Ipl: ಸೋಲಿನ ಬೋನ್ ನಿಂದ ಹೊರ ಬಂದ ಲಯನ್ಸ್

ಇಷ್ಟು ದಿನ ಸೋಲಿನ ಬೋನಿನಲ್ಲಿದ್ದು ನರಳಿ ಎಲ್ಲರ ಟೀಕೆಗಳಿಂದ ಬೇಸತ್ತು ಹೋಗಿದ್ದ ಲಯನ್ಸ್ ಈಗ ಹತ್ತನೇ ಆವೃತ್ತಿ ಐಪಿಎಲ್ನಲ್ಲಿ ಮತ್ತೆ ಘರ್ಜಿಸಿದೆ. ಹೌದು ಮಾಜಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ನೀಡಿದ 188 ರನ್ಗಳ ಗುರಿಯನ್ನು ಸಮರ್ಥವಾಗಿ ಮೆಟ್ಟಿ ನಿಂತ ಗುಜರಾತ್ ಲಯನ್ಸ್ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದೆ.
ತುಕ್ಕು ಹಿಡಿದುಕೊಂಡು ಎಲ್ಲರಿಂದ ತೆಗಳಿಕೆ ಕಂಡಿದ್ದ ಬ್ಯಾಟ್ ಈಗ ಲಯಕ್ಕೆ ಮರುಳಿದೆ. ಕ್ರಿಕೆಟ್ ಸಹವಾಸ ಸಾಕು ಎನ್ನುತ್ತಿದ್ದ ನಾಯಕನ ಬ್ಯಾಟ್ನಿಂದ ರನ್ ಹೊಳೆ ಹರಿದಿದ್ದು ಲಯನ್ಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಡನ್ ಗಾರ್ಡನ್ ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 2 ವಿಕೆಟ್ಗೆ 187 ರನ್ ಕಲೆ ಹಾಕಿತು. ಈ ಮೊತ್ತವನ್ನು ಗುಜರಾತ್ 18.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 188 ರನ್ ಕಲೆ ಹಾಕಿತು.


ಕೋಲ್ಕತಾ ನೈಟ್ ರೈಡರ್ಸ್ ತಂಡದ ಆರಂಭಿಕರಾಗಿ ಕಳೆದ ಕೆಲವು ಪಂದ್ಯಗಳಿಂದ ಗೌತಮ್ ಗಂಭೀರ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿರುವ ಸುನಿಲ್ ನಾರಾಯಣ್, ತಾವು ಬ್ಯಾಟಿಂಗ್ನಲ್ಲೂ ಸೈ ಎನ್ನುವುದನ್ನು ಸಾಬೀತು ಮಾಡಿದರು.
ಸುನಿಲ್ 17 ಎಸೆತದಲ್ಲಿ 9 ಬೌಂಡರಿ 1 ಸಿಕ್ಸರ್ ಸೇರಿದಂತೆ 42 ರನ್ ಬಾರಿಸಿ ತಂಡಕ್ಕೆ ನೆರವಾದರು.
ದೊಡ್ಡ ಇನಿಂಗ್ಸ್ ಕಟ್ಟುವ ಗಂಭೀರ್ ಆಸೆ ಫಲಿಸಲಿಲ್ಲ. ಇವರು 28 ಎಸೆತದಲ್ಲಿ 33 ರನ್ ಬಾರಿಸಿದರು.
ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್ಮನ್ ಕರ್ನಾಟಕದ ರಾಬಿನ್ ಉತ್ತಪ್ಪ ಸೊಗಸಾದ ಆಟ ಆಡಿದರು. ಇವರು ಗುಜರಾತ್ ತಂಡದ ಬೌಲರ್ ಗಳನ್ನು ಮನ ಬಂದಂತೆ ದಂಡಿಸಿದರು. 72 ರನ್ ಗಳ ಕಾಣಿಕೆಯನ್ನು ತಂಡಕ್ಕೆ ನೀಡಿದರು.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಗುಜರಾತ್ ತಂಡದ ಸುರೇಶ್ ರೈನಾ 46 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಾಯದಿಂದ 84 ರನ್ ಬಾರಿಸಿ ಜಯದಲ್ಲಿ ಮಿಂಚಿದರು.
ಲಯನ್ಸ್ ತಂಡದ ಏರಾನ್ ಫಿಂಚ್ (31), ಬ್ರೆಂಡನ್ ಮೆಕಲಂ (33) ತಂಡಕ್ಕೆ 42 ರನ್ಗಳ ಜೊತೆಯಾಟ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ (3), ಇಶಾನ್ ಕಿಶನ್ (4), ಡ್ವೇನ್ ಸ್ಮಿತ್ (5) ಜವಾಬ್ದಾರಿ ಮರೆತರು.

 

Comments are closed.

Social Media Auto Publish Powered By : XYZScripts.com