ಡಾ|ನಾಗರಾಜ ಜಮಖಂಡಿ 2ನೇ ಪುಣ್ಯ ಸ್ಮರಣೆ : ಮಹದಾಯಿ ಮುಂದೇನು ? ಬಿಸಿ ಬಿಸಿ ಚರ್ಚೆ ..

ಮಹಾದಾಯಿ ಸಮಸ್ಯೆ ಮುಂದೇನು ? ಚರ್ಚೆ ಕುರಿತು ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ನೇರವಾಗಿ ಬಿಜೆಪಿ ಮುಖಂಡರನ್ನು ಈ ವಿಚಾರದಲ್ಲಿ ಚರ್ಚೆಗೆ ಎಳೆದರು. ಕಳಸಾ- ಬಂಡೂರಿ ಮತ್ತು ಮಹದಾಯಿ ನದಿ ತಿರುವು ಯೋಜನೆಯ ಅನುಷ್ಠಾನಕ್ಕೆ ಪ್ರಧಾನಮಂತ್ರಿ ಅವರು ಮೂರು ರಾಜ್ಯಗಳ ಸಭೆ ಕರೆದು ಸಮಸ್ಯೆ ನಿವಾರಿಸಬೇಕು. ಈ ಹಿಂದೆ ಇಂದಿರಾಗಾಂ„,ಎಚ್.ಡಿ.ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ ಅವರುಗಳು ಇಂತಹ ಅನೇಕ ಸಮಸ್ಯೆಗಳನ್ನು ನಿವಾರಿಸಿದ್ದು ದಾಖಲೆ ಇದೆ. ಅದೇ ಹಾದಿಯನ್ನು ಪ್ರಧಾನಿ ಮೋದಿ ಅವರು ಯಾಕೆ ಅನಸರಿಸುತ್ತಿಲ್ಲವೋ ಗೊತ್ತಿಲ್ಲ ಎಂದು ಕುಟುಕಿದರು.

ಆಲೂರು ವೆಂಕಟರಾವ್ ಸಭಾಭವನದಲ್ಲಿ ಡಾ|ನಾಗರಾಜ ಜಮಖಂಡಿ ಮೆಮೋರಿಯಲ್ ಟ್ರಸ್ಟ್‍ನಿಂದ ಆಯೋಜಿಸಿದ್ದ ಡಾ|ನಾಗರಾಜ ಜಮಖಂಡಿ ಅವರ 2ನೇ ಪುಣ್ಯ ಸ್ಮರಣೆ ಮತ್ತು ಅಪಘಾತಗಳ ಬಗ್ಗೆ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು `ರೂಪಕ’ ರಕ್ತದಾನ ಶಿಬಿರ ಹಾಗೂ ಮಹಾದಾಯಿ ಮುಂದೇನು ? ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ತೀರ್ಪು ಬರುವವರೆಗೂ ಕಾಯಬೇಕು. ಇಲ್ಲವೇ ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿಕೊಳ್ಳಬೇಕು. ಸದ್ಯಕ್ಕೆ ಈ ಎರಡೇ ಪರಿಹಾರ ಮಾರ್ಗಗಳು ಗೋಚರಿಸುತ್ತಿವೆ. ಆದರೆ ಈ ಸಮಸ್ಯೆ ಪರಿಹಾರಕ್ಕೆ ಯಾರೇ ಸಲಹೆ ನೀಡಿದರೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ನಾನು ಸಿದ್ದ ಎಂದು ಸಚಿವ
-ವಿನಯ್ ಕುಲಕರ್ಣಿ ಹೇಳಿದರು.


