ಬೆಳಗಿನ ಈ 5 ಅಭ್ಯಾಸಗಳು ನಿಮ್ಮನ್ನು ದಪ್ಪಗಾಗಿಸುತ್ತಿವೆ

“ಹಣ್ಣು-ತರಕಾರಿ ಚೆನ್ನಾಗಿ ತಿನ್ನುತ್ತಿದ್ದೇನೆ, ಸರಿಯಾಗಿ ಜಿಮ್ ಗೂ ಹೋಗ್ತಿದ್ದೀನಿ. ಜಂಕ್ ಫುಡ್ ಮುಟ್ಟಿ ಯಾವುದೋ ಕಾಲವಾಗಿದೆ. ಆದರೂ ಯಾಕೋ ದಪ್ಪಗಾಗುತ್ತಿದ್ದೇನೆ” ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಇದಾದರೆ ನೀವು ಈ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ. ಇವುಗಳನ್ನು ಸ್ವಲ್ಪ ಬದಲಾಯಿಸಿಕೊಳ್ಳುವುದರಲ್ಲಿ ನಿಮ್ಮ ತೂಕದ ಗುಟ್ಟಿದೆ.

1.ನಿದ್ದೆ ಜಾಸ್ತಿಯಾಗಿದೆ

ನಿದ್ದೆ ಕಡಿಮೆಯಾದರೆ ಹಸಿವು ಹೆಚ್ಚಾಗುತ್ತದೆ ಎನ್ನುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಆದ್ರೆ ದಿನಕ್ಕೆ 10 ಗಂಟೆಗಳಿಗಿಂತ ಹೆಚ್ಚಿನ ಸಮಯ ನಿದ್ದೆ ಮಾಡುವವರು ಬಹಳ ವೇಗವಾಗಿ ಮತ್ತು ಸುಲಭವಾಗಿ ತೂಕ ಹೆಚ್ಚಿಸಿಕೊಳ್ತಾರೆ. ಆದ್ದರಿಂದಲೇ ವೈದ್ಯರು ದಿನಕ್ಕೆ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಿ ಎನ್ನುತ್ತಾರೆ.

2. ಕತ್ತಲಲ್ಲೇ ರೆಡಿಯಾಗುತ್ತಿದ್ದೀರಾ

ಬೆಳಗೆದ್ದ ಕೂಡಲೇ ಮೊದಲು ಕಿಟಕಿಯ ಪರದೆ ಸರಿಸಿ ಬೆಳಕು ಒಳಬರಲು ಅನುವು ಮಾಡಿಕೊಡಿ. ಬೆಳಗ್ಗಿನ ಸೂರ್ಯಕಿರಣಗಳು ದೇಹದ ಕಣಗಳನ್ನು ಎಚ್ಚರಿಸಿ ಚುರುಕಾಗಿಸುತ್ತವೆ. ದಿನಕ್ಕೆ 20ರಿಂದ 30 ನಿಮಿಷಗಳಷ್ಟು ಸೂರ್ಯನ ಬೆಳಕು ನಿಮ್ಮ ಮೇಲೆ ಬಿದ್ದರೆ ದೈಹಿಕ ಕ್ರಿಯೆಗಳ ಚಟುವಟಿಕೆ ಬಹಳ ುತ್ತಮವಾಗಿರುತ್ತದೆ.

3. ನಿಮ್ಮ ಹಾಸಿಗೆಯನ್ನು ನೀವೇ ಸರಿಮಾಡುವುದಿಲ್ಲ

ಕೇಳುವುದಕ್ಕೆ ಇದು ವಿಚಿತ್ರ ಎನ್ನಿಸಬಹುದು. ಆದ್ರೆ ಅಮೇರಿಕಾದ ನ್ಯಾಷನಲ್ ಸ್ಲೀಪ್ ಫೌಂಡೇಶನ್ ವರದಿಯ ಪ್ರಕಾರ ತಮ್ಮ ಹಾಸಿಗೆಯನ್ನು ತಾವೇ ಸರಿಮಾಡುವ ಜನ ಉತ್ತಮ ನಿದ್ದೆಯ ಅಭ್ಯಾಸ ಹೊಂದಿರ್ತಾರಂತೆ. ಒಳ್ಳೆಯ ನಿದ್ದೆ ಒಳ್ಳೆಯ ಆರೋಗ್ಯಕ್ಕೆ ರಹದಾರಿ. ಅಂದರೆ ಸರಿಯಾದ ತೂಕ ಇರಬೇಕಾದ್ರೆ ಸರಿಯಾದ ನಿದ್ದೆಯೂ ಇರಲೇಬೇಕು.

