ಸಖೀಗೀತ-8: ಚಲಿಸುವ ಜಗವ ಹಿಡಿದು ಹೊಳೆಯಿಸುವ ಕತೆಗಾರ ಕಾಯ್ಕಿಣಿ

ಜಯಂತ ಕಾಯ್ಕಿಣಿ ಕನ್ನಡ ಸಂದರ್ಭದ ವಿಶಿಷ್ಟ ಸಂವೇದನೆಯ ಲೇಖಕ. ಆಪ್ತ ಭಾವಲಯದಲ್ಲಿ ಲೋಕವನ್ನು ಕಾಣುವ ಹಾಗೂ ಕಟ್ಟುವ ಅವರ ಬಗೆ ಅನನ್ಯ. ಶಬ್ದ-ಅರ್ಥ-ಸಿದ್ಧಾಂತಗಳ ಆಚೆ ಜಿಗಿಯುವ ಅವರ ಬರಹಗಳು ನಮ್ಮ ಸಂವೇದನೆಯನ್ನು ವಿಸ್ತರಿಸಬಲ್ಲ ಶಕ್ತಿಹೊಂದಿವೆ. ಕಾಡುವ ಬಿಂಬಗಳನ್ನು ಸೃಷ್ಟಿಸುತ್ತಾ ಹೊಸ ಅರಿವಿಗೆ ಕಣ್ತೆರೆಸುವ ಕೆಲಸವನ್ನು ಲೀಲಾಜಾಲವೆಂಬಂತೆ ನಿರ್ವಹಿಸುವ ಅವರ ಸೃಜನಶೀಲತೆ ಒಂದು ಬೆರಗು. ಜಯಂತ ಸೂಕ್ಷ್ಮ ಸಂವೇದನೆಯ ಬರಹಗಾರ ಎಂಬುದು ಅವರನ್ನು ಓದುವ ಎಲ್ಲರಿಗೂ ಅನುಭವಕ್ಕೆ ಬರುವ ಸಂಗತಿ. ಆ ಸೂಕ್ಷ್ಮಗಳೇನು? ಎಂದರೆ ಉತ್ತರಿಸುವುದು ಕಷ್ಟ. ಒಮ್ಮೊಮ್ಮೆ ತರ್ಕಕ್ಕೆ ನಿಲುಕದ ಅನಿರ್ವಚನೀಯ ಅನುಭವದ ಜಾಡು ಹಿಡಿದು ನಡೆಯುವ ಸಂತನಂತೆ ಕಾಣುವ ಕಾಯ್ಕಿಣಿ ಮಗದೊಮ್ಮೆ ಚಿಟ್ಟೆಯನ್ನು ಹಿಡಿಯಲು ಓಡುತ್ತಿರುವ ತುಂಟ ಪೋರನಂತೆ ತೋರುತ್ತಾರೆ. ಚಿಟ್ಟೆಯ ಚಂಚಲತೆ ಹಾಗೂ ಅದನ್ನು ಹಿಡಿಯಲು ಹೊರಟವನ ತಾದಾತ್ಮ್ಯ ಎರಡೂ ಒಂದೇ ಕ್ಷಣದಲ್ಲಿ ಸಂಭವಿಸುವ ವಿಸ್ಮಯ ಜಯಂತರ ಬರಹಗಳಲ್ಲಿ ಕಾಣಿಸುತ್ತದೆ. ಯಾವುದೋ ಅನುಭವ ಪೂರ್ಣ ದಕ್ಕಿಬಿಟ್ಟಿತು ಎಂಬ ಸಂತೃಪ್ತಿಯಲ್ಲಿ ಬರೆಯತೊಡಗಿದರೆ ಅಲ್ಲಿಗೆ ಬರಹಗಾರ ಮುಗಿದುಹೋಗುತ್ತಾನೆ. ಅವನೊಳಗೆ ಅರಿವಿಲ್ಲದೇ ಒಂದು ಅಹಂಕಾರ ನುಸುಳಿಬಿಡುತ್ತದೆ. ಆದರೆ, ಜಯಂತರ ಬರವಣಿಗೆ ಸದಾ ಬತ್ತದ ಒರತೆಯಂತೆ ತನ್ನ ಜೀವಂತಿಕೆ ಹಾಗೂ ತಾಜಾತನವನ್ನು ಕಳೆದುಕೊಳ್ಳದಂತೆ ಇರಲು ಅವರೊಳಗಿನ ಅತೃಪ್ತಿಯೂ ಕಾರಣ. ಈ ಅತೃಪ್ತಿ ಸೃಜನಶೀಲವಾದ ಹುಡುಕಾಟದಲ್ಲಿರುವ ಅತೃಪ್ತಿ. ಅವರೇ ಹೇಳುವಂತೆ ‘ನಾವು ತಿಳಿದಿದ್ದೇವೆ ಎಂಬ ಅಹಂಕಾರದಿಂದ ಬರೆಯುವುದಲ್ಲ. ಬರೆಯುವುದೇ ತಿಳಿಯುವುದಕ್ಕಾಗಿ!’ ಬರೆಯುತ್ತ ಬರೆಯುತ್ತ ತಿಳಿವಿನಲ್ಲಿ ತಿಳಿಯಾಗುತ್ತ ಹೋಗುವ ಒಂದು ಅದ್ಭುತ ಯಾನವಾಗಿ ಕಾಣುತ್ತಾ ಅವರ ಬರಹಗಳ ಲೋಕ ನಮ್ಮನ್ನು ಗಾಢವಾಗಿ ಆವರಿಸಿಕೊಳ್ಳುತ್ತದೆ.

