ಖಾಲಿ ಹಾಳೆಗಳಿಂದ ಮತ್ತಷ್ಟು ಮಕ್ಕಳಿಗೆ ಹೊಸ ಪುಸ್ತಕ !

ಇನ್ನೇನು ಮಕ್ಕಳ ಪರೀಕ್ಷೆಗಳೆಲ್ಲಾ ಮುಗಿದಿವೆ. ಅವರ ನೋಟ್ ಬುಕ್ ಗಳು ಕೂಡಾ ಇನ್ನು ಅಪ್ರಯೋಜಕ. ಹಾಗಂತ ಅವುಗಳನ್ನೆಲ್ಲಾ ರದ್ದಿಗೆ ಹಾಕುವ ಕೆಲಸ ಮಾತ್ರ ಮಾಡಬೇಡಿ. ಆ ನೋಟ್ ಬುಕ್ ಗಳಲ್ಲಿರುವ ಖಾಲಿ ಹಾಳೆಗಳು ಒಂದಷ್ಟು ಮಕ್ಕಳಿಗೆ ಹೊಸ ಪುಸ್ತಕ ಒದಗಿಸಬಲ್ಲವು.

ಇದೊಂದು ವಿನೂತನ ಪ್ರಯತ್ನ. ಕೆಲವೊಂದಷ್ಟು ಸ್ವಯಂಸೇವಾ ಸಂಸ್ಥೆಗಳು ವಿವಿಧ ಶಾಲೆಗಳಲ್ಲಿ ಒಂದಷ್ಟು ಖಾಲಿ ಡಬ್ಬಗಳನ್ನು ಇಟ್ಟಿವೆ. ಮಕ್ಕಳು ತಾವು ಬಳಸಿ ಮುಗಿದ ನೋಟ್ ಬುಕ್ಕುಗಳಲ್ಲಿ ಬಳಸದೇ ಉಳಿದಿರುವ ಕೊನೆಯ ಖಾಲಿ ಹಾಳೆಗಳನ್ನು ತೆಗೆದು ಆ ಡಬ್ಬದೊಳಗೆ ಹಾಕಬೇಕು. ಆ ಖಾಲಿ ಹಾಳೆಗಳನ್ನೆಲ್ಲಾ ಸೇರಿಸಿ ಹೊಸ ಬೈಂಡಿಂಗ್ ಮಾಡಿಸಿ ಅವುಗಳಿಗೆ ಹೊಸ ಪುಸ್ತಕದ ರೂಪ ಕೊಡಲಾಗುತ್ತದೆ.

ಹೀಗೆ ತಯಾರಿಸಿದ ಹೊಸ ಪುಸ್ತಕಗಳನ್ನು ಬಡ ಮಕ್ಕಳಿಗೆ ನೀಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ಬಳಕೆಗೆ ಅವರಿಗೆ ಇದರಿಂದಲೇ ಹೊಸ ನೋಟ್ ಪುಸ್ತಕಗಳು ಸಿಕ್ಕಂತಾಗುತ್ತದೆ. ಈ ಮೂಲಕ ಅಷ್ಟು ಹಾಳೆಗಳು ಸುಮ್ಮನೇ ರದ್ದಿಗೆ ಹೋಗುವುದನ್ನೂ ತಡೆದಂತಾಗುತ್ತದೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಅನೇಕ ಊರುಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅನೇಕ ಶಾಲೆಗಳು ಇದಕ್ಕೆ ಕೈಜೋಡಿಸಿವೆ. ಕಾಗದದ ಸೂಕ್ತ ಬಳಕೆಯಿಂದ ಪರಿಸರದ ಮೇಲಿನ ಹೊರೆ ಕೂಡಾ ಕಡಿಮೆಯಾಗುತ್ತದೆ. ಜೊತೆಗೆ ಬಡ ಮಕ್ಕಳಿಗೆ ಒಂದಷ್ಟು ಸಹಾಯವೂ ಆಗುತ್ತದೆ.

Comments are closed.