ಮತ್ತೆ Gangster ಆಗ್ತಾರಾ ಸೂಪರ್ ಸ್ಟಾರ್..?!

‘ಕಬಾಲಿ’ ನಂತ್ರ ಸದ್ಯ ಸೂಪರ್ ಸ್ಟಾರ್ ರಜಿನಿಕಾಂತ್ 2.o ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 2.0 ಚಿತ್ರಕ್ಕೆ ಕುಂಬಳಕಾಯಿ ಒಡೆದ ಮೇಲೆ ಪಾ. ರಂಜಿತ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಜಿನಿಕಾಂತ್ ನಟಿಸೋದು ಪಕ್ಕಾ ಆಗಿದೆ.

ಧನುಷ್ ನಿರ್ಮಾಣದಲ್ಲಿ ಮೂಡಿ ಬರಲಿರೋ ಈ ಚಿತ್ರದಲ್ಲಿ ರಜಿನಿಕಾಂತ್ ಮುಂಬೈ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಬಣ್ಣ ಹಚ್ತಾರೆ ಎನ್ನಲಾಗ್ತಿದೆ. ದಶಕಗಳ ಹಿಂದೆ ಬಂದ ‘ಬಾಷಾ’ ಚಿತ್ರದಲ್ಲಿ ರಜಿನಿಕಾಂತ್ ಗ್ಯಾಂಗ್ಸ್ಟರ್ ಮಾಣಿಕ್ ಬಾಷಾ ಪಾತ್ರದಲ್ಲಿ ಕಮಾಲ್ ಮಾಡಿದ್ರು. ತಮ್ಮ 161ನೇ ಸಿನಿಮಾ ಮೂಲಕ ಆ ಮ್ಯಾಜಿಕ್ ಅನ್ನ ಸೂಪರ್ ಸ್ಟಾರ್ ರಿಪೀಟ್ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ.

ಪಾ. ರಂಜಿತ್ ನಿರ್ದೇಶಿಸಲಿರೋ ಹೊಸ ಚಿತ್ರ ಮಸ್ತಾನ್ ಹೈದರ್ ಮಿಜಾ ಅಲಿಯಾಸ್ ಹಾಜಿ ಮಸ್ತಾನ್ ಜೀವನಾಧಾರಿತ ಕಥೆ ಎನ್ನಲಾಗ್ತಿದೆ. ಹಾಜಿ ಮಸ್ತಾನ್ ಒಂದು ಕಾಲದಲ್ಲಿ ಮುಂಬೈನ ದೊಡ್ಡ ಗ್ಯಾಂಗ್ಸ್ಟರ್ ಆಗಿ ಮೆರೆದಾತ. ಸ್ಮಗ್ಲಿಂಗ್, ಸಿನಿಮಾ ಫೈನಾನ್ಸ್, ರಿಯಲ್ ಎಸ್ಟೇಟ್, ಹವಾಲಾ ಹೀಗೆ ಮುಂಬೈನಲ್ಲಿ ದೊಡ್ಡ ಮಾಫಿಯಾ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದ ಎನ್ನುತ್ತದೆ ಇತಿಹಾಸ.

ತಮಿಳುನಾಡಿನಲ್ಲಿ ಹುಟ್ಟಿದ ಮಸ್ತಾನ್ ಹೈದರ್ ಮಿಜಾರ್ ಮುಂದೆ ಮುಂಬೈನಲ್ಲಿ ಬೆಳೆದು ದೊಡ್ಡ ಗ್ಯಾಂಗ್ಸ್ಟರ್ ಆಗಿ ಗುರುತಿಸಿಕೊಂಡಿದ್ದ. ತಮಿಳು ಮತ್ತು ಹಿಂದಿ ಭಾಷೆಯನ್ನ ನಿರರ್ಗಳವಾಗಿ ಮಾತನಾಡುತ್ತಿದ್ದ. ಇದೀಗ ಪಾ. ರಂಜಿತ್ ಈತನ ಕಥೆಯನ್ನೇ ಸಿನಿಮಾ ಮಾಡ್ತಿದ್ದು, ಹಾಜಿ ಮಸ್ತಾನ್ ಪಾತ್ರದಲ್ಲಿ ಸೂಪರ್ ಸ್ಟಾರ್ ನಟಿಸ್ತಾರೆ ಎನ್ನಲಾಗ್ತಿದೆ.

ಹಾಜಿ ಮಸ್ತಾನ್ ವಿಲಾಸಿ ಜೀವನ ನಡೆಸುತ್ತಿದ್ದನಂತೆ. ಅಷ್ಟೇ ಅಲ್ಲ, ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ತಿದ್ದನಂತೆ. ಹಾಗಾಗಿ ಈ ಪಾತ್ರ ರಜಿನಿಗೆ ಹೇಳಿ ಮಾಡಿಸಿದಂತಿರುತ್ತೆ ಅಂತಿದ್ದಾರೆ ಕಾಲಿವುಡ್ ಮಂದಿ. ಕಬಾಲಿ ಸಿನಿಮಾದಲ್ಲೂ ರಜಿನಿಕಾಂತ್ ಗ್ಯಾಂಗ್ಸ್ಟರ್ ಆಗಿ ಕಮಾಲ್ ಮಾಡಿದ್ರು. ಇನ್ನು ಹಾಜಿ ಮಸ್ತಾನ್ ತಮಿಳುನಾಡಿನಿಂದ ಮುಂಬೈಗೆ ತೆರಳಿ ಹೇಗೆ ಗ್ಯಾಂಗ್ಸ್ಟರ್ ಆದ ಎನ್ನುವುದೇ ಚಿತ್ರದ ಕಥಾವಸ್ತು. ರಜಿನಿಕಾಂತ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ವಿದ್ಯಾಬಾಲನ್ ಮತ್ತು ಖುಷ್ಬು ನಾಯಕಿಯರು ಎನ್ನುವ ಸುದ್ದಿಯೂ ದಟ್ಟವಾಗಿದೆ. ಅದೆಲ್ಲಾ ಏನೇ ಇದ್ರೂ, ರಜಿನಿಕಾಂತ್ ಬಾಷಾ ರೀತಿ ಮತ್ತೆ ಡಾನ್ ಆಗಿ ಕಾಣಿಸಿಕೊಂಡ್ರೆ ಅಭಿಮಾನಿಗಳಿಗೆ ಹಬ್ಬವೇ ಸರಿ.

One thought on “ಮತ್ತೆ Gangster ಆಗ್ತಾರಾ ಸೂಪರ್ ಸ್ಟಾರ್..?!

Comments are closed.