ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದರೆ 5 ಕೋಟಿ ಹಣ ಹಾಗೂ ಕ್ಲಾಸ್ 1 ನೌಕರಿ!

ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿಲ್ಲ. ನಮ್ಮ ರಾಷ್ಟ್ರದಲ್ಲಿ ಕ್ರೀಡೆಗೆ ಮತ್ತಷ್ಟು ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಧಾರವಾಡದಲ್ಲಿ ರಾಜ್ಯ ಒಲಂಪಿಕ್ಸ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರು ವಿದೇಶಕ್ಕೆ ಹೋಲಿಸಿದರೆ ನಮ್ಮಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ. ಯುವಕರು, ಯುವತಿಯರು ಹೆಚ್ಚೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಎರಡು ವರ್ಷಕ್ಕೊಮ್ಮೆ ಇಂತಹ ಕ್ರೀಡಾಕೂಟ ನಡೆಸಲು ಸೂಚಿಸಿದ್ದೇನೆ. ಈ ಬಗ್ಗೆ ಕಳೆದ ಬಜೆಟ್ ನಲ್ಲಿ ನಾನು ನಿರ್ಧಾರ ಮಾಡಿದ್ದೆ. ರಾಜ್ಯದಲ್ಲಿ ಕ್ರೀಡೆ ಅಭಿವೃದ್ಧಿಗೆ ಮುಂದಿನ ಬಜೆಟ್ ನಲ್ಲಿ ಕ್ರೀಡೆಗೆ ಹೆಚ್ಚು ಹಣ ನೀಡುತ್ತೇನೆ. ಒಲಂಪಿಕ್ಸ್ ಚಿನ್ನ ಗೆಲ್ಲೋ ಕರ್ನಾಟಕದವರಿಗೆ ಸರ್ಕಾರದಿಂದ ಐದು ಕೋಟಿ, ಬೆಳ್ಳಿ ಗೆದ್ದವರಿಗೆ ಮೂರು ಕೋಟಿ, ಕಂಚಿನ ಪದಕ ಗೆದ್ದವರಿಗೆ ಎರಡು ಕೋಟಿ ಕೊಡಲಾಗುವುದು. ಏಷ್ಯನ್, ಕಾಮನವೆಲ್ತ್ ನಲ್ಲಿ ಗೆದ್ದ ಕ್ರೀಡಾಪಟುಗಳಿಗೂ ಕೂಡ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದವರಿಗೆ ಕ್ಲಾಸ್ ಒನ್ ನೌಕರಿ ನೀಡಲಾಗುವುದು. ಧಾರವಾಡದಲ್ಲೊಂದು ಗರಡಿಮನೆ ಮಾಡಿಕೊಡಲಾಗುವುದು. ಸ್ಪೋರ್ಟ್ಸ ಕಾಂಪ್ಲೆಕ್ಸ್ ಮಾಡೋಕು ಹಣ ಕೊಡ್ತೀವಿ. ಕ್ರೀಡೆಗೆ ಎಲ್ಲ ಸಹಕಾರ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

Comments are closed.

Social Media Auto Publish Powered By : XYZScripts.com