ಸಖೀಗೀತ-11 : ಹೊಸ ನದಿಯ ಹರಿವು (ಭಾಗ-2)

ಮುಟ್ಟು, ಬಸಿರು, ಬಾಣಂತನಗಳನ್ನು ‘ಮೈಲಿಗೆ’ಯಾಗಿಸಿ ಹೆಣ್ಣು ತನ್ನ ದೇಹದ ಕುರಿತು ಕೀಳರಿಮೆ, ಕಸಿವಿಸಿಯನ್ನು ಅನುಭವಿಸುವಂತೆ ಮಾಡಿದ್ದು, ಹೆಣ್ಣಿನ ಅನುಭವವನ್ನು ‘ಅನ್ಯ’ವಾಗಿ ‘ಅಮುಖ್ಯ’ವಾಗಿ ಕಾಣುವ ಅದೇ ಪ್ರಧಾನ ನೆಲೆ. ಅಂಥ ನೆಲೆಯಲ್ಲಿ ಹೆಣ್ತನದ ಅನುಭವಗಳನ್ನು ಬಿಡುಬೀಸಾಗಿ ಅಭಿವ್ಯಕ್ತಿಸುವ ಮೂಲಕ ಅದನ್ನು ಘನವಾಗಿಸಿದ ಲೇಖಕಿಯರು ಸ್ತ್ರೀಸಂವೇದನೆಗೆ ಹೊಸ ಆಯಾಮವನ್ನು ತೆರೆದಿದ್ದಾರೆ. ಈ ನೆಲೆಯಲ್ಲಿ ಪ್ರತಿಭಾ ನಂದಕುಮಾರ್ ಹಾಗೂ ಲಲಿತಾ ಸಿದ್ಧಬಸವಯ್ಯ ಅವರ ಬರಹಗಳು ಶಕ್ತಿಶಾಲಿಯಾಗಿವೆ. ಅವು ತೀವ್ರ ಸಂವೇದನೆಯಿಂದ ಕೂಡಿದ್ದು ಹೊಸ ಕಾವ್ಯಮೀಮಾಂಸೆಯೊಂದನ್ನು ರೂಪಿಸುವಷ್ಟು ಪ್ರಬಲವಾಗಿವೆ. ಪ್ರತಿಭಾ ನಂದಕುಮಾರ್ ಅವರ ‘ಹೆಣ್ಣು ಮತ್ತು ರಕ್ತ’ ಕವಿತೆ ಹೆಣ್ಣಿನ ಇಡೀ ಬದುಕನ್ನು ಆಧರಿಸಿದ ರಕ್ತದ ಕಥೇ ಹೇಳುತ್ತ ‘ರಕ್ತಸಂಬಂಧ’ ಉಲ್ಲೇಖದಲ್ಲಿಕೊನೆಯಾಗುತ್ತದೆ. ಈ ಜಗತ್ತೇ ರಕ್ತಸಂಬಂಧದ ಫಲವಾಗಿರುವಾಗ, ಹೆಣ್ಣು ಬಸಿದ ಈ ರಕ್ತದಲ್ಲೇ ಲೋಕ ಜನಿಸಿರುವಾಗ, ರಕ್ತವೆಂಬುದು ಮೈಲಿಗೆಯ ಸಂಗತಿಯಾಗಲಾರದು. ಪುರುಷಪ್ರಧಾನ ವ್ಯವಸ್ಥೆ ಪ್ರತಿಪಾದಿಸುವ ವಂಶಪಾವಿತ್ರ್ಯದ ಕಲ್ಪನೆ ಕೂಡ ಹೆಣ್ಣನ್ನೇ ಅವಲಂಬಿಸಿದೆ. ಅವನ ಪ್ರತಿಷ್ಠೆ ಅವಳ ರಕ್ತದಲ್ಲಿದೆ ಎಂಬುದನ್ನು ಧ್ವನಿಪೂರ್ಣವಾಗಿ ಹೇಳುವ ಕವಿತೆ ತಣ್ಣಗಿನ ವ್ಯಂಗ್ಯದಲ್ಲಿ ಮೂಡಿದ ಹರಿತವಾದ ಅಭಿವ್ಯಕ್ತಿಯಾಗಿದೆ.

