ಮರೆಯಾದ ದೋಸ್ತಿ – ಶುರುವಾದ ಜಂಗಿಕುಸ್ತಿ. ಯಡ್ಡಿ, ಈಶ್ವರಪ್ಪ ಸಮರ…

ದಶಕಗಳ ದ್ವೇಷ ಒಂದು ವರ್ಷದಿಂದ ತಾರಕಕ್ಕೆ!
ಹಳೆ ಶತ್ರುಗಳ ನಡುವೆ ನಡೀತಿದೆ ಹೊಸ ಕದನ!
ಬಿ.ಎಸ್‌.ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ ರಾಜ್ಯ ಬಿಜೆಪಿಯ ಪಾಲಿಗೆ ಜೋಡೆತ್ತುಗಳು. ಇಬ್ಬರೂ ಶಿವಮೊಗ್ಗ ಜಿಲ್ಲೆಯವರು. 1980ರ ದಶಕದಲ್ಲಿ ಒಬ್ಬರಿಗೊಬ್ಬರು ಆಪ್ತಮಿತ್ರರಾಗಿದ್ದರು. ಬಸ್‌ನಲ್ಲಿ ಶಿವಮೊಗ್ಗ ಬಸ್‌ಸ್ಟ್ಯಾಂಡ್‌ಗೆ ಬಂದಿಳಿಯುತ್ತಿದ್ದ ಯಡಿಯೂರಪ್ಪರನ್ನು ಈಶ್ವರಪ್ಪ ಸ್ಕೂಟರ್‌ನಲ್ಲಿ ಕರೆದುಕೊಂಡು ತಿರುಗಾಡುತ್ತಿದ್ದರು. ಆದ್ರೆ ಇಬ್ಬರೂ ಶಾಸಕರಾದ ನಂತರ 1990ರ ದಶಕದ ಕೊನೆಯ ವೇಳೆಗೆ ಇಬ್ಬರ ನಡುವೆ ಶತ್ರುತ್ವ ಶುರುವಾಗಿತ್ತು. ಒಬ್ಬರನ್ನು ಹಣಿಯಲು ಮತ್ತೊಬ್ಬರು ಅವಕಾಶಗಳನ್ನು ಬಳಸಿಕೊಂಡಿದ್ದೂ ಇದೆ. ಜೊತೆಯಾಗಿ ಅಧಿಕಾರಕ್ಕೆ ಏರಲು ಒಬ್ಬರಿಗೊಬ್ಬರು ಏಣಿಯಾಗಿದ್ದೂ ಇದೆ. ಆದ್ರೆ ಈಗ ಏಣಿ ಬಿಸಾಕಿ ಹಣಾಹಣಿಯೇ ಜೋರಾಗಿದೆ. ಹಳೆ ಶತ್ರುಗಳ ಹೊಸ ಕದನ ತಾರಕ್ಕೇರಿದೆ.

ಏಪ್ರಿಲ್‌ 8, 2016
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ನೇಮಕ

ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ 2014ರ ಲೋಕಸಭಾ ಚುನಾವಣೆ ವೇಳೆಗೆ ಯಡಿಯೂರಪ್ಪ ಬಿಜೆಪಿಗೆ ವಾಪಸ್ಸಾಗಿದ್ದರು. ಬಿಜೆಪಿಯ ಸಂಸದರಾಗಿದ್ದರೂ ಕೇಂದ್ರದಲ್ಲಿ ಮಂತ್ರಿಯಾಗುವ ಭಾಗ್ಯ ಬಿಎಸ್‌ವೈಗೆ ಒಲಿಯಲೇ ಇಲ್ಲ. ಇದ್ರ ಬದಲು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪಗೆ ನೀಡಲಾಗಿತ್ತು. ಆದ್ರೆ ದೇಶದ ರಾಜಕಾರಣಕ್ಕಿಂತಲೂ ರಾಜ್ಯದ ರಾಜಕಾರಣದಲ್ಲೇ ಹೆಚ್ಚಿನ ಆಸಕ್ತಿ ಹೊಂದಿದ್ದ ಯಡಿಯೂರಪ್ಪ, ಅವಕಾಶಕ್ಕಾಗಿ ಕಾದು ಕುಳಿತಿದ್ದರು. ಸಂಸದರಾದ ನಂತರ ದೆಹಲಿಯಲ್ಲೇ ತಮ್ಮದೇ ನೆಟ್‌ವರ್ಕ್‌ ಮಾಡಿಕೊಂಡು ಬಿಜೆಪಿ ರಾಷ್ಟ್ರೀಯ ನಾಯಕರ ಮನಗೆಲ್ಲುವಲ್ಲಿ ಯಡಿಯೂರಪ್ಪ ಯಶಸ್ವಿಯಾದ್ರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಂದ್ರೆ ಯಡಿಯೂರಪ್ಪ ಸಾಮರ್ಥ್ಯ ಅತ್ಯವಶ್ಯಕ ಎಂದು ಪರಿಗಣಿಸಿದ್ದ ಬಿಜೆಪಿ ವರಿಷ್ಟರು ಬಿಎಸ್‌ವೈಗೆ ರಾಜ್ಯಾಧ್ಯಕ್ಷರಾಗಿ ಪಟ್ಟಕಟ್ಟಿದ್ರು.

