ಎತ್ತಿನ ಹೊಳೆ ಯೋಜನೆಯಲ್ಲಿ ರಾಜಕೀಯ ಬೆರೆಸಬೇಡಿ: ರೈತರಲ್ಲಿ ಆಸೆ ಹುಟ್ಟಿಸಿ ನಿರಾಸೆ ಮಾಡಬೇಡಿ : HDK

ಹಾಸನ: ಎತ್ತಿನ ಹೊಳೆ ಯೋಜನೆಗಾಗಿ ಭೂಸ್ವಾಧಿನ ಪ್ರಕ್ರಿಯೆ ಕುಂಟುತ್ತಾ ಸಾಗಿದೆ, ಕಳೆದ ನವೆಂಬರ್‌ನಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದರೂ ಕೂಡ ಅದು ಇಂದಿಗೂ ಮುಕ್ತಾಯವಾಗಿಲ್ಲ, ಈ ಬಗ್ಗೆ ಇನ್ನೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಹಾಸನದ ಸಕಲೇಶಪುರದ ಕಾಡುಮನೆ ಎಸ್ಟೇಟ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಎತ್ತಿನ ಹೊಳೆ ಯೋಜನೆಯಲ್ಲಿ ರಾಜಕೀಯ ಬೆರೆಸೋದು ಬೇಡ,  ಈ ಯೋಜನೆ ಪಾರದರ್ಶಕವಾಗಿರಲಿ,  ಈ ಯೋಜನೆಯ ಬಗ್ಗೆ ರೈತರಲ್ಲಿ  ಆಸೆ ಹುಟ್ಟಿಸಿ ನಿರಾಸೆ ಮಾಡಬೇಡಿ. ವೀರಪ್ಪ ಮೂಯ್ಲಿ ಒಂದು ವರ್ಷದಲ್ಲಿ ನೀರು ಕೊಡ್ತಿನಿ ಅಂದಿದ್ದರು, ಆದರೆ ಈಗ ೨೦೧೭  ಬಂದರೂ ಕೆಲಸ ಮುಗಿದಿಲ್ಲ‌, ಸರ್ಕಾರ ಜನರ ಮುಂದೆ ಹೇಳಿಕೆ ಕೊಡುವಾಗ ಜವಾಬ್ದಾರಿ ಇರಬೇಕು ಎಂದರು.
ಹಾಸನದ ಸಕಲೇಶಪುರ ತಾಲ್ಲೂಕಿನ ಕಡದರವಳ್ಳಿ, ಹಾನುಬಾಳು, ಆನೆಮಹಲ್ ಪ್ರದೇಶಕ್ಕೆ ಭೇಟಿ, ಎತ್ತಿನಹೊಳೆ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ,  ನೀರು ಬರುವ ಆಶಾಭಾವನೆಯಲ್ಲಿ ಬಯಲು ಸೀಮೆಯ ಜನ ಕಾಯುತ್ತಿದ್ದಾರೆ, ನೀರಿನ ಸಮಸ್ಯೆಗೆ ಪರಿಹಾರ ಸಿಗುವಲ್ಲಿ ಸರ್ಕಾರ ಯೋಜನೆ ತಡ ಮಾಡಿದ್ರು ಪರವಾಗಿಲ್ಲ, ಯೋಜನೆಯನ್ನ ಮಾತ್ರ ಸಂಪೂರ್ಣಗೊಳಿಸಬೇಕು ಅಷ್ಟೆ ಎಂದರು. ಯೋಜನೆ 8ಸಾವಿರ ಕೋಟಿಯಿಂದ 12ಸಾವಿರ ಕೊಟಿ ತಲುಪಿದೆ.  ಮುಂದೆ ಎಷ್ಟು ಕೋಟಿ ತಲುಪುವುದೋ ಗೊತ್ತಿಲ್ಲ,  ಇಲ್ಲಿಯವರೆಗೆ ಎತ್ತಿನಹೊಳೆ ಯೋಜನೆಗಾಗಿ ಒಟ್ಟೂ 450ಎಕರೆ ಭೂಮಿಯನ್ನ ತೆಗೆದುಕೊಳ್ಳಲಾಗಿದೆ.  ಯೋಜನೆಯನ್ನ ಇಂತಿಷ್ಟು ವರ್ಷದಲ್ಲಿ ಮುಗಿಸಲೇಬೇಕೆಂದು ಸರ್ಕಾರ ಗಡುವು ಹಾಕಿಕೊಂಡು ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.   ಈ ಯೋಜನೆಯ ಬಗ್ಗೆ ಗೊಂದಲಗಳಿವೆ, ಕೆಲವು ತಾಂತ್ರಿಕ ವರ್ಗದವರು ನೀರು ಲಭ್ಯ ಎಂಬ ಮಾತನ್ನ ಹೇಳಿದರೆ,  ಇನ್ನು ಕೇಲವರು ನೀರು ಸಿಗೋದಿಲ್ಲ ಎಂದಿದ್ದಾರೆ.  ಆದರೆ ಈ  ಯೋಜನೆಯಲ್ಲಿ ಗೊಂದಲಬೇಡ,  ಜನರಿಗೆ ನೀರು ಕೊಡುವಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ರೈತರ ಸಂಕಷ್ಟದ ಕುರಿತು ಮಾತನಾಡುತ್ತಾ, ಕೊರಟಗೆರೆಯಲ್ಲಿ ಜಲಶಾಯ ನಿರ್ಮಾಣ ಮಾಡುವ ಮೂಲಕ ರೈತರನ್ನ ಕತ್ತಲೆಯಲ್ಲಿಟ್ಟಿದ್ದಾರೆ, ಹಣ ನೀಡುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ,  ಜಿಲ್ಲಾಡಳಿತ ಮತ್ತು ಸರ್ಕಾರ ಯೋಜನೆಯ ಪಾರದರ್ಶಕತೆ ತೋರಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರೇ ಕೆಲ ರೈತರಿಗೆ ಹಣ ನೀಡಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.     ಇಂಥ ರೈತೋಪಯೋಗಿ ಯೋಜನೆಯಲ್ಲಿ ತಾನು ರಾಜಕೀಯ ಬೆರೆಸಲು ಹೋಗುವುದಿಲ್ಲ, ಎಂದಿರುವ ಕುಮಾರಸ್ವಾಮಿ ಉಳಿದ ರಾಜಕೀಯ ಪಕ್ಷಗಳೂ ಕೂಡ ಈ ಯೋಜನೆಯನ್ನ ರಾಜಕೀಯವಾಗಿ ಬಳಸಬಾರದು ಎಂದು ಕರೆ ನೀಡಿದರು.
ಕೋಲಾರ,  ಚಿಕ್ಕಬಳ್ಳಾಪುರ, ಮಧುಗಿರಿ ಕ್ಷೇತ್ರದಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ರೈತರ ನಿಯೋಗ ಕರೆತಂದಿದ್ದ ಎಚ್.ಡಿ.ಕೆ,  ಅವರಿಗೆಲ್ಲ ಈ ಯೋಜನೆಯಿಂದಾಗುವ ನೀರಿನ ಲಭ್ಯತೆ,  ಕಾಮಗಾರಿ ಪ್ರಗತಿ ಬಗ್ಗೆ ಮನವರಿಕೆ ಮಾಡಿಕೊಟ್ಟರು.

Comments are closed.

Social Media Auto Publish Powered By : XYZScripts.com