ಕರ್ನಾಟಕದ ಮಾವಿನ ಹಣ್ಣುಗಳ ಅಮೇರಿಕಾ ಪ್ರಯಾಣ !

ಹಣ್ಣುಗಳ ರಾಜ ಮಾವು ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಮಾವಿನ ಹಣ್ಣುಗಳಲ್ಲೇ ಅತೀ ಶ್ರೇಷ್ಠ ತಳಿ ಎಂದರೆ ಅಲ್ಫೋನ್ಸೋ. ನಮ್ಮ ದೇಶದಲ್ಲಿ ಮಾತ್ರವಲ್ಲ, ಬೇರೆ ಅನೇಕ ದೇಶಗಳಲ್ಲಿ ಆಲ್ಫೋನ್ಸೋ ಮಾವಿಗೆ ಅಭಿಮಾನಿಗಳಿದ್ದಾರೆ.

ಪ್ರತೀ ವರ್ಷ ಕರ್ನಾಟಕದಿಂದ ನೂರಾರು ಟನ್ ಗಳಷ್ಟು ಅಲ್ಫೋನ್ಸೋ ಮಾವು ಬೇರೆ ದೇಶಗಳಿಗೆ ರಫ್ತಾಗುತ್ತದೆ. ಅದರಲ್ಲೂ ಹೆಚ್ಚಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಕರ್ನಾಟಕ ಮಾವಿಗೆ ವಿಪರೀತ ಬೇಡಿಕೆ. ಆದ್ರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಅಲ್ಫೋನ್ಸೋ ಬೆಳೆ 70%ನಷ್ಟು ಕೈಕೊಟ್ಟಿದೆ.

ಇದರಿಂದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಕಳೆದ ವರ್ಷ ಮೊದಲ ಬಾರಿಗೆ ಕರ್ನಾಟಕದ ಮಾವಿನ ಹಣ್ಣನ್ನು ಯುಎಸ್ಎಗೆ ರಫ್ತು ಮಾಡಲಾಗಿತ್ತು. ಇಲ್ಲಿನ ಹಣ್ಣುಗಳಿಗೆ ಮಾರುಹೋದ ಅಲ್ಲಿನ ಜನ ಈ ಬಾರಿ 30ಟನ್ ಗಳಷ್ಟು ಹಣ್ಣಿಗೆ ಈಗಾಗ್ಲೇ ಆರ್ಡರ್ ಕೊಟ್ಟುಬಿಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಲ್ಲಿ ಬೆಳೆದ ಮಾವಿನ ಹಣ್ಣುಗಳಿಗೆ ಉತ್ತಮ ಮಾರುಕಟ್ಟೆ ಇದೆ.

ಆದ್ರೆ ಕಳೆದ ವರ್ಷದ ಅಕಾಲಿಕ ಮಳೆ, ಹೆಚ್ಚಿರುವ ತಾಪಮಾನದಿಂದಾಗಿ ಮಾವಿನ ಹೂವು ಕಾಯಿ ಕಟ್ಟುವ ಮೊದಲೇ ಉದುರಿ ಹೋಗಿವೆ. ಇದೆಲ್ಲದರಿಂದ ಅಲ್ಫೋನ್ಸೋ ಬೆಳೆದ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಆದ್ರೆ ರೈತರ ನೆರವಿಗೆ ಬಂದಿರುವ ಮಾವು ಅಭಿವೃದ್ಧಿ ಮಂಡಳಿ ಇತರೆ ರಫ್ತು ತಳಿಗಳಾದ ದಶೇರಿ, ಬೇಂಗನಪಲ್ಲಿ, ಮಲ್ಲಿಕಾ, ಮಲಗೋಬಾಗಳನ್ನು ಉತ್ತೇಜಿಸುತ್ತಿದೆ.

ಅಮೇರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಗ್ರಾಹಕರಿಗೆ ಈ ಬಾರಿ ಅಲ್ಫೋನ್ಸೋ ಬದಲಿಗೆ ಈ ತಳಿಗಳ ರುಚಿ ನೋಡುವಂತೆ ಮನವಿ ಮಾಡಿದೆ. ರುಚಿ ಮತ್ತು ಗುಣಮಟ್ಟದಲ್ಲಿ ಕರ್ನಾಟಕದ ಮಾವಿನ ಹಣ್ಣುಗಳು ನಿಜಕ್ಕೂ ಅತ್ಯುತ್ತಮದ್ದಾಗಿರುತ್ತವೆ. ಹಾಗಾಗಿ ಪಾಶ್ಚಾತ್ಯ ಗ್ರಾಹಕರು ಕೂಡಾ ಈ ಬಾರಿ ಬೇರೆ ಹಣ್ಣುಗಳ ರುಚಿ ಸವಿಯಲು ಸಿದ್ಧರಾಗಿದ್ದಾರೆ.

Comments are closed.

Social Media Auto Publish Powered By : XYZScripts.com