಲ ಎಸೆದು ಮುನ್ನಡೆಯಲು ಸಾಧ್ಯವಾಗುವುದಿಲ್ಲ. “ಎಸೆದರಾಯಿತೇ ಹೇಳಿ? ಮೊದಲು ಹೊಸತನು ತನ್ನಿ” ಎಂಬುದು ಮಡದಿಯ ಆದೇಶ. ಬೇಡದ ವಸ್ತುಗಳನ್ನು ಹೊತ್ತು ಸಾಗಿಸುವ ಭಾರ ಹಾಗೂ ಆಯಾಸಗಳು ಬದುಕಿನುದ್ದಕ್ಕೂ ಅನಿವಾರ್ಯ! ಇದರ ಮಧ್ಯೆಯೇ ಹೊಸತೆಂದರೇನು? ಹಳತೆಂದರೇನು? ಎಂಬ ಜಿಜ್ಞಾಸೆ ಕವಿಗೆ. ಇರುವ ಮನೆಯನ್ನು ಬಿಟ್ಟು ಹೊಸ ಮನೆಗೆ ಹೋಗಲು ಒಲ್ಲದ ಮನಸ್ಸು. ಎಳೆಯುವ ಮೋಹ.

 

ಮನೆಯಿಂದ ಹೊರಬಂದಾಗ ಜೀವಕ್ಕೆ ಅನಿಸುವುದು ಹೀಗೆ-

ಇದ್ದವರಿಗೊಂದು ಮನೆ, ಇಲ್ಲದವರಿಗೆ ನೂರು
ಇಲ್ಲಿ ಹಿಂದಿದ್ದವರಿಗೆಷ್ಟು ಮಕ್ಕಳೊ ಕಾಣೆ!
ಎಲ್ಲೆಲ್ಲು ನೆಲವ ಕೆತ್ತಿವೆ
ನಲ್ಲಿಗಳ ಮುರಿದಿವೆ;
ಹೂಗಿಡಗಳ ಕಿತ್ತೆಸೆದಿವೆ;
ಎಲ್ಲ ಬಾಗಿಲ ಮೇಲೆ ಸೊನ್ನೆಗಳ ಬರೆದಿವೆ
ನಾಳೆ ಈ ಹುಡುಗರಿನ್ನೇನು!
ಇಲ್ಲಿ ಹೊಸತನವೆಲ್ಲಿ? ಯಾರೋ ಇದ್ದ ಮನೆಗೆ
ನಾವು ಬಂದಿದ್ದೇವೆ ನಾವು ಹೊಸಬರೆ? ಅಲ್ಲ
ಕಂದುಗೋಡೆಯ ಮೇಲೆ ಇಲ್ಲಣದ ತೆರೆಬಿದ್ದು
ಕಾದಿರುವ ನಾಟಕದ ಹೆಸರು ‘ಹೊಸತು’.
(ಮನೆಯಿಂದ ಮನೆಗೆ, ಸಮಕಾಲೀನ ಕನ್ನಡ ಕವಿತೆ, ಪು.117)

ಯಾರೋ ನಡೆದ ಭೂಮಿ, ಉಸಿರಾಡಿದ ಗಾಳಿ, ಕುಡಿದ ನೀರು, ತೆರೆದ ಆಕಾಶ, ಮತ್ತಮತ್ತೆ ಹಚ್ಚಿದ ಅದೇ ದೀಪ… ನಾವು ಹುಟ್ಟುವ ಮೊದಲೇ ಎಷ್ಟೋ ದೂರ ಕ್ರಮಿಸಿದ ಮನುಕುಲದ ಇತಿಹಾಸ. ಅಂತೆಯೇ, ಗೊತ್ತಿರದ ಅನೂಹ್ಯ ಭವಿಷ್ಯ! ಇವುಗಳ ಮದ್ಯೆ ಅರೆಕ್ಷಣವೆಂಬಂತೆ ತಲ್ಲಣಿಸಿ, ಸಂಭ್ರಮಿಸಿ, ಮೋಹಿಸಿ ಬದುಕಿ ಸಾಗುವ ಮನುಷ್ಯನ ಪಾಡು. ಇದೇ ತತ್ವವನ್ನು ‘ಬಾಡಿಗೆ ಮನೆ’ಯ ರೂಪಕದಲ್ಲಿ ಕವಿ ದರ್ಶನ ಮಾಡಿಸುತ್ತಾರೆ. ‘ಸ್ವಂತಮನೆ’ ಎಂಬುದೇ ಸುಳ್ಳು ಎಂಬ ಹೊಳಹು ಕೂಡ ಇಲ್ಲಿ ಮೂಡಿನಿಲ್ಲುತ್ತದೆ. ಇದ್ದವರಿಗೊಂದು ಮನೆಯಾದರೆ, ಇಲ್ಲದವರಿಗೆ ಅನಂತ ಸಾಧ್ಯತೆಗಳು. ರಂಗದ ಮೇಲೆ ಅರೆಕ್ಷಣ ಬಂದುಹೋಗುವ ಪಾತ್ರದಂತೆ ಒಂದು ಸಾಧ್ಯತೆಯನ್ನಷ್ಟೇ ನಮ್ಮದೆಂದು, ಹೊಸದೆಂದು ಭ್ರಮಿಸುವ ಮನುಷ್ಯ ‘ಕಾಣದ’ ಇನ್ನೊಂದು ಮುಖವನ್ನು ಕವಿತೆ ಕಾಣಲು ತವಕಿಸುತ್ತದೆ.

