ಸುತ್ತೋಣ ಬನ್ನಿ ಸಿಂಗಾಪುರವನ್ನು!

ಪ್ರತಿಯೊಬ್ಬ ವ್ಯಕ್ತಿಗೆ ತನ್ನ ದೇಶದ ಮೇಲೆ ಅಭಿಮಾನ, ಪ್ರೀತಿ ಸಹಜ. ಆದರೆ ವಿದೇಶದ ಮೇಲೆ..? ಆತನ ಯೋಚನೆ, ಅಭಿಲಾಷೆ ಕೊಂಚ ಅಧಿಕನೆ ಸರಿ. ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಲೋ, ಅಥವಾ ತನ್ನ ಘನತೆ ಹೆಚ್ಚಿಸಿಕೊಳ್ಳಲು ವಿದೇಶಕ್ಕೆ ಕಾಲಿಟ್ಟಿರುತ್ತಾನೆ. ವಿಶೇಷವೆಂದರೆ ವಿದೇಶದಲ್ಲೂ ಆತನ ಪ್ರಯತ್ನ, ತನ್ನ ನಾಡಿನವರನ್ನ, ತನ್ನ ಸಮುದಾಯದವರನ್ನ ಹುಡುಕೋದಲ್ಲೇ ಇರುತ್ತೆ.

ಅದರಲ್ಲೂ ವಲಸೆ ಬಂದವರ ಪಾತ್ರ ಪ್ರಮುಖವಾದುದು. ವಿವಿಧ ಪ್ರದೇಶಗಳಲ್ಲಿ ಬಂದು ನೆಲೆಸುವ ಅವರ ಕಥೆಗಳೇ ವಿಭಿನ್ನ. ಅದರಲ್ಲೂ ಪ್ರದೇಶ ತುಂಬಾ ಅವರದ್ದೇ ಸಮುದಾಯ ಆವರಿಸಿದ್ರೆ, ಅದೇ ಹೆಸರು ಆ ಸ್ಥಳಕ್ಕೂ ನಾಮಕರಣವಾಗುತ್ತೆ.

ಇಂತಹುದ್ದೇ ಒಂದು ಜಾಗ ಸಿಂಗಪುರ್ ನಲ್ಲಿದೆ. ಅದುವೇ “ಚೈನಾ ಟೌನ್”  ಬಹುತೇಕ ಚೀನೀಯರಿಂದ ಕೂಡಿರೋ ಸಿಂಗಪುರ್ ನಲ್ಲಿ ಚೈನಾ ಟೌನ್  ಗೆ ವಿಶೇಷ ಸ್ಥಾನ. ಬ್ರಿಟಿಷರಿಂದ ಪಡೆದ ಈ ಹೆಸರು, ಈಗಲೂ ಮುಂದುವರಿದಿದೆ. ಚೀನಿ ಭಾಷೆಯಲ್ಲಿ ಇದನ್ನ ” ನಿವ್ ಚೆ ಶುಯಿ” ಅಂತ ಕರೀತಾರೆ. ಅಂದರೆ “ಬುಲ್ ಕಾರ್ಟ್ ವಾಟರ್” ಎಂಬುದಾಗಿದೆ. 19ನೇ ಶತಮಾನದಲ್ಲಿ ಚೈನಾ ಟೌನ್ ಗೆ ಎತ್ತಿನ ಗಾಡಿ ಮೂಲಕ ಶುದ್ಧ ನೀರು ಸರಬರಾಜು ಮಾಡಲಾಗುತ್ತಿತ್ತು. ಸುತ್ತಮುತ್ತಲಿನ ಹಲವು ಪ್ರದೇಶಗಳೊಂದಿಗೆ ಸಂಯೋಜನೆಗೊಂಡಿರುವ ಚೈನಾ ಟೌನ್, ಈ ಹಿಂದೆ ಹಲವಾರು ಒಪ್ಪಂದಗಳಿಗೆ ಕೇಂದ್ರ ಬಿಂದುವಾಗಿತ್ತು.

