Prince tragedy : ಬಂಡೀಪುರದ ಹುಲಿ `ಪ್ರಿನ್ಸ್’ ಕೊಚ್ಚಿ ಕೊಂದರ ಕಿರಾತಕರು….?

ಮೈಸೂರು :  ಇತ್ತೀಚೆಗೆ ಬಂಡೀಪುರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಹುಲಿ `ಪ್ರಿನ್ಸ್’ ಸಾವಿಗೆ ಹೊಸ ಟ್ವಿಸ್ಟ್ ಲಭಿಸಿದೆ. ಮುಖದ ಭಾಗ ಪ್ರತ್ಯೇಕವಾಗಿ ಸಿಕ್ಕಿದ ಹಿನ್ನೆಲೆಯಲ್ಲಿ ಪ್ರಿನ್ಸ್ ಸಾವು ಹೊಸ ತಿರುವು ಪಡೆದುಕೊಂಡಿದೆ.

ಏ.2ರಂದು ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯ ವ್ಯಾಪ್ತಿಯ ಲೊಕ್ಕೆರೆ ಬೀಟ್ನಲ್ಲಿ ಮುಖವಿಲ್ಲದ ಹುಲಿಯ ಕಳೇಬರ ಪತ್ತೆಯಾಗಿತ್ತು. ಅಂದು ಶವಪರೀಕ್ಷೆ ನಡೆಸಿದ ಅರಣ್ಯ ಇಲಾಖೆಯವರು ಹುಲಿ ಹಸಿವಿನಿಂದ ಮೃತಪಟ್ಟಿದೆ ಎಂದು ಹೇಳಿ ಸುಟ್ಟುಹಾಕಿದ್ದರು. ಅಲ್ಲದೆ ಒಂದು ದಿಕ್ಕಿನಿಂದ ಮಾತ್ರ ತೆಗೆದ ಚಿತ್ರವನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಆದರೆ ಹುಲಿಯ ಮುಖದ ಭಾಗ ನಾಪತ್ತೆಯಾಗಿರುವ ಚಿತ್ರ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ರಿನ್ಸ್ ಸಾವಿನ ತನಿಖೆಗೆ ಇಳಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಿನ್ಸ್ ಕಳೇಬರ ಸಿಕ್ಕ 200 ಮೀಟರ್ ದೂರದಲ್ಲಿ ಹುಲಿ ಮುಖದಿಂದ ಬೇರ್ಪಟ್ಟ ಭಾಗ ದೊರೆತಿದೆ. ಪ್ರಿನ್ಸ್ ಮೃತಪಟ್ಟ ನಂತರ ದುಷ್ಕರ್ಮಿಗಳು ಅದರ ಮುಖ ಭಾಗವನ್ನು ಹರಿತವಾದ ಆಯುಧದಿಂದ ಕೊಚ್ಚಿ ವಿರೂಪಗೊಳಿಸಿ ಬಿಸಾಡಿದ್ದಾರೆ ಎನ್ನಲಾಗಿದೆ. ಜತೆಗೆ ಹುಲಿಯ ದವಡೆ, ಕೋರೆಹಲ್ಲುಗಳು ಕಾಣೆಯಾಗಿದ್ದು ಅವುಗಳಿಗೆ ಹುಡುಕಾಟ ನಡೆಸಲಾಗಿದೆ.

Comments are closed.

Social Media Auto Publish Powered By : XYZScripts.com