ಕರಗವನ್ನು ಕಣ್ತುಂಬಿಕೊಂಡ ಜನ, ಬೆಂಗಳೂರಿನ ಸಂಭ್ರಮಕ್ಕೆ ಹೂವಿನ ಮೆರವಣಿಗೆ

ವಿಶ್ವಪ್ರಸಿದ್ಧ ಬೆಂಗಳೂರು ಕರಗ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೆ ನಡೆದ ಕರಗ ಶಕ್ತ್ಯೋತ್ಸವಕ್ಕೆ ಲಕ್ಷಾಂತರ ಜನ ಸಾಕ್ಷಿಯಾದರು.

ನಗರತಪೇಟೆಯ ಧರ್ಮರಾಯ ದೇವಸ್ಥಾನದಿಂದ ಕರಗ ಹೊತ್ತ ಜ್ಞಾನೇಂದ್ರ ಸುತ್ತಮುತ್ತಲ ಪ್ರದೇಶಗಳಲ್ಲಿ ಮೆರವಣಿಗೆ ಸಾಗಿದರು. ಮಲ್ಲಿಗೆ ಹೂವಿನ ದೊಡ್ಡ ಕರಗವನ್ನು ತಲೆ ಮೇಲೆ ಹೊತ್ತು ಸಾಗುವ ಆ ಸೊಬಗನ್ನು ದಾರಿಯುದ್ದಕ್ಕೂ ನೆರೆದಿದ್ದ ಜನ ಕಣ್ತುಂಬಿಕೊಂಡರು.

ಬೆಂಗಳೂರು ಕರಗ 11 ದಿನಗಳ ವಿಶಿಷ್ಟ ಆಚರಣೆ. ಏಪ್ರಿಲ್ 3ರಂದು ಧ್ವಜಾರೋಹಣದ ನಂತರ ಪ್ರಾರಂಭವಾದ ವಿವಿಧ ಪೂಜೆಗಳು ಕರದ ತಯಾರಿಗೆ ಮತ್ತಷ್ಟು ಹುರುಪು ತುಂಬಿದ್ದವು. ಮಂಗಳವಾರ ಬೆಳಗ್ಗೆ ಕರಗದಕುಂಟೆಯಲ್ಲಿ ಅರಿಶಿನ ಸ್ನಾನ ನಂತರದ ಬಳೆ ಶಾಸ್ತ್ರ ಮಾಡಿದಾಗ ದೇವಿ ದ್ರೌಪದಿ ಕರಗ ಹೊರುವ ಜ್ಞಾನೇಂದ್ರರ ಮೈಮೇಲೆ ಆವಾಹನೆಯಾಗುತ್ತಾಳೆ ಎನ್ನುವ ನಂಬಿಕೆಯಿದೆ.

ತಿಗಳರ ಜನಾಂಗದವರು ಕರಗ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕರಗ ಉತ್ಸವಕ್ಕಿಂತ 9 ದಿನಗಳ ಮುಂಚಿನಿಂದಲೇ ಉತ್ಸವದಲ್ಲಿ ಪಾಲ್ಗೊಳ್ಳುವ ತಿಗಳ ಸಮುದಾಯದವರು ಒಂದೇ ಹೊತ್ತು ಆಹಾರ ಸೇವನೆ ಮಾಡಿ ಕಟ್ಟುನಿಟ್ಟಾದ ವೃತವನ್ನು ಆಚರಿಸುತ್ತಾರೆ.

ತ್ರಿಪುರಾಸುರನನ್ನು ಕೊಲ್ಲಲು ದ್ರೌಪದಿ ಆದಿಶಕ್ತಿಯ ರೂಪದಲ್ಲಿ ಬಂದಾಗ ತಿಗಳರ ಸಮುದಾಯದವರು ಬೆಂಬಲ ನೀಡಿದ್ದರಂತೆ. ಹಾಗಾಗಿ ಕರಗ ಆಚರಣೆಯಲ್ಲಿ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಇರುತ್ತದೆ. ವರ್ಷಕ್ಕೊಮ್ಮೆ ಹುಣ್ಣಿಮೆಯ ದಿನ ಭೂಮಿಗೆ ಬಂದು ಭಕ್ತರಿಗೆ ದರ್ಶನ ಕೊಡುವ ದ್ರೌಪದಿಯನ್ನು ಕರಗದ ರೂಪದಲ್ಲಿ ಆರಾಧಿಸಲಾಗುತ್ತದೆ.

7 ಮಣ್ಣಿನ ಮಡಿಕೆಗಳನ್ನು ಜೋಡಿಸಿ ಅದನ್ನು ಸಂಪೂರ್ಣವಾಗಿ ಹೂವಿನಿಂದಲೇ ಅಲಂಕರಿಸಲಾಗುತ್ತದೆ. ಕೈಯಿಂದ ಮುಟ್ಟದೇ ತಲೆಯ ಮೇಲೆ ಕರಗ ಹೊತ್ತು ವೀರಕುಮಾರರ ಬೆಂಗಾವಲಿನಲ್ಲಿ ಸಾಗುವ ಕರಗವನ್ನು ನೆರೆದಿದ್ದ ಲಕ್ಷಾಂತರ ಜನ ಕಣ್ತುಂಬಿಕೊಂಡರು.

One thought on “ಕರಗವನ್ನು ಕಣ್ತುಂಬಿಕೊಂಡ ಜನ, ಬೆಂಗಳೂರಿನ ಸಂಭ್ರಮಕ್ಕೆ ಹೂವಿನ ಮೆರವಣಿಗೆ

 • October 18, 2017 at 4:25 PM
  Permalink

  Someone essentially help to make severely articles I would state.
  That is the first time I frequented your website page and to this point?
  I amazed with the analysis you made to create this actual publish amazing.
  Magnificent job!

Comments are closed.