ಮತಯಂತ್ರದ ದೋಷದಿಂದಲೇ ಬಿಜೆಪಿಗೆ ಗೆಲುವು!

ಉತ್ತರಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ ಸೋಲು ಕಾಣುತ್ತಿದ್ದಂತೆ ಮಾಯಾವತಿ ಸಿಡಿಮಿಡಿಗೊಂಡಿದ್ದು, ಬಿಜೆಪಿಯ ಭರ್ಜರಿ ಗೆಲುವಿಗೆ ಮತ ಯಂತ್ರದಲ್ಲಿ ನಡೆದಿರುವ ಮೋಸವೇ ಕಾರಣ ಎಂದು ಗುಡುಗಿದ್ದಾರೆ.
ಮತಯಂತ್ರಗಳು (ಟೆಂಪರಿಂಗ್‌ ಆಫ್‌ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್ಸ್) ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳ ಮತಗಳನ್ನ ಸ್ವೀಕರಿಸುತ್ತಿರಲಿಲ್ಲ, ಅಥವಾ ಯಾವ ಪಕ್ಷಗಳಿಗೆ ಮತ ಹಾಕಿದರೂ ಅದು ಬಿಜೆಪಿಗೆ ಸೇರುವಂತೆ ತಾಂತ್ರಿಕ ಹೊಂದಾಣಿಕೆ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ 403 ಕ್ಷೇತ್ರಗಳಲ್ಲಿ ಬಿಎಸ್‌ಪಿ ಕೇವಲ 17 ಕ್ಷೇತ್ರಗಳನ್ನು ಮಾತ್ರ ಗೆದ್ದಿದೆ. ಅದಲ್ಲದೆ  ಕಾಂಗ್ರೆಸ್ ಮತ್ತು ಎಸ್‌ಪಿ ಪಕ್ಷಗಳನ್ನ ಹಿಂದಿಕ್ಕಿ ಮುಸ್ಲಿಂ ಮತದಾರರಿರುವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೂಡ ಬಿಜೆಪಿ ಗೆಲುವು ಕಂಡಿದೆ. ಇವೆಲ್ಲವುಗಳನ್ನು ಗಮನಿಸಿದರೆ ಮತಯಂತ್ರದಲ್ಲಿಯೇ ದೋಷವಿದೆ ಎಂಬುವುದು ಸಾಬೀತಾಗುತ್ತದೆ ಎಂದು ಮಾಯಾವತಿ ಗುಡುಗಿದ್ದಾರೆ.
ಬಿಎಸ್‌ಪಿ ನಾಯಕಿ ಮಾಯಾವತಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಅವರಿಗೆ ಸವಾಲು ಹಾಕಿ ಮತ್ತೊಮ್ಮೆ ಚುನಾವಣೆ ನಡೆಸಿ ಗೆದ್ದು ತೋರಿಸಿ ಎಂದಿದ್ದಾರೆ. ಜೊತೆಗೆ ಮತಯಂತ್ರದಲ್ಲಿ ನಡೆದಿರುವ ಮೋಸದ ಕುರಿತು ತಾವು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದು ಅಬ್ಬರಿಸಿದ್ದಾರೆ.

Comments are closed.

Social Media Auto Publish Powered By : XYZScripts.com