ಮೈಮನ ತಣಿಸುವ ಬ್ಯಾಂಕಾಕ್!

ಹೊಂದಾಣಿಕೆ ಹಾಗೂ ಸೌಂದರ್ಯದ ಯುಗಕ್ಕೆ ಯಾವುದೇ ಬೌಂಡ್ರಿ ಇರೋದಿಲ್ಲ. ಕಲೆ, ಚಿತ್ರಕಲೆ, ವಾಸ್ತು ಶಿಲ್ಪಗಳೇ ಇವಕ್ಕೆ ಸಾಕ್ಷಿ. ಅದರಲ್ಲೂ ಪೂರ್ವಜರಿಂದ ನೀಡಲ್ಪಟ್ಟ ಕಲೆಯ ಪ್ರತಿಯೊಂದು ತುಣುಕುಗಳು ಅತ್ಯಮೂಲ್ಯ.  ಇವುಗಳಲ್ಲಿ ಕೆಲವು ವಿಶ್ವ ನಿಧಿ ಪಾಲಾಗಿದ್ದರೆ, ಮತ್ತೆ ಕೆಲವು ಕಲಾಪ್ರೇಮಿಗಳ ಕೈ ಸೇರಿರುತ್ತೆ. ವಿಶೇಷವೆಂದರೆ ಇಂತಹ ಕಲೆಗಳಿಗೆ ಯಾವುದೇ ಧರ್ಮ, ರಾಷ್ಟ್ರೀಯತೆ, ಹಾಗೂ ಸಮಯದ ಮಿತಿಗಳು ಅಡ್ಡಿಯಾಗೋದಿಲ್ಲ. ಎಂತಹ ಸಂದರ್ಭದಲ್ಲೂ ಮಾನವನ ಮನಸ್ಸನ್ನ ಚೈತನ್ಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.                           ಇಂತಹ ಅದೆಷ್ಟೋ ಶಿಲ್ಪಕಲೆಗಳ ನಾಡುಗಳಲ್ಲಿ ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ಕೂಡ ಒಂದು. ಬುದ್ಧನ ದೇಶ ಎಂದೇ ಹೆಸರುವಾಸಿಯಾಗಿರೋ ಈ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ದೇಗುಲಗಳು, ಅರಮನೆಗಳು, ಯುಧ್ಧಗಳ ಬಗ್ಗೆ ತಿಳಿಯುತ್ತಾ ಹೋದಂತೆ…  ಥೈಲ್ಯಾಂಡ್ ಇತಿಹಾಸ ಮತ್ತೆ ಮರುಕಳಿಸುತ್ತೆ. ಬ್ಯಾಂಕಾಕ್ ಹಿಸ್ಟರೀ ಹೀಗೆ ಸಾಗ್ತಾ ಹೋದ್ರೆ, ಇಲ್ಲಿನ  ವಾಸ್ತವ ಬದುಕು ಮತ್ತಷ್ಟು ವಿಭಿನ್ನವಾಗಿದೆ.

ಹಲವಾರು ಜಿಲ್ಲೆಗಳನ್ನು ಹೊಂದಿದ್ದು, ಅತಿ ವಿಸ್ತಾರವಾದ ನಗರ ಇದಾಗಿದೆ. ಅಧಿಕೃತ ಕಾಲುವೆ, ಭವ್ಯವಾದ ದೇವಾಲಯಗಳು, ಕಿಕ್ಕಿರಿದ ಟ್ರ್ಯಾಫಿಕ್, ಬಿಡುವಿಲ್ಲದ ಮಾರ್ಕೆಟ್ ಹಾಗೂ ರೋಮಾಂಚಕ ನೈಟ್ ಲೈಫ್ ಬ್ಯಾಂಕಾಕ್ ಹೈಲೈಟ್ಸ್. ಬ್ಯಾಂಕಾಕ್ ಹೆಸರು… ನದಿ ಹಾಗೂ ಕಾಲುವೆ ಪಕ್ಕದಲ್ಲೇ ನಿರ್ಮಿತಗೊಂಡ ಗ್ರಾಮ ಎಂದು ವಿವರಿಸಲಾಗುತ್ತೆ. ವಿಶೇಷವೆಂದರೆ, ಇಲ್ಲಿನ ಜನರು ರಾಮಾಯಣವನ್ನು ಪಾಲಿಸುವವರು. ಬ್ಯಾಂಕಾಕ್ ನಗರದ ಮುದ್ರೆ, ವಜ್ರಾಯುಧದೊಂದಿಗೆ ಐರಾವತದಲ್ಲಿ ಪ್ರಯಾಣ ಮಾಡೋ ಇಂದ್ರನಿಂದ ಕೂಡಿದೆ. ರಾಜಮನೆತನದ ಧ್ವಜದಲ್ಲೂ, 3 ತಲೆಗಳನ್ನು ಹೊಂದಿರೋ ಆನೆಗಳ ಚಿತ್ರವನ್ನು ಕಾಣಬಹುದು. ಶೇ.60 ರಷ್ಟು ಬೌಧ್ಧರನ್ನು ಹೊಂದಿರೋ ಈ ನಾಡಿನಲ್ಲಿ ನೋಡಲೇ ಬೇಕಾದ ಪ್ರಮುಖ ಬೌಧ್ಧ ದೇವಾಲಯಗಳ ವಿವರ ಇಲ್ಲಿದೆ.

