ಧಾನ್ಯಗಳ ಪಾನಕ: Fruit Juiceಗಿಂತ ಯಾಕೆ ಗ್ರೇಟ್ !?

ಬೇಸಿಗೆ ಬಂತೆಂದರೆ ಸಾಕು, ನಾವೆಲ್ಲ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ತಂಪು ತಂಪಾಗಿರುವ ಚಿಲ್ಡ್‌ ಜ್ಯೂಸ್‌ಗಳನ್ನ ಕುಡಿದು, ಬೇಸಿಗೆಯ ದಣಿವನ್ನ ನಿವಾರಿಸಿಕೊಳ್ಳುತ್ತೇವೆ. ಅತಿಹೆಚ್ಚು ಸಕ್ಕರೆಯಂಶವಿರುವ ರೆಡಿಮೇಡ್‌ ಜ್ಯೂಸ್‌ಗಳನ್ನ ಸೇವಿಸಿ ಆರೋಗ್ಯವನ್ನ ಕೆಡಿಸಿಕೊಳ್ಳುವುದಕ್ಕಿಂತ, ಮನೆಯಲ್ಲಿಯೇ ಲಭ್ಯವಿರುವ ರಾಗಿ, ಮತ್ತು ಹೆಸರು ಕಾಳಿನ ರುಚಿಯಾದ ಪಾನಕ ತಯಾರಿಸಿ ಕುಡಿದರೆ, ಬೇಸಿಗೆಯ ಆಯಾಸವೂ ಕಡಿಮೆಯಾಗುವುದರೊಂದಿಗೆ, ಆರೋಗ್ಯಕ್ಕೂ ಅತಿ ಉತ್ತಮ.
ಹೆಸರು ಕಾಳಿನ ಪಾನಕ:
ಬೇಕಾಗುವ ಸಾಮಾಗ್ರಿಗಳು: ೧ ಬಟ್ಟಲು ಹೆಸರು ಕಾಳು, ಅರ್ಧ ಬಟ್ಟಲು ಬೆಲ್ಲ, ಚಿಟಿಕೆ ಉಪ್ಪು, ೧ ಲೀಟರ್‌ ನೀರು
 ಮಾಡುವ ವಿಧಾನ:  ಒಂದು ಬಟ್ಟಲು ಹೆಸರು ಕಾಳನ್ನ ಬಾಣಲೆಯಲ್ಲಿ ಸ್ವಲ್ಪ ಹುರಿದು ಕೊಂಡು, ಅದಕ್ಕೆ ಸ್ವಲ್ಪ ನೀರು ಬೆರೆಸಿ ಮಿಕ್ಸರ್‌ ಸಹಾಯದಿಂದ ರುಬ್ಬಿ ಪೇಸ್ಟ್‌ ತಯಾರಿಸಿಕೊಂಡು, ತಯಾರಾದ ಪೇಸ್ಟ್‌ಗೆ ನೀರು, ಬೆಲ್ಲ, ಚಿಟಿಕೆ ಉಪ್ಪು ಬೆರೆಸಿ ಸರಿಯಾಗಿ ಕದಡಬೇಕು.  ತಯಾರಾದ ಪಾನಕವನ್ನ ಜಾರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಡಿ. ಬೇಕೆಂದಾಗ ಗ್ಲಾಸ್‌ಗೆ ಹಾಕಿ ಕುಡಿಯುತ್ತಿರಿ.
ರಾಗಿ ಪಾನಕ:
ಬೇಕಾಗುವ ಸಾಮಾಗ್ರಿಗಳು: ೧ ಬಟ್ಟಲು ರಾಗಿ, ಅರ್ಧ ಬಟ್ಟಲು ಬೆಲ್ಲ, ಚಿಟಿಕೆ ಉಪ್ಪು, ೧ ಲೀಟರ್‌ ನೀರು
ಮಾಡುವ ವಿಧಾನ : ರಾಗಿ ಪಾನಕವನ್ನ ತಯಾರಿಸುವುದಕ್ಕೆ ಇದನ್ನ ಹುರಿಯುವ ಅಗತ್ಯವಿಲ್ಲ. ಹಸಿ ರಾಗಿಯನ್ನ ೪ ತಾಸು ನೆನೆಸಿಟ್ಟುಕೊಂಡು, ನೆನೆದ ರಾಗಿಯನ್ನ ಚೆನ್ನಾಗಿ ರುಬ್ಬಬೇಕು. ರುಬ್ಬಿದ ನಂತರ ಜರಡಿ ಸಹಾಯದಿಂದ ರಾಗಿ ಜ್ಯೂಸ್‌ನ್ನ ಸೋಸಿ ತೆಗೆದು ಜೆಗುಟನ್ನ ಬೇರ್ಪಡಿಸಿ.  ನಂತರ ತಯಾರಾದ ಜ್ಯೂಸ್‌ಗೆ ಬೆಲ್ಲ, ಉಪ್ಪು, ಒಂದು ಲೀಟರ್‌ ನೀರು ( ಬೇಕೆಂದರೆ ಅರ್ಧ ಬಟ್ಟಲು ಹಾಲು ಕೂಡ ಹಾಕಬಹುದು)  ಹಾಕಿ ಚನ್ನಾಗಿ ಕದಡಿದರೆ ರಾಗಿ ಪಾನಕ ರೆಡಿ. ಈ ಪಾನಕವನ್ನ ಫ್ರಿಜ್‌ನಲ್ಲಿ ಇಟ್ಟುಕೊಂಡು  ಬಾಯಾರಿಕೆಯಾದಾಗ ಅಷ್ಟಷ್ಟಾಗಿ ಕುಡಿಯುತ್ತಿರಬಹುದು.
