RSSನ ಹಿರಿಯ ಪ್ರಚಾರಕ ಮೈ.ಚ.ಜಯದೇವ್ ಇನ್ನಿಲ್ಲ.

ವಯೋ ಸಹಜ ಮತ್ತು ಅಲ್ಪಕಾಲಿಕ ತೊಂದರೆಯಿಂದ ಬಳಲುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಶ್ರೀಮೈ.ಚ. ಜಯದೇವ್ (83) ಅವರು ಸೋಮವಾರ ಬೆಳಗ್ಗೆ  9.00ಗಂಟೆಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.  

ವಯೋಸಹಜ ಅಲ್ಪಕಾಲೀನ ತೊಂದರೆಯಿಂದಾಗಿ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೃತರ ಪಾರ್ಥಿವ ಶರೀರವನ್ನು 12.00ಗಂಟೆಗೆ ಆರೆಸ್ಸೆಸ್ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು.

ಮೈಸೂರು ಚನ್ನಬಸಪ್ಪ ಜಯದೇವ (ಮೈ.ಚ. ಜಯದೇವ್) ಅವರು ಫೆಬ್ರುವರಿ 9, 1934ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮೈಸೂರಿನಲ್ಲಿ ಬಿ.ಎಸ್ಸಿ. ಪದವಿ ಪೂರೈಸಿದ ನಂತರ ಕಾನೂನು ವ್ಯಾಸಂಗ ಮಾಡಿದರು. 1950ರ ದಶಕದಲ್ಲಿ ಆರೆಸ್ಸೆಸ್ ವಿಚಾರಧಾರೆಯತ್ತ ಆಕರ್ಷಿತರಾದ ಜಯದೇವ್‌ರು ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡರು. ತುಮಕೂರಿನಲ್ಲಿ ಅಲ್ಪಕಾಲ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು.

1965 ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಸ್ಥಾಪನೆಯಲ್ಲಿ ಮೈ ಚ ಜಯದೇವರದ್ದು ಮಹತ್ತರ ಪಾತ್ರ. ಇದೀಗ 50 ವರ್ಷ ಪೂರೈಸಿರುವ ರಾಷ್ಟ್ರೋತ್ಥಾನ ಪರಿಷತ್ ನ ಸಮಗ್ರ ವಿಕಾಸದ ಎಲ್ಲ ಹಂತಗಳಲ್ಲಿಯೂ ಪೋಷಿಸಿ- ಮಾರ್ಗದರ್ಶಿಸಿದವರು ಮೈ.ಚ. ಜಯದೇವ್. 1965ರಿಂದ 1995ರ ತನಕ ಮೂರು ದಶಕಗಳ ಕಾಲ ರಾಷ್ಟ್ರೋತ್ಥಾನ ಪರಿಷತ್‌ನ ಜನರಲ್ ಮ್ಯಾನೇಜರ್ ಆಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ ಮತ್ತು ಸೇವೆಯ ಮೂಲಕ ರಾಜ್ಯಾದ್ಯಂತ ವ್ಯಾಪಿಸಿರುವುದರ ಹಿಂದೆ ಜಯದೇವ್ ಅವರ ಕೊಡುಗೆ ಅಪಾರ.

’ರಾಷ್ಟ್ರೋತ್ಥಾನ ಸಾಹಿತ್ಯವನ್ನು ಕನ್ನಡಿಗರಿಗೆ ಮೂಡಿಸುವ ಸಲುವಾಗಿ ಹಲವಾರು ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ತಂಡದಲ್ಲಿ ಸತ್ಯಾಗ್ರಹ ಮಾಡಿ 1975ರ ನವೆಂಬರ್‌ನಲ್ಲಿ ಬಂಧಿತರಾಗಿ ಬೆಂಗಳೂರಿನಲ್ಲಿ ಜೈಲುವಾಸ ಅನುಭವಿಸಿದರು. ನಂತರ 1977 ಮಾರ್ಚ್ 22ಕ್ಕೆ ಯಾದವರಾವ್ ಜೋಶಿ ಅವರೊಂದಿಗೆ ಬಿಡುಗಡೆಯಾದರು.

