ಬಾಳೆಹೊನ್ನೂರು ರಂಭಾಪುರಿ ಶ್ರೀಗಳಿಗೆ ಗೌರವ ಡಾಕ್ಟರೇಟ್‌ : ಬಳ್ಳಾರಿಯ ವಿಎಸ್‌ಕೆ ವಿವಿ ಪ್ರದಾನ…

ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಬಾಳೆ ಹೊನ್ನೂರಿನ ರಂಭಾಪುರಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.  ಐದನೇ ಘಟಿಕೋತ್ಸವ ಶುಕ್ರವಾರ ನಡೆಯಲಿದ್ದು, ಈ ವರ್ಷದ ಗೌರವ ಡಾಕ್ಟರೇಟ್‌ ಪದವಿಯನ್ನ ರಂಭಾಪುರಿ ಶ್ರೀಗಳಿಗೆ ನೀಡಲು ನಿರ್ಧರಿಸಲಾಗಿದೆ.
ಗುರುವಾರ ಮಧ್ಯಾಹ್ನ ವಿವಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ|| ಎಂ.ಎಸ್.ಸುಭಾಷ್ ಅವರು,   ವಿಶ್ವವಿದ್ಯಾಲಯದ 5ನೇ ವಾರ್ಷಿಕ ಘಟಿಕೋತ್ಸವವು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿದೆ ಎಂದರು.  ವಿಶ್ವ ವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ಸಮಯದಲ್ಲಿಯೇ ಇವರು, ಬಾಳೆ ಹೊನ್ನೂರಿನ ರಂಭಾಪುರಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂಬ ವಿಷಯವನ್ನು ಘೋಷಿಸಿದರು. ಈ ವರ್ಷ 5 ಜನರಿಗೆ ಪಿ.ಹೆಚ್.ಡಿ ಪ್ರದಾನ ಮಾಡಲಾಗುತ್ತಿದ್ದು,  30 ಜನರಿಗೆ ಬಂಗಾರದ ಪದಕ, 163 ಜನ ವಿವಿಧ ರ‍್ಯಾಂಕ್‌ ವಿಜೇತರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೌರವ ಡಾಕ್ಟರೇಟ್ ಗೆ 18 ಜನರಿಂದ ಅರ್ಜಿಗಳು ಬಂದಿದ್ದವು, ಇವುಗಳನ್ನು ಪರಿಶೀಲಿಸಿ, 3 ಜನರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು. ಈ ಪೈಕಿ ಒಬ್ಬರ ಹೆಸರನ್ನು ಅಂತಿಮಗೊಳಿಸಿದ್ದಾರೆ, ರಂಭಾಪುರಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ವಿವರಿಸಿದರು.

Comments are closed.

Social Media Auto Publish Powered By : XYZScripts.com