ವಾಟ್ ಫ್ರಾ ಕೇವ್ :  ಇದನ್ನು ಟೆಂಪಲ್ ಆಫ್ ಎಮರಾಲ್ಡ್ ಬುಧ್ಧ ಅಂತಲೂ ಕರೆಯುತ್ತಾರೆ. ಬ್ಯಾಂಕಾಕ್ ಅರಮನೆ ಆವರಣದಲ್ಲೇ ಈ ದೇಗುಲವನ್ನು ಕಾಣಬಹುದು. 15 ನೇ ಶತಮಾನದ ಟೆಂಪಲ್, ಥಾಯಿ ಜನರಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಒಂದೇ ಪಚ್ಚೆಕಲ್ಲಿನಿಂದ ತಯಾರಿಸಲ್ಪಟ್ಟ ಈ ಬುಧ್ಧ, 66 ಸೆಂಟಿ ಮೀಟರ್ ಎತ್ತರ ಹೊಂದಿದೆ. ಇಲ್ಲಿನ 2 ಕಿಲೋ ಮೀಟರ್ ಉದ್ದದ ಗ್ಯಾಲರೀ,  ಮ್ಯೂರಲ್ ಪೇಂಟಿಂಗ್ ನಿಂದ ತುಂಬಿ ಹೋಗಿವೆ. ರಾಮಾಯಣದ 178 ದೃಶ್ಯಗಳನ್ನ ಇಲ್ಲಿ ಚಿತ್ರಿಸಲಾಗಿದೆ. ಧ್ಯಾನಕ್ಕೆ ಕುಳಿತಂತೆ ಇರೋ ಈ ಬುಧ್ಧನ ಪ್ರತಿಮೆ, ಪ್ರವಾಸಿಗರನ್ನ ಮಂತ್ರಮುಗ್ದರನ್ನಾಗಿಸುತ್ತದೆ.

ವಾಟ್ ಫೋ { ಟೆಂಪಲ್ ಆಫ್ ದ ರಿಕ್ಲೈನಿಂಗ್ ಬುಧ್ಧ} : ಭಾರತದಲ್ಲಿ ನೆಲೆಸಿದ್ದಾರೆನ್ನಲಾದ ಸನ್ಯಾಸಿಯೊಬ್ಬರ ಹೆಸರಿನ ಮೂಲಕ ಈ ದೇಗುಲವನ್ನು ಕರೆಯಲಾಗುತ್ತೆ. 15 ಮೀಟರ್ ಎತ್ತರ, 43 ಮೀಟರ್ ಉದ್ದ ಹಾಗೂ ಬಂಗಾರದ ಎಲೆಗಳನ್ನು ಹೊಂದಿರೋ 4 ಮೀಟರ್ ಉದ್ದದ ಕಾಲುಗಳು ಈ ಮೂರ್ತಿಯ ವಿಶೇಷತೆ. ಈ ದೇಗುಲದ ಆವರಣದಲ್ಲಿ, ಸಣ್ಣಪುಟ್ಟ ಸೇರಿದಂತೆ ಸುಮಾರು 1,000 ಬುಧ್ಧನ ಪ್ರತಿಮೆಗಳನ್ನು ಕಾಣಬಹುದು. ಅಲ್ಲದೆ ಇಲ್ಲಿರೋ 61 ಸ್ತೂಪಗಳಲ್ಲಿ 4 ಸ್ತೂಪಗಳನ್ನು ಚಕ್ರಿ ರಾಜವಂಶಕ್ಕೆ ಅರ್ಪಿಸಲಾಗಿದೆ. ವಿಶೇಷವೆಂದರೆ, ಮೊತ್ತ ಮೊದಲ ಥಾಯಿ ಮಸಾಜ್ ಶಾಲೆಯನ್ನು ಇದೇ ದೇಗುಲದ ಆವರಣದಲ್ಲಿ ಪ್ರಾರಂಭಿಸಲಾಗಿತ್ತು. ಈ ದೇಗುಲದಲ್ಲಿ 108 ಅದೃಷ್ಟದ ಸಂಖ್ಯೆ. ಇವುಗಳಲ್ಲಿ ನಂಬಿಕೆ ಉಳ್ಳವರಿಗಾಗಿ ಇಲ್ಲಿರೋ 108 ತಾಮ್ರದ ಬಟ್ಟಲುಗಳಿಗೆ ಪ್ರತಿ ಒಂದರಂತೆ 108 ನಾಣ್ಯಗಳನ್ನು ಹಾಕೋ ಅವಕಾಶ ಮಾಡಲಾಗಿದೆ. ಈ ನಾಣ್ಯಗಳನ್ನು ದೇಗುಲದಲ್ಲೇ ಖರೀದಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿಯೊಂದು ಬಟ್ಟಲುಗಳಿಗೆ ನಾಣ್ಯಗಳನ್ನ ಹಾಕ್ತಾ ಹೋದಾಗ ಕೇಳೋ ಶಬ್ದ, ಘಂಟೆಯ ಧ್ವನಿಯಂತೆ ಭಾಸವಾಗೋದು ರೋಮಾಂಚನಕಾರಿ ಅನುಭವ.

