ಸಖೀಗೀತ-10 – ಹೊಸ ನದಿಯ ಹರಿವು…

ಆಧುನಿಕೋತ್ತರ ಕನ್ನಡ ಕಾವ್ಯದ ಮುಖ್ಯಲಕ್ಷಣವೆಂದರೆ ಅದರ ಬಹುಸ್ವರೀಯತೆ. ಕಾವ್ಯವು ಶ್ರೇಷ್ಠತೆಯ ವ್ಯಸನವನ್ನು ತೊರೆದು ಜೀವನ್ಮುಖಿಯಾಗುತ್ತ ನಡೆದಂತೆ ಮುಖ್ಯ-ಅಮುಖ್ಯವೆಂಬ ಪರಿಕಲ್ಪನೆಗಳು ತಂತಾನೇ ಕಳಚಿ ಬೀಳುತ್ತವೆ. ಅದರಲ್ಲೂ ಎಪ್ಪತ್ತರ ದಶಕದಿಂದಾಚೆ ಬೆಳೆದ ಕನ್ನಡ ಕಾವ್ಯವು ಶ್ರೇಷ್ಠತೆಯ ಮಿಥ್ ಗಳನ್ನು ಮುರಿಯುವ ಕೆಲಸವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದೆ. ಅದರಿಂದಾಗಿ ಈವರೆಗೂ ಸಂಸ್ಕøತಿ, ಚರಿತ್ರೆ, ರಾಜಕಾರಣಗಳನ್ನು ಗ್ರಹಿಸುತ್ತ, ನಿರ್ವಚಿಸುತ್ತ ಬಂದ ಕ್ರಮಗಳಲ್ಲಿ ಪಲ್ಲಟಗಳಾಗಿವೆ. ಪೂರ್ವಗ್ರಹಗಳನ್ನು ನಿರಸನಗೊಳಿಸಿಕೊಂಡು ಹೊಸ ಗ್ರಹಿಕೆಯ ಕ್ರಮಗಳನ್ನು, ವಿಭಿನ್ನ ಆಲೋಚನೆಗಳನ್ನು ಮುಂದಿರಿಸಲು ಸಾಧ್ಯವಾಗಿದೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯಲ್ಲಿ ಕವಿ ಕುವೆಂಪು ಉಲ್ಲೇಖಿಸುವ “ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ…..” ಎಂಬ ಮಾತು ಆ ಸಂದರ್ಭದಾಚೆಯೂ ಒಂದು ಪ್ರಮುಖ ತಾತ್ವಿಕತೆಯಾಗಿ ಬೆಳೆದಿದೆ. ಏಕಕೇಂದ್ರವನ್ನು ನಿರಾಕರಿಸುವ, ಮುಖ್ಯ-ಅಮುಖ್ಯವನ್ನು ನಿರ್ಧರಿಸುವಂತಹ ಸಾಂಸ್ಕøತಿಕ ರಾಜಕಾರಣವನ್ನು ಬಯಲುಮಾಡುವ ಈ ಪ್ರವೃತ್ತಿ ಹೊಸದೇ ಕಾವ್ಯಮೀಮಾಂಸೆಯನ್ನು ಅಪೇಕ್ಷಿಸುವಂಥದು. ಇದುವರೆಗೂ ಗ್ರಹಿಕೆಯಾಚೆಯೇ ಉಳಿದಿದ್ದ ಸ್ತ್ರೀಸಂವೇದನೆಯನ್ನು ಕನ್ನಡ ಮಹಿಳಾಕಾವ್ಯ ಅಭಿವ್ಯಕ್ತಿಸತೊಡಗಿದಾಗ ಅದು ಬರಿಯ ಸ್ತ್ರೀತ್ವದ ಅಭಿವ್ಯಕ್ತಿ ಮಾತ್ರವಾಗದೇ ಇಡೀ ಸಂಸ್ಕøತಿ ಚಿಂತನೆಯ ಕ್ರಮವನ್ನೇ ಬದಲಿಸಬಲ್ಲ ಅಭಿವ್ಯಕ್ತಿಯೂ ಆಗಿ ಬೆಳೆದದ್ದು ಆಸಕ್ತಿದಾಯಕ. ಸ್ತ್ರೀಸಂವೇದನೆಯ ಅಭಿವ್ಯಕ್ತಿಯು ಪಡೆದುಕೊಳ್ಳುತ್ತ ನಡೆದ ವಿಭಿನ್ನ ನೆಲೆಗಳನ್ನು ಗುರುತಿಸುವುದು ಈ ಬರಹದ ಉದ್ದೇಶ.


