ಕೋಡಿಮಠ ಭವಿಷ್ಯ : ಯುಗಾದಿಯ ಸಂದರ್ಭದಲ್ಲಿ ಸರ್ವನಾಶದ ಭವಿಷ್ಯ ಹೇಳುವುದು ಅದೆಷ್ಟರಮಟ್ಟಿಗೆ ಸರಿ..?

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಎಂದಿನಂತೆ, ಮುಂದೆ ದೇಶದಲ್ಲಿ ಅತಿವೃಷ್ಠಿ ಕಾಣಿಸಿಕೊಳ್ಳಲಿದೆ ಎಂದು ಗುರುವಾರ ಭವಿಷ್ಯ ನುಡಿದಿದ್ದಾರೆ. ನಿನ್ನೆ ಯುಗಾದಿಯ ದಿನ ವರ್ಷ ಭವಿಷ್ಯ ನುಡಿದು ಇದನ್ನೇ ಅವರು ಹೇಳಿದ್ದರು. ಆದರೆ ಈಗಾಗಲೇ ಹವಾಮಾನ ಇಲಾಖೆ ಕೂಡ ಬರುವ ಮಾನ್ಸುನ್‌ ಉತ್ತಮವಾಗಿದ್ದು, ಈ ವರ್ಷಕ್ಕಿಂತ ಹೆಚ್ಚು ಮುಂಗಾರು ಮಳೆಯಾಗಲಿದೆ ಎಂಬ ವರದಿ ನೀಡಿದೆ. ಜೊತೆಗೆ ಮೈಲಾರಲಿಂಗೇಶ್ವರದ ಕಾರ್ಣಿಕದಲ್ಲಿ ಕೂಡಾ ಇದೇ ಭವಿಷ್ಯ ಹೇಳಿದ್ದರು. ಹೀಗಾಗಿ ವಿಶೇಷವೇನೂ ಇಲ್ಲದ ಈ ಬಾರಿಯ ಶ್ರೀಗಳ ಭವಿಷ್ಯಕ್ಕೆ ಜನ ಅಷ್ಟೊಂದು ಕುತೂಹಲಿಗಳಾಗಿದ್ದು ಯಾತಕ್ಕೆ ಎಂಬ ಪ್ರಶ್ನೆ ಮೂಡದೆ ಇರದು.
ಸದಾ ಭವಿಷ್ಯ ನುಡಿಯುವ ಮೂಲಕ ಮಾಧ್ಯಮಗಳನ್ನ ಸೆಳೆಯುವ ಶ್ರೀಗಳು, ಎಂದಿನಂತೇ ಈ ಭವಿಷ್ಯದಲ್ಲಿಯೂ ಮುಂದಿನ ದಿನಗಳಲ್ಲಿ ಆಪತ್ತು ಕಾದಿದೆ ಎಂಬ ಋಣಾತ್ಮಕ ಭವಿಷ್ಯವನ್ನೇ ಹೇಳಿದ್ದಾರೆ.  ಎಲ್ಲೆಲ್ಲೂ ಬರ, ನೀರಿಲ್ಲಿದೆ ಬಣಗುಡುತ್ತಿರುವ ಕೃಷಿಭೂಮಿಯಿಂದ ಕಂಗೆಟ್ಟಿರುವ ರೈತರಿಗೆ ಮತ್ತಷ್ಟು ದಿಗಿಲಾಗುವಂಥ ಭವಿಷ್ಯವನ್ನ ನುಡಿದು ಕುಳಿತಿದ್ದಾರೆ ಶ್ರೀಗಳು.  ಕಳೆದ ವರ್ಷ ಬರದಿಂದ ಕೆಟ್ಟಿದ್ದ ರಾಜ್ಯ, ಈ ವರ್ಷ ಅತಿ ಮಳೆಯಿಂದ ಕೆಟ್ಟುಹೋಗಲಿದೆ ಎಂದಿದ್ದಾರೆ. ಅತಿವೃಷ್ಠಿಯಿಂದ ಎಲ್ಲವೂ ಹಾಳಾಗಲಿದೆ ಎಂಬ ಭವಿಷ್ಯ ನುಡಿದು, ತಮ್ಮ ಭವಿಷ್ಯ ನಿಜವಾಗಲಿ ಎಂದು ಬಯಸುತ್ತಾ ಕೂರುವುದು ಅದೆಷ್ಟು ಸರಿ..? ಎಂಬ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡದೇ ಇರಲಾರದು.
ರಾಜಕೀಯ ಸ್ಥಿತಿಗತಿ, ಭದ್ರತೆ, ಅಸ್ಥಿರತೆ, ಸಾಮಾಜಿಕ ಏರಿಳಿತ, ನೈಸರ್ಗಿಕ ವಿಕೋಪಗಳ ಬಗ್ಗೆ ಸದಾ ಅವರು ನುಡಿಯುವ ತಾಳೆಗರಿ ಭವಿಷ್ಯ ಎಲ್ಲೆಡೆ ಜನಪ್ರಿಯವಾಗಿದೆ. ಆದರೆ, ಈ ಬಾರಿಯ ಯುಗಾದಿ ಭವಿಷ್ಯದಲ್ಲಿ ಶ್ರೀಗಳು, ರಾಜಯಕೀಯ ಸ್ಥಿತಿಗತಿಗಳ ಬಗ್ಗೆ ಭವಿಷ್ಯವಾಡಿಲ್ಲ. ಈ ಬಗ್ಗೆ ಪ್ರಶ್ನೆ ಎದ್ದಿತ್ತಾದರೂ ಈ ಬಗ್ಗೆ ಭವಿಷ್ಯ ನುಡಿಯಲು ನಿರಾಕರಿಸಿದ್ದಾರೆ. ರಾಜಕೀಯ ವಿದ್ಯಮಾನಗಳ ಬಗ್ಗೆ ಒಂದಿಲ್ಲೊಂದು ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗುವ ಕೋಡಿಮಠದ ಶ್ರೀಗಳು, ಈ ಬಾರಿ ಏಕೆ ರಾಜಕೀಯದ ಬಗ್ಗೆ ಮಾತನಾಡಿಲ್ಲ ಎಂಬ ಬಗ್ಗೆ ಅನುಮಾನಗಳು ಏಳುವುದು ಸಹಜ.