ವಾಟ್ ಅರುಣ್ : ಇದೊಂದು ಸಾಂಪ್ರದಾಯಿಕ ದೇವಾಲಯ. ಬ್ಯಾಂಕಾಕ್ ನ ಥೊನ್‌ಬುರಿ ಭಾಗದಲ್ಲಿದೆ. ಇಲ್ಲಿನ ಪ್ರಮುಖ ನದಿ “ಚಾಒ ಫ್ರಾಯ”  ದಡದಲ್ಲಿ ಕಟ್ಟಲಾಗಿರೋ ಈ ಟೆಂಪಲ್ 17 ನೇ ಶತಮಾನಕ್ಕೆ ಸೇರಿದ್ದಾಗಿದೆ. ಇದನ್ನ “ಟೆಂಪಲ್ ಆಫ್ ದೋನ್” ಅಂತಲೂ ಕರೆಯಲಾಗುತ್ತೆ. 70 ಮೀಟರ್ ಎತ್ತರದ ಖ್ಮೇರ್ ಶೈಲಿಯ ಗೋಪುರಗಳು, ಗಾಜಿನ ಚೂರುಗಳು ಹಾಗೂ ಚೀನೀಯರು ಬಳಸುವ ಪಿಂಗಾಣಿಗಳಿಂದ ಅಲಂಕೃತಗೊಂಡಿವೆ. ಗೋಪುರದ ತುತ್ತ ತುದಿಗೆ ಹತ್ತುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ. ಸೂರ್ಯಾಸ್ತವಾದಾಗ ಈ ದೇವಾಲಯವನ್ನು ನೋಡೋದೇ ಒಂದು ಅದ್ಭುತ ಅನುಭವ. ಇದು ಬೌಧ್ಧರ ಪ್ರಧಾನ ದೇಗುಲವಾಗಿದೆ.

ವಾಟ್ ಸಾಕೇತ್ – ವಾಟ್ ಸಾಕೇತ್ : ಇದಕ್ಕೆ ಮತ್ತೊಂದು ಹೆಸರು “ಗೋಲ್ಡನ್ ಮೌಂಟ್”. ರಾಜ ರಾಮನ ಕಾಲದಲ್ಲಿ ಕಟ್ಟಲಾಗಿದೆ. ಮಾನವ ನಿರ್ಮಿತ ಈ ಪರ್ವತದಲ್ಲಿ 50 ಮೀಟರ್ ಎತ್ತರದ ಬುಧ್ಧ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಬೌಧ್ಧ ರಚನೆಯಿಂದ ಈ ದೇಗುಲ ನಿರ್ಮಾಣಗೊಂಡಿದೆ. ವರ್ಷದ ಎಲ್ಲಾ ದಿನಗಳು ಪೂಜಾ ಕೈಂಕರ್ಯಗಳು ನಡೆಯುವ ಈ ದೇವಾಲಯ, ಬೌಧ್ಧರ ಪವಿತ್ರ ಯಾತ್ರಾಸ್ಥಳ  ಆಗಿದೆ. ಬಂಗಾರ ಲೇಪಿತ ಗೋಪುರಗಳಿಗೆ ಪ್ರಕಾಶಮಾನವಾದ ಕೆಂಪು ಬಟ್ಟೆಯನ್ನು ಸುತ್ತಲಾಗುತ್ತೆ. ಜಾತ್ರೆ ಸಂದರ್ಭದಲ್ಲಂತೂ ಬಣ್ಣ ಬಣ್ಣದ ಬಾವುಟಗಳು, ದೀಪ ಅಲಂಕಾರಗಳಿಂದ ಶೃಂಗಾರಗೊಂಡಿರುತ್ತೆ.  ಎತ್ತರದಲ್ಲಿರೋ ಈ ದೇಗುಲ ತಲುಪಲು, 300 ಮೆಟ್ಟಿಲುಗಳನ್ನ ಹತ್ತಬೇಕು. ಏರುವ ದಾರಿಯುದ್ದಕ್ಕೂ ಸಡಿಲವಾಗಿ ಸುರುಳಿ ಹೊಂದಿರೋ ಹಾವಿನ ಸುಂದರ ಆಕೃತಿಗಳು, ಗೋಡೆ ತುಂಬಾ ಘಂಟೆಗಳು ವಿಶೇಷ ಆಕರ್ಷಣೆಗಳಾಗಿವೆ. ದೇಗುಲದ ತುತ್ತತುದಿಯಲ್ಲಿ ಬ್ಯಾಂಕಾಕ್ ನಗರದ ವಿಹಂಗಮ ನೋಟ ಕಾಣಬಹುದು.

ವಾಟ್ ಟ್ರೈಮಿಟ್ : ಇದರ ಇನ್ನೊಂದು ಹೆಸರು “ಟೆಂಪಲ್ ಆಫ್ ಗೋಲ್ಡನ್ ಬುಧ್ಧ”. ಬಹುಹಂತದ ಬಿಳಿ ಹಾಗೂ ಚಿನ್ನದ ಬಣ್ಣವನ್ನು ಹೊಂದಿರೋ ದೇಗುಲ, ಬ್ಯಾಂಕಾಕ್ ನ ಚೈನಟೌನ್ ನಲ್ಲಿದೆ. 5 ಮೀಟರ್ ಎತ್ತರ ಹಾಗೂ 5.5 {ಐದೂವರೆ} ಟನ್ ತೂಕದ ಬುಧ್ಧನ ಪ್ರತಿಮೆಯನ್ನು ಚಿನ್ನದ ಪೀಠದಲ್ಲಿ ಕುಳ್ಳಿರಿಸಲಾಗಿದೆ. ಈ ಹಿಂದೆ ಕುಶಲಕರ್ಮಿಗಳು ಬುಧ್ಧನ ಪ್ರತಿಮೆಯನ್ನು ಅಪ್ಪಟ ಚಿನ್ನದಿಂದ ತಯಾರು ಮಾಡಿದ್ದರು. ಆದರೆ ಕ್ರಮೇಣ ಶತ್ರುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಪ್ರತಿಮೆಗೆ ಗಾರೆ ಹಾಗೂ ಪ್ಲಾಸ್ಟರ್ ನಿಂದ ಹೊದಿಕೆ ಮಾಡಲಾಯಿತು.

