KMF – ಗ್ರಾಹಕರಿಗೆ ಶಾಕ್‌ : ಏಪ್ರಿಲ್‌ ೧ರಿಂದ ನಂದಿನಿ ಹಾಲು, ಮೊಸರಿನ ದರ ಹೆಚ್ಚಳ…

ಬೆಂಗಳೂರು:  ಯುಗಾದಿ ಹಬ್ಬದ ಮರುದಿನವೇ ಕೆಎಂಎಫ್‌ ರಾಜ್ಯದ ಜನರಿಗೆ ಶಾಕ್‌ ನೀಡಿದ್ದು, ನಂದಿನಿ ಹಾಲು ಮೊಸರಿನ ದರ ಹೆಚ್ಚಳ ಮಾಡಿದೆ.  ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ಗ್ರಾಹಕರಿಗೆ ಹಾಲಿದ ರದ ಹೆಚ್ಚಳದ ಬಿಸಿಯೂ ತಗುಲಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿ ಲೀಟರ್‌‌ಗೆ 1 ರೂಪಾಯಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಲಾಗುತ್ತಿದ್ದು, ನೂತನ ದರ ಏಪ್ರಿಲ್‌ 1 ರಿಂದ ಅನ್ವಯವಾಗಲಿದೆ.
ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಹಾಲು ದರ ಹೆಚ್ಚಿಸುವ ನಿರ್ಧಾರವವನ್ನು ಕೈಗೊಳ್ಳಲಾಗಿದ್ದು, ಕರ್ನಾಟಕ ‘ರಾಜ್ಯ ಹಾಲು ಒಕ್ಕೂಟ’ ಹಾಲು ಹಾಗೂ ಮೊಸರಿನ ದರವನ್ನು ಪರಿಷ್ಕರಣೆ ಮಾಡಿ ಮಾರ್ಚ್‌ ೩೦ರಂದೇ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿನ ಹಾಲು ಮಾರಾಟದಲ್ಲಿನ ದರದಲ್ಲಿ ವ್ಯತ್ಯಾಸವಿದ್ದು, ಏಕರೂಪದ ದರ ನಿಗದಿ ಹೆಸರಿನಲ್ಲಿ ಹಾಲು ಹಾಗೂ ಮೊಸರಿನ ದರವನ್ನು ಹೆಚ್ಚಿಸಿದೆ. ಇನ್ನು ಮುಂದೆ ರಾಜ್ಯದಲ್ಲಿ ಕೆಎಂಎಫ್ ಹಾಲಿನ ದರ ಏಕರೂಪವಾಗಿರಲಿದೆ.  1ರಿಂದ 2 ರೂ.ಗಳವರೆಗಿನ ವ್ಯತ್ಯಾಸವನ್ನು ಸರಿಪಡಿಸಲು ದರ ಪರಿಷ್ಕರಣೆ ಮಾಡಿದ್ದೇವೆ ಎಂದು ರಾಜ್ಯ ಹಾಲು ಒಕ್ಕೂಟ ಹೇಳಿದೆ.  ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು,  ರೈತರು ಮತ್ತು ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಈ ಹೆಚ್ಚಳವಾಗಿರುವ ದರವನ್ನ ಸಂಪೂರ್ಣ ರೈತರಿಗೆ ನೀಡಲಿದ್ದೇವೆ ಎಂದು ಕೆ.ಎಂ.ಎಫ್‌ ತಿಳಿಸಿದೆ.
 ವಿದ್ಯುತ್, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ, ಹಾಲಿನ ದರವೂ ಏರಿಕೆಯಾಗಿ ಮತ್ತೊಮ್ಮೆ ಗ್ರಾಹಕನ ಜೇಬಿಗೆ ಕತ್ತರಿ ಬಿದ್ದಿದೆ.

Comments are closed.

Social Media Auto Publish Powered By : XYZScripts.com