ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತೆ, ಪಕ್ಷ ನೀಡುವ ಜವಾಬ್ದಾರಿ ಹೊರಲು ಸಿದ್ಧ : ಮಾಳವಿಕಾ ಅವಿನಾಶ್‌

ಬೆಂಗಳೂರು:  ಮೈಸೂರು ಕೆ.ಆರ್‌ ಕ್ಷೇತ್ರಕ್ಕೆ ನಟಿ ಮಾಳವಿಕಾ ಅವಿನಾಶ್‌ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ, ಸ್ವತಃ ಮಾಳವಿಕಾ ಅವಿನಾಶ್‌ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ್ದು,  ತಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತೆ, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಕೆ.ಆರ್‌ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಮಾಜಿ ಸಚಿವ ಎಸ್ ಎ ರಾಮದಾಸ್ ಹಾಗೂ ಹೆಚ್ ವಿ ರಾಜೀವ್ ಗೆ ಶಾಕ್ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡುತ್ತಾ, ನಾನು ಕಳೆದ ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡು ಕಾರ್ಯಕರ್ತೆಯಾಗಿ ದುಡಿಯುತ್ತಿದ್ದೇನೆ. ಪಕ್ಷ ನನ್ನನ್ನು ವಕ್ತಾರೆಯನ್ನಾಗಿ ನೇಮಿಸಿದೆ, ಹಲವಾರು ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕಿಯಾಗಿ ಭಾಗವಹಿಸಿದ್ದೇನೆ.  ಇತ್ತೀಚೆಗೆ ನಡೆದ ನಂಜನಗೂಡು- ಗುಂಡ್ಲುಪೇಟೆ ಉಪಚುನಾವಣೆಯಲ್ಲಿಯೂ ತಾರಾ ಪ್ರಚಾರಕಿಯಾಗಿದ್ದೆ. ಇದು ನನಗೆ ಪಕ್ಷದ ಮುಖಂಡರು ನೀಡಿದ್ದ ನಿರ್ದೇಶನ. ಅದನ್ನು ನಾನು ಪಾಲಿಸಿದ್ದೇನೆ,  ಈಗ ಪಕ್ಷ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದರೆ ಅದಕ್ಕು ನಾನು ಬದ್ಧ ಎಂದು ಮಾಳವಿಕ ತಮ್ಮ ಇಂಗಿತವನ್ನ ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಜನಪ್ರತಿನಿಧಿಯಾಗಿ ಜನಸೇವೆ ಮಾಡಬೇಕು ಎಂಬುದು ಸಹಜ ಆಸಕ್ತಿ. ಇದಕ್ಕೆ ನಾನೇನು ಹೊರತಲ್ಲ. ಕೆಲವರು ಸಂಘಟನೆಯಲ್ಲಿ ತೊಡಗಿಕೊಂಡಿರುತ್ತಾರೆ. ಮತ್ತೆ ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಹಾಗಾಗಿ ಪಕ್ಷ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ನಿರ್ವಹಿಸಲು ಸಿದ್ಧವಾಗಿದ್ದೇನೆ ಎಂದು ಮಾಳವಿಕ ನಿಖರವಾಗಿ ಹೇಳಿದ್ದಾರೆ.
ಇಲ್ಲಿಯ ತನಕ ಕೆ.ಆರ್ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಸಚಿವ ಎಸ್.ಎ ರಾಮದಾಸ್ ಮತ್ತು ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಎಚ್.ವಿ ರಾಜೀವ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿರುವುದರಿಂದ ಮಾಳವಿಕಾ ಅವಿನಾಶ್ ರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ  ನಡೆಸಿದೆ ಎಂಬ ವದಂತಿಯ ಬೆನ್ನಲ್ಲೇ ಮಾಳವಿಕಾ ಈ ಹೇಳಿಕೆ ನೀಡಿರುವುದು ವದಂತಿಗೆ ಇನ್ನಷ್ಟು ಪುಷ್ಠಿ ನೀಡಿದೆ.

Comments are closed.

Social Media Auto Publish Powered By : XYZScripts.com