ಒಟ್ಟಾರೆ ಬದುಕಿನ ಸಂದರ್ಭಗಳಲ್ಲಿ ಅಂತೆಯೇ ಕಾವ್ಯಗಳಲ್ಲಿ ಕೂಡ ಸ್ತ್ರೀಯು ಪುರುಷನ ಅನುಭವದ ಪೂರ್ಣತೆಗೆ ಒದಗುವ ವಸ್ತುವಾಗಿ ಮಾತ್ರ ದಕ್ಕಿದ್ದಾಳೆ. ಪ್ರಾಚೀನ ಕಾವ್ಯಗಳ ‘ಕವಿಸಮಯ’ಗಳಲ್ಲಿ ಶೃಂಗಾರರಸವುಕ್ಕಿಸಲು ದೇಹವಾಗಿ, ಅದರ ಹಾವಭಾವಗಳಾಗಿ ಮಾತ್ರ ಕಾಣಿಸಿಕೊಂಡ ಹೆಣ್ತನವು ಪುರುಷನ ಭೋಗಾಪೇಕ್ಷೆಗೆ ಪೂರಕ ವ್ಯಕ್ತಿತ್ವವಾಗಿಯೇ ಬಹುಪಾಲು ಅಭಿವ್ಯಕ್ತಿಗೊಂಡಿದೆ. ಸಿಮೊನ್ ದ ಬೊವಾ ಹೇಳುವಂತೆ “ಗಂಡಸು ಹೆಣ್ಣನ್ನು ಆಕೆಯ ಸ್ವಂತಿಕೆಗಳಲ್ಲಿ ವ್ಯಾಖ್ಯಾನಿಸದೇ ತನಗೆ ಸಂಬಂಧಿಸಿದಂತೆ ವ್ಯಾಖ್ಯಾನಿಸುತ್ತಾನೆ. ಆಕೆ ಸ್ವತಂತ್ರ ವ್ಯಕ್ತಿಯಲ್ಲ…… ಆಕೆ ಗಂಡಿನ ಕಾಮದ ಜೀವವಾಗಿ ಮಾತ್ರ ಕಾಣಿಸಿಕೊಳ್ಳುತ್ತಾಳೆ. ಆಕೆಯನ್ನು ವ್ಯಾಖ್ಯಾನಿಸಿರುವುದು ಗಂಡಿಗೆ ಸಂಬಂಧಿಸಿದಂತೆ ಮಾತ್ರ; ಆಕೆಯ ಸ್ವಂತಕ್ಕೆ ಸಂಬಂದಿಸಿದಂತೆ ಅಲ್ಲ. ಆಕೆ ಒಂದು ಆಕಸ್ಮಿಕ ಅಷ್ಟೆ. ಅತ್ಯಗತ್ಯಕ್ಕೆ ಸಂಬಂದಿಸಿದಂತೆ ಅಸ್ತಿತ್ವದಲ್ಲಿರುವ ಒಂದು ಅಗತ್ಯ ಆಕೆ. ಆತನೇ ಕರ್ತೃ, ಆತನೇ ಆತ್ಯಂತಿಕ ಶಕ್ತಿ. ಆಕೆ ಏನಿದ್ದರೂ ‘ಅನ್ಯ’…..” ಈ ಮಾತು (ಭಾರತೀಯ ಸ್ತ್ರೀವಾದ:ಪೀಠಿಕೆ:ಪು.3) ದೇಶ-ಕಾಲಾತೀತವಾಗಿ ಅನ್ವಯಿಸುವಂತಹದು. ಜಗತ್ತಿನ ಪ್ರಮುಖ ಚಿಂತನ ಕ್ರಮಗಳು, ಜ್ಞಾನಶಾಖೆಗಳು ಅವಳನ್ನು ‘ಅನ್ಯ’ವಾಗಿ ಗ್ರಹಿಸುತ್ತಿರುವುದರಿಂದಲೇ ಅವಳ ಕುರಿತು ಭಯ, ಶಂಕೆ, ಅನುಮಾನ, ಅಸಡ್ಡೆ ಮುಂತಾದ ಮಿಶ್ರಭಾವನೆಗಳಿವೆ. ಅವಳನ್ನು ದೇವತೆಯಾಗಿ, ಮಾಟಗಾತಿಯಾಗಿ, ಶಕ್ತಿಯಾಗಿ, ಅಬಲೆಯಾಗಿ, ಸೃಷ್ಟಿಶಕ್ತಿಯಾಗಿ, ಅನುತ್ಪಾದಕಳಾಗಿ ಹೀಗೆ ದ್ವಂದ್ವಮಯ ಗ್ರಹಿಕೆಗಳಲ್ಲಿ ಕಾಣುತ್ತ ನಿಜವಾಗಿ ಅವಳೇನಾಗಿದ್ದಾಳೆಂಬುದು ಅಗೋಚರವಾಗಿದೆ. ಪುರುಷ ಪ್ರಧಾನ ಚಿಂತನಕ್ರಮದಿಂದ ಪೀಡಿತವಾದ ಚರಿತ್ರೆ, ಪುರಾಣ, ಶಾಸ್ತ್ರ, ಸಾಹಿತ್ಯ ಮೊದಲಾದವು ಅವಳನ್ನು ಅದೃಶ್ಯಗೊಳಿಸಿವೆ ಅಥವಾ ತಮಗೆ ಬೇಕಾದಂತೆ ರೂಪಿಸಿವೆ. ಇವೆರಡೂ ಅವಳನ್ನು ಅಲ್ಲಗಳೆಯುವ ನಿಲುವುಗಳೇ ಆಗಿವೆ. ಹೀಗೆ ಸಂಸ್ಕøತಿಯ ಒಳಪದರಗಳಲ್ಲಿ ರೂಪುಗೊಂಡು ಆಕೃತಿ ಪಡೆದ ಹೆಣ್ತನದ ಬಿಂಬವು ಅದರ ಹೊರಪದರಗಳಲ್ಲೂ ವ್ಯಕ್ತವಾಗುತ್ತ ಬಂದಿದೆ. ಅದು ಸಾಮಾಜಿಕ, ಕೌಟುಂಬಿಕ ಬದುಕಿನೊಳಗೂ ಪ್ರವೇಶಿಸಿ ಸ್ತ್ರೀಯರ ಬದುಕಿನ ವರ್ತಮಾನವನ್ನು ಆಳುತ್ತಲಿದೆ.