ಜಯಂತರ ಸಂವೇದನೆಯನ್ನು ರೂಪಿಸಿದ ಗೋಕರ್ಣ ಹಾಗೂ ಮುಂಬೈ ಅವರೊಳಗೆ ಸದಾ ಅನುರಣಿಸುತ್ತ ಬಂದಿದೆ. ಅವೆರಡೂ ಊರುಗಳು ಅವರ ನೆನಪಿನಲ್ಲಿ ಸ್ಥಿರಚಿತ್ರವಾಗಿ ಉಳಿದುಬಿಟ್ಟ ಸ್ಮøತಿಗಳಲ್ಲ. ಅವು ಇಂದಿಗೂ ಅವರೊಳಗೆ ಬೆಳೆಯುತ್ತ, ಅವರನ್ನು ಬೆಳೆಸುತ್ತ ಬಂದ ರೂಪಕಗಳೂ ಹೌದು. ಉತ್ತರಕನ್ನಡದ ಗೋಕರ್ಣ ಅವರ ಹುಟ್ಟೂರಾದರೆ ಮುಂಬಯಿ ಅವರ ಕರ್ಮಭೂಮಿ. ಸಧ್ಯ ಬೆಂಗಳೂರು ಬದುಕಿನ ನೆಲೆ. ಕಡಲಿನಂಥ ನಿಗೂಢತೆ, ಉನ್ಮಾದ, ಬದುಕಿನ ಚೈತನ್ಯ, ಭಗ್ನತೆ, ಸಂಕಟ ಹಾಗೂ ಸಂಭ್ರಮವನ್ನು ಉತ್ತರ ಕನ್ನಡದ ಪರಿಸರದಲ್ಲಿ ಅರಳುವ ಇವರ ಕತೆಗಳು ಕಾಣಿಸುತ್ತವೆ. ಗೋಕರ್ಣದ ರಥಬೀದಿ, ಕೋಟಿತೀರ್ಥ, ಊರತುಂಬ ಇರುವ ಪಾಳುದೇಗುಲಗಳು, ಕಡಲತೀರದ ದೋಣಿಗಳು, ಬಸ್ಟ್ಯಾಂಡುಗಳು, ಊರೊಳಗಿನ ಬಸಳೆ ಚಪ್ಪರ, ಧಾರಾಕಾರ ಸುರಿವ ಮಳೆ, ಹೆಂಚಿನ ಮೇಲೆ ಹಗುರವಾಗಿ ಸುಳಿಯುವ ಹೊಗೆ…. ಹೀಗೆ ಸಣ್ಣಸಣ್ಣ ಸಂಗತಿಗಳೂ ಚಿತ್ರಗಳಾಗಿ ಮೂಡುತ್ತ ಹೋಗುತ್ತವೆ. ಮುಂದೆ ಉದ್ಯೋಗಕ್ಕಾಗಿ ಮುಂಬೈಯಲ್ಲಿ ನೆಲೆಸುವ ಜಯಂತ್ ಅಲ್ಲಿನ ಚಿತ್ರಗಳನ್ನೂ ಇದೇ ತನ್ಮಯತೆಯಿಂದ ಕಟ್ಟುತ್ತಾರೆ. ಮುಂಬೈ ಬದುಕಿನ ವೇಗದಲ್ಲಿ ಸರಿದು ಹೋಗುವ ಅನುಭವಗಳನ್ನು ಫೋಟೊಗ್ರಫಿಯಂತೆ ಸೆರೆಹಿಡಿಯುವ ಅವರ ಕತೆಗಳು ಬೆರಗೊಂದನ್ನು ಉಳಿಸಿಬಿಡುತ್ತವೆ. ಮುಂಬಯಿಯ ಬದುಕು ಯಾಂತ್ರಿಕ ಎನ್ನುವ ಮಾತನ್ನು ಅವರು ಒಪ್ಪುವುದಿಲ್ಲ. “ಮುಂಬೈ ಬದುಕು ಯಾಂತ್ರಿಕ ಅನ್ನುವುದು ಮಹಾ ಮಿಥ್. ಎಂಥಾ ದೈನಿಕವನ್ನೂ ಯಾಂತ್ರಿಕಗೊಳಿಸಿಬಿಡುವುದು ನಮ್ಮ ಚೇತನಕ್ಕೆ ಸಂಬಂಧಪಟ್ಟ ವಿಷಯ. ಇನ್‍ಫ್ಯಾಕ್ಟ್, ಅದು ಒಂದು ಮಹಾ ಬಿಡುಗಡೆಗೊಳಿಸುವ ಯೋಗಶಹರ. ಮುಂಬೈ ನನ್ನ ಗೆಳೆಯನಿದ್ದಹಾಗೆ”, ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಿದೆ. ನಮ್ಮ ಅನಾಮಿಕ ಚಹರೆಗಳನ್ನು ಕನ್ನಡಿಯಲ್ಲಿ ನೋಡಿಕೊಂಡಂತೆ ನೋಡಿಕೊಳ್ಳಲು, ಆ ಮೂಲಕ ನಮ್ಮಿಂದ ನಾವೇ ಬಿಡುಗಡೆ ಹೊಂದಲು ಮುಂಬೈ ಕಾರಣವಾಗುತ್ತದೆ. ಶಬ್ದದೊಳಗಿನ ನಿಃಶ್ಯಬ್ದವನ್ನು ಕಾಣುವ ದೃಷ್ಟಿಯಿರುವ ಜಯಂತರ ಗ್ರಹಿಕೆಗಳು ಅನನ್ಯವಾಗುವುದೇ ಈ ಕಾರಣದಿಂದ.

