ನರ್ಮ್‌ ಯೋಜನೆಯ ಮನೆಗಳಲ್ಲಿ ಅಕ್ರಮವಾಸಿಗಳ ತೆರವು : ಸ್ಥಳದಲ್ಲಿ ಬಿಗುವಿನ ವಾತಾವರಣ

ಮೈಸೂರು ಮಾರ್ಚ್‌25: ನರ್ಮ್ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಮನೆಗಳಲ್ಲಿ ಫಲಾನುಭವಿಗಳಲ್ಲದ ಜನ ಅಕ್ರಮ ವಾಸ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಶನಿವಾರ ಬೆಳ್ಳಂಬೆಳಗ್ಗೆ ಮೈಸೂರು ನಗರ ಪಾಲಿಕೆ ಅಕ್ರಮ ವಾಸಿಗಳನ್ನ ತೆರವುಗೊಳಿಸಿದೆ. ಮೈಸೂರಿನ ಬನ್ನಿಮಂಟಪದ ಬಳಿಯ ಪೌರಕಾರ್ಮಿಕರ ಕಾಲೋನಿಯಲ್ಲಿ ಒಟ್ಟು 2 ಹಂತದಲ್ಲಿ 168 ಮನೆಗಳ ನಿರ್ಮಾಣ ಮಾಡಲಾಗಿದ್ದು, ಹೆಚ್ಚುವರಿಯಾಗಿ 24 ಮನೆಗಳನ್ನು ಕೂಡ ನಿರ್ಮಿಸಲಾಗಿತ್ತು. ಈ ಹೆಚ್ಚುವರಿ ಮನೆಗಳಲ್ಲಿ ಫಲಾನುಭವಿಗಳಲ್ಲದ ಜನ ವಾಸವಿದ್ದರು. ಅಲ್ಲದೆ, ಫಲಾನುಭವಿಗಳೂ ಕೂಡ ಎರಡೆರಡು ಮನೆಗಳಲ್ಲಿ ವಾಸವಿದ್ದರು, ಕೆಲವರು ಮನೆಗಳನ್ನು ಬಾಡಿಗೆಗೂ ನೀಡಿ ಲಾಭ ಮಾಡಿಕೊಂಡಿದ್ದರು. ಈ ಎಲ್ಲ ಚಟುವಟಿಕೆಗಳು ಪಾಲಿಕೆ ಗಮನಕ್ಕೆ ಬಂದಿದ್ದು, ಹಲವು ಬಾರಿ ನೋಟಿಸ್ ಕೊಡಲಾಗಿತ್ತು. ಆದರೆ, ಪಾಲಿಕೆ ನೋಟೀಸ್‌ಗೂ ಈ ಜನ ತಲೆಕೆಡಿಸಿಕೊಂಡಿರಲಿಲ್ಲ.
ಶನಿವಾರ ಬೆಳಗ್ಗೆ ದಾಳಿ ಮಾಡಿದ ಪಾಲಿಕೆ ಅಧಿಕಾರಿಗಳು, ಅಕ್ರಮವಾಸಿಗಳ ಸಾಮಾನು ಸರಂಜಾಮುಗಳನ್ನು ಹೊರಹಾಕಿ ಮನೆಗಳನ್ನ ತೆರವುಗೊಳಿಸಿ, ಹೊಸ ಫಲಾನುಭವಿಗಳಿಗೆ ಮನೆಗಳನ್ನ ವಿತರಣೆ ಮಾಡಿದ್ದಾರೆ. ನೋಟೀಸ್‌ ನೀಡದೆ, ಏಕಾಏಕಿ ಮನೆ ಖಾಲಿ ಮಾಡಿಸಿದ್ದಾರೆ ಎಂದು ಆರೋಪಿಸಿದ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಕ್ರಮ ನಿವಾಸಿಗಳನ್ನ ತೆರವುಗೊಳಿಸುವ ಸಂದರ್ಭದಲ್ಲಿ ಅಕ್ರಮವಾಸಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್‌ ಸಹಕಾರ ಪಡೆದ ನಗರಪಾಲಿಕೆ ಅಧಿಕಾರಿಗಳು, ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com