ರಾಜ್ಯಾಧ್ಯಕ್ಷರಾದ ಮೇಲೆ ಶುರುವಾಯ್ತು ಕದನ
ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರಕ್ಕೆ ಈಶ್ವರಪ್ಪ ಅಪಸ್ವರ
ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ರಾಜ್ಯ ಪದಾಧಿಕಾರಿಗಳ ಹೊಸ ತಂಡ ಕಟ್ಟಿದ್ದರು. ಅಷ್ಟೇ ಅಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಹೊಸಬರನ್ನು ನೇಮಿಸಿಕೊಂಡರು. ಅಷ್ಟೇ ಅಲ್ಲ. ಕೋರ್‌ ಕಮಿಟಿಯಲ್ಲೂ ತಮ್ಮದೇ ತಂಡ ಕಟ್ಟಿಕೊಳ್ಳಲು ಮುಂದಾದ್ರು. ಆಗ ಶುರುವಾಯ್ತು ಅಸಲಿ ಫೈಟ್‌. ಯಡಿಯೂರಪ್ಪ ವೇಗಕ್ಕೆ ಬ್ರೇಕ್‌ ಹಾಕಲು ಈಶ್ವರಪ್ಪ ತಮ್ಮ ನಿವಾಸದಲ್ಲಿ ಬಿಜೆಪಿ ಹಿರಿಯ ನಾಯಕರ ಸಭೆ ನಡೆಸಿದ್ರು. ಬಿಎಸ್‌ವೈ ನಿಲುವಿನಿಂದ ಬೇಸತ್ತವರಿಗೆ ಈಶ್ವರಪ್ಪ ನೇತೃತ್ವ ಕೊಟ್ಟರು. ಇದರ ಪರಿಣಾಮವಾಗಿ ಯಡಿಯೂರಪ್ಪ ಅಂದುಕೊಂಡ ರೀತಿಯ ಕೋರ್‌ಕಮಿಟಿಗೆ ಬ್ರೇಕ್‌ ಬಿದ್ದು ಎಲ್ಲ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ಕಮಿಟಿ ರಚನೆಯಾಯಿತು. ಇದು ಈಶ್ವರಪ್ಪಗೆ ಸಿಕ್ಕ ಮೊದಲ ಯಶಸ್ಸು. ಆದ್ರೆ ಈಶ್ವರಪ್ಪ ಬೇಡಿಕೆ ಇಲ್ಲಿಗೇ ನಿಲ್ಲಲಿಲ್ಲ. ಯಡಿಯೂರಪ್ಪ ಈಶ್ವರಪ್ಪ ಬೇಡಿಕೆಗೆ ಸೊಪ್ಪು ಹಾಕಲಿಲ್ಲ. ಇದು ಜಂಗೀಕುಸ್ತಿ ವೇದಿಕೆ ಸೃಷ್ಟಿಸಿತು.