ಬರವಣಿಗೆಯಲ್ಲಿರುವ ‘ಅನಾಮಿಕರಾಗುವ’ ಸುಖದ ಬಗ್ಗೆ ಅವರು ಪ್ರಸ್ತಾಪಿಸುತ್ತಾರೆ. ಈ ಅನಾಮಿಕತೆಯಲ್ಲಿ ದೊಡ್ಡ ಬಿಡುಗಡೆಯಿದೆ. ಅದು ಕ್ಷಣಕ್ಷಣಕ್ಕೂ ಹೊಸಬನಾಗಿ/ಳಾಗಿ ಜಗತ್ತನ್ನು ಆಗತಾನೇ ಜನಿಸಿದ ಮಗುವಿನಂತೆ ನೋಡುವ ಬೆರಗಿನ ಭಾವ. ಹೀಗೆ ಹೊಸಬರಾಗುವಾಗ ಇದುವರೆಗೂ ಕಟ್ಟಿಕೊಂಡ ಸಿದ್ಧಚೌಕಟ್ಟುಗಳೆಲ್ಲ ಕಳಚಿಹೋಗುತ್ತವೆ. ಅವರೇ ಹೇಳುವಂತೆ, “ವಾಸ್ತವಕ್ಕಿಂತ ಉಜ್ವಲವಾದುದು ಇನ್ನೊಂದಿಲ್ಲ”. ನೆನಪುಗಳು ಕೂಡ ವಾಸ್ತವದ ಗಂಧ, ಗಾಳಿಯಲ್ಲಿ ಬೆರೆತೇ ನಮ್ಮ ಅನುಭವದ ಭಾಗವಾಗುತ್ತವೆ. ಈಕ್ಷಣದಾಚೆಗೆ ಏನೂ ಇಲ್ಲವೆಂಬಂತೆ ಬದುಕುವ ತೀವ್ರತೆಯನ್ನು ಅವರ ಕತೆಗಳು ಕಲಿಸುತ್ತವೆ. ಅಥವಾ ಈ ಒಂದು ಕ್ಷಣದಲ್ಲಿ ಹಿಂದಣ ಅನಂತ ಹಾಗೂ ಮುಂದಣ ಅನಂತಗಳೆರಡೂ ಬೆರೆತಿವೆಯೆಂಬ ಕೌತುಕವನ್ನು ಕಟ್ಟಿಕೊಡುತ್ತವೆ. ಇಂಥ ಕ್ಷಣಗಳನ್ನು ಧ್ಯಾನಿಸಿ ಕಟ್ಟುವ ಜಯಂತರ ಬರವಣಿಗೆಯಲ್ಲಿ ಆಧ್ಯಾತ್ಮದ ಸೆಳಕು ಕಾಣುವುದು ಈ ಕಾರಣಕ್ಕಾಗಿ. ದೈನಿಕದಲ್ಲಿಯೇ ದೈವಿಕವಾದುದನ್ನು ಕಾಣುವ ವಿಶಿಷ್ಟ ರೀತಿಯದು. ಅಲೌಕಿಕವೆಂಬುದು ದೂರತೀರದಲ್ಲೆಲ್ಲೋ ಸಿಗುವುದೆಂಬ ನಿರೀಕ್ಷೆಯಿಂದ ಹೊರಟರೆ ಅದು ಮಾಯಾಮೃಗವೇ. ಸರಿಯುತ್ತಿರುವ ಈ ಕ್ಷಣದಲ್ಲೇ ಅದನ್ನು ಕಾಣುವ ಹಾಗೂ ಥಟ್ಟನೆ ಮುಟ್ಟಿ ಅನುಭವಿಸುವುದಿದೆಯಲ್ಲ…. ಅದು ಜಯಂತರ ಪ್ರತಿಭೆಗೆ ದಕ್ಕಿದ ಅನನ್ಯ ಸಂಗತಿ.