ವ್ಯೆವಿಧ್ಯತೆಯಲ್ಲಿ ಏಕತೆ ಅನ್ನೋ ಪದಕ್ಕೆ ಚೈನಾ ಟೌನ್ ಉತ್ತಮ ಉದಾಹರಣೆ. ಚೀನಿಯರ ದೇವಾಲಯ, ಮುಸ್ಲಿಂರ ಮಸೀದಿ, ಹಿಂದೂಗಳ ದೇಗುಲ. ಹೀಗೆ ಒಂದ ಎರಡಾ … ಕಣ್ತುಂಬ ನೋಡೋವಷ್ಟು ಬಗೆಗಳು ಇಲ್ಲಿವೆ.

“ಬುದ್ಧ ಟೂತ್ ರೆಲಿಕ್ ಟೆಂಪಲ್ ಅಂಡ್ ಮ್ಯೂಸೀಯಮ್ “

ದಕ್ಷಿಣ ಬ್ರಿಗೇಡ್ ರೋಡ್ ನಲ್ಲಿದೆ ಈ ದೇಗುಲ. ಟ್ಯಾಂಗ್ ರಾಜವಂಶದ ವಾಸ್ತು ಶೈಲಿ ಇಲ್ಲಿ ಕಾಣಬಹುದು. 75 ಮಿಲಿಯನ್ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಬೌದ್ಧರ ಪವಿತ್ರ ದೇಗುಲ ಇದಾಗಿದೆ. ಬುದ್ಧನ ಕಲಾಕೃತಿಗಳ ಅನಾವರಣವನ್ನ ಮ್ಯೂಸಿಯಂ ನಲ್ಲಿ ಕಾಣಬಹುದು. ಅದರಲ್ಲೂ ಮೂಳೆ ಮತ್ತು ನಾಲಿಗೆಯ ಸ್ಮಾರಕ ವಿಶೇಷವಾಗಿದೆ. ಅಲ್ಲದೆ ಇಲ್ಲಿರುವ ಬುದ್ಧನ ಸ್ತೂಪ 3.5 ಟನ್ ತೂಕವಿದ್ದು, 320 ಕೆಜಿ ಬಂಗಾರದಿಂದ ನಿರ್ಮಿಸಲಾಗಿದೆ. ಇಲ್ಲಿಗೆ ಬೌದ್ಧ ಸನ್ಯಾಸಿಗಳಿಗೆ ಮಾತ್ರ ಪ್ರವೇಶವಿದ್ದು,  ಪ್ರವಾಸಿಗರು ಸಾರ್ವಜನಿಕ ಪ್ರದೇಶದಲ್ಲಿ ವೀಕ್ಷಿಸಬಹುದಾಗಿದೆ. 27 ಅಡಿ ಎತ್ತರದ ಮೈತ್ರೇಯ ಬುದ್ಧನ ಮೂರ್ತಿ, ಬುದ್ಧ ಶಕ್ಯ ಮುನಿಯ ಹಲ್ಲು ಈ ಮ್ಯೂಸಿಯಂನಲ್ಲಿದೆ. ಅಲ್ಲದೆ, ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಿನಿಮಾ. ಚರ್ಚೆಗಳು ನಡೀತಾನೆ ಇರುತ್ತೆ.

ಮಾಸ್ಕ್ಯೂ ಸ್ಟ್ರೀಟ್

ಈ ಬೀದಿಯಲ್ಲಿ ದಕ್ಷಿಣ ಭಾರತದ ಕೋರಮಂಡಲ ತೀರದ ಚುಲಿಯ ಮುಸ್ಲಿಂರು 1830 ನಲ್ಲಿ ಜಮಯಿ ಮಸೀದಿಯನ್ನ ನಿರ್ಮಿಸಿದ್ದಾರೆ. ಸಿಂಗಪುರದ ಅತ್ಯಂತ ಹಳೆಯ ಮಸೀದಿ ಇದಾಗಿದ್ದು, ಇಲ್ಲಿನ ವಾಸ್ತುಶಿಲ್ಪ ವಿಭಿನ್ನ ದೇಶಗಳ ಮಿಶ್ರಣದೊಂದಿಗೆ ರಚಿಸಲಾಗಿದೆ. ವಿಶೇಷವೆಂದರೆ, ಇಲ್ಲಿ ಧಾರ್ಮಿಕ ತರಗತಿಗಳು ಈಗಲೂ ತಮಿಳು ಭಾಷೆಯಲ್ಲಿ ನಡೆಯುತ್ತೆ.