ಗೋವಾದ ಚುನಾವಣೆ ನಂತರ ಈ ಸಮಸ್ಯೆ ಬಗೆ ಹರಿಯುತ್ತದೆ ಎಂದು ಬಿಜೆಪಿ ನಾಯಕರು ನಮ್ಮ ಎದುರು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಇದೀಗ ಗೋವಾದ ಚುನಾವಣೆ ಮುಗಿಯಿತು. ಇನ್ನು ಒಂದು ವರ್ಷದಲ್ಲಿ ಕರ್ನಾಟಕದ ಚುನಾವಣೆ ಬರಲಿದ್ದು, ಆ ಸಂದರ್ಭದಲ್ಲಿ ಭವಿಷ್ಯ ಬಿಜೆಪಿಯವರು ಈ ಮಹದಾಯಿ ಸಮಸ್ಯೆ ನಿವಾರಣೆಗೆ ಯತ್ನಿಸುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರೊಂದಿಗೆ ವೇದಿಕೆಯಲ್ಲಿಯೇ ಚರ್ಚೆಗೆ ಇಳಿದು ವ್ಯಂಗ್ಯವಾಡಿದರು.
ನಂತರ ಮಾತನಾಡಿದ ಮಹದಾಯಿ ಕೊಳ್ಳದ ಅಧ್ಯಯನ ತಜ್ಞ ಎನ್.ಎಸ್. ಕಂಚೂರ್ ಮಾತನಾಡಿ, ಗೋವಾದಲ್ಲಿ ಹಲವಾರು ನಾಲಾಗಳಿವೆ. ಆದರೆ ಅವರು ಮಾತ್ರ ಮಹಾದಾಯಿ ಒಂದೇ ನಮಗೆ ಆಧಾರ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೇ ಉತ್ತರ ಗೋವಾಕ್ಕೆ ಮಹಾದಾಯಿ ನದಿ ನೀರನ್ನು ಹರಿಸಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ವೈಜ್ಞಾನಿಕ ತಂತ್ರಗಳನ್ನು ರೂಪಿಸಬೇಕು.

ಗೋವಾ ರೂಪಿಸಿರುವ ಮಾಸ್ಟರ್ ಪ್ಲಾನ್ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ. 200 ಟಿಎಂಸಿ ಅಡಿ ನೀರಿನಲ್ಲಿ ಗೋವಾ ರಾಜ್ಯ ಕುಡಿಯಲು, ಕೃಷಿಗೆ ಮತ್ತು ವಿದ್ಯುತ್ ಉತ್ಪಾದನೆ ಸೇರಿ ಎಲ್ಲದಕ್ಕೂ ಹೆಚ್ಚೆಂದರೆ 50 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು. ಇನ್ನುಳಿದ 150 ಟಿಎಂಸಿ ನೀರು ನೇರವಾಗಿ ಸಮುದ್ರದ ಪಾಲಾಗುತ್ತಿದೆ. ಅಲ್ಲಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವುದಕ್ಕೂ ಸಾಧ್ಯವಿಲ್ಲ. ಗೋವಾದ ಭೌಗೋಳಿಕ ಸ್ವರೂಪ ಅದರಲ್ಲೂ ಮಹಾದಾಯಿ ಅಚ್ಚುಕಟ್ಟು ಪ್ರದೇಶದಲ್ಲಿ ದೈತ್ಯ ಆಣೆಕಟ್ಟು ಕಟ್ಟುವುದು ಅಸಾಧ್ಯವಾಗಿದೆ. ಹೀಗಿರುವಾಗಿ 150 ಟಿಎಂಸಿ ನೀರನ್ನು ಪ್ರತಿವರ್ಷ ಸಮುದ್ರಕ್ಕೆ ಹರಿಸುತ್ತಿರುವ ಕ್ರಮವನ್ನು ಕರ್ನಾಟಕ ಅಚ್ಚುಕಟ್ಟಾಗಿ ಕೇಂದ್ರ ಸರ್ಕಾರಕ್ಕೆ ಮತ್ತು ನ್ಯಾಯಾಧೀಕರಣಕ್ಕೆ ಮನದಟ್ಟು ಮಾಡಬೇಕಾಗಿದೆ ಎಂದು ಹೇಳಿದರು.

Comments are closed.

Social Media Auto Publish Powered By : XYZScripts.com