 

ಸ್ರಾವ ನಿಲ್ಲುವುದೂ ದೊಡ್ಡ ವಿಷಯ
ನಿಂತಿದೆ ಅರದ ಮೇಲೆ ಮನೆತನಗಳು
ಉರುಳಿವೆ ಸಾಮ್ರಾಜ್ಯಗಳು
ಭೀಕರ ಕದನಗಳಿಗೆ ಕಾರಣವಾಗಿ
ಮುರಿದಿವೆ ಸಂಬಂಧಗಳು ಮನಸುಗಳು……

ನಿಂತದ್ದೇ ನಿಜವಾದ ದಿನ
ಭೂತಭವಿಷ್ಯಗಳು ಕೂಡಿಕೊಳ್ಳುವಗಳಿಗೆ
ಕಾದು, ಹತ್ತುಕಡಲದಡ ಅಲ್ಲಾಡಿಸಿ
ಮಥಿಸಿದ ಬೆಣ್ಣೆಯಂತೆ ಒಳಗಿನಿಂದ
ಹೆಪ್ಪುಗಟ್ಟಿದ್ದೆಲ್ಲ ಬಳಬಳಿಸಿ ಹೊರಗೆ
ಹರಿದು ಬರುವಾಗ ರಾಮಾ ರಕ್ತ ಕೆಂಪು…….
(ಹೆಣ್ಣು ಮತ್ತು ರಕ್ತ, ಪ್ರತಿಭಾ ನಂದಕುಮಾರ)

ಮುಟ್ಟುನಿಲ್ಲುವ ಅವಧಿ ಹೆಣ್ಣಿನ ಪಾಲಿಗೆ ಬಹುಸೂಕ್ಷ್ಮ ಅವಧಿಯೂ ಹೌದು. ಆ ದೈಹಿಕ ಸಂಕಟ, ಮಾನಸಿಕ ಕಸಿವಿಸಿ, ಆತಂಕಗಳು ಅವಳನ್ನು ತೀವ್ರವಾಗಿ ಹಿಂಡಿ ಕೊನೆಯಾಗುತ್ತವೆ. ಅದು ಭೂತ-ಭವಿಷ್ಯಗಳು ಕೂಡಿಕೊಳ್ಳುವ ಘಳಿಗೆ. ಹೆಣ್ಣು ದೇಹದ ಸುತ್ತಲಿನ ಹಲವು ಸಂಕಟಗಳು ಕೊನೆಯಾಗುತ್ತ ಜೀವನವು ಒಂದು ಮಜಲನ್ನು ದಾಟುತ್ತದೆ. ಹಲವು ಸೂಕ್ಷ್ಮ ಅನುಭವಗಳನ್ನು ಕಟ್ಟಿಕೊಡುವ ಕವಿತೆ ಸ್ತ್ರೀಸಂವೇದನೆಯ ಮಜಲುಗಳನ್ನು, ಅದರ ‘ದಾಟು’ವಿಕೆಗಳನ್ನು ಅನನ್ಯವಾಗಿ ಕಟ್ಟಿದೆ. ಮುಟ್ಟು ನಿಲ್ಲುವ ಕ್ಷಣದೊಂದಿಗೆ ಅದರ ಸುತ್ತ ಕಟ್ಟಲ್ಪಟ್ಟ ಪೂರ್ವಗ್ರಹಗಳೂ ಕಳಚಿ ಬೀಳುವ ಕ್ಷಣಗಳನ್ನು ಲಲಿತಾ ಸಿದ್ಧಬಸವಯ್ಯನವರ ‘ಇರುಮುಡಿ’ ಕವಿತೆ ದಾಖಲಿಸುತ್ತದೆ. ಪ್ರಕೃತಿಯ ಅಗಾಧ ಸೃಷ್ಟಿಶಕ್ತಿಯನ್ನು, ಅದರ ನಿಗೂಢತೆಯನ್ನು ಕಂಡು ಭಯಗ್ರಸ್ಥನಾದ ಪುರುಷ ಹೆಣ್ಣನ್ನು ‘ಮಾಯೆ’ಯೆಂದು ದೂರವಿರಿಸುತ್ತ ಬಂದಿದ್ದಾನೆ. ಒಂದುಸಲ ಈ ಮುಟ್ಟು ನಿಂತರೆ ಪುರುಷನಿಗೆ ಭಯವಿಲ್ಲವೆಂಬ ವ್ಯಂಗ್ಯ ಮೇಲ್ನೋಟಕ್ಕೆ ಸರಳವೆನಿಸಿದರೂ, ಕವಿತೆಯಲ್ಲಿ ಅದು ತೀವ್ರವಾಗಿ ಮೂಡಿದೆ. ದೇವರು ಧರ್ಮಗಳನ್ನೂ ಬಳಸಿಕೊಂಡು ಹೆಣ್ಣನ್ನು ನಿರಾಕರಿಸುವ ಸಾಂಸ್ಕøತಿಕ ಹುನ್ನಾರವನ್ನು ವ್ಯಂಗ್ಯವಾಗಿ ಛೇಡಿಸುತ್ತ ಕೊನೆಗೆ ತಾಯ್ತನದ ಘನತೆಯನ್ನು ಸ್ಥಾಪಿಸುವ ಕವಿತೆ ಸ್ತ್ರೀಸಂವೇದನೆಯ ಸ್ವಾಯತ್ತ ನೆಲೆಯಿಂದ ಹೊರಟ ಅಭಿವ್ಯಕ್ತಿ.