ಲೋಹ ಪ್ರಸತ್ : ಒಂದಕ್ಕಿಂತ ಒಂದು ಭಿನ್ನವಾಗಿರೋ ಬ್ಯಾಂಕಾಕ್ ನ ದೇಗುಲಗಳ ವಾಸ್ತುಶಿಲ್ಪಗಳು ಅದ್ಭುತವಾದುದು. ಈ ದೇಗುಲ “ಲೋಹದ ಕೋಟೆ”  ಎಂದೇ ಪ್ರಸಿದ್ಧಿ. 1846 ರಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಿರ್ಮಾಣಗೊಂಡಿದ್ದ ದೇವಾಲಯಗಳಿಂದ ಪ್ರಭಾವದಿಂದ ಲೋಹ ಪ್ರಸತ್ ನಿರ್ಮಾಣಗೊಂಡಿದೆ. 3ನೇ ವಂಶದರಾಮನ ಕಾಲದಲ್ಲಿ ಇದು ಕಟ್ಟಲ್ಪಟ್ಟಿದೆ. 37 ಮೀಟರ್ ಎತ್ತರ, 37 ಲೋಹದ ಗೋಪುರಗಳ ಆಧಾರಗಳೊಂದಿಗೆ ರಚನೆಗೊಂಡಿದ್ದು, ಜ್ಞಾನೋದಯದ 37 ಸದ್ಘುಣಗಳನ್ನು ಪ್ರತಿನಿಧಿಸೋದೇ ಇದರ ಸ್ಪೆಶ್ಯಾಲಿಟೀ. ಅತ್ಯಂತ ಎತ್ತರದಲ್ಲಿ ಬುಧ್ಧನ ಪ್ರತಿಮೆಯನ್ನು ಇರಿಸಲಾಗಿದ್ದು, ಸಾಮಾನ್ಯವಾಗಿ ಇದು ಬೌಧ್ಧ ಸನ್ಯಾಸಿಗಳು ಉಳಿದೋಕೊಳ್ಳೋ ಸ್ಥಳವಾಗಿದೆ.

ವಾಟ್ ಮಹಾತತ್ : ಬ್ಯಾಂಕಾಕ್ ನ 10 ರಾಜಮನೆತನದ ದೇಗುಲಗಳಲ್ಲಿ ಇದು ಒಂದು. ರಾಜಮನೆತನದಿಂದ ನಡೆಯೋ ಪ್ರಮುಖ ಧೈವೀ ಕಾರ್ಯಗಳು ಇಲ್ಲಿ ನೆರವೇರುತ್ತೆ. ಬೌಧ್ಧ ಸನ್ಯಾಸಿಗಳ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆ ಇದಾಗಿತ್ತು. ಥೈಲ್ಯಾಂಡ್ ನಲ್ಲೇ ಇದು, ಬೌಧ್ಧ ಧರ್ಮ ಹಾಗೂ ಧ್ಯಾನದ ಪ್ರಮುಖ ಕೇಂದ್ರವಾಗಿದೆ. ಅತ್ಯಂತ ಹಳೆಯ ದೇವಾಲಯವಾಗಿರೋ ಇಲ್ಲಿ, ಹೇಳಿಕೊಂಡ ಇಚ್ಚೆಗಳು ನೆರವೇರುತ್ತೆ ಅನ್ನೋ ನಂಬಿಕೆ ಥಾಯಿ ಜನರಲ್ಲಿದೆ. ವಿಶೇಷವೆಂದರೆ ದೇಗುಲದ ಆವರಣದಲ್ಲೇ ಪ್ರತೀ ಬಾನುವಾರ ತಾಯಿತಗಳ ದೊಡ್ಡ ಮಾರುಕಟ್ಟೆಯೇ ತೆರೆಯಲಾಗುತ್ತೆ. ಪ್ರತಿಯೊಂದು ಸಮಸ್ಯೆ ನಿವಾರಾಣೆಗೂ, ಅದಕ್ಕೆ ಸರಿಯಾದ ತಾಯಿತಗಳು ಈ ಸಂತೆಯಲ್ಲಿ ಲಭ್ಯ. ಸಾಂಪ್ರದಾಯಿಕ ಔಷಧಗಳು, ಅದೃಷ್ಟದ ಉಂಗುರಗಳು, ವಿಭಿನ್ನ ತಾಯಿತಗಳು ದೊರೆಯುವ ಮುಕ್ತ ಮಾರುಕಟ್ಟೆ ಇದಾಗಿದೆ.

