ಎಐಎಡಿಎಂಕೆ ಪಕ್ಷದ ಚಿನ್ಹೆ ಹಿಂದಕ್ಕೆ ಪಡೆದ ಆಯೋಗ- ಉಭಯ ಬಣಕ್ಕೆ ಹೊಸ ಚಿನ್ಹೆ…

ಚೆನ್ನೈ : ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಎಐಎಡಿಎಂಕೆ ಪಕ್ಷದ ಚಿನ್ಹೆಯನ್ನು ಹಿಂದಕ್ಕೆ ಪಡೆದಿದ್ದು, ಉಪ ಚುನಾವಣೆಗಾಗಿ ಶಶಿಕಲಾ ಬಣಕ್ಕೆ ಟೋಪಿ ಮತ್ತು ಪನ್ನೀರ್ ಸೆಲ್ವಂ ಬಣಕ್ಕೆ ವಿದ್ಯುತ್ ಕಂಬದ  ಚಿನ್ಹೆಯನ್ನು ಅಧಿಕೃತ ಗುರುತಾಗಿ ನೀಡಿದೆ.
ಎಐಎಡಿಎಕೆ ಪಕ್ಷದ ಚಿನ್ಹೆಯಾಗಿದ್ದ ಎರಡು ಎಲೆಗಳ ಗುರುತಿಗಾಗಿ ಮಾಜಿ ಸಿಎಂ ಒ ಪನ್ನೀರ್ ಸೆಲ್ವಂ ಬಣ ಹಾಗೂ ಶಶಿಕಲಾ ಬಣಗಳು ಪಟ್ಟು ಹಿಡಿದಿದ್ದರಿಂದ ಪಕ್ಷದ ಅಧಿಕೃತ ಚಿನ್ಹೆಯನ್ನು ಚುನಾವಣಾ ಆಯೋಗ ಸಧ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಉಪ ಚುನಾವಣೆ ನಿಮಿತ್ತ ಉಭಯ ಬಣಗಳಿಗೂ ಚಿನ್ಹೆಯ ಅವಕಾಶ ನೀಡಿತ್ತು. ಈ ಪೈಕಿ ಶಶಿಕಲಾ ಬಣ ತಮ್ಮ ಚಿನ್ಹೆಯಾಗಿ ಆಟೋ ರಿಕ್ಷಾ, ಕ್ರಿಕೆಟ್ ಬ್ಯಾಟ್ ಮತ್ತು ಟೋಪಿಯನ್ನು ನೀಡುವಂತೆ ಕೇಳಿತ್ತು. ಇದೀಗ ಶಶಿಕಾಲ ಬಣಕ್ಕೆ ಚುನಾವಣಾ ಆಯೋಗ ಟೋಪಿಯನ್ನು ಚಿನ್ಹೆಯಾಗಿ ನೀಡಿದೆ. ಹಾಗೆಯೇ ಪನ್ನೀರ್ ಸೆಲ್ವಂ ಬಣಕ್ಕೆ ವಿದ್ಯುತ್ ಕಂಬವನ್ನು ಚಿನ್ಹೆಯಾಗಿ ನೀಡಿದೆ.
ಶಶಿಕಲಾ ಬಣದಿಂದ ಎಐಎಡಿಎಂಕೆ ಉಪ ಪ್ರಧಾನಕಾರ್ಯದರ್ಶಿ ದಿನಕರನ್ ಸ್ಪರ್ಧಿಸಿದ್ದರೆ, ಸೆಲ್ವಂ ಬಣದಿಂದ ಎಐಎಡಿಎಂಕೆ ಉಚ್ಚಾಟಿತ  ಅಧ್ಯಕ್ಷ ಮಧುಸೂಧನ್ ಕಣದಲ್ಲಿದ್ದಾರೆ. ಜಯಲಲಿತಾ ನಿಧನದಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಯಾವ ಬಣವನ್ನು ಬೆಂಬಲಿಸಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಬಳಿಕ ಒಡೆದು ಹೋಗಿರುವ ಎಐಎಡಿಎಂಕೆ ಪಕ್ಷ ಎರಡು ಬಣಗಳಾಗಿ ಮಾರ್ಪಟ್ಟಿದ್ದು, ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣ ತಮ್ಮ ಬಣಕ್ಕೆ ಎಐಎಡಿಎಂಕೆ ಪುರುಚ್ಚಿ ತಲೈವಿ ಅಮ್ಮಾ ಎಂದು ಹೆಸರಿಟ್ಟುಕೊಂಡಿದ್ದರೆ, ಜಯಾ ಆಪ್ತೆ ಶಶಿಕಲಾ ಬಣ ತಮ್ಮ ಬಣಕ್ಕೆ ಎಐಎಡಿಎಂಕೆ ಅಮ್ಮಾ ಎಂದು ಹೆಸರಿಟ್ಟುಕೊಂಡಿದೆ.

Comments are closed.