ನಾನ್ಯಾಕೆ ಪಕ್ಷ ಬಿಡಬೇಕು..? ರೆಬಲ್ ಸ್ಟಾರ್ ಯೂಟರ್ನ್

ಮಂಡ್ಯ: ನಾನ್ಯಾಕೆ ಪಕ್ಷ ಬಿಡಬೇಕು..? ಕೇಂದ್ರದಲ್ಲಿ ಸೆಂಟ್ರಲ್ ಮಿನಿಸ್ಟರ್, ರಾಜ್ಯದಲ್ಲಿ ಕ್ಯಾಬಿನೆಟ್ ಮಿನಿಷ್ಟರ್‌ ಸ್ಥಾನವನ್ನ ನನಗೆ ಕೊಟ್ಟಿರುವಾಗ ನಾನೇಕೆ ಪಕ್ಷಬಿಟ್ಟು ಹೋಗಲಿ..? ನಾನು ಮತ್ತೇನನ್ನೂ ಆಸೆಪಡುವುದಿಲ್ಲ ಎಂದು ಹೇಳುವ ಮೂಲಕ ತಾನು ಪಕ್ಷ ಬಿಡುತ್ತಿಲ್ಲ ಎಂಬುದನ್ನ ಅಂಬರೀಷ್‌ ಸ್ಪಷ್ಟಪಡಿಸಿದ್ದಾರೆ.  ಈ ಮೂಲಕ ಅಂಬರೀಷ್‌ ಕೂಡ ಕಾಂಗ್ರೆಸ್‌ ತೊರೆಯುತ್ತಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆದರು.
 ಶುಕ್ರವಾರ ಮಂಡ್ಯದಲ್ಲಿ ಮಾತನಾಡಿದ ಅವರು,  ಜನ ತನಗೆ ಮುಖ್ಯಮಂತ್ರಿಗೆ ನೀಡುವಷ್ಟೇ ಪ್ರೀತಿ ಕೊಟ್ಟಿದ್ದಾರೆ ಇನ್ನೇನು ಬೇಕು? ಪ್ರೀತಿ, ವಿಶ್ವಾಸ, ಅಭಿಮಾನ ಸಂಪಾದನೆ ಮಾಡಿದ್ದೀವಿ. ಅದಕ್ಕಿಂತ ಮಿಗಿಲಾಗಿದ್ದೇನಿದೆ ? ಎಂದು ಹೇಳುವ ಮೂಲಕ ತಾನು ಕಾಂಗ್ರೆಸ್‌ನಲ್ಲಿ ತೃಪ್ತನಾಗಿದ್ದೇನೆ ಎಂಬುದನ್ನ ಒತ್ತಿ ಹೇಳಿದ್ದಾರೆ.  ಮುಂದಿನ ಚುನಾವಣೆಯ ಬಗ್ಗೆ ಎದ್ದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ ಅಂಬರೀಷ್‌, ಮುಂದೆ ಏನಾಗುತ್ತದೆ ಎಂಬ ಬಗ್ಗೆ ಭವಿಷ್ಯ ಹೇಳುವುದಕ್ಕೆ ಆಗುವುದಿಲ್ಲ.. ಮುಂದಿನದ್ದು ಮುಂದೆ ನೋಡೋಣ ಎಂದಿದ್ದಾರೆ. ಕೊನೆಯಲ್ಲಿ ಅಂಬರೀಷ್‌ ಬಾಯಿಯಿಂದ ಹೊರಟ ಈ ಹಾರಿಕೆಯ ಉತ್ತರಗಳು ಅನುಮಾನಗಳನ್ನ ಹುಟ್ಟಿಸಿದ್ದಂತೂ ಸುಳ್ಳಲ್ಲ.
ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಕುರಿತು ಮಾತನಾಡಿದ ಅಂಬರೀಷ್‌, ಕಾಂಗ್ರೆಸ್ ಪಕ್ಷದ ಪರ ಅಂಬಿ ಬ್ಯಾಟಿಂಗ್ ಮಾಡಿದರು.  ಎರಡೂ ಕ್ಷೇತ್ರಗಳ ಗೆಲುವು ಸಂತಸ ತಂದಿದೆ, ಇನ್ನೂ ಒಂದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ, ಅಭಿವೃದ್ಧಿ ಆಗುತ್ತದೆ ಎಂಬ ಕಾರಣಕ್ಕೆ ಜನ ಗೆಲ್ಲಿಸಿದ್ದಾರೆ. ಇದು ಪ್ರತಿಷ್ಠೆಯ ಮಾತು ಅಲ್ಲ ಎಂದು ಅಂಬರೀಷ್‌ ಅಭಿಪ್ರಾಯ ಪಟ್ಟಿದ್ದಾರೆ.

Comments are closed.

Social Media Auto Publish Powered By : XYZScripts.com