Mangalore : ಬಾಹುಬಲಿ ಪ್ರದರ್ಶನಕ್ಕೆ ಆಕ್ರೋಷ : ಕರವೇ ಕಾರ್ಯಕರ್ತರ ಪ್ರತಿಭಟನೆ : ಚಿತ್ರಪ್ರದರ್ಶನ ಸ್ಥಗಿತ..

ಮಂಗಳೂರು:  ಬಾಹುಬಲಿ ಚಿತ್ರಪ್ರದರ್ಶನದ ಹಿನ್ನಲೆಯಲ್ಲಿ, ಐನಾಕ್ಸ್‌ ಚಿತ್ರಮಂದಿರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.    ಮಣಿಪಾಲದಲ್ಲಿರುವ ಐನಾಕ್ಸ್ ಥಿಯೇಟರ್‌ನಲ್ಲಿ ಬಾಹುಬಲಿ ಚಿತ್ರ ಪ್ರದರ್ಶನವಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಕರವೇ ಕಾರ್ಯಕರ್ತರು, ಒಳಗೆ ನುಗ್ಗಲು ಪ್ರಯತ್ನ ಪಟ್ಟರಾದರೂ, ಪೊಲೀಸ್‌ ಸಿಬ್ಬಂದಿ ರಕ್ಷೆಣೆ ನೀಡಿದ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ.  ಇದೇ ತಿಂಗಳು ಬಾಹುಬಲಿ 2 ರಿಲೀಸ್‌ ಆಗಲಿದ್ದು, ಇದರ ಮೊದಲ ಭಾಗವಾದ, ಕಳೆ ವರ್ಷವಷ್ಟೇ ಬಿಡುಗಡೆಯಾಗಿದ್ದ ‘ಬಾಹುಬಲಿ’ ಚಿತ್ರ ಐನಾಕ್ಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿತ್ತು.
ಐನಾಕ್ಸ್‌ ಮುಂದೆ ನಿಂತು ತಮಿಳು ನಟ ಸತ್ಯರಾಜ್ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು, ಕಾವೇರಿ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಸತ್ಯರಾಜ್‌ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಕರವೇ ಕಾರ್ಯಕರ್ತರ ಪ್ರತಿಭಟನೆಯ ಕಾರಣದಿಂದ ಬಾಹುಬಲಿ ಚಿತ್ರಪ್ರದರ್ಶನ ಸ್ಥಗಿತಗೊಂಡಿದೆ.
ಬಾಹುಬಲಿ 2 ಚಿತ್ರ  ಬಿಡುಗಡೆಯ ದಿನ ಹತ್ತಿರ ಬರುತ್ತಿದ್ದು, ಆ ಚಿತ್ರಕ್ಕಾಗಿ ಕಾಯುತ್ತಿರುವ ಸಿನಿರಸಿಕರಿಗೆ, ಶುಕ್ರವಾರ ಕರವೇ ಕಾರ್ಯಕರ್ತರು ಬಾಹುಬಲಿ ೧ ಚಿತ್ರಪ್ರದರ್ಶನ ನಿಲ್ಲಿಸಲು ಮಾಡಿರುವ ಈ ದಾಂಧಲೆ, ಎಚ್ಚರಿಕೆಯ ಕರೆಗಂಟೆಯಾಗಿದೆ.