ಈಶ್ವರಪ್ಪ ವರ್ಸಸ್‌ ಯಡಿಯೂರಪ್ಪ : ಅಮಿತ್‌ ಷಾ ಭೇಟಿಗಾಗಿ ದೆಹಲಿಗೆ ಹೊರಟರು ಯಡಿಯೂರಪ್ಪ

ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ನಡುವೆ ಜಟಾಪಟಿ ನಡೆಯುತ್ತಿರುವ ಹಿನ್ನಲೆಯಲ್ಲಿ ಶುಕ್ರವಾರ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.  ಹೈಕಮಾಂಡ್‌ ನಾಯಕರ ಭೇಟಿಗೆ ಯಡಿಯೂರಪ್ಪ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಪ್ರಸ್ತುತ ವಿದ್ಯಮಾನಗಳನ್ನು ಅಮಿತ್‌ ಷಾ ಗಮನಕ್ಕೆ ತರುವುದಕ್ಕಾಗಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈಶ್ವರಪ್ಪ ಅವರ ಜೊತೆ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಮೇಲೆಯೂ ಕ್ರಮಕ್ಕೆ ಆಗ್ರಹಿಸಲಿದ್ದಾರೆ ಎಂಬ ಮಾಹಿತಿ ಇದೆ.
ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಅವರಿಗೆ ನೀಡಲಾದ ವರದಿಯಲ್ಲಿ ಈ ಬಗ್ಗೆ ಒತ್ತಾಯ ಮಾಡಲಾಗಿದ್ದು,  ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಭೇಟಿ ಮಾಡಿ ವಾಸ್ತವ ವಿವರಿಸಲು ಯಡಿಯೂರಪ್ಪ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಹೈಕಮಾಂಡ್ ನಾಯಕರ ಭೇಟಿ ಮಾಡುವ ವೇಳೆ ಅವರಿಗೆ ಸಾಥ್ ನೀಡುವುವದಕ್ಕಾಗಿ ಕೆಲ ಸಂಸದರು ಕೂಡ ದೆಹಲಿಗೆ ತೆರಳಿದ್ದಾರೆ.
ಈ ಹಂತದಲ್ಲಿ ಸ್ಪಷ್ಟವಾದ ತಿರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಿರುವ ಯಡಿಯೂರಪ್ಪ, ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ಹಲವರು ನಿನ್ನೆಯ ಸಮಾವೇಶದಲ್ಲಿ ಭಾಗಿಯಾಗಿರುವುದನ್ನು ಹೈಕಮಾಂಡ್ ಗಮನಕ್ಕೆ ತರಲು ತಿರ್ಮಾನ ಮಾಡಿದ್ದಾರೆ. ಯಡಿಯೂರಪ್ಪ ದೆಹಲಿ ಪ್ರವಾಸ ಬಿಜೆಪಿ ಪಾಳಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು, ಆಂತರಿಕ ಸಮಸ್ಯೆಗೆ ಪರಿಹಾರ ದೊರಕಲಿದೆಯೇ ಎಂಬುದನ್ನ ಕಾದು ನೋಡಬೇಕು.

Comments are closed.

Social Media Auto Publish Powered By : XYZScripts.com