ವಾಟ್ ಸುತಾಟ್ : ಸೊಗಸಾದ ಗುಡಿ, ದ್ಯೆತ್ಯಕಾರದ ಕೆಂಪು ಬಣ್ಣದ ಉಯ್ಯಾಲೆ, ವ್ಯಾಪಕವಾಗಿ ಹರಡಿರೋ ಛಾವಣಿ, ಗೋಡೆ ತುಂಬಾ ಭವ್ಯವಾದ ಭಿತ್ತಿಚಿತ್ರಗಳು, ಕೈಯಿಂದ ಕೆತ್ತಲಾದ ವಿಶೇಷ ವಿನ್ಯಾಸದ ತೇಗದ ಮರದ ಬಾಗಿಲು ಫಲಕಗಳು, ಚೀನಿಯರ ಹಾಗೂ ಪಾಶ್ಚಿಮಾತ್ಯ ಶೈಲಿಯಲ್ಲಿ ದ್ವಾರದ ಬಾಗಿಲು ಹಾಗೂ ಗೋಡೆಯ ಬಣ್ಣಗಾರಿಕೆ, 8 ಪೀಠ ಸಾಲಿನ ಪಗೋಡಗಳು, ಸುಮಾರು 156 ಬುಧ್ಧ ಪ್ರತಿಮೆಗಳು ಇತ್ಯಾದಿ ಈ ದೇವಾಲಯದ ಹೈಲೈಟ್ಸ್. ಆದರೆ ಈ ಉಯ್ಯಾಲೆಯ ಹಿಸ್ಟರೀ ಮಾತ್ರ ಕೊಂಚ ಭಿನ್ನ. ಹಿಂದಿನ ಕಾಲದಲ್ಲಿ ಯುವಕರು, ಸುಗ್ಗಿಯ ದಿನದಂದು ಈ ಉಯ್ಯಾಲೆಯನ್ನು ನೆಲದಿಂದ 24 ಮೀಟರ್ ಎತ್ತರಕ್ಕೆ ತೂಗಬೇಕಿತ್ತು. ಇದರಲ್ಲಿ ಇಡಲಾಗುತ್ತಿದ್ದ ಬೆಳ್ಳಿ ನಾಣ್ಯಗಳ ಚೀಲವನ್ನು ಉಯ್ಯಾಲೆ ತೂಗುತ್ತಿದ್ದಂತೆ ಹಲ್ಲಿನಿಂದ ಕಚ್ಚಿ ಪಡೆಯಬೇಕಿತ್ತು. ಈ ಸಂದರ್ಭದಲ್ಲಿ ಸಾವು – ನೋವುಗಳು ಸಾಮಾನ್ಯವಾಗಿತ್ತು. ಹೀಗಾಗಿ ಈ ಭಯಾನಕ ಉಯ್ಯಾಲೆಯ ಸಂಪ್ರದಾಯವನ್ನು 1932 ರಲ್ಲಿ ತಡೆಯಲಾಯಿತು.

ವಾಟ್ ಬಾಂಜಾ : 5ನೇ ವಂಶದ ರಾಜ ರಾಮ ಕಾಲದಲ್ಲಿ ಕಟ್ಟಲಾಗಿದೆ. ಇದರ ಇನ್ನೊಂದು ಹೆಸರು “ದಿ ಮಾರ್ಬಲ್ ಟೆಂಪಲ್” . ಇಟೆಲಿ ದೇಶದಿಂದ ಈ ಅಮೃತಶಿಲೆಗಳನ್ನು ಆಮದು ಮಾಡಲಾಗಿದೆ. ಗೋಡೆಗಳಲ್ಲಿ ಕೆತ್ತಲಾಗಿರೋ ಉಬ್ಬು ಚಿತ್ರಗಳು ಥಾಯಿಲ್ಯಾಂಡ್ ನ ನಾಣ್ಯ 5 ಭಾಟ್ ನಿಂದ ರಚಿಸಲಾಗಿದೆ.

ವಾಟ್ ಪ್ರಯೊನ್ : ಬ್ಯಾಂಕಾಕ್ ನ ಪಶ್ಚಿಮ ಭಾಗದಲ್ಲಿರೋ ಈ ದೇಗುಲದ ಸ್ಪೆಶ್ಯಾಲಿಟೀ ತಲೆಕೆಳಗಾದ ಘಂಟೆಯ ಆಕಾರದ ಪಗೋಡಗಳು. “ಟರ್ಟಲ್ ಮೌಂಟನ್” ಎಂಬ ಕೃತಕ ಸಮಾಧಿ ಸ್ಥಳವನ್ನು ಇಲ್ಲಿ ಕಾಣಬಹುದು. ಇದು ಕರಗಿದ ಮೇಣದ ಬತ್ತಿಯ ಆಕಾರದಲ್ಲಿ ಕಟ್ಟಲಾಗಿದೆ. ಮೃತರ ಆತ್ಮವು ಇಲ್ಲಿ ಬಂದು ನೆಲೆಸುತ್ತೆ ಅನ್ನೋದು ಇಲ್ಲಿನ ಜನರ ನಂಬಿಕೆ.

ಇವಿಷ್ಟು ಪ್ರವಾಸಿಗರು ಭೇಟಿ ನೀಡೋ ಪ್ರಮುಖ ದೇವಾಲಯಗಳು. ಬ್ಯಾಂಕಾಕ್ ಅನ್ನು ಮತ್ತಷ್ಟು ಡಿಸ್ಕವರೀ ಮಾಡೋಕೆ ಹೊರಟಲ್ಲಿ, ಅದೆಷ್ಟೋ ದೇವಾಲಯಗಳು ಪಟ್ಟಿಗೆ ಸಿಗೊದ್ರಲ್ಲಿ ಯಾವುದೇ ಸಂಶಯವಿಲ್ಲ.