ಯಾವ ಮಹತ್ವಾಕಾಂಕ್ಷೆಯಿಲ್ಲದೇ ಸುಮ್ಮನೆ ನೋಡುವ ನೋಟದಲ್ಲಿ ಜಯಂತ ಕಾಯ್ಕಿಣಿಯವರ ಸಂವೇದನೆ ಮೂಡುತ್ತ ಹೋಗುತ್ತದೆ. ‘ಹಾಗೆ ಸುಮ್ಮನೆ’ ಎಂಬುದು ಕೇವಲ ಉಡಾಫೆಯ ಪದವಲ್ಲ! ಅದು ಎಲ್ಲ ಪೂರ್ವಗ್ರಹಗಳನ್ನು ಕಳಚಿಕೊಂಡು ನೋಡುವ ಕ್ರಮ. ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತ…. ಎಂದು ಬೇಂದ್ರೆಯವರು ಹೇಳುತ್ತಾರಲ್ಲ…. ಹಾಗೆ. ಸಿದ್ಧಾಂತಗಳಲ್ಲಿ ಜಡಗೊಂಡ ಮನಸ್ಥಿತಿಯನ್ನು ಕೊಡವಿನೋಡಿದರೆ ಜಯಂತರ ಬರವಣಿಗೆಯಲ್ಲಿನ ದರ್ಶನವು ಗೋಚರಿಸುತ್ತದೆ. ಅತ್ಯಂತ ಸೃಜನಶೀಲ ಮನಸ್ಸು ಮಾತ್ರ ಸದಾ ಪರಿವರ್ತನಶೀಲ ಜಗತ್ತಿನ ಚಲನೆಯನ್ನು ಸೆರೆಹಿಡಿಯಬಲ್ಲದು. ಆ ಚಲನೆಯೊಳಗಿನ ಕಂಪನವನ್ನು ಕಾಣಬಲ್ಲದು. ಜಯಂತರ ಕತೆಗಳ ಸಂವೇದನೆ ಜಡಜಗತ್ತನ್ನು ಭೇದಿಸಿ ಅದರೊಳಗಿನ ಜೀವತಂತುಗಳನ್ನು ಮೀಟುವುದು ಸುಳ್ಳಲ್ಲ. ಆದ್ದರಿಂದಲೇ ಅವರನ್ನು ಓದುವುದೆಂದರೆ ವಿಶಿಷ್ಟವಾದ ಸೆಳೆತ. ಚಲನಶೀಲತೆಗೆ ಯಾವತ್ತಿಗೂ ಸಿದ್ಧಚೌಕಟ್ಟುಗಳೆಂದರೆ ಅಲರ್ಜಿ. ಜಯಂತರದು ಅಂಥ ಚಲನಶೀಲ ಹಾಗೂ ಸೃಜನಶೀಲ ದರ್ಶನ. ಅವರ ಬರಹಗಳು ಲೋಕವನ್ನು ಗ್ರಹಿಸುವ ಹೊಸಕ್ರಮವೊಂದನ್ನು ಕಾಣಿಸುವಷ್ಟು ಸಶಕ್ತವಾಗಿವೆ. ಇದನ್ನೇ ನಾವು ಮೀಮಾಂಸೆ ಎನ್ನಬಹುದು. ಆದರೆ, ಇದು ಸಿದ್ಧಗೊಂಡಿರುವ ಮೀಮಾಂಸೆಯಲ್ಲ. ‘ಆಗುತ್ತಲಿರುವ’ ಮೀಮಾಂಸೆ. ಕಟ್ಟುವುದಕ್ಕಿಂತ ಆಗುವುದು ಇಲ್ಲಿನ ಬರಹಕ್ಕೆ ಬಹುಮುಖ್ಯ. ರಚನೆಯಾಗುವುದೆಲ್ಲ ಮರುಕ್ಷಣಕ್ಕೆ ನಿರಚನಗೊಳ್ಳುವ, ಬದುಕಿನ ಕ್ಷಣಭಂಗುರತೆಯನ್ನು ಅರಿಯುವ ದಾರಿಗಳನ್ನು ಅವರ ಬರಹಗಳು ಸದ್ದಿಲ್ಲದೇ ನಿರ್ಮಿಸಿವೆ. ಅವರ ಆರಂಭದ ಕತೆಗಳಾದ ದಗಡೂಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯದಿಂದ ಹಿಡಿದು ಇತ್ತೀಚೆಗಿನ ಬಣ್ಣದ ಕಾಲು, ಚಾರ್ ಮಿನಾರ್, ಟಿಕ್ ಟಿಕ್ ಗೆಳೆಯ, ತೂಫಾನ್ ಮೇಲ್ ಮುಂತಾದ ಕತೆಗಳವರೆಗೆ ಇಂಥ ದಾರಿ ಹಬ್ಬಿಹರಡಿದೆ.