ಸದ್ಯ ಮುಗಿಯಿತು
ಶಬರಿಮಲೆ ಹುಡುಗ ದೇವರಿಗೆ ದರ್ಶನ ಕೊಡಬಹುದು
ಅದು ಪಾಪ, ಬೆಟ್ಟದ ಮೇಲೂ ಹದಿನೆಂಟು ಮೆಟ್ಟಿಲು ದೂರ ಕೂತಿದೆ
ಹೆಂಗಸರಿಗೆ ಹೆದರಬೇಡವೊ ಮರಿ
ಅಂಡಪಿಂಡಬ್ರಹ್ಮಾಂಡವೆಂದರೆ ಇಷ್ಟೆ ಹೆಂಗಸರ ಹೊಟ್ಟೆ
ಹುಲಿತಾಯಿ ಆಗಿನ್ನು ಈಯ್ದಿತ್ತು ಹತ್ತಿಕೂತು ನೀನು ವೀರನಾಗಿಬಿಟ್ಟೆ
(ಇರುಮುಡಿ, ಲಲಿತಾ ಸಿದ್ಧಬಸವಯ್ಯ)

ಪುರುಷಾಹಂಕಾರವನ್ನು ಅದರ ಎಲ್ಲ ನೆಲೆಗಳಲ್ಲಿ ಭಂಜಿಸುವ ಕವಿತೆ, ಪ್ರಕೃತಿಗೆ ಹತ್ತಿರವಾದ ಸ್ತ್ರೀತ್ವವನ್ನು ಎತ್ತರದಲ್ಲಿ ನಿಲ್ಲಿಸುತ್ತದೆ. ಪ್ರಕೃತಿಯನ್ನು ತನ್ನ ಪೌರುಷದಿಂದ, ಬೌದ್ಧಿಕ ಅಹಂಕಾರದಿಂದ ಹಿಡಿದಿಡಲು ನೋಡುವ ಪುರುಷನಿಗೆ ಪ್ರಕೃತಿ ‘ಜ್ಞಾನ’ವನ್ನು ಮೀರಿದವಳು, ‘ಬೌದ್ಧಿಕತೆಗೆ’ ಎಟುಕದವಳು ಎಂಬ ಚಿಂತನೆಯ ಮೂಲಕ ಉತ್ತರ ನೀಡುತ್ತದೆ.

