ವೇಸ್ಟ್‌ ಆಗೋಯ್ತಾ ಯಡಿಯೂರಪ್ಪ ದೆಹಲಿ ಪ್ರವಾಸ..? ಯಡ್ಡಿಗೆ ಸಿಕ್ಕೇ ಇಲ್ಲ ಅಮಿತ್‌ ಶಾ..!

ನವದೆಹಲಿ:ಅಮಿತ್‌ ಶಾ ಭೇಟಿ ಸಾಧ್ಯವಿಲ್ಲ, ಅವಕಾಶ ಸಿಕ್ಕಿದರೆ ರಾಮ್‌ಲಾಲ್‌ ಭೇಟಿಮಾಡಿ ಚರ್ಚಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಶನಿವಾರ ನವದೆಹಲಿಯಲ್ಲಿ ಹೇಳಿಕೆ ನೀಡಿದ ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮನಸ್ಸು ಮಾಡಿದ್ದರೆ ಬಿಕ್ಕಟ್ಟು ಬಗೆಹರಿಸಬಹುದಿತ್ತು, ಸಂತೋಷ್ ಭಿನ್ನಮತೀಯರ ಸಭೆಯನ್ನು ತಡೆಯಬಹುದಿತ್ತು ಎಂದು ಯಡಿಯೂರಪ್ಪ ಅಸಮಾಧಾನ ತೋಡಿಕೊಂಡಿದ್ದಾರೆ. ಅಲ್ಲದೆ, ಈಶ್ವರಪ್ಪ ಬೇಡಿಕೆಗಳೆಲ್ಲವನ್ನು ‌ಈಡೇರಿಸಿದ್ದೇನೆ‌, ಸಮಸ್ಯೆ ಬಗೆಹರಿಸಲು ಬಾಕಿ ಏನೂ ಉಳಿದಿಲ್ಲ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.
ಬಿಜೆಪಿ ಆಂತರಿಕ ಕಲಹದ ಪರಿಹಾರದ ಕುರಿತು ಮಾತನಾಡಿ, ಇಂದು ರಾಜ್ಯಕ್ಕೆ ಮುರುಳಿಧರ ರಾವ್ ಭೇಟಿ‌ ನೀಡಲಿದ್ದಾರೆ, ರಾಜ್ಯದ ವಿದ್ಯಾಮಾನಗಳ ಬಗ್ಗೆ ವರದಿ ಸಂಗ್ರಹಿಸಲಿದ್ದಾರೆ, ಅಮಿತ್ ಶಾಗೆ ಮುರಳಿಧರ ರಾವ್ ವರದಿ ನೀಡಲಿದ್ದಾರೆ, ವರದಿ ಆಧರಿಸಿ ಅಮಿತ್ ಶಾ ಕ್ರಮಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಶ್ಮೀರ ಪ್ರವಾಸದಲ್ಲಿರುವುದರಿಂದ ಭೇಟಿ ಸಾಧ್ಯವಿಲ್ಲ ಎಂದಿರುವ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮಲಾಲ್ ಭೇಟಿಮಾಡುವ ಅವಕಾಶಕ್ಕಾಗಿ ಕಾದಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಕಚ್ಚಾಟ ಮತ್ತು ಈಶ್ವರಪ್ಪರ ಜೊತೆಗಿನ ಜಟಾಪಟಿಯ ಕುರಿತು ಚರ್ಚಿಸುವುದಕ್ಕಾಗಿ ಹಟಾತ್‌ ದೆಹಲಿ ಪ್ರವಾಸ ಕೈಗೊಂಡಿದ್ದ ಯಡಿಯೂರಪ್ಪ ಪ್ರವಾಸ ಉಪಯೋಗವಿಲ್ಲದಂತಾಯಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ನಡುವೆ ಜಟಾಪಟಿ ನಡೆಯುತ್ತಿರುವ ಹಿನ್ನಲೆಯಲ್ಲಿ ಶುಕ್ರವಾರ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಂಡಿದ್ದರು.  ಹೈಕಮಾಂಡ್‌ ನಾಯಕರ ಭೇಟಿಗೆ ಯಡಿಯೂರಪ್ಪ ನಿರ್ಧಾರ ಕೈಗೊಂಡು, ಪ್ರಸ್ತುತ ವಿದ್ಯಮಾನಗಳನ್ನು ಅಮಿತ್‌ ಷಾ ಗಮನಕ್ಕೆ ತರುವುದಕ್ಕಾಗಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದರು. ಈಶ್ವರಪ್ಪ ಅವರ ಜೊತೆ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಮೇಲೆಯೂ ಕ್ರಮಕ್ಕೆ ಆಗ್ರಹಿಸಲಿದ್ದಾರೆ ಎಂಬ ಮಾಹಿತಿ ಇತ್ತು.

Comments are closed.

Social Media Auto Publish Powered By : XYZScripts.com