ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಉಮಾಭಾರತಿ ವಿರುದ್ಧದ ತನಿಖೆಗೆ ಸುಪ್ರೀಂ ಆದೇಶ..

ನವದೆಹಲಿ:  ಬಾಬ್ರಿ ಮಸೀದಿ ಧ್ವಂಸಗೊಳಿಸಲು ರೂಪಿಸಲಾಗಿದ್ದ ಸಂಚು ಪ್ರಕರಣದ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಲವು ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ವಿಚಾರಣೆಗೆ ಒಪ್ಪಿಗೆ ನೀಡಿರುವ ಸರ್ವೋಚ್ಛ ನ್ಯಾಯಾಲಯ, ಅಡ್ವಾಣಿ, ಮುರಳಿ ಮನೋಹರ್ ಜೋಷಿ,  ಉಮಾಭಾರತಿ ಅವರ ವಿರುದ್ಧದ ವಿಚಾರಣೆಗೆ ಅಸ್ತು ಎಂದಿದೆ. ಲಖನೌ ಹಾಗೂ ರಾಯ್ ಬರೇಲಿಯ ನ್ಯಾಯಾಲಯಗಳಲ್ಲಿ ಪ್ರತ್ಯೇಕ ವಿಚಾರಣೆ ನಡೆಯಬೇಕು, 4 ವಾರಗಳಲ್ಲಿ ವಿಚಾರಣೆ ಪ್ರಾರಂಭವಾಗಿ 2 ವರ್ಷಗಳಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯಗೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ. ಕರಸೇವಕರೊಂದಿಗೆ 13 ಮಂದಿ ಬಿಜೆಪಿ ನಾಯಕರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ದಶಕಗಳ ಹಿಂದಿನ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ವಿಚಾರಣೆ ಪೂರ್ಣ ಗೊಳಿಸಲು  ಇನ್ನೆರಡು ವರ್ಷಗಳ ಕಾಲಾವಕಾಶ ನೀಡಿದೆ. ಲಖನೌ ಮತ್ತು ರಾಯ್ ಬರೇಲಿಯಲ್ಲಿ ನಡೆಯುತ್ತಿರುವ ವಿಚಾರಣೆ ಮುಂದುವರೆಯಲಿದ್ದು, ಪ್ರತಿನಿತ್ಯ ವಿಚಾರಣೆ ನಡೆಸುವಂತೆ ಕೋರ್ಟ್‌ ಸೂಚಿಸಿದೆ. ಅಲ್ಲದೆ, ಇನ್ನು ನಾಲ್ಕು ವಾರಗಳಲ್ಲಿ ಲಖನೌ ನ್ಯಾಯಾಲಯದಲ್ಲಿ  ವಿಚಾರಣೆ ಆರಂಭವಾಗಬೇಕು ಎಂದು ಖಡಕ್‌ ಸೂಚನೆ ನೀಡಿದೆ.
ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಷ್ ಮತ್ತು ಆರ್. ಎಫ್‌. ನಾರಿಮನ್ ಅವರ ಪೀಠ, ವಿಚಾರಣೆ ಆರಂಭವಾದ ಬಳಿಕ ಯಾವುದೇ ಕಾರಣಕ್ಕೂ ನ್ಯಾಯಾಧೀಶರ ವರ್ಗಾವಣೆ  ಮಾಡಬಾರದು ಎಂದೂ ಆದೇಶಿಸಿರುವುದು ಗಮನಾರ್ಹ. ಪ್ರಕರಣ ಸಂಬಂಧ ಲಖನೌ ಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಪೀಠ ನಿರ್ದೇಶನ ನೀಡಿದೆ.
ಈ ಹಿಂದೆ ಅಲಹಾಬಾದ್‌ ನ್ಯಾಯಾಲಯ, ಇದೇ ಪ್ರಕರಣ ಸಂಬಂಧ ಎಲ್ ಕೆ ಅಡ್ವಾಣಿ ಸೇರಿದಂತೆ ಇತರೆ 12ಕ್ಕೂ ಹೆಚ್ಚು ಮುಖಂಡರ ವಿರುದ್ಧ ಸಿಬಿಐ ದಾಖಲಿಸಿದ್ದ ಷಡ್ಯಂತ್ರ ಆರೋಪವನ್ನು ಕೈಬಿಟ್ಟಿತ್ತು. ಹೀಗಾಗಿ ಅಲಹಾಬಾದ್  ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀ ಕೋರ್ಟ್ ಮೆಟ್ಟಿಲೇರಿತ್ತು.  ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್  ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ,  ಉಮಾಭಾರತಿ, ವಿನಯ್ ಕಟಿಯಾರ್ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ ಹತ್ತಕ್ಕೂ ಅಧಿಕ ಮುಖಂಡರ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದಿದೆ.

Comments are closed.

Social Media Auto Publish Powered By : XYZScripts.com