ಸ್ತ್ರೀಸಂವೇದನೆಯ ಎಚ್ಚರವನ್ನು ಎಪ್ಪತ್ತರ ದಶಕದಲ್ಲಿ ಪಶ್ಚಿಮದ ಸ್ತ್ರೀವಾದಿ ಚಿಂತನೆಗಳ ಮೂಲಕ ಪಡೆದ ಆಧುನಿಕೋತ್ತರ ಮಹಿಳಾಕಾವ್ಯವು ಅದನ್ನು ಇತ್ತೀಚಿನ ವರ್ಷಗಳಲ್ಲಿ ಹಲವು ನೆಲೆಗಳಲ್ಲಿ ವಿಸ್ತರಿಸಿಕೊಳ್ಳುತ್ತ ನಡೆದ ನಡೆ ಗಮನಾರ್ಹವಾದುದು. ದೇಸೀಯ ಅನುಭವ, ದೇಸೀಯ ಸತ್ವಗಳನ್ನು ಅದು ಒಳಗೊಳ್ಳುತ್ತ ನಡೆದ ಪರಿಯನ್ನು ಮತ್ತೆಮತ್ತೆ ಪ್ರತಿಭಾ ನಂದಕುಮಾರ್ ಹಾಗೂ ಲಲಿತಾ ಸಿದ್ಧಬಸವಯ್ಯರವರ ಮೂಲಕ ಕಾಣಬಹುದು. ಈ ನೆಲೆಯಲ್ಲಿ ಇನ್ನೊಂದು ಪ್ರಮುಖ ದಾರಿಯನ್ನು ತೆರೆದು ತೋರಿದವರು ಕನ್ನಡದ ಶ್ರೇಷ್ಠ ಕತೆಗಾರ್ತಿಯೂ ಆಗಿರುವ ವೈದೇಹಿ. ಪ್ರಕೃತಿಯ ಲಯದೊಂದಿಗೆ ತಾದಾತ್ಮ್ಯ ಸಾಧಿಸಿದಂತಹ ವಿಶಿಷ್ಟ ಪ್ರತಿಭೆಯಿಂದ ಬರೆಯುತ್ತಿರುವ ಸವಿತಾ ನಾಗಭೂಷಣ ಹೆಣ್ಣುತನದ ಬಗ್ಗೆ ಬೌದ್ಧಿಕವಾಗಿ ಮಾತನಾಡದೇ ಹೆಣ್ತನದಿಂದ ದಕ್ಕಿದ ಅರಿವಿನ ಪಕ್ವತೆಯಲ್ಲಿ ಲೋಕವನ್ನು ಕಾಣುತ್ತ, ಕಟ್ಟುತ್ತಲಿದ್ದಾರೆ. ಈ ನೆಲದ ಹಾಡು, ತೊಗಲು ಗೊಂಬೆಯ ಆತ್ಮಕತೆ, ಹವಳ ಹಾರಿದ ಹೊತ್ತು ಮುಂತಾದ ಕವನ ಸಂಕಲನಗಳ ಮೂಲಕ ಸ.ಉಷಾ ಉಂಟು ಮಾಡಿದ ಗಾಢ ಪರಿಣಾಮ ಕೂಡಾ ಸ್ತ್ರೀ ಸಂವೇದನೆಯ ಅಭಿವ್ಯಕ್ತಿಯ ವಿಸ್ತಾರಕ್ಕೆ ಕಾರಣವಾಗಿದೆ. ಹೇಮಾ ಪಟ್ಟಣಶೆಟ್ಟಿ, ಚ.ಸರ್ವಮಂಗಳಾ, ಎನ್.ವಿ.ಭಾಗ್ಯಲಕ್ಷ್ಮಿ, ಶಶಿಕಲಾ ವೀರಯ್ಯಸ್ವಾಮಿ, ಎಚ್.ಎಸ್.ಮುಕ್ತಾಯಕ್ಕ ಮುಂತಾದವರು ಅಸ್ಮಿತೆಯ ಪ್ರಶ್ನೆಗಳನ್ನು ಕಾವ್ಯಾತ್ಮಕ ಸಾಧ್ಯತೆಯ ಮೂಲಕ ನಿರೂಪಿಸಿದ್ದಾರೆ. ನಂತರದ ತಲೆಮಾರಿನ ವಿನಯಾ, ತಾರಿಣಿ ಶುಭದಾಯಿನಿ, ಜ.ನಾ.ತೇಜಶ್ರಿ, ರೂಪ ಹಾಸನ, ಶ್ರೀದೇವಿ ಕಳಸದ, ಭಾರತಿದೇವಿ, ಅನಸೂಯಾ ಕಾಂಬಳೆ, ಮುಂತಾದವರು ತಮ್ಮದೇ ಸ್ವರಗಳನ್ನು ಸೇರಿಸುವ ಮೂಲಕ ಸ್ತ್ರೀಸಂವೇದನೆಯಿಂದ ಮೂಡಿದ ಹೊಸ ಸಂಕಥನವನ್ನು ಕಟ್ಟುತ್ತಲಿದ್ದಾರೆ. ಆಧುನಿಕೋತ್ತರ ಕಾವ್ಯ ಜಗತ್ತನ್ನು ಕವಯಿತ್ರಿಯರು ಯಾವ ಪರಿ ಆವರಿಸಿಕೊಂಡಿದ್ದಾರೆಂದರೆ ಎಲ್ಲರನ್ನೂ ಈ ಲೇಖನದ ಮಿತಿಯಲ್ಲಿ ಒಳಗು ಮಾಡಲು ಸಾಧ್ಯವಾಗದ ಅನಿವಾರ್ಯತೆಯುಂಟಾಗಿದೆ. ಇಂಥ ಸ್ವಾಯತ್ತ ಹಾಗೂ ಸೃಜನಾತ್ಮಕ ನೆಲೆಯನ್ನು ಹೀಗೆ ಗುರುತಿಸಬಹುದು.