ಈ ಎರಡೂ ಪಾನಕಗಳೂ ಆರೋಗ್ಯಕ್ಕೆ ಅತೀ ಉತ್ತಮ. ದ್ವಿದಳಧಾನ್ಯವಾದ ಹೆಸರು ಕಾಳು, ಪ್ರೋಟೀನ್‌  ಮತ್ತು ವಿಟಮನ್‌ಗಳನ್ನ ದಟ್ಟವಾಗಿ ಹೊಂದಿರುವ ಪೌಷ್ಠಿಕ ಆಹಾರ.  ಇದರಲ್ಲಿರುವ ಕಾಂಪ್ಲೆಕ್ಸ್‌ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿ ನೀಡಬಲ್ಲವು. ಅಲ್ಲದೆ, ಹೆಸರು ಕಾಳಿನಲ್ಲಿರುವ ವಿಟಮಿನ್‌ ಸಿ ಚರ್ಮದ ಆರೋಗ್ಯಕ್ಕೂ ಅತೀ ಉತ್ತಮ. ಹುರಿದ ಹೆಸರುಕಾಳು ಅದರದ್ದೇ ಆದ ಪರಿಮಳವನ್ನ ಹೊಂದಿದ್ದು, ಕುಡಿಯುವುದಕ್ಕೂ ಅಷ್ಟೇ ರುಚಿ. ಬೆಲ್ಲದೊಂದಿಗೆ ತಯಾರಿಸುವುದರಿಂದ ಕಬ್ಬಿಣಾಂಶವೂ ದೇಹಕ್ಕೆ ಪೂರೈಕೆಯಾಗುತ್ತದೆ.
ರಾಗಿ ಕಡಿಮೆ ಜಿಡ್ಡಿನಾಂಶ ಹೊಂದಿರುವುದರಿಂದ ಅತಿಯಾದ ದೇಹದ ತೂಕ ಹೊಂದಿದವರಿಗೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರಿಗೆ ರಾಗಿ ಅತ್ಯುತ್ತಮ ಆಹಾರ. ರಾಗಿಯು ದೇಹಕ್ಕೆ ಬೇಕಾದ ಅವಶ್ಯಕ ಕೊಬ್ಬು ಹೊಂದಿರುವ ಧಾನ್ಯ.  ಚರ್ಮದ ಆರೋಗ್ಯವನ್ನೂ , ಮೆದುಳಿನ ಬೆಳವಣಿಗೆಗೂ ಸಹಕಾರಿಯಾದ ಪೌಷ್ಟಿಕ ಆಹಾರ ರಾಗಿ.  ಸುಣ್ಣ, ರಂಜಕ,ಕಬ್ಬಿಣ, ಸೋಡಿಯಂ, ಪೊಟ್ಯಾಶಿಯಂ ಮತ್ತು ಗಂಧಕಾಂಶಗಳನ್ನ ಹೊಂದಿರುವ ಸತ್ವಯುಕ್ತ ಧಾನ್ಯ ರಾಗಿ.  ರಾಗಿಯ ಸುಣ್ಣದ ಅಂಶ ಅಕ್ಕಿಯಲ್ಲಿರುವುದಕ್ಕಿಂತ ಎಂಟು ಪಟ್ಟು ಹೆಚ್ಚು.  ನಮ್ಮ ದೇಹಕ್ಕೆ ಬೇಕಾದ ಸುಣ್ಣದ ಅಂಶವನ್ನು ರಾಗಿ ಸುಲಭವಾಗಿ ಪೂರೈಸಬಲ್ಲದು. ಆರೋಗ್ಯವನ್ನೇ ಮೈವೆತ್ತಿರುವ ರಾಗಿ ಪಾನಕ, ವಿಶೇಷವಾಗಿ ಬೇಸಿಗೆಯ ಬಳಲಿಕೆಯನ್ನ ಸುಲಭವಾಗಿ ಪರಿಹರಿಸಬಲ್ಲದು.
ಆರೋಗ್ಯಕ್ಕೆ ಬೇಕಾದ ಸತ್ವಗಳನ್ನ ಮೈವೆತ್ತಿರುವ ಈ ಎರಡೂ ಪಾನಕಗಳನ್ನ ಮನೆಯಲ್ಲಿ ಮಾಡಿ, ಕುಡಿದು ನೋಡಿ. ದೇಹಕ್ಕೂ, ನಾಲಿಗೆಗೂ ಖುಷಿಕೊಡುವಂತ ಈ ತಂಪು ಪೇಯಗಳು ಖಂಡಿತ ನಿಮಗೆ ಇಷ್ಟವಾಗುತ್ತವೆ.

One thought on “ಧಾನ್ಯಗಳ ಪಾನಕ: Fruit Juiceಗಿಂತ ಯಾಕೆ ಗ್ರೇಟ್ !?

  • October 21, 2017 at 2:52 AM
    Permalink

    Your new valuable key points imply much a person like me and extremely more to my office workers. With thanks; from everyone of us.

Comments are closed.