ಹೆಣ್ಣಿನ ದೇಹ-ಮನಸ್ಸುಗಳನ್ನು ಇನ್ಯಾರೋ ಆಳುತ್ತಿದ್ದಾರೆ ಎಂಬುದು ಒಂದು ಹೇಳಿಕೆ. ಬಹುತೇಕ ಸಂದರ್ಭಗಳಲ್ಲಿ ಅದು ಸತ್ಯವೂ ಹೌದು. ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿಕೊಂಡರೆ ಉತ್ತರವು ಅವಳ ದೇಹ ಹಾಗೂ ದೇಹವನ್ನು ಮೂಲವಾಗಿರಿಸಿಕೊಂಡು ಕಟ್ಟಿದ ಲಿಂಗರಾಜಕಾರಣದೆಡೆ ಬೆರಳು ಮಾಡುತ್ತದೆ. ಅವಳನ್ನು ನಿರ್ಬಂಧಿಸುವ ಅಗತ್ಯವಿದೆ ಯಾಕೆಂದರೆ ಅವಳು ಅಬಲೆ. ಮುಟ್ಟು, ಬಸಿರು, ಬಾಣಂತನಗಳಲ್ಲಿ ಹೈರಾಣಾಗುವ ಆಕೆ ಸದಾ ಅವಲಂಬಿತಳು. ಅವಳ ದೇಹವೇ ಅವಳ ವಿಧಿ ಎಂಬುದು ಅವಳ ಕುರಿತು ಮೂಡಿರುವ ಆಲೋಚನಾ ಕ್ರಮ. ಹಾಗೆಯೇ ಮುಂದುವರೆದರೆ, ಅವಳ ಭಿನ್ನ ಜೈವಿಕತೆಯನ್ನು ಅವಳ ಮಾನಸಿಕ ಸ್ಥಿತಿಗೂ ವಿಸ್ತರಿಸುತ್ತಾ ಅವಳು ಚಂಚಲೆ, ಮಾಯೆ, ತಾರ್ಕಿಕಶಕ್ತಿಯಿಲ್ಲದೇ ಭಾವೋನ್ಮಾದದಿಂದ ಕೂಡಿರುವವಳು…. ಇಂಥ ಅಭಿಪ್ರಾಯಗಳು ಈ ಕಾರಣಗಳಿಗಾಗಿ ಅವಳನ್ನು ನಿರ್ಭಂಧಿಸುವ ಅಗತ್ಯವಿದೆಯೆಂಬುದನ್ನು ಸೂಚಿಸುತ್ತವೆ. ಇಂಥದೇ ಗ್ರಹಿಕೆಗಳು ಪುರುಷ ನಿರ್ಮಿತ ಶಾಸ್ತ್ರ, ಕಾವ್ಯಾದಿಗಳಲ್ಲದೇ, ಜನಪದರ ಬಹುನೆಲೆಯ ಅಭಿವ್ಯಕ್ತಿಗಳಲ್ಲೂ ಮೂಡುತ್ತ ಅಳಿಸಲಾಗದ ಬಿಂಬವಾಗಿ, ಸಮೂಹಸ್ಮøತಿಯಾಗಿ ನೆಲೆಯೂರಿವೆ. ಇಂಥ ‘ಸ್ಥಿತಿ’ಯಲ್ಲಿ ವಿಸ್ಮøತಿಗೊಳಗಾದ ಹೆಣ್ಣಿಗೆ ತಾನು ನಿಜಕ್ಕೂ ಏನಾಗಿದ್ದೇನೆ? ತನಗೇನು ಬೇಕಾಗಿದೆ? ಎಂಬ ಅರಿವು ಆವರಿಸಿಕೊಂಡಾಗ ಅಭಿವ್ಯಕ್ತಿಯ ಸಾಧ್ಯತೆಯೂ ಬದಲಾಗುವುದು ಸಾಧ್ಯವಾಯಿತು.
ಆಧುನಿಕ ಕನ್ನಡ ಕಾವ್ಯವು ದೇಹ ಹಾಗೂ ಆ ಮೂಲಕ ವಿಸ್ತರಿಸುವ ಸಾಂಸ್ಕøತಿಕ ರಾಜಕಾರಣವನ್ನು ಪ್ರಶ್ನೆ, ಪ್ರತಿಕ್ರಿಯೆ, ಪ್ರತಿಭಟನೆ, ಭಂಜನೆ, ಪುನಾರಚನೆಗಳ ಮೂಲಕ ನಿರ್ವಹಿಸಿದ ಕ್ರಮ ಆಸಕ್ತಿದಾಯಕವಾಗಿದೆ. ತನ್ನ ದೇಹದ ಮಿಡಿತಗಳನ್ನು, ತನ್ನ ಮನಸ್ಸಿನ ಸ್ವರಗಳನ್ನು ಆಲಿಸುವ, ಸ್ಪಂದಿಸುವ, ಆಮೂಲಕ ದೊರೆತ ‘ಜ್ಞಾನ’ದಿಂದ ‘ವ್ಯವಸ್ಥೆ’ಯನ್ನು ಗ್ರಹಿಸುವ ಪ್ರಕ್ರಿಯೆಯೇ ಸ್ತ್ರೀ ಸಂವೇದನೆ ಅಥವಾ ಅದರ ಅಭಿವ್ಯಕ್ತಿ. ಇಂಥ ಗ್ರಹಿಕೆ ಹಾಗೂ ಅಭಿವ್ಯಕ್ತಿ ಏಕಮುಖವಾಗಿರದೇ ಇಲ್ಲಿಯೂ ಬಹುತ್ವವು ಪ್ರಕಟವಾಗಿರುವುದು ಸಹಜವಾಗಿದೆ. ಅದೇ ಸರಿಯಾದ ಕ್ರಮವೂ ಹೌದು!