1. ಪುರಾಣಗಳಲ್ಲಿರುವ ಸ್ತ್ರೀಸಮೃದ್ಧತೆಯ ರಚನೆಗಳನ್ನು ಗುರುತಿಸುವುದು ಹಾಗೂ ಅದನ್ನು ಹೊಸಹೆಣ್ಣಿನ ಸಾಧ್ಯತೆಯಾಗಿ ಬಳಸಿಕೊಳ್ಳುವುದು.
2. ಜಾನಪದ ಬದುಕಿನ ಕ್ರಮದಲ್ಲಿರುವ ಸತ್ವಶಾಲಿ ಸ್ತ್ರೀತ್ವದ ಅನುಭವವನ್ನು ಮುನ್ನೆಲೆಗೆ ತರುವುದು. ಅದರಲ್ಲಿರುವ ಜೀವಪರತೆಯನ್ನು ಕೇಂದ್ರಕ್ಕೆ ತರುವುದು.
3. ಹೆಣ್ಣಿನ ಅನುಭವಗಳ ಅಲಕ್ಷಿತ ಲೋಕವನ್ನು ಹೊಸ ಬೆಳಕಿನಲ್ಲಿ ಕಾಣಿಸುವುದು. ಅದಕ್ಕೊಂದು ಘನತೆಯನ್ನು ತಂದುಕೊಡುವುದು.
4. ಹೆಣ್ಣಿನ ಸುಪ್ತಮನಸ್ಸಿನ ರಾಗಗಳನ್ನು ಮೀಟಿ ಅವು ಎಷ್ಟು ಶಕ್ತಿಶಾಲಿಯೆಂಬುದನ್ನು ರೂಪಕಗಳ ಮೂಲಕ ಅಭಿವ್ಯಕ್ತಿಸುತ್ತ ಹೆಣ್ಣುಭಾಷೆಯೊಂದನ್ನು ಸೃಷ್ಟಿಸುವತ್ತ ತುಡಿಯುವುದು.
5. ಶ್ರಮಿಕ ಮಹಿಳೆಯರ ಅಂತಃಶಕ್ತಿಯನ್ನು ಹೊಸ ಅರಿವಿನಲ್ಲಿ ಕಾಣುತ್ತ ಹೊಸ ಸಾಮಾಜಿಕ ನೀತಿಸಂಹಿತೆಯೊಂದನ್ನು ಕಟ್ಟುವುದು. ಹೊಸ ರಾಜಕೀಯ ನಿಲುವನ್ನು ಮಂಡಿಸುವುದು.
6. ಸ್ತ್ರೀಸಂವೇದನೆಯ ಮೂಲಕ ಹೊರಹೊಮ್ಮಿದ ‘ಟೂಲ್’ಗಳ ಮೂಲಕ ವ್ಯವಸ್ಥಿತ ‘ಜ್ಞಾನ’ ಮಾದರಿಗಳನ್ನು ನಿರಾಕರಿಸಿ ಹೊಸ ‘ದರ್ಶನ’ವನ್ನು ಕಟ್ಟುವುದು. ಲೋಕಗ್ರಹಿಕೆಯ ಹೊಸ ನೋಟವನ್ನು ಹೊಂದುವುದು.