ಬೆಂಗಳೂರಿನಲ್ಲಿ ಅತೀ ಹೆಚ್ಚು ಕಾರ್ಯಕರ್ತರು, ಹಿತೈಷಿಗಳ ಮನೆಗಳೊಂದಿಗೆ ಸಂಪರ್ಕ ಹೊಂದಿದ್ದ ಮೈ.ಚ.ಜಯದೇವ್‌ರು ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಎಲ್ಲಾ ಪಕ್ಷದ ಮುಖಂಡರು, ಸಂತ-ಸ್ವಾಮೀಜಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಓರ್ವ ಕುಶಲ ಸಂಘಟಕರಾಗಿ ಜನಪ್ರಿಯರಾಗಿದ್ದರು. ಬಾಳಾಸಾಹೇಬ್ ದೇವರಸ್, ಕು ಸೀ ಸುದರ್ಶನ್, ದತ್ತೋಪಂತ್ ಟೆಂಗಡಿ, ಅಟಲ್ ಬಿಹಾರಿ ವಾಜಪೇಯಿ  ಸಹಿತ ಅನೇಕ ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅನಾಥ ಶಿಶುನಿವಾಸ, ಅಬಲಾಶ್ರಮ – ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಸ್ವತಂತ್ರವಾಗಿ ಮೂಲೋದ್ದೇಶದಂತೆ ಕೆಲಸ ಮಾಡುವಂತೆ ಪ್ರೇರಣೆ ನೀಡಿದವರು. ಇವುಗಳ ಆರ್ಥಿಕ ಸ್ವಾವಲಂಬನೆ, ವ್ಯಕ್ತಿ ಜೋಡಣೆ ಮುಂತಾದ ಕೆಲಸಗಳನ್ನು ತೆರೆಯ ಹಿಂದೆ ನಿಂತು ಮೈ.ಚ. ಜಯದೇವ್‌ ಮಾಡಿದ್ದರು.

ಅವಿವಾಹಿತರಾಗಿಯೇ ಉಳಿದು 4 ದಶಕಗಳ ಕಾಲ ಸುದೀರ್ಘ ಸಾಮಾಜಿಕ ಜೀವನ ನಡೆಸಿದ ನಂತರ 1995ರಲ್ಲಿ ಸಂಘದ ಪ್ರಚಾರಕರಾಗಿ ನಿಯುಕ್ತರಾದರು. ಬಳಿಕ ‘ಕೇಶವಕೃಪಾ’ವನ್ನು ಕೇಂದ್ರವಾಗಿಸಿಕೊಂಡು ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡಿದರು.

2002ರಿಂದ ಸಹ ಕ್ಷೇತ್ರೀಯ ಪ್ರಚಾರಕರಾಗಿ ನಿಯುಕ್ತಿ. 2004ರಲ್ಲಿ ಕ್ಷೇತ್ರೀಯ ಪ್ರಚಾರಕರಾಗಿ ಜವಾಬ್ದಾರಿ. 2009ರಿಂದ ಅಖಿಲ ಭಾರತೀಯ ಕಾರ್ಯಕಾರಿಣಿಯ ಸದಸ್ಯರಾಗಿ ಜವಾಬ್ದಾರಿ. 2012ರಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರಾಗಿ ನಿಯುಕ್ತಿ. 2015ರ ಮಾರ್ಚ್ ನಂತರ ಹಿರಿಯ ಪ್ರಚಾರಕರಾಗಿ ಸಂಘಟನೆಗೆ ಮಾರ್ಗದರ್ಶನ ಮಾಡಿದರು.

ಸಂತಾಪ: ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಆರೆಸ್ಸೆಸ್ ಸರಕಾರ್ಯವಾಹಕ ಸುರೇಶ್ ಭಯ್ಯಾಜಿ ಜೋಷಿ, ಸಹಸರ ಕಾರ್ಯವಾಹಕ ಸುರೇಶ್ ಸೋನಿ, ದತ್ತಾತ್ರೇಯ ಹೊಸಬಾಳೆ, ಡಾ|| ಕೃಷ್ಣಗೋಪಾಲ್, ವಿ.ಭಾಗಯ್ಯ ಹಾಗೂ ಆರೆಸ್ಸೆಸ್ ಪ್ರಮುಖರಾದ ಕಜಂಫಾಡಿ ಸುಬ್ರಹ್ಮಣ್ಯ ಭಟ್, ಮಂಗೇಶ್ ಭೇಂಡೆ, ಮುಕುಂದ್ ಸಿ.ಆರ್.ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.