ಸೆಕ್ಸ್-ಜೆಂಡರ್
ಗಂಡು-ಹೆಣ್ಣುಗಳ ಭಿನ್ನತೆ ಒಂದು ಜೈವಿಕ ವಾಸ್ತವ. ಹೆಣ್ಣಿಗೊಂದು ಭಿನ್ನ ದೇಹವಿದೆ ಹಾಗೂ ಆಕಾರಣದಿಂದಲೇ ಅವಳಿಗೊಂದು ಭಿನ್ನ ಅನುಭವ ಜಗತ್ತಿದೆ. ಆ ಅನುಭವಗಳೇ ‘ಹೆಣ್ಣುತನವನ್ನು’ ರೂಪಿಸುತ್ತಿರುತ್ತವೆ. ಸಮಾಜಶಾಸ್ತ್ರೀಯ ನೆಲೆಯಿಂದ ನೋಡುವುದಾದರೆ ‘ಸೆಕ್ಸ್’ ಎನ್ನುವುದು ಜೈವಿಕವಾಗಿ ನಿರ್ಧರಿಸಲ್ಪಡುವ ಅಂಶ. ‘ಜೆಂಡರ್’ ಎನ್ನುವುದು ಮನಃಶಾಸ್ತ್ರೀಯ ಕಲ್ಪನೆ. ಭೀನ್ನದೇಹ ಹಾಗೂ ಅನುಭವಗಳನ್ನು ಹೊಂದಿರುವ ಹೆಣ್ಣು ಸಾಮಾಜೀಕರಣ ಹಾಗೂ ಸಾಂಸ್ಕøತೀಕರಣಗಳ ಪ್ರಕ್ರಿಯೆಯಲ್ಲಿ ‘ಹೆಣ್ಣಾಗಿ’ ರೂಪಿಸಲ್ಪಡುವುದು ಅವಳ ಖಾಸಗೀ ನೆಲೆಯನ್ನು ರಾಜಕೀಯಗೊಳಿಸುತ್ತದೆ. ಇದನ್ನೇ ಕೇಟ್ ಮಿಲ್ಲೆಟ್ ‘ಸೆಕ್ಶುಅಲ್ ಪೊಲಿಟಿಕ್ಸ್’ ಎಂದು ವ್ಯಾಖ್ಯಾನಿಸುತ್ತಾಳೆ. ಜೆಂಡರ್ ಎಂಬುದು ಸಾಂಸ್ಕøತಿಕವಾಗಿ ನಿರ್ಧರಿತವಾದ ಲಿಂಗೀಯ ವ್ಯಕ್ತಿತ್ವ, ಅದೊಂದು ಸಾಂಸ್ಕøತಿಕ ಪ್ರಕ್ರಿಯೆ. ಕನ್ನಡದ ಕವಯಿತ್ರಿಯರು ಈ ಎಲ್ಲ ಸಂಕೀರ್ಣ ನೆಲೆಗಳನ್ನು ತಮ್ಮ ಅಭಿವ್ಯಕ್ತಿಯಲ್ಲಿ ಮೂಡಿಸಿದ್ದಾರೆ. ‘ಹೆಣ್ತನ’ದ ಖಾಸಗಿ ಜಗತ್ತು ಇಲ್ಲಿ ಬಿಚ್ಚಿಕೊಂಡಿರುವಂತೆ, ‘ಮಹಿಳೆಯ’ರ ತಲ್ಲಣಗಳೂ ಧ್ವನಿಪಡೆದಿವೆ.
ದಲಿತ ಬಂಡಾಯ ಚಳುವಳಿಯ ಭಾಗವಾಗಿಯೇ ಬೆಳೆದ ಆಧುನಿಕೋತ್ತರ ಮಹಿಳಾ ಕಾವ್ಯವು ಆರಂಭದ ಹಂತಗಳಲ್ಲಿ ಸ್ಥಾಪಿತ ವ್ಯವಸ್ಥೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ ಪ್ರವೃತ್ತಿಯನ್ನು ಸಹಜವಾಗಿಯೇ ತಳೆದಿದೆ. ಆದರೆ, ಈ ಪ್ರತಿಕ್ರಿಯೆ ಸ್ತ್ರಿಯಾತ್ಮಕವಾಗಿರುವುದು ಹೊಸ ಸಾಧ್ಯತೆಯಾಗಿ ಕಂಡಿತು. ಎಪ್ಪತ್ತರ ದಶಕದ ಕೊನೆ ಹಾಗೂ ಎಂಭತ್ತರ ದಶಕಗಳಲ್ಲಿ ಆರಂಭವಾದ ಅಸ್ಮಿತೆಯ ಹುಡುಕಾಟವು ಕುಟುಂಬ, ಸಮಾಜ, ಆರ್ಥಿಕತೆ, ರಾಜಕೀಯಗಳಲ್ಲಿ ತನ್ನ ಸ್ಥಾನವನ್ನು ಗುರುತಿಸುವುದರೊಂದಿಗೆ ಆರಂಭವಾಯಿತು. ಮನುಕುಲದ ಇತಿಹಾಸದಲ್ಲಿ ಹೆಣ್ಣು ಕಾಣೇಯಾಗಿದ್ದಾಳೆಂಬ ಅರಿವಾಗಿದ್ದೇ ಸ್ತ್ರೀಯರಿಗೆ ಉಂಟಾದ ಬಹುದೊಡ್ಡ ಆಘಾತ. ಯುದ್ಧ, ರಾಜ್ಯವಿಸ್ತರಣೆ ಮುಂತಾದ ‘ಪೌರುಷ’ವೇ ಪ್ರಧಾನವಾದ ಇತಿಹಾಸದಲ್ಲಿ ಹೆಣ್ಣಿನ ಜೀವಪರ ಇತಿಹಾಸ ಕಾಣೆಯಾಗಿರುವುದು ಅವಳ ಕಾಣದಿರುವಿಕೆಗೆ ಕಾರಣ. ಪುರಾಣ ಪ್ರಪಂಚವನ್ನು ಒಳಹೊಕ್ಕರಂತೂ ಅಲ್ಲಿ ಹೆಣ್ಣು ತನ್ನ ಸಹಜ ಸಂವೇದನೆಯನ್ನು ಅದುಮಿಟ್ಟುಕೊಂಡು ಪತ್ನಿ, ತಾಯಿ, ಮಗಳು ಮುಂತಾದ ಮೌಲ್ಯಗಳ ಹೊರೆಯಲ್ಲಿಯೂ ಅಸಹಜವಾಗಿ ಕಾಣಿಸುತ್ತಾಳೆ. ಇಂಥ ಅರಿವು ಆರಂಭದ ಬರವಣಿಗೆಯನ್ನು ಪ್ರತಿಭಟನಾತ್ಮಕವಾಗಿ ರೂಪಿಸಿತು. ಸಂಸ್ಕøತಿಯು ಮುಂದಿಟ್ಟ ಮಾದರಿಗಳನ್ನು ಭಂಜಿಸುವ ಮೂಲಕ ಕವಯಿತ್ರಿಯರು ಹೊಸ ಚಹರೆಗಳಿಗಾಗಿ ಹಂಬಲಿಸತೊಡಗಿದರು.
ಭೂಮಿಯ ಮಗಳಾಗಿಯೂ
ಜಾನಕಿಯಾಗಿದ್ದೆ
ನನ್ನ ಸ್ವಂತ ಕನಸುಗಳಲ್ಲಿಯೂ
ರಾಮನ ಆಜ್ಞಾಪಾಲಕಿಯಾಗಿದ್ದೆ
ವನವಾಸಿಯಾಗಿ ಅವನ ನೆರಳಾಗಿದ್ದೆ…..
(ಅಸ್ಮಿತೆ, ಸುಕನ್ಯಾ ಮಾರುತಿ)