ಇಂಥ ಹಲವು ಪ್ರವೃತ್ತಿಗಳನ್ನು ಸ್ಥೂಲವಾಗಿ ಗುರುತಿಸಲು ನಾನಿಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ಮಹಿಳಾಕಾವ್ಯವನ್ನು ಇಷ್ಟಕ್ಕೇ ಸೀಮಿತಗೊಳಿಸಲು ಸಾಧ್ಯವಿಲ್ಲ. ಹೆಣ್ಣು ಮತ್ತು ಕಾವ್ಯ ಎರಡೂ ಒಂದೇ! ಏಕೆಂದರೆ, ಎರಡೂ ಸ್ವಭಾವದಲ್ಲಿ ಜಂಗಮವಾದವುಗಳು. ಬಗೆದಷ್ಟೂ ನಿಗೂಢಗಳನ್ನು ಒಳಗಿರಿಸಿಕೊಂಡಂಥವು. ಬಹುಸ್ವರಗಳನ್ನು ಮಿಡಿಯುವಂಥವು. ಭಾರತೀಯ ಶಾಕ್ತಪರಂಪರೆಯ ಪಠ್ಯಗಳು, ಆಚರಣೆಗಳು, ದೇವೀಪುರಾಣಗಳು, ಮಾತೃಪ್ರಧಾನ ಜೀವನಕ್ರಮ ಹಾಗೂ ಆರಾಧನಾ ಕ್ರಮಗಳು ಹೆಣ್ಣಿನ ಸ್ವಾಯತ್ತತೆಯನ್ನು ಪ್ರತಿಷ್ಠಾಪಿಸುತ್ತವೆ. ಸಂಸ್ಕøತಿಯ ಒಳಧಾರೆಗಳಲ್ಲಿ ಈ ಮೂಲರೂಪಿಕೆಗಳು ಇಂದಿಗೂ ಉಸಿರಾಡುತ್ತಿವೆ. ಪಶ್ಚಿಮದ ಕೆಲವು ಚಿಂತಕಿಯರೂ ಇದನ್ನು ಪ್ರತಿಪಾದಿಸಿದ್ದಾರೆ. ಹೆಣ್ಣುದೇಹ, ಹೆಣ್ತನ, ಹೆಣ್ಣುಅನುಭವ ಹಾಗೂ ಅದರ ಸ್ವಾಯತ್ತಶಕ್ತಿಗಳು ಪರಸ್ಪರ ಆಂತರಿಕ ಸಂಬಂಧವುಳ್ಳವು. ಇದನ್ನು ‘ಕಾಣಿಸುವಂಥ’ ಕಾವ್ಯವು ಇತ್ತೀಚೆಗೆ ತೀರ ವಿರಳವಾಗಿಯಾದರೂ ಬರುತ್ತಿವೆ. ಸ್ತ್ರೀಸಂವೇದನೆಯ ಅನನ್ಯ ಸ್ವರೂಪವನ್ನು ಅಭಿವ್ಯಕ್ತಿಸಲು ಭಾಷೆಯೂ ಹದಗೊಳ್ಳಬೇಕಿದೆ. ಯಾಕೆಂದರೆ ಇದುವರೆಗೂ ಸಿದ್ಧಗೊಂಡ ಭಾಷೆಯಲ್ಲಿ ಅವೇ ಅರ್ಥದ ಸಿದ್ಧ ಚೌಕಟ್ಟುಗಳು, ಸಿದ್ಧ ಅನುಭವದ ಜಾಡುಗಳು ಹೆಪ್ಪುಗಟ್ಟಿವೆ. ಪಶ್ಚಿಮದ ಸ್ತ್ರೀವಾದಿ ಚಿಂತಕಿ ಕ್ರಿಸ್ಟೆವಾಳ ಪ್ರಕಾರ “ಕಾವ್ಯ ಎನ್ನುವುದು ವಿಶೇಷ ಪುರಸ್ಕøತ ಸ್ಥಲ. ಏಕೆಂದರೆ ವೈಚಾರಿಕ ವ್ಯವಸ್ಥೆಯ ಆಚೆಗೆ ಇರುವ ಮೂಲಭೂತ ಪ್ರವೃತ್ತಿಗಳಿಗೆ ಯಾವುದೇ ಭಯ ಅಥವಾ ಸಂಕೋಚಗಳಿಲ್ಲದೆ ತನ್ನನ್ನು ತಾನು ಕೊಟ್ಟುಕೊಂಡಿದೆ”. (ಭಾರತೀಯ ಸ್ತ್ರೀವಾದ, ಸಂ: ಮನು ಚಕ್ರವರ್ತಿ, ಪು.23) “ಕ್ರಿಸ್ಟೆವಾ ಸ್ತ್ರೀಯಾತ್ಮಕ ಅಭಿವ್ಯಕ್ತಿಯ ನೆಲೆಯನ್ನು ‘ಸಂಜ್ಞಾತ್ಮಕ’ ಹಾಗೂ ‘ಸಂಕೇತಾತ್ಮಕ’ ಎಂದು ವರ್ಗೀಕರಣ ಮಾಡುತ್ತಾಳೆ. ಭಾಷೆಯ (ಮಾತಿನ) ಪ್ರಜ್ಞಾಪೂರ್ವಕ ವೈಚಾರಿಕ ವ್ಯವಸ್ಥೆಯಾಚೆ ಸ್ತ್ರೀದೇಹಕ್ಕೆ ಸಂಬಂಧಿಸಿದ ಸಂವೇದನೆಯನ್ನು ಸಂಜ್ಞಾತ್ಮಕವೆಂದೂ, ಪಿತೃಪ್ರಧಾನ ಗ್ರಹಿಕೆಯ ಮೂಲಕ ವ್ಯವಸ್ಥಿತವಾಗಿ ರೂಪುಗೊಂಡ ದಮನಕಾರಿ ವ್ಯವಸ್ಥೆಯನ್ನು ಸಂಕೇತಾತ್ಮಕವೆನ್ನುತ್ತಾಳೆ. ಸಾಂಕೇತಿಕ ವ್ಯವಸ್ಥೆಯ ಹೊರಗಿರುವುದೇ ಹೆಂಗಸು. ವೈಚಾರಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಾಧ್ಯತೆ ಅವಳ ಅಭಿವ್ಯಕ್ತಿಗಿದೆ. ಅಥವಾ ಸ್ವತಃ ಅವಳಲ್ಲಿದೆ. ಸ್ತ್ರೀ ಅನುಭವ ಭಾಷೆಯಲ್ಲಿ ರೂಪುತಳೆಯುವುದಕ್ಕೂ ಮುಂಚಿನ ಸುಪ್ತಪ್ರಜ್ಞೆಯಿದ್ದಂತೆ” (ಅದೇ, ಪು.23). ರೆವಲ್ಯೂಷನ್ ಇನ್ ಪೊಯೆಟಿಕ್ ಲ್ಯಾಂಗ್ವೇಜ್ ಎನ್ನುವ ಕೃತಿಯಲ್ಲಿ ಕ್ರಿಸ್ಟೆವಾ ಇದನ್ನು ಚರ್ಚಿಸುತ್ತಾಳೆ. ಇಂತಹ ಪ್ರವೃತ್ತಿಯನ್ನು ಪ್ರಕಟಿಸುವ ಕವಿತೆಗಳು ಆಧುನಿಕೋತ್ತರ ಮಹಿಳಾಕಾವ್ಯದಲ್ಲಿ ಮುಂದುವರೆಯುತ್ತಲಿವೆ. ಚಂಚಲತೆ, ಮಾಯೆ, ಅತಾರ್ಕಿಕತೆ ಮುಂತಾದ ಸ್ವಭಾವಗಳನ್ನು ಹೆಣ್ಣಿನ ಸಂದರ್ಭದಲ್ಲಿ ಮಿತಿಯಾಗಿ, ವಿಘ್ನಗಳಾಗಿ ಕಾಣದೇ ಅದನ್ನು ಅವಳ ಸ್ವಾಯತ್ತ ಶಕ್ತಿಯಾಗಿ ಕಾಣುವ ಹೊಸ ಸಂವೇದನೆಯ ಎಚ್ಚರ ಇದುವರೆಗೂ ಅವಳನ್ನು ಕಾಣುತ್ತ ಬಂದ ಮಾನದಂಡಗಳನ್ನು ಬದಲಿಸುವಂತೆ ಮಾಡಿದೆ. ಧರ್ಮ, ಜಾತಿ, ವರ್ಗಗಳನ್ನು ಮೀರಿ ‘ಹೆಣ್ತನ’ವನ್ನೇ ಸ್ವಾಯತ್ತ ಶಕ್ತಿಯ ನೆಲೆಯಾಗಿ ಕಾಣುವ ಅಂತರ್‍ದೃಷ್ಟಿ ‘ಸ್ತ್ರೀ ಸಂವೇದನೆಯ’ ನೆಲೆಗಳಿಗೆ ಹೊಸ ಚೈತನ್ಯ ನೀಡಿದೆ. ಅದು ರಾಜಕೀಯ ನೆಲೆಗೂ ವಿಸ್ತರಿಸಿದಾಗ ಜೀವಪರವಾದ ಹೊಸಬದುಕೊಂದು ಅರಳಬಹುದೆಂಬ ಆಶಾವಾದ ನಮ್ಮದು. ಹೊಸ ಗ್ರಹಿಕೆ, ಹೊಸ ಭರವಸೆಯೊಂದಿಗೆ ಅಂಥ ಕೆಲವು ಮಾದರಿಗಳನ್ನು ಮಂಡಿಸುವ ಮೂಲಕ ಈ ಲೇಖನವನ್ನು ಮುಗಿಸುತ್ತೇನೆ.