4. ತೂಕ ನೋಡಿಕೊಳ್ಳುವುದನ್ನು ಮರೆತಿದ್ದೀರಿ

ಪ್ರತಿದಿನ ತೂಕ ನೋಡಿಕೊಳ್ಳುವ ಅಭ್ಯಾಸ ಇರುವವರ ತೂಕ ಹೆಚ್ಚುವುದಿಲ್ಲ. ಅವರು ತಮ್ಮ ದೇಹತೂಕದ ಮೇಲೆ ನಿಗಾ ಇಟ್ಟಿರುತ್ತಾರೆ. ಅದರಲ್ಲೂ ಬೆಳಗ್ಗೆ ಎದ್ದ ಕೂಡಲೇ ಏನನ್ನೂ ತಿನ್ನುವ ಅಥವಾ ಕುಡಿಯುವ ಮುನ್ನ ತೂಕ ನೋಡಿಕೊಳ್ಳುವುದು ಉತ್ತಮ. ರಾತ್ರಿಯೆಲ್ಲಾ ನೀರನ್ನೂ ಸೇರಿದಂತೆ ದೇಹ ಎಲ್ಲವನ್ನೂ ಜೀರ್ಣಿಸಿರುವುದರಿಂದ ಅದು ಅತ್ಯಂತ ನಿಖರವಾಗಿ ನಿಮ್ಮ ತೂಕವನ್ನು ತಿಳಿಯುವ ಸಮಯ.

5. ಬೆಳಗ್ಗಿನ ಉಪಹಾರವನ್ನು ಬಹಳ ಕಡಿಮೆ ಸೇವಿಸುತ್ತೀರಿ

ಬೆಳಗ್ಗಿನ ಉಪಹಾರಕ್ಕೆ ಬಗೆಬಗೆಯ ಆಹಾರದೊಂದಿಗೆ ನಿಮ್ಮನ್ನು ನೀವು ಖುಷಿಪಡಿಸಿಕೊಳ್ಳುವುದು ಅತ್ಯುತ್ತಮ ಎನ್ನುತ್ತಾರೆ ವೈದ್ಯರು. ಬೆಳಗ್ಗಿನ ತಿಂಡಿಯ ಜೊತೆ ಹಣ್ಣು, ಸಿಹಿಯನ್ನೂ ಸೇರಿಸಿಕೊಂಡು ತಿನ್ನುವುದು ಇಡೀ ದಿನ  ನಿಮ್ಮ ದೇಹ ಮತ್ತು ಮನಸ್ಸನ್ನು ಖುಷಿಯಾಗಿಡಬಲ್ಲದು. ಬೆಳಗ್ಗಿನ ಸಮಯ ದೇಹಕ್ಕೆ ಜೀರ್ಣಶಕ್ತಿ ಕೂಡಾ ಬಹಳ ಉತ್ತಮವಾಗಿರುತ್ತದೆ. ಹಾಗಾಗಿ ಇದು ದೇಹಕ್ಕೆ ಕೆಲಸ ಕೊಡುತ್ತದೆಯೇ ಹೊರತು ತೂಕ ಹೆಚ್ಚಿಸುವುದಿಲ್ಲ. ಬೆಳಗಿನ ಉಪಹಾರ ತಪ್ಪಿಸಿದರೆ ದೇಹತೂಕ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ಇವೆಲ್ಲವೂ ನಾವೆಲ್ಲರೂ ಸುಲಭವಾಗಿ ಪಾಲಿಸಬಹುದಾದ ನಿಯಮಗಳು. ದಿನಚರಿಯ ಜೊತೆಗೇ ಇವುಗಳನ್ನು ಅಳವಡಿಸಿಕೊಂಡರೆ ತೂಕ ಹೆಚ್ಚುವ ಆತಂಕದಿಂದ ಪಾರಾಗಬಹುದು. ಉತ್ತಮ ಆರೋಗ್ಯದ ಸಿಂಪಲ್ ಸೂತ್ರಗಳಿವು.

Comments are closed.

Social Media Auto Publish Powered By : XYZScripts.com