ಕವಿತೆಯ ಪ್ರತಿ ಸಾಲುಗಳು ಮನೆಯಿಂದ ಮನೆಗೆ ಚಲಿಸುವ ಸಾಮಾನ್ಯ ಅನುಭವವನ್ನು ದಟ್ಟ ಜೀವನಾನುಭವದ ಮೂಲಕ ವಿವರಿಸುತ್ತಾ, ಅದರ ಒಡಲಿನಿಂದಲೇ ಜೀವನದ ಅನಿತ್ಯ, ಅನಿಶ್ಚಿತಗಳನ್ನು ಪ್ರದರ್ಶಿಸುತ್ತವೆ. ಉದಾಹರಣೆಗೆ, ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಹಾಡಿನ ನುಡಿ ಕವಿತೆಯಲ್ಲಿ ಹಲವುಸಲ ಪುನರಾವರ್ತನೆಯಾಗುತ್ತದೆ. ಇದು ಇಡೀ ಬದುಕಿನ ಚಲನೆಯ ಸಂಕೇತವೂ ಹೌದು. ಪಡೆದದ್ದನ್ನೆಲ್ಲ ಅಲ್ಲೇ ಬಿಟ್ಟು ಸಾಗುವ ಪ್ರವೃತ್ತಿಯಿದು. ಕೆರೆಯಿಂದ ಬೊಗಸೆಯಲ್ಲಿ ಎತ್ತಿಕೊಂಡ ನೀರು, ಆ ಕ್ಷಣ ಮಾತ್ರ ಬೊಗಸೆಯದು. ಅದನ್ನು ಪುನಃ ಕೆರೆಗೆ ಚೆಲ್ಲಿದಾಗ ಅದು ಕೆರೆಯೇ ಆಗಿಬಿಡುತ್ತದೆ. ಅಂತೆಯೇ ಮನುಷ್ಯರ ಚೇತನವು ಎಲ್ಲಿಂದ ಹುಟ್ಟಿತೋ ಅಲ್ಲಿಗೇ ಹೋಗಿ ಸೇರುತ್ತದೆ. ಅಲ್ಲಿಯ ತನಕ ‘ಹೊರಮನೆಯಿಂದ ಹೊರಮನೆಗೆ’ ಚಲಿಸುತ್ತಲಿರುತ್ತದೆ. ಹೊಸ ಚಾಪೆ, ಹೊಸ ಕಾಲೊರಸಿಗಳನ್ನು ತಂದು ಹೊಕ್ಕ ಮನೆಯನ್ನೇ ಹೊಸತೆಂದು ಕರೆಯೋಣ ಎಂದು ಕವಿ ಹೇಳುವುದು ಇರುವಷ್ಟು ದಿನ ಇರವನ್ನು ಉತ್ಕಟವಾಗಿ ಅನುಭವಿಸಬೇಕೆಂಬ ನಿಲುವಿನಿಂದ. ಆದ್ದರಿಂದ ಕವಿತೆಯಲ್ಲಿ ‘ಇಲ್ಲಿರುವುದು ಸುಮ್ಮನೆ’ ಎಂಬಂಥ ವೈರಾಗ್ಯವಿಲ್ಲ. ಹಳತು ಕ್ಷಯಿಸಿ ಹೊಸತು ಹುಟ್ಟುತ್ತಲೇ ಇರುವ ಸತ್ಯವನ್ನು ನಿರುಮ್ಮಳವಾಗಿ ಒಪ್ಪಿಕೊಳ್ಳುವ ನಿರಾಳತೆಗೆ ಕವಿತೆ ಚಲಿಸುತ್ತದೆ.