ಈಶ್ವರಪ್ಪ ಕಟ್ಟಿದ್ರು ರಾಯಣ್ಣ ಬ್ರಿಗೇಡ್‌
ಬ್ರಿಗೇಡ್‌ ಬೆಂಬಲ ಬೇಡವೆಂದ್ರು ಬಿಎಸ್‌ವೈ

ಯಾವಾಗ ತಮ್ಮ ಬೇಡಿಕೆಗೆ ಯಡಿಯೂರಪ್ಪ ಸ್ಪಂದಿಸುತ್ತಿಲ್ಲ ಅನ್ನೋದು ಈಶ್ವರಪ್ಪಗೆ ಅರ್ಥವಾಯಿತೋ ಆಗ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕಟ್ಟಿದ್ರು. ಇದ್ರ ಮೂಲಕ ಹಿಂದುಳಿದ ಹಾಗೂ ದಲಿತ ವರ್ಗಗಳನ್ನು ಒಗ್ಗೂಡಿಸುವ ಸಾಹಸಕ್ಕೆ ಕೈಹಾಕಿದ್ರು. ಆದ್ರೆ ಯಡಿಯೂರಪ್ಪ ಮಾತ್ರ ಇದ್ಯಾವುದಕ್ಕೂ ಮಣಿಯಲಿಲ್ಲ. ಒಂದು ಹಂತದಲ್ಲಿ ಬಿಜೆಪಿಗೆ ಯಾವ ಬ್ರಿಗೇಡ್‌ನ ಬೆಂಬಲವೂ ಬೇಕಿಲ್ಲ ಎಂದು ಈಶ್ವರಪ್ಪ ವಿರುದ್ಧ ಚಾಟಿ ಬೀಸಿದ್ದರು. ಆದ್ರೆ ಸುಮ್ಮನಿರದ ಈಶ್ವರಪ್ಪ ಕೂಡಲಸಂಗಮದಲ್ಲಿ ರಾಯಣ್ಣ ಬ್ರಿಗೇಡ್‌ನ ಅತಿದೊಡ್ಡ ಸಮಾವೇಶ ಸಂಘಟಿಸಿದಾಗ ದೆಹಲಿಯ ಬಿಜೆಪಿ ನಾಯಕರು ತಿರುಗಿ ನೋಡುವಂತಾಯಿತು.

ಅಮಿತ್‌ ಶಾ ನೇತೃತ್ವದಲ್ಲಿ ನಡೆಯಿತು ಸಂಧಾನ ಸಭೆ
ಸಭೆ ಮುಗಿದ್ರೂ ಮುಗಿಯಲಿಲ್ಲ ಇಬ್ಬರ ಕದನ

ರಾಜ್ಯ ಬಿಜೆಪಿಯಲ್ಲಿ ಪದೇ ಪದೇ ಇಬ್ಬರು ಹಿರಿಯ ನಾಯಕರ ಬಹಿರಂಗ ಕಿತ್ತಾಟ ಕಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ದೆಹಲಿಯಲ್ಲಿ ಒಂದು ಸಭೆ ಕರೆದು ಸಂಧಾನ ನಡೆಸಿದ್ರು. ಅಮಿತ್‌ ಶಾ ಮುಂದೆ ಕುಳಿತ ಈಶ್ವರಪ್ಪ ಮತ್ತು ಯಡಿಯೂರಪ್ಪ ತಮ್ಮ ಬಿಗುಮಾನ ಬಿಟ್ಟು ಒಂದಾಗಿ ಸಾಗುವ ಮಾತುಕೊಟ್ಟಿದ್ದರು. ರಾಜ್ಯ ಬಿಜೆಪಿಯ ಗೊಂದಲ ಬಗೆಹರಿಸಲು ಅಮಿತ್‌ ಶಾ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಜೊತೆಗೆ ಹಿಂದುಳಿದ ಮತ್ತು ದಲಿತ ಮೋರ್ಚಾಗಳ ಉಸ್ತುವಾರಿಯನ್ನು ಈಶ್ವರಪ್ಪ ಹೆಗಲಿಗೇರಿಸಿದ್ರು. ಆದ್ರೆ ಅಮಿತ್‌ ಶಾ ಮುಂದೆ ಒಂದಾಗಿದ್ದ ನಾಯಕರ ಕದನ ಮೂರೇ ತಿಂಗಳಿಗೆ ಮತ್ತೆ ಬೀದಿಗೆ ಬಂದಿದೆ.

Comments are closed.

Social Media Auto Publish Powered By : XYZScripts.com