ಝಂಜರವಾಡ ಕೊಳವೆಬಾವಿ ದುರಂತ: ಜಮೀನು ಮಾಲಿಕ ಮುತ್ತಣ್ಣ ಹಿಪ್ಪರಗಿ ಬಂಧನ..

ಬೆಳಗಾವಿ : ಝುಂಜರವಾಡ ಕೊಳವೆ ಬಾವಿ‌ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಮೀನು‌ ಮಾಲಿಕ ಮುತ್ತಣ್ಣ ಹಿಪ್ಪರಗಿಯನ್ನ ಬೆಳಗಾವಿ ಜಿಲ್ಲೆ ಐಗಳಿ ಪೊಲೀಸರು ಬಂಧಿಸಿದ್ದಾರೆ.  ಕೊಳವೆಬಾವಿ ದುರಂತ ನಡೆದ, ಕಲಂ 304,188 ಅಡಿ ಜಮೀನು‌ ಮಾಲೀಕನ ವಿರುದ್ಧ ದೂರು ದಾಖಲಾಗಿದ್ದು, ಆತನಿಗಾಗಿ ಅಂದಿನಿಂದಲೇ ಹುಡುಕಾಟ ಪ್ರಾರಂಭವಾಗಿತ್ತು. ಆದರೆ ಮಾಲಿಕರಾದ ಮುತ್ತಣ್ಣ ಹಿಪ್ಪರಗಿ ಮತ್ತು ಆತನ ತಂದೆ ಶಂಕರಪ್ಪ ಹಿಪ್ಪರಗಿ ಪೊಲೀಸರಿಗೆ ಹೆದರಿ ಭೂಗತರಾಗಿದ್ದರು. ಸದ್ಯಕ್ಕೆ ಮುತ್ತಣ್ಣ ಮಾತ್ರ ಬಂಧಿತನಾಗಿದ್ದು, ಶಂಕರಪ್ಪನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏಪ್ರಿಲ್‌ 22ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡದಲ್ಲಿ ತೆರೆದ ಬೋರ್‍ವೆಲ್‍ಗೆ 6 ವರ್ಷದ ಬಾಲಕಿ ಬಿದ್ದು, ಮೃತಳಾಗಿದ್ದ ಸಂಗತಿ ರಾಜ್ಯಾದ್ಯಂತ ಸಂಚಲನ ಉಂಟುಮಾಡಿತ್ತು. ಪುಟಾಣಿ ಕಾವೇರಿ, ತಾಯಿಯೊಂದಿಗೆ ಝಂಜರವಾಡ ಗ್ರಾಮದ ಜಮೀನಿನಲ್ಲಿ ಕಟ್ಟಿಗೆ ತರಲು ಹೋಗಿದ್ದ ಸಮಯದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು.  ನಂತರ ಆಕೆಯ ರಕ್ಷಣೆಗಾಗಿ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸತತ 54 ಗಂಟೆಗಳ ಕಾರ್ಯಾಚರಣೆ ನಡೆಸಿದ್ದರು. ಆದರೂ ಬಾಲಕಿಯನ್ನ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ರೈತ ಶಂಕರಪ್ಪ ಹಿಪ್ಪರಗಿ ಅವರು 400 ಅಡಿ ಕೊಳವೆ ಬಾವಿ ಕೊರೆಸಿದ್ದಾಗ ಫೇಲ್ ಆಗಿತ್ತು. ಇವರು ಕೊಳವೆ ಬಾವಿ ಮುಚ್ಚದೇ ಹಾಗೇ ಬಿಟ್ಟಿದ್ದರು.

Comments are closed.

Social Media Auto Publish Powered By : XYZScripts.com