ಹಳೆಯ ಬಾಗಿಲಿಗೆ ಹೊಸ ತೋರಣವ ಕಟ್ಟೋಣ
ಶಾಲೆ ಮಕ್ಕಳ ಹಾಗೆ ಹೊಸತನವ ಕಲಿಯುತ್ತ
ಇನ್ನೊಂದು ವರುಷ ಕಳೆಯೋಣ
(ಮನೆಯಿಂದ ಮನೆಗೆ, ಸಮಕಾಲೀನ ಕನ್ನಡ ಕವಿತೆ, ಪು.118)

ಮನೆಯೆಂಬುದು ನಾಗರಿಕತೆಯ ಮೊದಲ ಮೆಟ್ಟಿಲು. ಸಂಸ್ಕøತಿಯನ್ನು ಪೊರೆದ ತೊಟ್ಟಿಲು. ಇಲ್ಲಿನ ಜರಡಿ, ತೊಟ್ಟಿಲು, ತೋರಣಗಳಿಗೆ ತಮ್ಮದೇ ಆದ ಅರ್ಥವಲಯ-ಭಾವವಲಯಗಳಿವೆ. ಅದನ್ನು ಅನುರಣಿಸುವ ಕವಿತೆಯು ಉತ್ಕಟವಾಗಿ ಬದುಕುವ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಆಮೂಲಕ ಕವಿತೆಯ ಧ್ವನಿಯು ‘ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ’ ಎಂಬ ದಾಸವಾಣಿಗಿಂತ ಭಿನ್ನವಾಗಿ ಕೇಳಿಸುತ್ತದೆ. ಬಾಡಿಗೆ ಮನೆಯ ಮೂಲಕ ವ್ಯಕ್ತಿಯು ಹಾಯ್ದು ಬರುವ ಒಂದೊಂದು ಅನುಭವವೂ ಅವನನ್ನು ಬೆಳೆಸಿದೆ. ಈ ಪಯಣದುದ್ದಕ್ಕೂ ಅನುಭವಗಳಿಗೆ ಹೆಗಲು ನೀಡುತ್ತಾ, ಅಂತಿಮವಾಗಿ ಭಾರ ಕಳೆದುಕೊಂಡು ವಿರಮಿಸುವ ನಿರಾಳತೆಯಲ್ಲಿ ಕವಿತೆ ಕೊನೆಯಾಗುತ್ತದೆ. ಮನೆಯಿಂದ ಮನೆಗೆ ದಾಟುತ್ತಾ ಥಟ್ಟನೆ ಹಿಂದಿರುಗಿ ಬಾರದ ಮನೆಗೆ ತಲುಪುವ ಜಿಗಿತವಿದೆಯಲ್ಲ, ಅದು ಬದುಕಿನ ಕ್ಲೈಮ್ಯಾಕ್ಸ್! ಅದು ಈ ಕವಿತೆಯ ಕ್ಲೈಮ್ಯಾಕ್ಸ್ ಕೂಡ ಹೌದು. ಮನೆಯ ಮೂಲಕವೇ ಬಯಲಾಗುವ ಈ ಹೊಸ ಅರಿವು ‘ಹೊಸತನದ ಕಲಿಕೆ’ಯಲ್ಲಿ ಮೈಲಿಗಲ್ಲು.