ಇಲ್ಲ
ಒಂದೇ ಒಂದು ಶಬ್ದವೂ ಇಲ್ಲ
ನಿಮ್ಮ ಪದಕೋಶದಲಿ
ನನ್ನ ಬಣ್ಣಿಸಲು
ನಿಜ ಅರ್ಥ ಅರುಹಲು
ನಿಮ್ಮ ಪುರುಷ ಸೂಕ್ತದಲಿ
(ನಿಮ್ಮ ಪುರುಷ ಸೂಕ್ತದಲಿ, ಹೇಮಾ ಪಟ್ಟಣಶೆಟ್ಟಿ)

ಯೋನಿಚಕ್ರದ ಮೂರು ತ್ರಿಕೋಣಗಳು ಕೆಳಗಿಳಿದರೆ
ನಾಲ್ಕು ಮೇಲಕ್ಕೆದ್ದು ಸುತ್ತ ಪದ್ಮದಳ ಹದಿನಾರು ಹರಡಿದ
ಭವದ ಹೊದಿಕೆಗೂ ಬಂಧ ಬದಲಾಗಬಾರದು ಬಣ್ಣವೂ
(ಭವ ಬಿಂದು ಯೋನಿಚಕ್ರ ಇತ್ಯಾದಿ, ಪ್ರತಿಭಾ ನಂದಕುಮಾರ್)

ಬಾಲ್ಯ ಯೌವನ ವೃದ್ಧಾಪ್ಯ ನೆರಳುಗಳು
ಸೋರಿಕೊಂಡಿರಬಹುದು ಆ ಕೋಶದಲ್ಲಿ
ಗಾರ್ಹಸ್ಥ್ಯ ವೇಶ್ಯಾ ಅಭಿಸಾರ ವಾಸನೆಗಳು
ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ
ಒಂದುಕೊಂದಕೆ ಅರ್ಥಾರ್ಥವಿಲ್ಲದೆಯೂ
ಇಲ್ಲವೇ ಹಲವು ಜೊತೆಗಳು
ಹಾಗೆಯೇ ಈ ಚೀಲದೊಳಗಿನ ಲೋಕಗಳು
…………………….
ಮನಸಿನೊಳಗಡೆ ಎಂದೂ
ಇಣುಕಲಾರಿರಿನೀವು. ಹುಡುಕಿ
ತೆಗೆಯಲಾರಿರಿ ಏನನೂ
ಇಣುಕಲಾದರೂ ಹಾಗೆ ಮಾಡಲಾಗದು ನೀವು
ಚೀಲದೊಳಗಿನ ತಿರುಳನು
ಹುಡುಕಿ ತೆಗೆಯಲಾದರೂ ಹಾಗೆ
ಮಾಡಲಾಗದು ನೀವು
ನೋಡಬಾರದು ಚೀಲದೊಳಗನು
(ನೋಡಬಾರದು ಚೀಲದೊಳಗನು, ವೈದೇಹಿ)

ದೇವರೇ,
ನಮಗೆ ಗೊತ್ತಿಲ್ಲ ಇದರ ಲಿಪಿ
ನಮ್ಮ ಅಂಗೈಗಳ ನೇವರಿಕೆಯಲ್ಲಿ
ನಮ್ಮ ತೋಳುಗಳ ಬಿಗಿ ಮಡಿಕೆಯಲ್ಲಿ
ನಮ್ಮ ತೊಡೆಗಳು ರಚಿಸುವ ತೊಟ್ಟಿಲ ತಗ್ಗಿನಲ್ಲಿ
ನಮ್ಮ ಹಾಲುದುಂಬಿದ ಮೊಲೆಗಳಲ್ಲಿ
ಅದಕ್ಕೂ ಮೊದಲು ಮಾಂಸಮಜ್ಜೆಯ ಗರ್ಭಚೀಲದಲ್ಲಿ
ನಾವು ನಿನ್ನನ್ನು ಅನುವಾದಿಸುತ್ತಿರುತ್ತೇವೆ
ಮೂಲಕೆ ಸದಾ ಸನಿಹವಾಗಿ
ನಿನ್ನ ಆಶಯಗಳಿಗೆ ಸದಾ ಬದ್ಧರಾಗಿ
(ಧನ್ಯವಾದಗಳು, ಲಲಿತಾ ಸಿದ್ಧಬಸವಯ್ಯ)

ಹಿಡಿಯಷ್ಟಿರುವ ತಂಗಿಯನು
ಮುಡಿಯಷ್ಟಿರುವ ಅಕ್ಕ
ಅಕ್ಕರೆಯಿಂದ ಅಪ್ಪುವಳು
ಅಭಯ ನೀಡುವಳು
(ತಂಗಿ ಹುಟ್ಟಿದಳು, ಸವಿತಾ ನಾಗಭೂಷಣ)

ಒಂದಲ್ಲ ಒಂದು ದಿನ
ಈ ನೆಲದ ತುಂಬ ಹೆಣ್ಣುಗಳು
ಮೆರವಣಿಗೆ ಹೊರಡುತ್ತಾರೆ
ದೇಹದ ಗುಂಟ ಹರಿದ
ನೆತ್ತರಿನ ಚರಿತೆ ತೊಳೆಯಲು
ಹೊಸನದಿಯ ಹುಡುಕಿ ನಡೆಯುತ್ತಾರೆ.
(ಹೊಸನದಿಯ ಹುಡುಕಿ, ವಿನಯಾ)

****

Comments are closed.