‘ದಗಡೂಪರಬನ ಅಶ್ವಮೇಧ’ವೆಂಬ ಕತೆಯಲ್ಲಿ ಮದುಮಗನನ್ನು ಕುದುರೆಯ ಮೇಲೆ ಮೆರವಣಿಗೆ ಮಾಡುವ ಸನ್ನಿವೇಶವೊಂದು ಬರುತ್ತದೆ. ಮದುಮಗನ ಅಣ್ಣನಿಗೆ ಇದು ಪ್ರತಿಷ್ಠೆಯ ವಿಷಯವಾದರೆ, ಮದುಮಗನಿಗೆ ಜೀವಭಯ! ಮೆರವಣಿಗೆಯ ಕುದುರೆ ಅಲ್ಲಿ ಕೇಳುವ ಸದ್ದೊಂದರಿಂದ ವಿಚಲಿತಗೊಂಡು ದಿಕ್ಕಾಪಾಲಾಗಿ ಓಡತೊಡಗುತ್ತದೆ. ಗೊತ್ತುಗುರಿಯಿಲ್ಲದೇ ಓಡುತ್ತ ಓಡುತ್ತ ಎಲ್ಲೋ ಸೇರುವ ಕುದುರೆಯಿಂದಾಗಿ ಆ ಮದುವೆ ನಿಂತುಹೋಗುವ ವಿಲಕ್ಷಣ ಸನ್ನಿವೇಶವೊಂದು ಅಲ್ಲಿ ನಿರ್ಮಾಣವಾಗುತ್ತದೆ. ಮೊದಮೊದಲು ಭಯದಿಂದ ಹೌಹಾರಿದ ಮದುಮಗನಿಗೆ ಕೊನೆಕೊನೆಗೆ ಈ ‘ಓಟ’ ಬಿಡುಗಡೆಯ ದಾರಿಯಾಗಿ ಕಾಣತೊಡಗುತ್ತದೆ. ಮನಸ್ಸಿಲ್ಲದ ಮದುವೆಯಿಂದ, ಕೆಲಸದಿಂದ ಆತ ಮುಕ್ತನಾಗುತ್ತಾನೆ. ‘ಅಮೃತಬಳ್ಳಿ ಕಷಾಯ’ ಕತೆಯಲ್ಲಿ ಯಾವ ಸೂಚನೆಯನ್ನೂ ಕೊಡದೆ ಆಸ್ಪತ್ರೆಗಳ ನೀರವತೆಯೆಡೆಗೆ ನಡೆದುಬಿಡುವ ತಾಯಿ, ಯಾರ್ಯಾರದೋ ತಬ್ಬಲಿತನವನ್ನು, ಮೂಕಸಂಕಟಗಳನ್ನು ಸಂತೈಸುವ ಅವಳ ತಾಯ್ತನ, ಫೋಟೊಗಳಿಗೆ ಫ್ರೇಮು ಹಾಕುವ ಆಕೆಯ ಮಗ, ಫ್ರೇಮಿನಾಚೆ ಬೆಳೆಯುವ ಅವರ ಕತೆ, ಮನುಷ್ಯ ಸಂವೇದನೆಯ ವಿಸ್ತರಣೆಯಾಗಿ ಬೆಳೆಯುತ್ತದೆ. ಚೌಕಟ್ಟುಗಳಿಂದ ಬಿಡುಗಡೆ ಪಡೆವ ಕ್ಷಣಗಳನ್ನು ಈ ಕತೆಗಳು ರೂಪಕಗಳ ಮೂಲಕ ಸೆರೆಹಿಡಿಯುತ್ತವೆ. ‘ಟಿಕ್ ಟಿಕ್ ಗೆಳೆಯ’ ಎಂಬ ಕತೆ ಆಧುನಿಕ ಜಗತ್ತಿನ ವೇಗ, ಓಟದ ಧಾವಂತ, ಬದುಕನ್ನು ಸ್ಪರ್ಧೆಯೆಂದು ಭಾವಿಸುವ ಒತ್ತಡಗಳಿಂದ ಓಡಬಯಸುವ ಮನುಷ್ಯ ಚೈತನ್ಯದ ನಿಜಮೊರೆಯನ್ನು ಆಲಿಸುವ ಅಪರೂಪದ ಕತೆ. ಚಾನಲ್ ಒಂದರ ಕ್ವಿಝ್ ಶೋಗಾಗಿ ಆಗಮಿಸಿದ ಮಧುಬನಿಯೆಂಬ ಹುಡುಗಿ ಬುದ್ದೂರಾಮನೆಂಬ ಉಡುಗನಿಗೆ ಮುಖಾಮುಖಿಯಾಗುವ ಕತೆಯು ಹೊಸಕಾಲದ ಆಧ್ಯಾತ್ಮವನ್ನು ಪರಿಚಯಿಸುತ್ತದೆ. ನಾನಾವಟಿ ಆಸ್ಪತ್ರೆಯಲ್ಲಿ ಪೇಷಂಟ್ ಆಗಿರುವ ಬುದ್ದೂರಾಮ ಆಗಷ್ಟೇ ಜನಿಸಿದ ಮಗುವಿನ ಮುಗ್ಧತೆಯಲ್ಲಿ ಲೋಕವನ್ನು ನೋಡುತ್ತಿರುವವನಂತೆ ತೋರುತ್ತಲೇ ಆಳವಾದ ಫಿಲಾಸಫಿಯೊಂದನ್ನು ಸೃಷ್ಟಿಸುತ್ತಿರುತ್ತಾನೆ. ಮಧುಬನಿಯ ತಂದೆ ಸೋಹನ್ ಲಾಲನ ಮಹತ್ವಾಕಾಂಕ್ಷೆ ಹಾಗೂ ಅಸಹಾಯಕತೆ ಎರಡಕ್ಕೂ ಪ್ರತಿಯಾಗಿ ತನ್ನ ಅಕಾರಣವಾದ ಜೀವನೋತ್ಸಾಹ ಹಾಗೂ ಬದುಕನ್ನು ಹಗುರಗೊಳಿಸುವ ತುಂಟತನಗಳಿಂದ ಕಂಗೊಳಿಸುತ್ತಾನೆ. ಆತ ಮಧುಬನಿಯ ಕೈಗಿತ್ತ ಟಿಶ್ಯೂ ಕಾಗದದಲ್ಲಿ ಮಾಡಿದ ದೋಣಿ ಅವಳಿಗೆ ಜಗತ್ತಿನ ಭಾರವನ್ನೆಲ್ಲವನ್ನೂ ಹೊತ್ತು ಬೆಳದಿಂಗಳಿನಲ್ಲಿ ಚಲಿಸುತ್ತಿರುವಂತೆ ಹಗುರಾಗಿ ತೋರುವುದು ಅವಳ ಮುಕ್ತಿಯ ಆತ್ಯಂತಿಕ ಕ್ಷಣ. ನಿನ್ನೆಯ ಸ್ಮøತಿಗಳಿಂದ, ನಾಳಿನ ನಿರೀಕ್ಷೆಗಳಿಂದ ಮುಕ್ತನಾಗಿ ಆ ಕ್ಷಣದ ಉಜ್ವಲತೆಯಲ್ಲಿ ಬದುಕುತ್ತಿರುವ ಬುದ್ದೂರಾಮ, ಕರೀನಾ ಕಪೂರಳ ಹಸ್ತಾಕ್ಷರಕ್ಕಾಗಿ ಹಂಬಲಿಸುವ ಅವನ ಕನಸುಗಾರಿಕೆ, ಮಧುಬನಿಯ ಒಳಗಿರುವ ಮಾನವೀಯ ಮಿಡಿತ ಎಲ್ಲವೂ ಒಂದರೊಳಗೊಂದು ಬೆರೆತು ಮುಕ್ತಿಯ ಹೊಸ ಭಾಷ್ಯವೊಂದನ್ನು ಬರೆಯುವಂತೆ ತೋರುತ್ತವೆ. ಆಧುನಿಕ ಭಾರತದ ಮದ್ಯಮವರ್ಗದ ಜನರ ವಿಚಿತ್ರ ತಳಮಳಗಳನ್ನು ಕಟ್ಟಿಕೊಡುವ ಕತೆ, ಆ ತಳಮಳಗಳಿಂದ ಬಿಡುಗಡೆ ಪಡೆವ ದಾರಿಯನ್ನು ಸೂಚಿಸುತ್ತದೆ. ಟಿಶ್ಯೂ ಕಾಗದದ ದೋಣಿ ಹಾಗೆ ಪಾರುಮಾಡುವ ರೂಪಕವಾಗಿ ಬರುತ್ತದೆ. ಈ ಎಲ್ಲ ಕತೆಗಳಲ್ಲಿ ಮಿಂಚುವುದು ಮಾತ್ರ ಮನುಷ್ಯತ್ವದ ಶೋಧ. ಪ್ರೀತಿ, ಮಮತೆ, ಕರುಣೆ, ಪೋಷಣೆ ಮುಂತಾದ ತಾಯ್ತನದ ಭಾವದ ವಿಸ್ತರಣೆಯಾಗಿ ಕತೆ ಬೆಳೆಯುತ್ತಿರುತ್ತದೆ.