ಸೀತೆಯ ಮೂಲಕ ಅಸ್ಮಿತೆಯ ಪ್ರಶ್ನೆಯೆತ್ತುವ ಕವಯಿತ್ರಿ ಇಲ್ಲಿ ಪ್ರಾಕೃತಿಕವಾಗಿರುವ ಹೆಣ್ಣುತನ ಹಾಗೂ ಸಂಸ್ಕøತಿಯು ನಿರ್ದೇಶಿಸಿದ ಹೆಣ್ಣತನಗಳನ್ನು ಮುಖಾಮುಖಿಯಾಗಿಸುತ್ತಾರೆ. ಮಣ್ಣಿನ ಮಗಳಾದ ಸೀತೆ ತನ್ನ ಸ್ವಾಯತ್ತ ಶಕ್ತಿಯಿಂದ ಪ್ರಕೃತಿ ಸಹಜವಾಗಿ ಅರಳಬಹುದಿತ್ತು. ಆದರೆ, ಜನಕನ ಪುತ್ರಿಯಾಗಿ, ರಾಮನ ಪತ್ನಿಯಾಗಿ ‘ರೂಪುಗೊಂಡ’ ಅವಳು ಕನಸುಗಳಲ್ಲಿಯೂ ತಾನಾಗಿ ಉಳಿಯುವುದು ಸಾಧ್ಯವಾಗಲಿಲ್ಲ ಎಂಬುದು ಹರಿತವಾದ ವ್ಯಂಗ್ಯ. ಹೆಣ್ಣಿನ ಸುಪ್ತಪ್ರಜ್ಞೆಯಲ್ಲಿಯೂ ನೆರಳಾಗಿ ಕಾಡುವ ಅವಳದಲ್ಲದ ಬಿಂಬ ಸ್ವಂತ ಸಂವೇದನೆಯನ್ನು ಹೊಂದಲು ತಳಮಳಿಸುವ ಹೊಸ ಹೆಣ್ಣಿನ ಬಿಂಬಗಳನ್ನು ಮುಖಾಮುಖಿಯಾಗಿಸುವ ಸುಕನ್ಯಾರ ‘ಅಸ್ಮಿತೆ’ –