ದೇಶ ಮತ್ತು ರಾಜ್ಯ ರಾಜಕೀಯದಲ್ಲಿ ಅನಿಶ್ಚಿತತೆ ಹಾಗೂ ಆಪತ್ತು ಕಾದಿದೆ ಎಂಬುದಾಗಿಯೋ, ದೇಶದಲ್ಲಿ ಯುದ್ಧದ ಸನ್ನಿವೇಶ ಎದುರಾಗಲಿದೆ ಎಂದೋ, ಮುಂದಿನ ದಿನಗಳಲ್ಲಿ ಮಳೆಯಿಂದ ಅನಾಹುತವಾಗಲಿದೆ, ಶ್ರೀಮಂತರಿಗೆ ಸಂಚಕಾರವಿದೆ,  ಹಿಮಾಲಯಕ್ಕೆ ಆಪತ್ತು ಕಾದಿದೆ, ದೇಶದಲ್ಲಿ ಭೂಕಂಪಗಳು ಸಂಭವಿಸಲಿವೆ ಎಂದೊ ಸಾಮಾನ್ಯವಾಗಿ ದೇಶದಲ್ಲಿ ಘಟಿಸಬಹುದಾದಂಥ ಅನಾಹುತಗಳ ಪಟ್ಟಿ ಮಾಡಿ ಹೇಳುವ ಶ್ರೀಗಳು,  ಮುಂದೆ ಅವರು ಹೇಳಿದ ಅನಾಹುತ ದೇಶದಲ್ಲಿ , ಅಥವಾ ನೆರೆ ರಾಷ್ಟ್ರಗಳಲ್ಲಿ ಘಟಿಸಿದರೂ, ತಾನು ನುಡಿದ ಭವಿಷ್ಯ ನಿಜವಾಗಿದೆ ನೋಡಿ.. ಎಂದು ಅದನ್ನ ಬಣ್ಣಿಸಿ ತಮ್ಮನ್ನ ತಾವು ಸಮರ್ಥಿಸಿಕೊಳ್ಳುತ್ತಾರೆ.
ಪೂಜನೀಯ ಸ್ಥಾನದಲ್ಲಿದ್ದುಕೊಂಡು, ಸಾವಿರಾರು ಭಕ್ತರನ್ನ, ಅನುಯಾಯಿಗಳನ್ನ ಪಡೆದುಕೊಂಡಿರುವ ಶ್ರೀಗಳು, ಪದೆ ಪದೆ ಅನಾಹುತಗಳ ಪಟ್ಟಿ ಮಾಡಿ ಹೆದರಿಸುವ ಕೆಲಸ ಮಾಡದೇ, ಸಕಾರಾತ್ಮಕವಾದ, ಧನಾತ್ಮಕವಾದ, ಆಶಾವಾದವನ್ನ ಮೂಡಿಸುವಂಥ ಭವಿಷ್ಯ ಹೇಳಿದರೆ ಕನಿಷ್ಠ ಅವರನ್ನ ನಂಬಿದವರಿಗಾದರೂ ಸಮಾಧಾನವಾಗುತ್ತಿತ್ತು. ಯುಗಾದಿಯಂತ ಸಂತಸದ ಸಂದರ್ಭದಲ್ಲಿ ಸರ್ವನಾಶದ ಭವಿಷ್ಯ ಹೇಳುವುದು ಅದೆಷ್ಟರಮಟ್ಟಿಗೆ ಸರಿ..?  ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಷ್ಟವೂ ಇರುತ್ತದೆ, ಸುಖವೂ ಇರುತ್ತದೆ..   ಕಷ್ಟಗಳ ಪಟ್ಟಿ ಮಾಡಿ ಒತ್ತಿ ಒತ್ತಿ ಹೇಳುವುದಕ್ಕಿಂತ, ವರ್ತಮಾನದಲ್ಲಿ ನೆಮ್ಮದಿ ಕೊಡುವಂಥ ಸುಖದ ಭವಿಷ್ಯವನ್ನೂ ಜೊತೆಯಲ್ಲಿ ಹೇಳಬಹುದಿತ್ತು ಅಲ್ಲವೆ..?

One thought on “ಕೋಡಿಮಠ ಭವಿಷ್ಯ : ಯುಗಾದಿಯ ಸಂದರ್ಭದಲ್ಲಿ ಸರ್ವನಾಶದ ಭವಿಷ್ಯ ಹೇಳುವುದು ಅದೆಷ್ಟರಮಟ್ಟಿಗೆ ಸರಿ..?

Comments are closed.

Social Media Auto Publish Powered By : XYZScripts.com