ಹೌದು, ಜಯಂತರ ಕತೆಗಳಲ್ಲಿ ಮಗುತನ ಹಾಗೂ ತಾಯ್ತನಗಳೆರಡೂ ಒಟ್ಟೊಟ್ಟಿಗೆ ಬರುತ್ತ ಹೋಗುತ್ತವೆ. ತಬ್ಬಲಿ ಮಕ್ಕಳು ಜಯಂತರನ್ನು ಕಾಡುವುದು ಬಹುಶಃ ನಮ್ಮೊಳಗೂ ಇರುವ ತಬ್ಬಲಿ ಮಗುವಿನ ದ್ಯೋತಕವಾಗಿ! ಇಂಥ ಮಗುವನ್ನು ತನ್ನ ಮಮತೆಯ ಕಣ್ಣಲ್ಲಿ ಗ್ರಹಿಸುವ ತಾಯಿಯಾಗಿ ಕತೆಗಾರ ಜಯಂತ ಕಾಯ್ಕಿಣಿ ಅಭಿವ್ಯಕ್ತಗೊಳ್ಳುತ್ತಾರೆ. ‘ಬಣ್ಣದ ಕಾಲು’ ಕತೆಯ ಉಗ್ರ ತಂಟೆಕೋರ ಮಗು ಚಂದೂ. ಅವನನ್ನು ರಿಮಾಂಡ್ ಹೋಮಿಗೆ ಕಳಿಸಲು ಮುಂಬೈಗೆ ಬರುವ ಅವನ ಅಸಹಾಯಕ ತಂದೆ…. ಮುಂಬೈ ಶಹರದ ದಿಕ್ಕೇಡಿತನ, ಕ್ರೌರ್ಯಗಳ ದರ್ಶನವಾದಾಗ ಅಲ್ಲಿ ತನ್ನ ಮಗನನ್ನು ಬಿಟ್ಟು ಹೋಗಲಾರದ ತಂದೆ…. ಅಲ್ಲಿ ಕಾಣುವ, ಚಹಾ ಮಾರುವ ಚಂದೂನ ವಯಸ್ಸಿನದೇ ಹುಡುಗ ಪೋಪಟ್….. ಒಂದೊಂದು ಚಿತ್ರವೂ ಬಿಂಬವಾಗಿ ಕಾಡುತ್ತದೆ. ನಿದ್ದೆಹೋದ ಮಗನ ಸಪೂರ ಕೈಕಾಲುಗಳನ್ನು ಮಮತೆಯಿಂದ ನೋಡುತ್ತ ತನ್ನ ಉದ್ದೇಶವನ್ನೇ ಮರೆಯುವ ತಂದೆಯಲ್ಲಿ ಅಪ್ಪಟ ತಾಯ್ತನವೇ ಕಾಣುತ್ತದೆ. ಮನುಷ್ಯನ ಒಂಟಿತನ, ತಬ್ಬಲಿತನ, ಬದುಕಿನ ಭಗ್ನತೆಗಳನ್ನೂ ಛಕ್ಕನೆ ಕಾಣಿಸುವ ಜಯಂತರ ಕತೆ ಮಾನವೀಯ ಶೋಧದ ಪ್ರಕ್ರಿಯೆಯಾಗಿಯೇ ಕಾಣಿಸುತ್ತದೆ. “ಮಳೆನಿಂತ ಮೇಲಿನ ಭೂಮಿಯಿರುತ್ತಲ್ಲ, ಅಂಥ ಶುದ್ಧ ಮತ್ತು ಅನಾಥ ಸ್ಥಿತಿಯಲ್ಲಿ ನೀನು, ಮನುಷ್ಯನ ಅಳಲು ಮತ್ತು ಅರ್ಥಪೂರ್ಣತೆಗಾಗಿನ ಹಂಬಲಿಕೆಗಳನ್ನು ಅನುಭವಿಸುತ್ತಲೇ ನಮಗೆ ಕಾಣಿಸುತ್ತೀಯ. ಭಗ್ನ ಬದುಕಿನ ಎಷ್ಟೊಂದು ಜೀವಂತ ವಿವರಗಳು ನಿನಗೆ ಗೊತ್ತು! ಮತ್ತು ಅವುಗಳಲ್ಲಿ ಈ ಬದುಕು ಒಂದು ದಿವ್ಯ ಎಂದು ನೀನು ಹೊಳೆಸುತ್ತೀಯ”, ಎಂದು ಕವಿ ಎಸ್.ಮಂಜುನಾಥ ಹೇಳುವ ಮಾತು ಜಯಂತರ ಕತೆಗಳಿಗೆ ಹಿಡಿದ ಕನ್ನಡಿಯಂತಿದೆ.
ತಮ್ಮಷ್ಟಕ್ಕೆ ತಾವೇ ಒಂದು ಕಲಾಕೃತಿಯಂತೆ ಗೋಚರಿಸುವ ಜಯಂತರ ಕತೆಗಳು ಪ್ರಸ್ತುತ ಬದುಕಿಗೆ ಏನನ್ನು ಕೊಡುತ್ತವೆ? ಎಂಬಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸಹಜ. ಅವರು ಮನುಷ್ಯನ ಸಂಕಟಗಳನ್ನು ರೋಮ್ಯಾಂಟಿಕ್ ಆಗಿ ನೋಡುತ್ತಾರೆ ಎಂಬಂಥ ಅಪಸ್ವರಗಳನ್ನೂ ಕೆಲವರು ಎತ್ತಿದ್ದುಂಟು. ಮನುಷ್ಯತ್ವದ ಶೋಧದಿಂದ ದೂರ ಸರಿದು ಜಾತಿ ಮತಗಳ ಜಿದ್ದಿಗೆ ಬಿದ್ದ ಪ್ರಸ್ತುತ ಸಂದರ್ಭದಲ್ಲಿ ಜಯಂತರ ಕತೆಗಳನ್ನಿಟ್ಟು ನೋಡುವುದು ಹೇಗೆ, ಹಾಗಾದರೆ? ಜಯಂತ್ ಸಿದ್ಧಚೌಕಟ್ಟುಗಳನ್ನು ಮೀರುತ್ತಾರೆ, ಅಂತಃಕರಣವಿಲ್ಲದ ಸಿದ್ಧಾಂತಗಳನ್ನು ನಿರಾಕರಿಸುತ್ತಾರೆ ಎಂಬ ಅಂಶವೇ ಸಾಕು ಅವರನ್ನು ಸ್ವೀಕರಿಸಲು. ಮನುಷ್ಯ ತಾನೇ ಕಟ್ಟಿಕೊಂಡ ಸಿದ್ಧಚೌಕಟ್ಟುಗಳು ಬಿದ್ದು ಹೋದಮೇಲೆ ಅಲ್ಲಿ ಜಾತಿ ಮತಗಳೂ ಇರುವುದಿಲ್ಲ. ಶ್ರೇಷ್ಠತೆಯ ಅಹಂಕಾರವೂ ಇರುವುದಿಲ್ಲ. ಅಸಹನೆ, ಅಸಹಿಷ್ಣುತೆಯೆಂಬ ಭಾವನೆಗಳು ಅಲ್ಲಿ ಅರ್ಥಕಳೆದುಕೊಳ್ಳುತ್ತವೆ. ಜಯಂತರ ಅಂಬೋಣವೆಂದರೆ ಸಾಹಿತ್ಯ ಇರುವುದೇ ಮನುಷ್ಯನ ಒಳಗಿನ ಅಹಂಕಾರವನ್ನು ಕರಗಿಸುವುದಕ್ಕೆ. ಮನಸ್ಸಿನ ಜಿಡ್ಡನ್ನು ಉಜ್ಜಿತೊಳೆಯುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ಆಗ ಒಳಗಿನೊಳಗು ಬೆಳಗುತ್ತ ಮನುಷ್ಯತ್ವದ ನಿಜದರ್ಶನ ಸಾಧ್ಯವಾಗುತ್ತದೆ. ಆದರೆ… ಈಗ ಆಗುತ್ತಿರುವುದೇನು? ಮತ್ತೆ ಮತ್ತೆ ಜಾತಿ ಮತಗಳ ಜಿಡ್ಡು ಮೆತ್ತುವ ಕೆಲಸವನ್ನೇ ಯೋಜನಾಬದ್ಧವಾಗಿ ಮಾಡಲಾಗುತ್ತಿದೆ. ನಮ್ಮೊಳಗಿನ ಮನುಷ್ಯನನ್ನು ಅವನ/ಳ ಮೊರೆಯನ್ನು, ಅವನ/ಳ ನಿಷ್ಕಳಂಕ ಕಾಳಜಿಯನ್ನು ಮರೆಮಾಡಿ ಸ್ವಾರ್ಥಕ್ಕಾಗಿ ಯಾವ್ಯಾವುದೋ ಮುಖವಾಡ ತೊಡುತ್ತಿದ್ದೇವೆ. ಇದನ್ನೆಲ್ಲ ಆತ್ಮನಿರೀಕ್ಷಣೆಯ ಮೂಲಕ ಮೀರುವ ಪ್ರಯತ್ನವನ್ನು ಸಾಹಿತ್ಯ ಮಾಡಬೇಕು. “ಆದರೆ, ಉಪ್ಪೇ ಉಪ್ಪಿನ ಗುಣ ಕಳೆದುಕೊಂಡರೆ ಅದಕ್ಕೇನು ಮಾಡುವುದು?” ಎಂದು ಜಯಂತ್ ಪ್ರಶ್ನಿಸುತ್ತಾರೆ. ಕೊನೆಗೂ ಸಾಹಿತ್ಯವೆಂಬುದು ನಮ್ಮೊಳಗಿನ ಕೆಡುಕನ್ನು ಕಡಿಮೆ ಮಾಡುವ ನಮ್ರ ಪ್ರಯತ್ನ. ನಮ್ಮೊಳಗಿನ ಒಳಿತನ್ನು, ಜೀವಪರ ಮಿಡಿತಗಳನ್ನು ಉಜ್ವಲಗೊಳಿಸುವ ಪ್ರಯತ್ನವೂ ಹೌದು.