ಯಾರ ಸುತೆಯಾಗಿ ಸತಿಯಾಗಿ
ಮಾತೆಯಾಗಿ ಅಲ್ಲ
ಬರೀ ಸೀತೆಯಾಗಿ

ತನ್ನನ್ನು ಕಾಣಬಯಸುತ್ತದೆ. ಇದೇ ಮಾದರಿಯ ಅಸಂಖ್ಯ ಕವಿತೆಗಳು ಆಧುನಿಕೋತ್ತರ ಕಾವ್ಯ ಸಂದರ್ಭದಲ್ಲಿ ರಚನೆಯಾಗಿವೆ. ಸೀತೆ, ದ್ರೌಪದಿ, ಅಹಲ್ಯೆ, ಕುಂತಿ, ಶಕುಂತಲೆ, ಅಮೃತಮತಿಯರು ಅಸ್ಮಿತೆಯ ಹುಡುಕಾಟಕ್ಕೆ ರೂಪಕವಾಗಿದ್ದಾರೆ. ಅಷ್ಟೇ ಅಲ್ಲ, ಆ ಮೂಲಕ ಇಡೀ ಸಂಸ್ಕøತಿಯ ಕುರಿತಾದ ಗ್ರಹಿಕೆಗಳ ಬೇರನ್ನೇ ಅಲ್ಲಾಡಿಸಿದ್ದಾರೆ.

ಹೆಣ್ಣಿನ ದೇಹ-ಮನಸ್ಸುಗಳನ್ನು ಅವಳದಾಗಿರಲು ಬಿಡದಂತೆ ನಿರ್ಬಂಧಿಸುವಲ್ಲಿ ‘ಪಾತಿವ್ರತ್ಯ’ದಂತಹ ಮೌಲ್ಯಗಳ ಪಾತ್ರವೂ ಹಿರಿದು. ಪಾವಿತ್ರ್ಯದ ಏಕಮುಖ ಹೇರಿಕೆಯು ಅವಳನ್ನು ‘ಅವಳಾಗಿ’ ನೋಡಗೊಡಲಿಲ್ಲ. ಹೆಣ್ಣುದೇಹದ ಪ್ರಾಕೃತಿಕ ಬಯಕೆಗಳು ಹಾಗೂ ಪಾವಿತ್ರ್ಯದ ಮೌಲ್ಯಗಳು ಹೆಣ್ಣನ್ನು ಇಬ್ಬಂದಿಗೆ ತಳ್ಳುತ್ತ ಅಪರಾಧಿ ಪ್ರಜ್ಞೆಯಲ್ಲಿ, ಕೀಳರಿಮೆಯಲ್ಲಿ ನರಳುವಂತೆ ಮಾಡಿವೆ. ಪತಿವ್ರತೆಯಾಗುವುದಕ್ಕೂ ಮುನ್ನ ‘ಹೆಣ್ಣಾಗಬೇಕು’ ಎಂಬ ಹಂಬಲ ಅಸ್ಮಿತೆಯ ಮತ್ತೊಂದು ನೆಲೆ.