ಕವಿತೆಯ ಆರಂಭದಲ್ಲಿ ಹಳೆಯದನ್ನು ಎಸೆಯುವಾಗ ಆಗುವ ತಲ್ಲಣ, ಹೊಸದನ್ನು ತರುವಾಗಿನ ಸಂಬ್ರಮದ ಗಾಢತೆ ತಿಳಿಯಾಗುತ್ತ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ತಿಳಿವು ಗಾಢವಾಗುತ್ತದೆ. ಬೆಲೆಬಾಳುವುದೆಂದು ಭಾವಿಸಿದ್ದ ಸರಕು ಈ ಹೊಸ ತಿಳಿವಿನಲ್ಲಿ ಬೆಲೆಯಿರದ ಸರಕಾಗಿ ಕಾಣತೊಡಗುತ್ತದೆ. ಆ ಭಾರವನ್ನು ವ್ರಥಾ ಹೊತ್ತು ಸಾಗಿದ ಸುಸ್ತು ಬೆನ್ನು ಬಾಗುವಂತೆ ಮಾಡಿದೆ. ಎಸೆಯಲಾಗದಂತೆ ಮೋಹಿಸಿದ್ದು ಈಗ ತಂತಾನೇ ಕಳಚಿಕೊಳ್ಳುತ್ತದೆ. ಕಾಲದೊಂದಿಗೆ ಮಾಗಿದ ಜೀವ ಸ್ಮøತಿಯ ಸುರುಳಿಯನ್ನು ಬಿಚ್ಚಿದಾಗ ಮನವೆಂಬ ಮನೆಯಲ್ಲಿ ಸಂಗ್ರಹಗೊಂಡ ಅದೆಷ್ಟೋ ಸಂಗತಿಗಳು ಭಾರವೆನಿಸುತ್ತವೆ. ಮಾತು, ನಗೆ, ಕಣ್ಣೀರು ಎಲ್ಲವೂ ಸ್ಮøತಿಕೋಶದಿಂದ ಎದ್ದು ಬರುತ್ತವೆ. ಇವುಗಳ ಜೊತೆಗೆ ಬಾಗಿಲ ಮೇಲೆ ಮಗು ಬರೆದ ಸೊನ್ನೆಯೂ ನೆನಪಾಗುತ್ತದೆ. ಕೊನೆಯಲ್ಲಿ ಆ ಶೂನ್ಯ ಮಾತ್ರ ಉಳಿಯುತ್ತದೆ ಎಂಬಂಥ ಅವ್ಯಕ್ತ ಭಾವವು ಅಲ್ಲಿ ಸಂಚರಿಸುತ್ತದೆ. ಆಗ ಆರಂಭವಾಗುತ್ತದೆ ಕೊಟ್ಟಕೊನೆಯ ಯಾತ್ರೆ. ಮೊದಲೆಲ್ಲ ಮನೆಯಿಂದ ಮನೆಗೆ ಪ್ರಯಾಣಿಸುವಾಗ “ಬಂಡಿಯಲಿ ಸ್ಥಳವಿಲ್ಲ, ಹೊತ್ತು ಸಾಗಿಸಬೇಕು; ಅದಕೆ ಕತ್ತಲೆ ಬೇಕು” ಅನ್ನಿಸುವುದು ಈಗ ಹೊಸನೋಟದಲ್ಲಿ ಬೇರೆಯಾಗಿ ಕಾಣಿಸುತ್ತದೆ. ಇಲ್ಲಿ ಹೊತ್ತು ಎಂಬುದು ಕಾಲ. ಕಾಲದ ಜೊತೆ ಮನುಜ ಸಾಗಲೇ ಬೇಕು. ತನ್ನದೆಂಬುದನ್ನು ಮೀರಲೇಬೇಕು. ಸ್ಥಳವಿಲ್ಲದಂತೆ ತುರುಕಿದ ಎಲ್ಲ ನೆನಪುಗಳನ್ನು ವಸ್ತುಗಳಂತೆಯೇ ಮನಸ್ಸು ಹೊತ್ತೊಯ್ಯಲಾಗದೆಂಬ ಸತ್ಯಕ್ಕೆ ತೆರೆದುಕೊಳ್ಳಬೇಕು. ಇಲ್ಲಿಂದ ಹೆಸರಿರದ, ಕದವಿರದ, ಒಳಹೊರಗೆಂಬ ಭೇದವಿಲ್ಲದ ಮನೆಗೆ ಪಯಣಿಸಬೇಕು. ಅಲ್ಲಿ, ‘ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ’. ಸಾವೆಂಬ ಕತ್ತಲೆಯತ್ತ ಮನುಷ್ಯ ನಡೆದು ಹೋಗಲೇಬೇಕೆಂಬುದು ನಿತ್ಯಸತ್ಯ. ಶೂನ್ಯದಿಂದ ಶೂನ್ಯಕ್ಕೆ ಚಲಿಸುವ ಈ ಚಲನೆಯ ಮಧ್ಯವೇ ಮನೆಯಿಂದ ಮನೆಗೆ ಸಾಗುವ ಬಾಡಿಗೆದಾರನ ಚಲನೆಯೂ ಇದೆ. ಇವೆರಡರ ಸಾವಯವ ಸಂಬಂಧವನ್ನು ಅಂದಗೆಡದಂತೆ ಹೆಣೆಯುವ ಕುಶಲತೆ ಹಾಗೂ ಸಾವು-ಬದುಕಿನ ಗಹನತೆಯನ್ನು ದರ್ಶಿಸುವಲ್ಲಿ ಕವಿತೆಯ ಸಾರ್ಥಕತೆಯಿದೆ.

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ಅದೇ ಕಡೆಯಮನೆ!
ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ
ಆಗಾಗ ಬೀಸುವುದು ಬಯಲಗಾಳಿ

ಮನೆಯಿಂದ ಮನೆಗೆ ಚಲಿಸುತ್ತ ಕೊನೆಯಲ್ಲಿ ಬಯಲಾಗುವ ವಿಸ್ಮಯಕ್ಕೆ ನಮ್ಮನ್ನು ಕವಿತೆ ಈಡುಮಾಡುತ್ತದೆ.

Comments are closed.

Social Media Auto Publish Powered By : XYZScripts.com