ಬ್ಯಾಂಕಾಕ್ ನ ಮತ್ತೊಂದು ಪ್ರಮುಖ ಆಕರ್ಷಣೆ “ಫ್ಲೋಟಿಂಗ್ ಮಾರ್ಕೆಟ್” .ಮಾರಾಟಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಬೋಟ್ ನಲ್ಲಿ ತುಂಬಿಸಿ, ದೋಣಿ ವಿಹಾರ ಮಾಡ್ತ ವ್ಯಾಪಾರ ನಡೆಸೋದು ಇದರ ವಿಶೇಷತೆ. ಥೈಲ್ಯಾಂಡ್ ಜನರು, ಮನೆಯ ಅಡುಗೆಗಿಂತಲೂ ಹೊರಗಿನ ತಿನಿಸು ಇಷ್ಟ ಪಡೋರು. ಹೀಗಾಗಿ ವೀಕೆಂಡ್ ಬಂತೆಂದ್ರೆ ಸಾಕು, ಫ್ಲೋಟಿಂಗ್ ಮಾರ್ಕೆಟ್ ವ್ಯಾಪಾರ ಫುಲ್ ಜ಼ೂಮ್ ನಲ್ಲಿರುತ್ತೆ. ಅದರಲ್ಲೂ ಇಲ್ಲಿನ ಖ್ಲೊಂಗ್ ಲಾಟ್ ಮಾಯೋನ್, ಅಂಫವ ಎಫ್ ಎಮ್, ಡ್ಯಾಮ್ನೊವನ್ ಸದುಅಕ್.. ಪ್ರಮುಖ ಫ್ಲೋಟಿಂಗ್ ಮಾರುಕಟ್ಟೆಗಳಾಗಿವೆ. ಅಡುಗೆ ಸಾಮಾನುಗಳು, ಹಣ್ಣು ಹಂಪಲುಗಳು, ಬಗೆಬಗೆಯ  ಉಟ – ತಿಂಡಿಗಳು ಈ ದೋಣಿಯಲ್ಲಿ ಲಭ್ಯವಿರುತ್ತೆ.

ಅಯುತ್ತಾಯ : ಬ್ಯಾಂಕಾಕ್ ನ ಅಯೋಧ್ಯೆ ಎಂದೇ ಪ್ರಸಿದ್ಧಿ. ಈ ಹಿಂದೆ ವಿದೇಶಿ ವ್ಯಾಪಾರಿಗಳಿಗೆ ಕೈ ಬೀಸಿ ಕರೆದಿದ್ದ ನಗರ ಇದಾಗಿತ್ತು. ಹೀಗಾಗಿ  ಶ್ರೀಮಂತ ನಗರ ಎಂಬ ಖ್ಯಾತಿಯೂ ಇದಕ್ಕಿತ್ತು. ಹಿಂದೂ ಧರ್ಮದ ಪ್ರಭಾವಕ್ಕೊಳಗಾಗಿದ್ದ ಅಯುತ್ತಾಯ, “ಶ್ರೀ ರಾಮನ ನಗರ” ಎಂಬ ಹೆಸರಿಗೂ ಪಾತ್ರವಾಗಿತ್ತು. ಆದರೆ ಬರ್ಮಾದ ಶತ್ರುಗಳ ನಿರಂತರ ದಾಳಿಯಿಂದಾಗಿ ಈ ಸಿಟಿ, ಆಳಿವಂಚಿಗೆ ತಲುಪಿತು.  1351 ರಲ್ಲಿ ಸ್ಥಾಪನೆಯಾದ ಈ ನಗರದ ಆಡಳಿತ 1767 ರಲ್ಲಿ ಕೊನೆಗೊಂಡಿತು. ಥಾಯಿಲ್ಯಾಂಡ್ ನ 2ನೇ ರಾಜಧಾನಿ ಇದಾಗಿತ್ತು. ಮೊದಲನೆಯದು “ಸುಖೊಥಾಯಿ”.  ಇದೀಗ ಅಯುತ್ತಾಯ ಐತಿಹಾಸಿಕ ಉದ್ಯಾನವನ್ನಾಗಿ ನಿರ್ಮಿಸಲಾಗಿದೆ. ಅಳಿದುಳಿದ ಸ್ಮಾರಕಗಳು, ಧಾರ್ಮಿಕ ಸ್ಥಳಗಳು, ರಾಜ ರಾಣಿಯರ ವಿಹಾರ ಕೇಂದ್ರಗಳು, ದೇಗುಲ, ಅರಮನೆಗಳನ್ನು ಇಲ್ಲಿ ಕಾಣಬಹುದು. ಯೂನೋಸ್ಕಾದ ವರ್ಲ್ಡ್ ಹೆರಿಟೇಜ್ ಸೈಟ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಈ ಅಯುತ್ತಾಯ  ಚೋ ಪ್ರಾಯ, ಲೊಬೂರಿ ಹಾಗೂ ಪಾ ಸಕ್  ನದಿಗಳಿಂದ ಸುತ್ತುವರಿದಿದೆ. ಇದನ್ನು “ವೆನಿಸ್ ಆಫ್ ದ ಈಸ್ಟ್” ಅಂತಲೂ ಕರೆಯಲಾಗುತ್ತಿತ್ತು.  ಒಂದು ದಿನದ ಸಮಯವನ್ನು ತೆಗೆದುಕೊಳ್ಳೋ ಈ ಅಯೋಧ್ಯೆ ನಗರಕ್ಕೆ ಬ್ಯಾಂಕಾಕ್ ನಿಂದ ಬಸ್, ಟ್ರೈನ್, ಬೋಟ್ ಮೂಲಕ ತೆರಳಬಹುದು. ಅಯುತ್ತಾಯ ಆವರಣದೊಳಗಿನ ಕೆಲ ಇಂಟ್ರೆಸ್ಟಿಂಗ್ ಇತಿಹಾಸಗಳು ಇಲ್ಲಿವೆ.

ವಾಟ್ ಫ್ರಾ ಸಿ ಸನಫೇಟ್ : ಥಾಯಿ ಶೈಲಿಯ ಸ್ತೂಪಗಳನ್ನ ಕಾಣಬಹುದು. ರಾಜಮನೆತನದ ಪೂಜೆಗಳಿಗೆ ಮಾತ್ರ ಈ ದೇಗುಲವನ್ನು ಬಳಸಲಾಗುತ್ತೆ. ಇಲ್ಲಿ ಹಿಂದೆ 16 ಮೀಟರ್ ಎತ್ತರದ 340ಕೆಜಿ ಬಂಗಾರದಿಂದ ಬುಧ್ಧನ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ ಬರ್ಮದವರ ಬೆಂಕಿಯ ದಾಳಿ , ಚಿನ್ನವನ್ನೇ ಕರಗುವಂತೆ ಮಾಡಿತು.