ಈ ಎಲ್ಲ ವಿಚಾರಗಳು ಮಥಿಸಿದ್ದು ಕಳೆದ ಫೆಬ್ರುವರಿ 5, 2017 ರಂದು ಮೈಸೂರಿನ ಕಲಾಸುರುಚಿ ರಂಗಮನೆಯಲ್ಲಿ ಏರ್ಪಡಿಸಿದ್ದ ಜಯಂತ ಕಾಯ್ಕಿಣಿಯವರೊಂದಿಗಿನ ಸಂವಾದದ ಸಂದರ್ಭದಲ್ಲಿ. ಈ ತಲೆಮಾರಿನ ಕನ್ನಡದ ಬಹುಮುಖ್ಯ ಕತೆಗಾರರಲ್ಲಿ ಒಬ್ಬರಾದ ಜಯಂತ ಕಾಯ್ಕಿಣಿಯವರೊಂದಿಗೆ ಅಷ್ಟು ಆಪ್ತವಾದ ಸಂವಾದ ನಡೆದದ್ದು ಪ್ರಾಯಶಃ ಇದೇ ಮೊದಲಿರಬೇಕು. ಯಾವ ಸೋಗಿಲ್ಲದೆ, ಸದಾ ಪ್ರಸ್ತುತಗೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಲ್ಲದೇ, ತಮ್ಮ ನಿಜದನಿಯನ್ನು ಕೇಳಿಸಿದ ಕಾಯ್ಕಿಣಿ ಕೇಳುಗರ ಎದೆಯೊಳಗೆ ಇಳಿಯುತ್ತಾ ಹೋದರು. ಮನಸ್ಸುಗಳನ್ನು ಆದ್ರ್ರಗೊಳಿಸಿದರು. ಆದಾಗ್ಯೂ……

