ದಂಡುಪಾಳ್ಯ ತಂಡದ ಸದಸ್ಯನ ಬಿಡುಗಡೆಗೆ ಹೈಕೋರ್ಟ್‌ ಆದೇಶ : ಜೈಲಿನಿಂದ ಹೊರಬರಲಿದ್ದಾನೆ ತಿಮ್ಮ..

ಬೆಂಗಳೂರು: ದಂಡುಪಾಳ್ಯ ಎಂಬ ಭಯಾನಕ ಹಂತಕರ ತಂಡದ ಸದಸ್ಯ ತಿಮ್ಮನ ಬಿಡುಗಡೆಗೆ ಶುಕ್ರವಾರ ಹೈಕೋರ್ಟ್ ಆದೇಶ ನೀಡಿದೆ.  ಕಳೆದ 18 ವರ್ಷಗಳಿಂದ ಹಿಂಡಲಗಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈತ, ತನ್ನ ಬಿಡುಗಡೆ ಮಾಡುವಂತೆ ಕೋರಿ ಹೈಕೋರ್ಟ್‌‌ಕ್ಕೆ ಅರ್ಜಿ ಸಲ್ಲಿಸಿದ್ದ.  ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ  ಹೈಕೋರ್ಟ್ ಶುಕ್ರವಾರ ತಿಮ್ಮನ ಬಿಡುಗಡೆಗೆ ಆದೇಶಿಸಿದೆ.
ತಿಮ್ಮನ ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ .ಬಿ.ಎಸ್.ಪಾಟೀಲ ಮತ್ತು ನ್ಯಾಯಮೂರ್ತಿ .ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಬಿಡುಗಡೆ ಆದೇಶ ಮಾಡಿದೆ.
ಬೆಂಗಳೂರಿನ ಹಲಸೂರಿನ ರಂಗನಾಥ್ ಎಂಬುವರ ಕೊಲೆ ಮತ್ತು ಮನೆಯ ಡಕಾಯಿತಿ ಪ್ರಕರಣ 1998ರಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ದಂಡುಪಾಳ್ಯದ ಹಂತಕರಾದ, ಕೃಷ್ಣ, ಮುನಿಕೃಷ್ಣ, ಹನುಮ, ಚಿನ್ನಪ್ಪ ಮತ್ತು ತಿಮ್ಮನನ್ನು ದೋಷಿ ಎಂದು ತೀರ್ಮಾನಿಸಿದ್ದ ನಗರದ 4ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು 2003ರ ಮಾರ್ಚ್ 23ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿದಾಗ ಹೈಕೋರ್ಟ್ ವಿಭಾಗೀಯ ಪೀಠವು 2007ರ ಡಿ.7ರಂದು ಜೀವಾವಧಿ ಶಿಕ್ಷೆಯನ್ನು ಕಾಯಂ ಮಾಡಿತ್ತು.
ಹೈಕೋರ್ಟ್ ಮೆಟ್ಟಿಲೇರಿದ್ದ ತಿಮ್ಮ, ಪೊಲೀಸರು ನನ್ನನ್ನು 1999ರಲ್ಲಿ ಬಂಧಿಸಿದಾಗ ನನಗೆ ಕೇವಲ 15 ವರ್ಷ ಆಗಿತ್ತು. ನಾನು 1983ರ ಆ.16ರಂದು ಹುಟ್ಟಿದ್ದು, ಅದನ್ನು ಶಾಲಾ ದಾಖಲೆಗಳು ದೃಢಪಡಿಸುತ್ತದವೆ. ಬಾಲಾಪರಾಧಿಗಳಿಗೆ ಕೇವಲ ಮೂರು ವರ್ಷ ಮಾತ್ರ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದ್ದು, ನನಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ನಾನು ಈಗಾಗಲೇ 18ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಇದರಿಂದ ನನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ತಿಮ್ಮ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.
ತಿಮ್ಮನ ಪರ ವಕೀಲ ಹಸ್ಮತ್ ಪಾಷಾ ವಾದ ಮಂಡಿಸಿದ್ದರು. ತಿಮ್ಮನ ವಯಸ್ಸಿನ ಬಗ್ಗೆ ಅಧೀನ ನ್ಯಾಯಾಲಯದಲ್ಲೇ ಗೊಂದಲ ಏರ್ಪಟ್ಟಿತ್ತು.  ಎರಡು ಪ್ರಕರಣಗಳಲ್ಲಿ ತಿಮ್ಮ ಘಟನೆ ನಡೆದಾಗ ವಯಸ್ಕನಾಗಿರಲಿಲ್ಲ ಎಂದು ಹೇಳಿತ್ತು.⁠⁠⁠⁠

2 thoughts on “ದಂಡುಪಾಳ್ಯ ತಂಡದ ಸದಸ್ಯನ ಬಿಡುಗಡೆಗೆ ಹೈಕೋರ್ಟ್‌ ಆದೇಶ : ಜೈಲಿನಿಂದ ಹೊರಬರಲಿದ್ದಾನೆ ತಿಮ್ಮ..

Comments are closed.