ಯಶಸ್ಸು ಮಾತ್ರವಲ್ಲ, ಲಾಭವನ್ನೂ ಹಂಚಿಕೊಂಡ Dildaar ರಕ್ಷಿತ್ !

ಒಂದು ಸಿನಿಮಾ ಗೆದ್ದರೆ ಅದರ ನಿರ್ಮಾಪಕ ಇಡೀ ಚಿತ್ರತಂಡಕ್ಕೆ ಒಂದು ದೊಡ್ಡ ಪಾರ್ಟಿ ಕೊಡ್ತಾರೆ. ಅದೇ ಚಿತ್ರ 100 ದಿನ ಪೂರೈಸಿದ್ರೆ ದೊಡ್ಡ ಕಾರ್ಯಕ್ರಮ ಮಾಡಿ ಎಲ್ಲರನ್ನೂ ಕರೆದು ಸಂಭ್ರಮಿಸ್ತಾರೆ.

ಆದ್ರೆ ಈ ನಿರ್ಮಾಪಕ ಸ್ವಲ್ಪ ಡಿಫರೆಂಟ್. ಇವರ ಚಿತ್ರ ಗೆದ್ದಿದ್ದಕ್ಕೆ ನಿರ್ದೇಶಕ, ನಟ-ನಟಿಯರು, ಬರಹಗಾರರನ್ನೆಲ್ಲಾ ಒಟ್ಟಾಗಿ ಸಿಂಗಾಪುರ ಟ್ರಿಪ್ ಕರೆದುಕೊಂಡು ಹೋಗಿದ್ರು. ಇನ್ನು ಚಿತ್ರ 100 ದಿನ ಪೂರೈಸಿದ್ದಕ್ಕೆ ಚಿತ್ರ ಮಾಡಿದ ಲಾಭದಲ್ಲಿ ಒಂದಂಶವನ್ನು ಇಡೀ ಚಿತ್ರತಂಡದ ಜೊತೆ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಗಾಂಧಿನಗರದ ಸ್ಟಾರ್ ನಿರ್ಮಾಪಕ ಇವರೇ, ಹೆಸರು ರಕ್ಷಿತ್ ಶೆಟ್ಟಿ.

ನಟ-ನಿರ್ದೇಶಕನಾಗಿ ಗೆದ್ದಿರುವ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ ಮೊದಲ ಚಿತ್ರ ‘ಕಿರಿಕ್ ಪಾರ್ಟಿ’. ಪರಂವಾ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರ ಅತ್ಯಂತ ಕಡಿಮೆ ಬಜೆಟ್ ನಲ್ಲಿ ತಯಾರಿಸಲಾಗಿತ್ತು. ಆದ್ರೆ ಈ ಚಿತ್ರ ಬರೋಬ್ಬರಿ 10 ಪಟ್ಟು ಲಾಭ ಮಾಡಿದೆಯಂತೆ. ಈ ಯಶಸ್ಸು ಕೇವಲ ನನ್ನದು ಮಾತ್ರವಲ್ಲ, ನನ್ನ ಇಡೀ ತಂಡಕ್ಕೆ ಸೇರಬೇಕು ಎನ್ನುವುದು ರಕ್ಷಿತ್ ಅನಿಸಿಕೆ.

ಹಾಗಾಗಿ ಕಿರಿಕ್ ಪಾರ್ಟಿ ಚಿತ್ರದ ಒಟ್ಟು ಲಾಭದಲ್ಲಿ 75%ನಷ್ಟನ್ನು ಪರಂವಾ ಸ್ಟುಡಿಯೋಸ್ ಉಳಿಸಿಕೊಂಡಿದೆ. ಇನ್ನುಳಿದ 25%ನಷ್ಟು ಹಣವನ್ನು ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ದುಡಿದ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ ರಕ್ಷಿತ್. 22 ಲೈಟ್ ಮ್ಯಾನ್ ಗಳು, ಮೇಕಪ್ ಮ್ಯಾ ನ್ ಗಳು, ವಸ್ತ್ರ ವಿನ್ಯಾಸಕರು ಮತ್ತು 8 ಜನ ನಿರ್ಮಾಣ ಸಿಬ್ಬಂದಿ ಸೇರಿದಂತೆ ಒಟ್ಟು 70 ಸದಸ್ಯರಿಗೆ ತಲಾ 50,000 ರೂಪಾಯಿ ನೀಡಿದ್ದಾರೆ ರಕ್ಷಿತ್.

ಹೆಚ್ಚುವರಿ ಕೆಲಸ ಇದ್ದಾಗ ಇವರೆಲ್ಲಾ ಹೆಚ್ಚಿನ ಹಣ ಕೇಳದೇ ಕೆಲಸ ಮಾಡಿದ್ದಾರೆ. ಹಾಗಾಗಿ ಇವತ್ತು ನಾವು ಇಷ್ಟೊಂದು ಲಾಭ ಮಾಡಿರುವಾಗ ಅವರಿಗೂ ಅದರಲ್ಲಿ ಪಾಲಿದೆ ಎನಿಸಿತು. ಆದ್ದರಿಂದ ಈ ನಿರ್ಧಾರ ಕೈಗೊಂಡೆ ಎನ್ನುತ್ತಾರೆ ಈ ಸಿಂಪಲ್ ಸ್ಟಾರ್.

Comments are closed.

Social Media Auto Publish Powered By : XYZScripts.com