ಆಗುತ್ತಲೇ ಇರುವ ಚಲನಶೀಲ ಜಗತ್ತಿನ ಮಿಡಿತಗಳನ್ನು ಕೇಳುವ, ಕೇಳಿಸುವ ಜಯಂತ ಕಾಯ್ಕಿಣಿಯವರ ಬರಹಗಳ ಒಳತೋಟಿಯನ್ನು ಗ್ರಹಿಸುವಲ್ಲಿ ಕನ್ನಡ ವಿಮರ್ಶೆಯ ಮಾನದಂಡಗಳು ಸೋತಿವೆಯೇ? ಅಥವಾ ಶ್ರೇಷ್ಠ ಕತೆಗಾರರ ಸಾಲಿನಲ್ಲಿ ನಿಲ್ಲಬಲ್ಲ ಎಲ್ಲ ಅರ್ಹತೆಯೂ ಇರುವ ಜಯಂತರನ್ನು ಕನ್ನಡ ವಿಮರ್ಶಾಲೋಕ ಕಡೆಗಣಿಸಿದೆಯೇ ಎಂಬ ಪ್ರಶ್ನೆ ಸಹೃದಯರಲ್ಲಿ ಮೂಡಿದ್ದು ಸುಳ್ಳಲ್ಲ.

9 thoughts on “ಸಖೀಗೀತ-8: ಚಲಿಸುವ ಜಗವ ಹಿಡಿದು ಹೊಳೆಯಿಸುವ ಕತೆಗಾರ ಕಾಯ್ಕಿಣಿ

 • October 18, 2017 at 12:44 PM
  Permalink

  It is in reality a nice and helpful piece of info. I’m satisfied that you shared this helpful info with us. Please keep us informed like this. Thank you for sharing.|

 • October 18, 2017 at 2:30 PM
  Permalink

  For latest information you have to pay a visit the web and on the web I found this site as a best web page for most up-to-date updates.|

 • October 18, 2017 at 4:16 PM
  Permalink

  I’ve been browsing on-line greater than 3 hours today, but I by no means discovered any fascinating article like yours. It’s beautiful price sufficient for me. In my view, if all site owners and bloggers made good content material as you did, the web can be a lot more helpful than ever before.|

 • October 20, 2017 at 7:29 PM
  Permalink

  I’m impressed, I have to admit. Seldom do I encounter a blog that’s
  both educative and interesting, and let me tell you, you have hit the nail on the head.
  The issue is an issue that too few people are speaking intelligently
  about. I’m very happy that I stumbled across this in my
  search for something relating to this.

 • October 21, 2017 at 1:26 AM
  Permalink

  I’m impressed, I have to admit. Rarely do I come across a blog that’s both equally educative and engaging, and let me tell you, you’ve hit the nail on the head. The issue is something which not enough people are speaking intelligently about. I am very happy I found this during my hunt for something regarding this.|

 • October 21, 2017 at 3:40 AM
  Permalink

  Thanks for the marvelous posting! I definitely enjoyed reading it, you are a great author.I will make sure to bookmark your blog and will eventually come back someday.
  I want to encourage one to continue your great job, have a nice
  weekend!

 • October 24, 2017 at 11:43 AM
  Permalink

  Its like you learn my mind! You seem to grasp a lot about this, like you wrote the e book in it or something. I believe that you can do with some % to pressure the message home a bit, but other than that, that is great blog. A great read. I will definitely be back.|

 • October 24, 2017 at 2:12 PM
  Permalink

  Howdy this is kind of of off topic but I was wondering if blogs use WYSIWYG editors or if you have to
  manually code with HTML. I’m starting a blog soon but
  have no coding experience so I wanted to get advice from someone with experience.

  Any help would be greatly appreciated!

Comments are closed.

Social Media Auto Publish Powered By : XYZScripts.com