ನಾನು ಕರಗಲಿಕ್ಕೆ ಪಾಪ ಹುಡುಗ
ರಾಮನ ಕಾವೇ ಸಿಗಲಿ ಎಂಬುದು
ಗೌತಮನ ಇಚ್ಛೆ
ನನಗೋ ಬರಿ ಮಾನವಳಾಗುವ ಬಯಕೆ
ನನಗೆ ಗೊತ್ತು
ಮತ್ತೆ ಗೌತಮನ ಸರ್ಪ
ಹೆಡೆಯೆತ್ತಲಾರದು
ನನ್ನೊಳಗೆ ಏನನ್ನೂ ಬಿತ್ತಲಾರದು
ರಾಮಸ್ಪರ್ಷಕ್ಕೆ
ಶಿಲೆ, ಸ್ಫೋಟವಾಗಿದೆ ಅಷ್ಟೇ
ಹೆಣ್ಣಾಗಲಿಲ್ಲ
(ಅಹಲ್ಯೆ, ಸುಕನ್ಯಾ ಮಾರುತಿ)

ಇಂಥ ಅಪ್ಪಟ ಹೆಣ್ಣುದೇಹದ ಮಿಡಿತಗಳನ್ನು ಕೇಳಿಸುವ ಮೂಲಕ ಅಂದಿನ ಕವಯಿತ್ರಿಯರು ‘ಕಲ್ಚರಲ್ ಶಾಕ್’ ನೀಡಿದರು. ಇದು ಒಂದು ಪರಿಣಾಮಕಾರಿ ತಂತ್ರವೂ ಹೌದು. ಇದೇ ನೆಲೆಯಲ್ಲಿ ಎಚ್.ಎಲ್.ಪುಷ್ಪ ಅವರ ‘ಅಮೃತಮತಿಯ ಸ್ವಗತ’ ಗಮನಾರ್ಹವಾದ ಕವಿತೆ. ಹೆಣ್ಣುದೇಹದ, ಹೆಣ್ಣು ಮನಸ್ಸಿನ ರಾಗಗಳನ್ನು ಬಡಿದೆಬ್ಬಿಸುವ ಬದಗಾನ ಸ್ವರ ಇಲ್ಲಿ ಒಂದು ನೆಪ. ಹೆಣ್ಣಿನ ದೇಹ, ಮನಸ್ಸಿನ ಮೇಲೆ ‘ಯಜಮಾನಿಕೆ’ ಸ್ಥಾಪಿಸುವ ಅಧಿಕಾರ ಸಂಬಂಧದ ನೆಲೆಯನ್ನು ದೇಹಭಾಷೆಯ ಮೂಲಕ ಎದುರಾಗುವ ಕ್ರಮ ಈ ಕವಿತೆಯಲ್ಲಿ ಸ್ತ್ರೀಸಂವೇದನೆಯ ವಿಭಿನ್ನ ಸ್ವರವೊಂದನ್ನು ಮೂಡಿಸಿದೆ.

