ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಸುಕೃತಾ ವಾಗ್ಲೆ ಅಸಮಾಧಾನ

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಹಳಬರಿಗಿಂತ, ಅದ್ರಲ್ಲೂ ಸ್ಟಾರ್ ನಟರಿಗಿಂತ ಹೆಚ್ಚಾಗಿ ಹೊಸಬರಿಗೇ ಈ ಬಾರಿಯ ಪ್ರಶಸ್ತಿ ಪಟ್ಟಿ ಮಣೆ ಹಾಕಿದೆ. ಆದ್ರೆ ಪ್ರಶಸ್ತಿ ಪಟ್ಟಿ ಒಂದಷ್ಟು ಜನರಲ್ಲಿ ಅಸಮಾಧಾನ ತಂದಿದೆ.

2016ನೇ ಸಾಲಿನಲ್ಲಿ ಮಹಿಳೆಯರನ್ನೇ ಪ್ರಧಾನ ಪಾತ್ರವಾಗಿಸಿದ್ದ ಚಿತ್ರ ಕಿರಗೂರಿನ ಗಯ್ಯಾಳಿಗಳು. ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಕೂಡಾ ಆಗಿತ್ತು. ಅಲ್ಲದೇ ವಿಮರ್ಷಕರ ಮೆಚ್ಚುಗೆಯನ್ನೂ ಪಡೆದಿತ್ತು.

ಇಂತಹಾ ಚಿತ್ರ ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿ ಒಂದೇ ಒಂದು ಪ್ರಶಸ್ತಿಯನ್ನೂ ಪಡೆದಿಲ್ಲ. ಈ ಕುರಿತು ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ಪ್ರಮುಖ ಪಾತ್ರಧಾರಿ ಸುಕೃತಾ ವಾಗ್ಲೆ ಅಸಮಾಧಾನ ಹೊರಹಾಕಿದ್ದಾರೆ. ಪ್ರಶಸ್ತಿ ಗೆದ್ದಿರುವ ಎಲ್ಲರಿಗೂ ಅಭಿನಂದನೆಗಳು. ಆದ್ರೆ 2016ನೇ ಸಾಲಿನಲ್ಲಿ ಅತ್ಯಂತ ಮೆಚ್ಚುಗೆ ಪಡೆದಿದ್ದ ಮಹಿಳಾ ಪ್ರಧಾನ ಚಿತ್ರಕ್ಕೆ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಇಲ್ಲದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಪ್ರಸಿದ್ಧ ಕಾದಂಬರಿಯನ್ನು ತೆರೆ ಮೇಲೆ ತಂದು ಯಶಸ್ವಿಯಾಗಿತ್ತು ಈ ತಂಡ. ಒಂದೇ ಒಂದು ಪ್ರಶಸ್ತಿಯನ್ನೂ ರಾಜ್ಯ ಸರ್ಕಾರ ಗಯ್ಯಾಳಿಗಳಿಗೆ ನೀಡದೇ ಇದ್ದಿದ್ದು ಸುಕೃತಾಗೆ ಬಹಳ ಬೇಸರ ತಂದಿದೆಯಂತೆ. ಹಾಗೆಂದು ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಖಂಡಿತಾ ಒಂದಾದ್ರೂ ಪ್ರಶಸ್ತಿ ಬರಬೇಕಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.

Social Media Auto Publish Powered By : XYZScripts.com