ವಾಟ್ ತಮ್ಮೀಕರಾಟ್ : ಸುತ್ತಲೂ ಹಲವಾರು ಗೋಪುರ,  ಸಾಲುದ್ದ ಮರಗಳು, ಛಾವಣಿ ರಹಿತ ದೇಗುಲದಲ್ಲಿ ಕಂಚಿನ ತಲೆ ಹೊಂದಿರೋ ಬುಧ್ಧನ ವಿಗ್ರಹ. ಪಕ್ಕದಲ್ಲೇ ಒಂದು ಹಾಲ್, ಅದರಲ್ಲಿ ಒರಗಿಕೊಂಡ ಭಂಗಿಯಲ್ಲಿರೋ ಬುಧ್ಧನ ಮೂರ್ತಿ. ಇದನ್ನ ಆ ಕಾಲದ ರಾಣಿಯೊಬ್ಬಳು ತನ್ನ ಮಗುವಿನ ಖಾಯಿಲೆ ಗುಣವಾಗಲು ಹರಕೆಯಾಗಿ ಕಟ್ಟಿಸಿದಳು ಎನ್ನಲಾಗಿದೆ.

ವಾಟ್ ಫ್ರಾ ಮಹಾತಾಟ್: ಸಾಲುದ್ದ ಕುಳಿತಿರೋ ಹಾಗೂ ತಲೆ ಧ್ವಂಸಗೊಂಡ ಬುಧ್ಧನ ಪ್ರತಿಮೆಗಳು. ಇಲ್ಲೇ ಪಕ್ಕಕ್ಕೆ ಬೃಹತ್ತಾದ ಮರವೊಂದು ಬುಧ್ಧನ ತಲೆಯನ್ನು ಆವರಿಸಿದ ಅಪರೂಪದ ದೃಶ್ಯ ಕಾಣಸಿಗುತ್ತೆ. ಇಲ್ಲಿ ಫೋಟೋವನ್ನ ಕ್ಲಿಕ್ಕಿಸೋದಾದ್ರೆ ಮಂಡಿಯೂರಿ ಕೂತು ತೆಗೆಯೋದು ಗೌರವದ ಸಂಕೇತವಾಗಿದೆ. ಇವುಗಳಲ್ಲದೆ ವಾಟ್ ಸುವಾನ್ ದರಂ, ಫೇಟ್ ಫೋರ್ತೆಸ್ಸ್, ವಾಟ್ ಫ್ರಾ ರಾಮ, ಫ್ರಾ ಚೇದಿ ಸುರಿಯೋಥಾಯಿ ದೇಗುಲಗಳನ್ನು ಅಯುತ್ತಾಯದಲ್ಲಿ ಕಾಣಬಹುದು.

ಬ್ಯಾಂಕಾಕ್ ನ ಮತ್ತೊಂದು ಆಕರ್ಷಣೆ “ಗ್ರ್ಯಾಂಡ್ ಪ್ಯಾಲೇಸ್” : 1782 ರಲ್ಲಿ ಕಟ್ಟಲ್ಪಟ್ಟಿದೆ. ಥಾಯಿ ರಾಜನ ಮನೆ, ರಾಜಮನೆತನದ ನ್ಯಾಯಾಲಯ, ಸರ್ಕಾರಿ ಆಡಳಿತದ ಸ್ಥಳವಾಗಿ ಇದೀಗ ಅರಮನೆಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರತಿಯೊಂದು ಹಂತಗಳಲ್ಲೂ ಸುಂದರ ವಾಸ್ತುಶಿಲ್ಪ, ಇತಿಹಾಸದ ಸಂಕೀರ್ಣ ವಿವರಗಳ ಸುಂದರ ಚಿತ್ರಗಳು ನಿಜಕ್ಕೂ ಥಾಯಿ ಜನರ ಕುಸುರಿ ಕೆಲಸ ಬೆರಗುಗೊಳಿಸುತ್ತೆ. ಇಲ್ಲಿ ಕೇವಲ ಎರಡು ಸಿಂಹಾಸನವುಳ್ಳ ಸಭಾಂಗಣವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಜೊತೆಗೆ ಹಿಂದಿನ ಕಾಲದಲ್ಲಿ ರಾಜವಂಶದವರು ಬಳಸುತ್ತಿದ್ದ ಆಭರಣಗಳು, ವಸ್ತ್ರಗಳು,  ಯುಧ್ಧ ಸಾಮಗ್ರಿಗಳನ್ನು ನೋಡ ಬಹುದಾಗಿದೆ.