ಪಾವಿತ್ರ್ಯದ ನೆಲೆ ಹೆಣ್ಣಿಗೆ ಅದೆಷ್ಟು ಮುಖ್ಯವೆಂದು ಬಿಂಬಿಸಲಾಗಿದೆಯೆಂದರೆ, ಅತ್ಯಾಚಾರಕ್ಕೊಳಗಾದ ಹೆಣ್ಣು ಇನ್ನೆಂದೂ ತಲೆಯೆತ್ತಿ ಬದುಕಲಾರದವಳಾಗಿ ಕುಸಿದು ಹೋಗುತ್ತಾಳೆ. ಇಂಥ ‘ಹುಸಿಭ್ರಮೆ’ಗಳನ್ನು ಸೃಷ್ಟಿಸುವ ಮೂಲಕ ಹೆಣ್ಣು ದೇಹವನ್ನು, ಆ ಮೂಲಕ ಅವಳ ಧೀಶಕ್ತಿಯನ್ನು ಹೊಸಕಿ ಹಾಕುವ ಮಾನಸಿಕ ಅತ್ಯಾಚಾರದ ಕ್ರೌರ್ಯ ಇನ್ನೂ ದೊಡ್ಡದು. ದೇಹಕ್ಕಂಟಿದ ಮೌಲ್ಯಗಳನ್ನು ನಿರಾಕರಿಸುವ ಮೂಲಕ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ‘ದೋಪ್ದಿ’ (ದ್ರೌಪದಿ) ಮಹಾಶ್ವೇತಾದೇವಿಯವರ ಕಾದಂಬರಿಯೊಂದರ ಪಾತ್ರ. ಇಂಥ ಪ್ರತಿರೋಧದ ಗಟ್ಟಿ ನೆಲೆಯನ್ನು ಕನ್ನಡಕಾವ್ಯದಲ್ಲಿ ಕಸಿಕಟ್ಟಿದವರು ಎಚ್.ಎಲ್.ಪುಷ್ಪ. ಪುರಾಣದ ದ್ರೌಪದಿಯಿಂದ ವರ್ತಮಾನದ ದೋಪ್ದಿಯವರೆಗೆ ಈ ಪ್ರತಿರೋಧ ಗುಪ್ತಗಾಮಿನಿಯಾಗಿ ಹರಿಯುತ್ತ ಬಂದಿದೆಯೆಂಬ ಸುಳಿವು ಸ್ತ್ರೀಸಂವೇದನೆಯ ಹೊಸ ನೆಲೆಯೊಂದನ್ನು ತೆರೆದಿಡುತ್ತದೆ.

ಚಿಂದಿ ದೋಪ್ದಿಯ ಕೈಯಲ್ಲಿ ಹಿಡಿಮಣ್ಣು
ತೂರು ಮಣ್ಣನ್ನು ತೂರಿ
ಹರಿದ ಮೊಲೆಗಳ ಚಾಚಿ
ಅಣತಿಕೊಡುತ್ತಾಳೆ ಜಗತ್ತಿಗೆ
ನಾನು ಪ್ರಕೃತಿ, ನಾನು ಹೆಣ್ಣು, ನಾನು ತಾಯಿ
ಬಿಚ್ಚುವುದು, ಹರಿದೊಗೆಯುವುದು ಸುಲಭ
ತೊಡಿಸುವವರಿದ್ದರೆ ಬನ್ನಿ ತೊಡುಗೆ
ಈ ಹರಿದ ಮೈಗೆ, ಒಡೆದ ಕನಸುಗಳಿಗೆ
(ದೋಪ್ದಿ ಹಾಗೂ ಹೆಜ್ಜೆಗಳು, ಎಚ್.ಎಲ್.ಪುಷ್ಪ)

ದೇಹದ ಮೂಲಕ ಹೆಣ್ಣಿನ ಮನೋಲೋಕವನ್ನು ಘಾಸಿಗೊಳಿಸಲೆತ್ನಿಸುವ ‘ವ್ಯವಸ್ಥೆ’ಗೆ ಹೆಣ್ಣು ಕೊಡುವ ಈ ಆಘಾತ ಅತ್ಯಂತ ಶಕ್ತಿಶಾಲಿಯಾದುದು. ಪ್ರಕೃತಿ ಎಂದಿಗೂ ಪವಿತ್ರವೇ. ಬೆಂಕಿಯನ್ನು ಸುಡಲು, ನೀರನ್ನು ಒದ್ದೆಮಾಡಲು, ಆಕಾಶವನ್ನು ಬಂಧಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಹೆಣ್ತನವನ್ನು ನಾಶಮಾಡಲಾಗದು ಎಂಬ ಆತ್ಮಗೌರವದ ಸ್ವಾಯತ್ತ ನೆಲೆ ಇಲ್ಲಿ ಪಾವಿತ್ರ್ಯದ ನೆಲೆಯನ್ನು ಹುಸಿಗೊಳಿಸಿಬಿಡುತ್ತದೆ. ಹಿಂಸೆಯ ಬದಲಿಗೆ ಜೀವಪರ ಮೌಲ್ಯಗಳನ್ನು ತೊಡುವಂತೆ ಲೋಕವನ್ನು ಈ ಕವಿತೆ ಆಹ್ವಾನಿಸುತ್ತದೆ.

(ಮುಂದುವರೆಯುವುದು…..)

3 thoughts on “ಸಖೀಗೀತ-10 – ಹೊಸ ನದಿಯ ಹರಿವು…

  • October 24, 2017 at 12:37 PM
    Permalink

    Hi there! Would you mind if I share your blog with my zynga group? There’s a lot of folks that I think would really appreciate your content. Please let me know. Cheers

  • October 24, 2017 at 1:03 PM
    Permalink

    I do consider all the concepts you have presented on your post. They are very convincing and can definitely work. Still, the posts are too quick for novices. Could you please lengthen them a little from subsequent time? Thanks for the post.

Comments are closed.

Social Media Auto Publish Powered By : XYZScripts.com