ಲಾಲ್ ಬಾಗಿನಲ್ಲಿ ಮರಗಳ ಮಾರಣಹೋಮ !

ಸಸ್ಯಕಾಶಿ ಲಾಲ್ ಬಾಗಿನಲ್ಲಿ ಬರೋಬ್ಬರಿ 9 ಮರಗಳನ್ನು ಧರೆಗುರುಳಿಸುವ ಕೆಲಸಕ್ಕೆ ಇಂದು ಚಾಲನೆ ನೀಡಲಾಗಿದೆ. ತೋಟಗಾರಿಕಾ ಇಲಾಖೆಯ ಆದೇಶದ ಮೇಲೆ 100 ವರ್ಷಕ್ಕೂ ಹೆಚ್ಚಿನ ವಯಸ್ಸಾದ ಮರಗಳಿಗೆ ಅಂತ್ಯ ಹಾಡಲಾಗ್ತಿದೆ.

ಈ ಮರಗಳು ನೂರಕ್ಕೂ ಹೆಚ್ಚು ವಸಂತಗಳನ್ನು ಕಂಡಿವೆ. ಆದ್ರೆ ಈಗ ಅವುಗಳ ಬುಡಗಳೆಲ್ಲಾ ಕುಂಬಾಗಿ, ಗೆದ್ದಲು ಹಿಡಿದು ಬಲಹೀನವಾಗಿವೆ. ಯಾವುದೇ ಚಿಕಿತ್ಸೆ ಅವುಗಳನ್ನು ಮತ್ತೆ ಶಕ್ತಿಯುತವಾಗಿ ಮಾಡಲು ಸಾಧ್ಯವಿಲ್ಲ. ಹಾಗಂತ ಸುಮ್ಮನೇ ಬಿಟ್ಟರೆ ಒಂದು ಸಣ್ಣ ಗಾಳಿ ಕೂಡಾ ಈ ಮರಗಳನ್ನು ನೆಲಕ್ಕುರುಳಿಸಬಲ್ಲದು. ಆಗ ಅಕ್ಕಪಕ್ಕದಲ್ಲಿರುವ ಬೇರೆ ಮರಗಳು ಅಥವಾ ಸುತ್ತಮುತ್ತ ಓಡಾಡುವ ಪ್ರಾಣಿಗಳು ಮತ್ತು ಜನರ ಮೇಲೆ ಬಿದ್ದು ಅನಾಹುತ ಉಂಟಾಗಬಹುದು.

ಹಾಗಾಗಿ ತೋಟಗಾರಿಕಾ ಇಲಾಖೆ ತಜ್ಞರ ವಿಶೇಷ ತಂಡ ರಚಿಸಿ ಸಮಿತಿಯ ಅನುಮೋದನೆ ಮೇರೆಗೆ ಈ ಮರಗಳನ್ನು ಕಡಿಯಲಾಗುತ್ತಿದೆ. ಇಂದಿನಿಂದ ಶುರುವಾಗಿರುವ ಕಾಮಗಾರಿ ಒಂದೆರಡು ದಿನಗಳವರಗೆ ಮುಂದುವರೆಯಲಿದೆ. ಮರಗಳನ್ನು ಕಡಿದಾದ ಮೇಲೆ ಆ ಮಣ್ಣಿಗೆ ಒಂದಷ್ಟು ಚಿಕಿತ್ಸೆ ನೀಡಲಾಗುತ್ತದೆ. ಹಿಂದಿದ್ದ ಮರಕ್ಕೆ ತಗುಲಿದ್ದ ಯಾವುದೇ ಫಂಗಲ್ ಸೋಂಕು ಮಣ್ಣಿನ ಮೂಲಕ ಮತ್ತೆ ಅಲ್ಲಿ ಹುಟ್ಟುವ ಹೊಸ ಗಿಡಕ್ಕೂ ತಗಲಬಾರದು ಎನ್ನುವದು ಇದರ ಹಿಂದಿನ ಉದ್ದೇಶ.

ಮಣ್ಣಿನ ಚಿಕಿತ್ಸೆಯ ನಂತರ ನೆಲಕ್ಕುರುಳಿದ ಪ್ರತಿ ಮರಕ್ಕೆ ಬದಲಾಗಿ 10 ಹೊಸ ಸಸಿಗಳನ್ನು ನೆಡುವ ನಿರ್ಧಾರ ಮಾಡಿದೆ ತೋಟಗಾರಿಕಾ ಇಲಾಖೆ. ಆದ್ರೆ 100 ವರ್ಷಗಳವರಗೆ ಆಕಾಶಕ್ಕೆ ಕೈಚಾಚಿದ್ದ ಬೃಹತ್ ವೃಕ್ಷಗಳು ಗರಗಸದ ಹಲ್ಲಿಗೆ ಸಿಕ್ಕು ಮೂರೇ ನಿಮಿಷಕ್ಕೆ ಕೇವಲ ಕಟ್ಟಿಗೆಯಾದ ದೃಶ್ಯ ಮಾತ್ರ ನಿಜಕ್ಕೂ ಕರುಣಾಜನಕ.

Comments are closed.

Social Media Auto Publish Powered By : XYZScripts.com