ಹಂಚಿನಾಳ ಬೆಂಕಿ ಅನಾಹುತ: ತಹಬಂದಿಗೆ ಬಂತು ಬೆಂಕಿ: ಆರಿಸಲು ಯಶಸ್ವಿಯಾದ ಅಗ್ನಿಶಾಮಕ ಸಿಬ್ಬಂದಿ

ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಶನಿವಾರ ಸಂಜೆಯಿಂದ ವ್ಯಾಪಿಸುತ್ತಿದ್ದ ಭಯಂಕರ ಬೆಂಕಿ ಅಂತೂ ತಹಬಂದಿಗೆ ಬಂದಿದೆ. ಸ್ಥಳದಲ್ಲೆ  ಬೀಡುಬಿಟ್ಟು ಸತತ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿರುವ ಅಗ್ನಿಶಾಮಕ ಸಿಬ್ಬಂದಿ, ಮುಂಜಾಗ್ರತಾ  ಕ್ರಮವಾಗಿ ಇನ್ನೂ ನೀರು ಸಿಂಪಡಿಸುತ್ತಲೇ ಇದ್ದಾರೆ.  ಸಂಪೂರ್ಣ ಊರು ಹೊಗೆಯಿಂದ ತುಂಬಿಹೋಗಿದ್ದು, ಶಕೆಯಿಂದ ಜನ ಬೇಯುತ್ತಿದ್ದಾರೆ.  ಅಗ್ನಿ ಅಘಡದಿಂದ ಭಯಭೀತರಾದ ಗ್ರಾಮದ ಜನತೆಗೆ ಧೈರ್ಯ ಹೇಳುವ ಸಲುವಾಗಿ, AC ಬಜಂತ್ರಿ, ತಹಶಿಲ್ದಾರ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.  ಹಂಚಿನಾಳ ಗ್ರಾಮಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭೇಟಿನೀಡಿ ಗ್ರಾಮಸ್ಥರಿಗೆ ದೈರ್ಯಹೇಳಿದ್ದಾರೆ.
ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಎಂದೆದಿಗೂ ಕಂಡಿರದ ಭೀಕರ ಅಗ್ನಿ ಅವಘಡ ನಡೆದಿದ್ದು, ಗ್ರಾಮದ ಸುಮಾರು 70 ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ.   14 ಜಾನುವಾರುಗಳು, 25ಕ್ಕೂ ಹೆಚ್ಚು ಹುಲ್ಲಿನ ಬಣವಿಗಳು ಬೆಂಕಿಗೆ ಆಹುತಿಯಾಗಿವೆ. ಶನಿವಾರ ಸಂಜೆ 5.30ರ ಸುಮಾರಿಗೆ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌‌ನಿಂದ ಹುಲ್ಲಿನ ಬಣವಿಗೆ ಬೆಂಕಿ ತಗುಲಿದ್ದು, ನಂತರ ಮನೆಗಳಿಗೂ ಬೆಂಕಿ ಆವರಿಸಿಕೊಂಡಿದೆ. ಬೆಂಕಿ ನಂದಿಸುವುದಕ್ಕಾಗಿ ಬೆಳಗಾವಿ,ಧಾರವಾಡ,ಬಾಗಲಕೋಟೆ ಜಿಲ್ಲೆಗಳಿಂದ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ 10ಕ್ಕೂ ಹೆಚ್ಚು ಅಗ್ನಿ ಶಾಮಕದಳದ ವಾಹನಗಳೊಂದಿಗೆ ಸತತ ಕಾರ್ಯಾಚರಣೆ ನಡೆಸಿ, ಈಗ ಬೆಂಕಿಯನ್ನ ತಹಬಂದಿಗೆ ತಂದಿದ್ದಾರೆ.
ಸಂಜೆಯ ಹೊತ್ತಿಗೆ ಊರಿನ ಹೊರಗೆ ಕಾಣಿಸಿಕೊಂಡಿದ್ದ ಬೆಂಕಿ ರಾತ್ರಿಯಾಗುತ್ತಿದ್ದಂತೆ ಮನೆಗಳಿಗೂ ವ್ಯಾಪಿಸಿತ್ತು. ಬೆಂಕಿ ಅವಘಡದಿಂದ ಮನೆ ಕಳೆದುಕೊಂಡಿರುವ ಸುಮಾರು 25 ಕುಟುಂಬಗಳು ಈಗ ಬೀದಿಗೆ ಬಿದ್ದಿವೆ. ಸಂತ್ರಸ್ಥರಿಗೆ ಹಂಚಿನಾಳದ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಊಟ, ವಸತಿ‌ ವ್ಯವಸ್ಥೆ ಮಾಡಲಾಗಿದ್ದು, ಘಟನೆಯಿಂದ ಜನರು ಭಯಭೀತರಾಗಿದ್ದಾರೆ. ಶನಿವಾರ ರಾತ್ರಿ ಇಡೀ ಊರಿನ ಜನ ಮನೆಯಿಂದ ಹೊರಗೆ ನಿಂತೇ ಕಳೆದಿದ್ದಾರೆ.

Comments are closed.

Social Media Auto Publish Powered By : XYZScripts.com