By election : ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ : ಸಿಎಂ…

 

ಗುಂಡ್ಲುಪೇಟೆ : ಹೆಣ್ಣು  ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಬಿಜೆಪಿಯವರಿಗೆ ಸಂಸ್ಕೃತಿ ಎಂಬುದೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಹರವೆ ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತೂ ಗೌರವ ಇಲ್ಲ ಎಂದರು.

ನಮ್ಮ ಪಕ್ಷದ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರ ಬಗ್ಗೆ ಬಿಜೆಪಿ ನಾಯಕರು ಕೆಟ್ಟದಾಗಿ ಮಾತನಾಡಿದ್ದಾರೆ. ಪತಿ ಕಳೆದುಕೊಂಡು ದುಖಃದಲ್ಲಿರುವ ಒಬ್ಬ ಮಹಿಳೆ ಕುರಿತು ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು. ಚುನಾವಣಾ ಕಣಕ್ಕಿಳಿಯಲು ಗೀತಾ ಮಹದೇವ ಪ್ರಸಾದ್ ಅವರು ಆರಂಭದಲ್ಲಿ ಒಪ್ಪಿರಲಿಲ್ಲ. ಪತಿ ಕಳೆದುಕೊಂಡ ದುಖಃದಲ್ಲಿದ್ದೇನೆ. ನನಗೆ ರಾಜಕೀಯ ಬೇಡ ಎಂದು ಅವರು ಹೇಳಿದ್ದರು. ಮಹದೇವ ಪ್ರಸಾದ್ ನಮಗೆ ಆತ್ಮೀಯರಾಗಿದ್ದರು. ನಂಬಿಕಸ್ಥ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ನಿಧನ ನಮಗೂ ತೀವ್ರ ದುಖಃ ಉಂಟು ಮಾಡಿದೆ.

ಹಾಗೆಂದು ಚುನಾವಣೆಯಿಂದ ವಿಮುಖರಾಗಲು ಸಾಧ್ಯವಿಲ್ಲ. ಎಷ್ಟೇ ನೋವಿನಲ್ಲಿದ್ದರೂ ನೀವು ಸ್ಪರ್ಧೆ ಮಾಡಲೇಬೇಕು ಎಂದು ನಾವೇ ಅವರ ಮೇಲೆ ಒತ್ತಡ ಹಾಕಿದ್ದು. ಮಹದೇವ ಪ್ರಸಾದ್ ಇದ್ದಿದ್ದರೆ ಗೀತಾ ಮಹದೇವ ಪ್ರಸಾದ್ ಅವರು ರಾಜಕೀಯದ ಕಡೆ ತಲೆ ಹಾಕುತ್ತಿರಲಿಲ್ಲ ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ಬದನೆಕಾಯಿ ಕೂಡ ಕೊಟ್ಟಿಲ್ಲ…

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಗುಂಡ್ಲುಪೇಟೆಗೆ, ರಾಜ್ಯಕ್ಕೆ ಏನೂ ಮಾಡಲಿಲ್ಲ. ಬದನೆಕಾಯಿಯನ್ನೂ ಕೊಡಲಿಲ್ಲ. ಈಗ ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಸಿಎಂ ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಭಯದಿಂದ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಒಮ್ಮೆಯೂ ಚಾಮರಾಜನಗರಕ್ಕೆ ಹೋಗಲಿಲ್ಲ. ಇಂತಹವರು ಯಾವ ರೀತಿ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಚಾಮರಾಜನಗರಕ್ಕೆ ಹೋಗಬೇಡಿ ಎಂದು ನನಗೂ ಕೆಲವರು ಹೇಳಿದ್ದರು. ಆದರೆ ಅಲ್ಲಿಗೆ ಹೋಗಿ ಬಂದ ಬಳಿಕ ನನ್ನ ಸ್ಥಾನ ಗಟ್ಟಿ ಆಯಿತು.

