ಬಾಂಬ್‌ನಾಗನ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನಿಯಮ ಪಾಲನೆ ಮಾಡಲು ಹೈಕೋರ್ಟ್‌ ಸೂಚನೆ ..

ಬೆಂಗಳೂರು:  ಬ್ಲ್ಯಾಕ್‌ ಅಂಡ್ ವೈಟ್ ದಂದೆಯಲ್ಲಿ ತೊಡಗಿದ ಆರೋಪ ಎದುರಿಸುತ್ತಿರುವ ನಾಗರಾಜ ಅಲಿಯಾಸ್ ಬಾಂಬ್ ನಾಗ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಯಮ ಪಾಲನೆ ಮಾಡುವಂತೆ ಸೂಚಿಸಿ ರಿಟ್ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ನಾಗರಾಜ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯು ಬುಧವಾರ ನ್ಯಾಯಮೂರ್ತಿ .ಎ.ಎಸ್.ಬೋಪಣ್ಣ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ಪ್ರಕರಣ ಸಂಬಂಧ ಪೊಲೀಸರಿಗೆ ವಿವರವಾದ ಹೇಳಿಕೆ ನೀಡಲು ಸಿದ್ದನಿದ್ದೇನೆ, ಆದರೆ ಶರಣಾದ ಕೂಡಲೇ ಪೊಲೀಸರು ಕಿರುಕುಳ ನೀಡಬಹುದು, ದೌರ್ಜನ್ಯ ಎಸಗಬಹುದು, ಪೊಲೀಸರು ಕಾನೂನು ಕೈಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅರ್ಜಿಯ ಮೂಲಕ ನಾಗರಾಜ ಆತಂಕ ವ್ಯಕ್ತಪಡಿಸಿದರು.  ಪೊಲೀಸರಿಂದ ನಿಮಗ ಕಿರುಕುಳದ ಭೀತಿ ಏಕೆ ಎಂದು ನ್ಯಾಯಪೀಠ ಪ್ರಶ್ನಿಸಿತು.ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲ ಶ್ರೀರಾಮ್ ರೆಡ್ಡಿ, ಪೊಲೀಸರು ಹೆಡೆಮುರಿ ಕಟ್ಟುತ್ತೇವೆ ಎನ್ನುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಭೀತಿ ಇದೆ ಎಂದರು.
ವೀಡಿಯೋ ಬಿಡುಗಡೆ ಮಾಡಿದ ಬಳಿಕ ಪೊಲೀಸರು ತಮ್ಮ ಕಕ್ಷೀದಾರರ ವಿರುದ್ಧ ಹೆಚ್ಚು ಕೇಸುಗಳನ್ನು ದಾಖಲಿಸುತ್ತಿದ್ದಾರೆ ಎಂದು ವಕೀಲರ ಶ‍್ರೀರಾಮರೆಡ್ಡಿ ನ್ಯಾಯಾಲಯದ ಗಮನಕ್ಕೆ ತಂದರು. ಈ ಆರೋಪ ಕೇಳುತ್ತಿದ್ದಂತೆ ಪೊಲೀಸರು ನ್ಯೂಟನ್ ನಿಯಮ ಪಾಲಿಸುತ್ತಿದ್ದಾರೆ ಎನಿಸುತ್ತಿದೆ, ಪ್ರತಿಯೊಂದು ಕ್ರಿಯೆಗೂ ಪರಸ್ಪರ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ. ಈ ನಿಯಮವನ್ನು ಪೊಲೀಸರು ಸಹ ಅನುಸರಿಸುತ್ತಿರಬರುಹುದು ಎಂದು  ಲಘುಧಾಟಿಯಲ್ಲಿ ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಸರ್ಕಾರದ ಪರ ಹೇಳಿಕೆ ನೀಡಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ, ಕಳೆದ 1 ತಿಂಗಳಿನಿಂದ ಆರೋಪಿ ನಾಗರಾಜ ಪರಾರಿಯಾಗಿದ್ದು, ಕಾನೂನು ಬದ್ದವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀರಾಮ್ ರೆಡ್ಡಿ, ನಾಗರಾಜು ನಮ್ಮ ಕಚೇರಿಗೆ ಬಂದು ವಕಾಲತ್ತು ನೀಡಿದ್ದಾರೆ. ಅವರು ಎಲ್ಲೂ ಪರಾರಿಯಾಗಿಲ್ಲ ಎಂದರು.ಈ ವೇಳೆ ಮಧ್ಯ ಪ್ರವೇಶ ಮಾಡಿದ ನ್ಯಾಯಪೀಠ, ಅವರು ಯಾವ ಸಮಯಕ್ಕೆ ಬರುತ್ತಾರೆ ತಿಳಿಸಿ ಎಂದು ಸೂಚಿಸಿತು. ಮತ್ತೆ ನಮ್ಮ ಕಚೇರಿಗೆ ಬಂದರೆ ಅವರನ್ನು ಎಎಜಿ ಪೊನ್ನಣ್ಣ ಬಳಿಯೇ ಕರೆತರುತ್ತೇನೆ ಎಂದು  ನಾಗಾಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.ನಂತರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಪಾಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿ ನಾಗರಾಜ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.
ಬಾಂಬ್ ನಾಗನ ಮಕ್ಕಳ ಹೆಸರಿನ ಕುತೂಹಲ:
ಪ್ರಕರಣದ ವಿಚಾರಣೆ ವೇಳೆ ನಾಗರಾಜ ಪುತ್ರರ ಹೆಸರುಗಳ ಪ್ರಸ್ತಾಪವಾಯಿತು. ಇಬ್ಬರು ಪುತ್ರರಿಗೆ ಗಾಂಧಿ ಹಾಗೂ ಶಾಸ್ತ್ರಿ ಎನ್ನುವ ಹೆಸರು ಇಡಲಾಗಿದೆ ಎಂಬ ವಿಷಯ ತಿಳಿದುಬಂತು. ಇಬ್ಬರೂ ಒಂದೇ ದಿನ ಹುಟ್ಟಿದ್ದಾರಾ ಎಂದು ನ್ಯಾ ಎ.ಎಸ್.ಬೋಪಣ್ಣ ಕುತೂಹಲದಿಂದ ಪ್ರಶ‍್ನಿಸಿದರು.  ಇಲ್ಲ ಇಬ್ಬರ ನಡುವೆ 2 ವರ್ಷ ಅಂತರವಿದೆ ಎಂದು ನಾಗರಾಜ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.⁠⁠⁠⁠

Comments are closed.