ಅಯುತ್ತಾಯಕ್ಕೆ ಹೋಗೋ ದಾರಿಯಲ್ಲಿ ಸಮ್ಮರ್ ಪ್ಯಾಲೇಸ್ ಎಂಬ ಸುಂದರ ಸ್ಥಳವೊಂದು ಕಾಣಸಿಗುತ್ತೆ. ಯುರೋಪಿಯನ್ ಹಾಗೂ ಚೀನಿ ಶೈಲಿಯಲ್ಲಿ ಇಲ್ಲಿನ ಅರಮನೆಗಳು ನಿರ್ಮಾಣಗೊಂಡಿದೆ. ಇಲ್ಲಿರೋ ತೇಲುವ ಮಂಟಪ ಎಂಬ ಜಾಗದಲ್ಲಿ ಈ ಹಿಂದೆ ಯುವರಾಜ, ಅಪರಾಹ್ನದ ವೇಳೆ ಬಂದು ಕವಿತೆ ಓದುತ್ತಿದ್ದರು ಎನ್ನಲಾಗಿದೆ. ಅರಮನೆ ದಾರಿಯುದ್ದಕ್ಕೂ ಮಾವಿನ ಹಣ್ಣಿನ ಮರಗಳು, ಆನೆಗಳು ಮತ್ತು ಇಲಿಗಳನ್ನು ಹೋಲುವ ಸಸ್ಯ ಸೌಂದರ್ಯ, ಮೊಲ ಹಾಗೂ ಚಂದ್ರನ ಜನಪದ ಕಥೆಗಳು ಪ್ರತಿನಿಧಿಸುವ ತೋಟಗಾರಿಕೆ ಇಲ್ಲಿ ಕಾಣಬಹುದು.

ಬ್ಯಾಂಕಾಕ್ ಭೇಟಿ ಕೊಡೋರು “ಸಿಯಾಂ ನಿರಾಮತ್ ಶೋ ” ಮಿಸ್ ಮಾಡ್ಲೇ ಬಾರದು. ಇದು ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಚಿತ್ರಿಸುವ ಪ್ರದರ್ಶನ. ಸುಮಾರು 150 ಮಂದಿ ಅಭಿನೇತ್ರಗಳಿಂದ ನಡೆಯೋ ಈ ಪ್ರದರ್ಶನ, ರಾಜ್ಯದ ಕಲೆಯನ್ನು ಪರಿಣಾಮಕಾರಿಯಾಗಿ ಬಿಂಬಿಸೋ ಅದ್ಭುತ ಪ್ರಯತ್ನ ಇದಾಗಿದೆ. ಮೊದಲ ಹಂತದಲ್ಲಿ ಥೈಲ್ಯಾಂಡ್ ನಾಗರಿಕತೆಯ ಬಗ್ಗೆ ವಿವರಣೆ. ಎರಡನೇ ಘಟ್ಟದಲ್ಲಿ ಥಾಯಿ ಜನರ ದುಡಿಮೆ ಬಗ್ಗೆ, ಕೊನೆಯ ಹಂತದಲ್ಲಿ ಥಾಯಿ ಜನರು, ಧಾರ್ಮಿಕ ಸಮಾರಂಭಗಳನ್ನು ಆಚರಿಸೋ ಮೂಲಕ ಹೇಗೆ ತಮ್ಮ ಜೀವನದಲ್ಲಿ ಮುಕ್ತಿ ಪಡೆಯುತ್ತಾರೆ ಎಂಬುದನ್ನ 500 ವೇಷಭೂಷಣಗಳ ಮೂಲಕ ಪ್ರೇಕ್ಷಕರಿಗೆ ಮನದಟ್ಟು ಮಾಡಲಾಗುತ್ತೆ. ಪ್ರಪಂಚದ ಅತ್ಯಂತ ದೊಡ್ಡ ವೇದಿಕೆಯಲ್ಲಿ ಸುಮಾರು 2 ಘಂಟೆಗಳ ಕಾಲ ನಡೆಯೋ ಈ ಶೋ, ನಿಜಕ್ಕೂ ನೋಡುಗರನ್ನ ಮಂತಮುಗ್ಧಗೊಳಿಸುತ್ತೆ.

ಇವುಗಳಿಷ್ಟಲ್ಲದೆ ನೂರಾರು ವಸ್ತು ಸಂಗ್ರಹಾಲಯಗಳು, ಅಯುತ್ತಾಯ ನಗರದ ಪ್ರತಿಕೃತಿಗಳು, ಮೃಗಾಲಯಗಳು, ಗ್ರಾಮೀಣ ಬದುಕಿನ ಚಿತ್ರಣಗಳು… ಹೀಗೆ ಹಲವಾರು ಆಕರ್ಷಣೆಗಳನ್ನ ಹೊಂದಿರೋ ಬ್ಯಾಂಕಾಕ್ ಪ್ರವಾಸಿಗರನ್ನ ಕೈಬೀಸಿ ಕರೆಯುವಲ್ಲಿ ಯಶಸ್ವಿ ಆಗಿದೆ.

5 thoughts on “ಮೈಮನ ತಣಿಸುವ ಬ್ಯಾಂಕಾಕ್!

 • October 20, 2017 at 7:14 PM
  Permalink

  I’m gone to say to my little brother, that he should also pay a quick visit this
  webpage on regular basis to get updated from most up-to-date
  news update.

 • October 21, 2017 at 4:13 AM
  Permalink

  Thanks on your marvelous posting! I seriously enjoyed reading it, you happen to be a great author. I will be sure to bookmark your blog and may come back at some point. I want to encourage one to continue your great posts, have a nice evening!|

 • October 24, 2017 at 1:49 PM
  Permalink

  Oh my goodness! Amazing article dude! Thank you,
  However I am going through problems with your RSS. I don?t
  understand the reason why I can’t join it. Is there anybody getting the same RSS issues?
  Anyone who knows the answer will you kindly respond?
  Thanks!!

 • October 24, 2017 at 3:30 PM
  Permalink

  I love what you guys are usually up too. This kind of clever work and reporting!
  Keep up the awesome works guys I’ve incorporated you guys to
  my blogroll.

Comments are closed.

Social Media Auto Publish Powered By : XYZScripts.com