ಫುಟ್ಬಾಲ್ ಪಂದ್ಯಾವಳಿಗೆ ವಾಯು ಮಾಲಿನ್ಯ ಭೀತಿ!

ಹದಿನೇಳು ವರ್ಷಕ್ಕಿಂತ ಕಿರಿಯರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯು ಭಾರತದಲ್ಲಿ ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದ್ದು, ಪಂದ್ಯಗಳು ದೆಹಲಿ ಸೇರಿದಂತೆ ರಾಷ್ಟ್ರದ ವಿವಿಧ ನಗರಗಳ ಕ್ರೀಡಾಂಗಣಗಳಲ್ಲಿ ಜರುಗಲಿವೆ.

ಅಕ್ಟೋಬರ್ ತಿಂಗಳಲ್ಲಿ ದೀಪಾವಳಿ ಹಬ್ಬವಿದ್ದು, ಆ ಸಮಯದಲ್ಲಿ ಪಟಾಕಿ ಸುಡುವುದರಿಂದ ವಾಯು ಮಾಲಿನ್ಯ ಉಂಟಾಗುವ ಸಾಧ್ಯತೆಗಳಿವೆ. ಜೊತೆಗೆ ಚಳಿಗಾಲದ ಆ ಸಮಯದಲ್ಲಿ ದಟ್ಟವಾದ ಮಂಜು ಬೀಳುವ ಭೀತಿ ಇದೆ.

ಪಟಾಕಿ ಸುಡುವುದರಿಂದ ಉಂಟಾಗುವ ವಾಯು ಮಾಲಿನ್ಯ ಹಾಗೂ ಮಂಜಿನಿಂದ ಕಿರಿಯರ ವಿಶ್ವಕಪ್ ಫುಟ್ಬಾಲ್ ಪಂದ್ಯಗಳಿಗೆ ಅಡಚಣಿ ಉಂಟಾಗುವ ಸಾಧ್ಯತೆಗಳಿದ್ದು, ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ನಡೆಸಲು ಉದ್ಧೇಶಿಸಿರುವ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಫಿಫಾ ಚಿಂತನೆ ನಡೆಸಿದೆ ಎಂದು ಫಿಫಾದ ನಿರ್ಧೇಶಕ ಜಾವೀರ್ ಸಿಪ್ಪಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಹವಾಮಾನದ ಬಗ್ಗೆ ನಮಗೆ ತೀರಾ ಆತಂಕವಿದೆ. ದೀಪಾವಳಿ ಹಬ್ಬದ ನಂತರ ವಿಶ್ವಕಪ್ ಪಂದ್ಯಾವಳಿ ನಡೆಯುವುದರಿಂದ ವಾಯು ಮಾಲಿನ್ಯದ ಜೊತೆಗೆ ಆ ಸಮಯದಲ್ಲಿ ಮಂಜಿನ ಸಮಸ್ಯೆ ಕಾಡುವ ಭೀತಿ ಇದೆ ಎಂದರು.

ಪಂದ್ಯಗಳ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಇದಕ್ಕೆ ಪರಿಸರ ಮಾಲಿನ್ಯದ ಭೀತಿ ಕೂಡ ಒಂದು ಕಾರಣವೆನಿಸಿದೆ. ವಿಶೇಷವಾಗಿ ದೆಹಲಿಯಲ್ಲಿ ಪರಿಸರ ಮಾಲಿನ್ಯ ಹಾಗೂ ಮಂಜಿನ ಸಮಸ್ಯೆ ಎದುರಾಗುವ ಭೀತಿ ನಮಗಿದೆ ಎಂದು ಅವರು ವಿವರಿಸಿದರು.

ಒಂದೆರಡು ದಿನಗಳಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ನಡೆಯುವ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು  ಫಿಫಾದ ನಿರ್ಧೇಶಕ ಜಾವೀರ್ ಸಿಪ್ಪಿ ತಿಳಿಸಿದರು.

ಭಾರತವು ಹದಿನೇಳು ವರ್ಷಕ್ಕಿಂತ ಕಿರಿಯರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು 2017 ರಲ್ಲಿ ಸಂಘಟಿಸಲಿದ್ದು, ದೆಹಲಿ ಸೇರಿದಂತೆ ರಾಷ್ಟ್ರದ ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು 2013 ರಲ್ಲಿಯೇ ಫಿಫಾ ಪ್ರಕಟಿಸಿದೆ.

Comments are closed.