ಯಶೋಮಾರ್ಗದ ನೆರಳಲ್ಲಿ ಗೋಮಾರ್ಗ: ಕೊಳ್ಳೇಗಾಲದಲ್ಲಿ ಯಶ್ ದಂಪತಿ !

 

ಇಡೀ ಊರಿಗೆ ಊರೇ ನೆಚ್ಚಿನ ನಟನನ್ನು ನೋಡೋಕೆ, ಭೇಟಿ ಮಾಡೋಕೆ ಬಂದಿತ್ತು. ಆದ್ರೆ ಆತ ಯಾವುದೋ ಸಿನಿಮಾದಲ್ಲಿ ಸಖತ್ತಾಗಿ ಫೈಟ್ ಮಾಡಿದ್ದಾನೆ ಎಂದೋ, ಅತ್ಯುತ್ತಮ ಡೈಲಾಗ್ ಹೇಳಿದ್ದಾನೆ ಎಂದೋ ಅಲ್ಲ. ಬದಲಿಗೆ ಆತ ಅವರೆಲ್ಲರ ಬದುಕಿಗೆ ಅಕ್ಷರಶಃ ಹೀರೋ ಆಗ್ತಿದ್ದಾನೆ ಎಂದು.

ಇಷ್ಟು ಓದಿದಾಗ ವಿಷಯ ರಾಕಿಂಗ್ ಸ್ಟಾರ್ ಯಶ್ ದು ಎನ್ನುವುದು ನಿಮಗೀಗಾಲೇ ಗೊತ್ತಾಗಿರಬಹುದು. ‘ಯಶೋಮಾರ್ಗ’ ಎನ್ನುವ ಸಂಸ್ಥೆಯ ಮೂಲಕ ಸಾಕಷ್ಟು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡ್ತಿದ್ದಾರೆ. ಇತ್ತೀಚೆಗಷ್ಟೇ ತಲ್ಲೂರು ಕೆರೆಯಲ್ಲಿ ನೀರು ಬಂದಿದ್ದು ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ.

ಈಗ ಕೊಳ್ಳೇಗಾಲದಲ್ಲಿ ದನಕರುಗಳು ಹಸಿವಿನಿಂದ ಸಾಯುತ್ತಿವೆ ಎನ್ನುವುದು ತಿಳಿಯುತ್ತಿದ್ದಂತೇ ಯಶ್ ಅಲ್ಲಿಗೆ ಧಾವಿಸಿದ್ರು. ಸದ್ಯ ಕೆ ಜಿ ಎಫ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಯಶ್ ಎರಡು ದಿನಗಳ ಮಟ್ಟಿಗೆ ಶೂಟಿಂಗ್ ಮುಂದೂಡಿ ಕೊಳ್ಳೇಗಾಲಕ್ಕೆ ತೆರಳಿದ್ದರು. ನಿನ್ನೆ ಕೊಳ್ಳೇಗಾಲದ ಹಸುಗಳ ದಯನೀಯ ಪರಿಸ್ಥಿತಿ ಮತ್ತು ಅವುಗಳಿಗೆ ಸಹಾಯ ಮಾಡಲು ಎರಡು ಸಂಸ್ಥೆಗಳು ಮಾಡುತ್ತಿರುವ ಶ್ರಮದ ಬಗ್ಗೆಯೂ ಯಶ್ ತಮ್ಮ ಫೇಸ್ಬುಕ್ ಪೇಜಿನಲ್ಲಿ ಹೇಳಿದ್ರು.

ಇಷ್ಟಕ್ಕೇ ಸುಮ್ಮನಿರದ ಯಶ್ ಇವತ್ತು ಖುದ್ದಾಗಿ ಪತ್ನಿ ರಾಧಿಕಾ ಜೊತೆ ಬೆಟ್ಟದ ತಪ್ಪಲಿನಲ್ಲಿರುವ ವಡ್ಕೆಹಳ್ಳ, ಕೂಡ್ಲೂರು, ರಾಂಪುರ ಗ್ರಾಮದ ಒಂದು ಗೋಶಾಲೆಗೆ ಭೇಟಿ ಗೋವುಗಳ ಪರಿಸ್ಥಿತಿ ಅವಲೋಕಿಸಿದ್ದಾರೆ. ಈಗಾಗ್ಲೇ ಪಶುಸಂಗೋಪನಾ ಸಚಿವರೊಂದಿಗೆ ಮಾತನಾಡಿ ಗೋವುಗಳ ರಕ್ಷಣೆಗೆ ಅವರ ಬಳಿ ಒಂದು ಭರವಸೆಯನ್ನೂ ಪಡೆದಿದ್ದಾರೆ.

ಇಂದು ಪರಿಸ್ಥಿತಿಯ ಅವಲೋಕನ ಮಾಡಿರುವ ಯಶ್ ದಂಪತಿ ಇದಕ್ಕೆ ಅಗತ್ಯ ಪರಿಹಾರ ಮಾರ್ಗ ಏನು ಎಂದು ಆಲೋಚನೆ ಮತ್ತು ಯೋಜನೆ ರೂಪಿಸುತ್ತಿದ್ದಾರೆ. ಜನಪರ ಕಾಳಜಿಯ ನಿಜವಾದ ನಾಯಕನನ್ನು ಕಂಡು ಕನ್ನಡಿಗರು ಹೆಮ್ಮೆಯಿಂದ ಬೀಗುತ್ತಿದ್ದಾರೆ.

Comments are closed.

Social Media Auto Publish Powered By : XYZScripts.com