2018ರ ವಿಧಾನಸಭೆ ಚುನಾವಣೆ ಬಳಿಕ ನಾನು ಮುಖ್ಯಮಂತ್ರಿಯಾಗುತ್ತೇನೆ. ಅದಕ್ಕೆ ಗುಂಡ್ಲುಪೇಟೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಯಡಿಯೂರಪ್ಪ ಅವರು ಮತ ಯಾಚನೆ ಮಾಡುತ್ತಿದ್ದಾರೆ. ಚಾಮರಾಜನಗರ ಎಂದರೆ ಭಯಪಡುವವರು ಈಗ ಇಲ್ಲಿಗೆ ಬಂದು ಮತ ಕೇಳುತ್ತಿದ್ದಾರೆ ಎಂದು ಹೇಳಿದರು.  ಆಹಾರ ಭದ್ರತಾ ಕಾಯಿದೆ ಜಾರಿಗೆ ತಂದಿದ್ದು ಯುಪಿಎ ಸರ್ಕಾರ. ಆದರೆ ಯಡಿಯೂರಪ್ಪ ಅವರು ಈಗಿನ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದೆ. ಅದನ್ನೇ ರಾಜ್ಯ ಸರ್ಕಾರ ಹಂಚುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿಲ್ಲ ಎಂದು ಕೇಳಿದರು.

ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿದ್ದರೆ ಅದಕ್ಕೆ ಮಹದೇವ ಪ್ರಸಾದ್ ಅವರ ಶ್ರಮ ಕಾರಣವೇ ಹೊರತು ಬಿಜೆಪಿಯವರಲ್ಲ. ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಯ ಹಿಂದೆಯೂ ಪ್ರಸಾದ್ ಅವರ ಶ್ರಮ ಅಡಗಿದೆ. 20-25 ವರ್ಷಗಳ ಕಾಲ ಅವರು ಕ್ಷೇತ್ರದ ಅಭಿವೃದ್ಧಿಗೆ ಕಷ್ಟಪಟ್ಟಿದ್ದರು. ನಮ್ಮ ಸರ್ಕಾರದ ಅವಧಿ ಇನ್ನೂ ಒಂದು ವರ್ಷ ಇದೆ. ಹೀಗಿರುವಾಗ ಬಿಜೆಪಿಯವರು ಇಲ್ಲಿ ಗೆದ್ದು ಮಾಡುವುದಾದರೂ ಏನು ? ಯಾವ ಅಭಿವೃದ್ಧಿಯನ್ನೂ ಮಾಡದ ಬಿಜೆಪಿಯವರಿಗೆ ಮತ ಕೇಳಲು ಯಾವ ನೈತಿಕ ಹಕ್ಕು ಇದೆ ಎಂದರು.

ಮೂರು ಲೀಟರ್ ಸೀಮೆಎಣ್ಣೆ

ಸೀಮೆಎಣ್ಣೆ ಕೊರತೆ ಕುರಿತು ಸಭೆಯಲ್ಲಿದ್ದವರು ಗಮನ ಸೆಳೆದಾಗ ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು, ಅಡುಗೆ ಅನಿಲದ ಸಂಪರ್ಕ ಹೊಂದಿರುವವರಿಗೆ ಒಂದು ಲೀಟರ್ ಮತ್ತು ಅಡುಗೆ ಅನಿಲ ಸಂಪರ್ಕ ಇಲ್ಲದವರಿಗೆ ಮೂರು ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು. ಈ ಸೌಲಭ್ಯ ಏಪ್ರಿಲ್ ಒಂದರಿಂದ ಜಾರಿಗೆ ಬಂದಿದೆ ಎಂದು ಹೇಳಿದರು.

ಕರ್ನಾಟಕ ಉತ್ತರ ಪ್ರದೇಶವಲ್ಲ..

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಆ ಪಕ್ಷದ ನಾಯಕರು ಇಲ್ಲಿ ಬೀಗುತ್ತಿದ್ದಾರೆ. ಕರ್ನಾಟಕ ಸಾಧು, ಸಂತರು, ಶರಣರು ನೆಲೆಸಿದ್ದ ನಾಡು. ಬಸವಣ್ಣ, ಕನಕದಾಸ, ಕುವೆಂಪು, ಭಗೀರಥರನ್ನು ಕಂಡ ರಾಜ್ಯವಿದು. ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಿನ ನಾಡು ಇದು. ನಾವು ಅದಕ್ಕೆ ಭದ್ರ ಬುನಾದಿ ಹಾಕಿದ್ದೇವೆ. ಜಾತಿ, ಧರ್ಮದ ಹೆಸರಲ್ಲಿ ಗೆಲುವು ಸಾಧಿಸಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಇಲ್ಲಿ ಆ ಪಕ್ಷದ ಆಟ ನಡೆಯುವುದಿಲ್ಲ. ಇದು ಕರ್ನಾಟಕ, ಉತ್ತರ ಪ್ರದೇಶವಲ್ಲ ಎಂದರು.  ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮತ್ತಿತರರು ಸಭೆಯಲಿದ್ದರು.

 

 

Comments are closed.

Social Media Auto Publish Powered By : XYZScripts.com