ಟೆಂಪಲ್ ಸ್ಟ್ರೀಟ್ : ಶ್ರೀ ಮಾರಿಯಮ್ಮ ದೇವಾಲಯ ಇಲ್ಲಿದೆ. ಹಿಂದೂ ಸಮುದಾಯದ ಈ ದೇಗುಲ ಅತ್ಯಂತ ಹಳೆಯ ಹಾಗೂ ಪವಿತ್ರತೆಗೆ ಹೆಸರಾಗಿದೆ. 1827 ರಲ್ಲಿ ನಾಗಪಟ್ಟಣ ಹಾಗೂ ಕೂದ್ದಲೋರಿನಿಂದ ಬಂದ ವಲಸಿಗರು ಇದನ್ನ ಕಟ್ಟಿಸಿದ್ದಾರೆ. ಈ ಹಿಂದೆ ಇಲ್ಲಿ ಹಿಂದೂ ಸಮುದಾಯದ ಮದುವೆಗಳಿಗೆ ನೋಂದಣಿ ಮಾಡಲಾಗುತ್ತಿತ್ತು. ಪ್ರತೀವರ್ಷ ನಡೆಯುವ ” ಬೆಂಕಿಯಲ್ಲಿ ನಡಿಗೆ ” ಆಚರಣೆ ಈ ದೇವಾಲಯದ ವಿಶೇಷ.

ಸಾಗೋ ಸ್ಟ್ರೀಟ್ : 1850 ರಲ್ಲಿದ್ದ ಸಾಗೋ ಕಾರ್ಖಾನೆಗಳಿಂದಾಗಿ ಈ ಬೀದಿಗೆ ಸಾಗೋ ಎಂದು ಹೆಸರು ಬಂದಿದೆ. ಸ್ಪಂಜ್ ನಂತೆ ಮೆದುವಾದ ಉಷ್ಣವಲಯದ ಪಾಮ್ ಕಾಂಡವನ್ನು ಹೊಂದಿರುವ ಸಾಗೋ ಗಿಡದಿಂದ ಒಂದು ಬಗೆಯ ಹಿಟ್ಟನ್ನು ತಯಾರು ಮಾಡಲಾಗುತಿತ್ತು. ಅದನ್ನ ಕೇಕ್ ತಯಾರಿಕೆಗೆ ಬಳಸಲಾಗುತಿತ್ತು. ಹುಳಿ ಹಾಗೂ ಸಿಹಿ ಮಿಶ್ರಿತ ಕೇಕ್ ಇದಾಗಿತ್ತು. ಈ ಬೀದಿಯಲ್ಲಿ ಸುಮಾರು 30 ಕಾರ್ಖಾನೆಗಳಿದ್ದು, ಸುಮಾರು 8,000 ಟನ್ ಗಳಷ್ಟು ಹಿಟ್ಟನ್ನು ಇಲ್ಲಿ ತಯಾರು ಮಾಡಲಾಗುತಿತ್ತು.

ಸ್ಮಿತ್ ಸ್ಟ್ರೀಟ್ : ಯುರೋಪಿಯನ್ ವ್ಯಕ್ತಿ ಸೆನಿಲ್ ಕ್ಲೆಮಂಟಿ ಸ್ಮಿತ್ ಅವರ ಹೆಸರಿನಿಂದ ಈ ಬೀದಿಯನ್ನ ಕರೆಯಲಾಗುತ್ತೆ. ಚೀನಿ ವಿದ್ವಾಂಸರಾಗಿದ್ದ ಇವರು, ಸಿಂಗಪುರದಲ್ಲಿ ಆ ಕಾಲದಲ್ಲಿದ್ದ “ಸೀಕ್ರೆಟ್ ಸೊಸೈಟೀ” ಯ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ಹೊಂದಿದ್ದರು. “ಸೀಕ್ರೆಟ್ ಸೊಸೈಟೀ” ಅಂದರೆ ಇವು ಸಣ್ಣ ಸಣ್ಣ ಗುಂಪುಗಳಾಗಿದ್ದು, ಇವುಗಳ ಚಟುವಟಿಕೆಗಳು, ಒಳ ಕಾರ್ಯನಿರ್ವಹಣೆಗಳು ಕಾನೂನು ಬಾಹಿರವಾಗಿದ್ದವು. ಅಲ್ಲದೆ ಈ ಗುಂಪಿನ ಸದಸ್ಯರು ಹಿಂಸಾಚಾರ, ಸುಲಿಗೆ, ದುರಾಚಾರಗಳಲ್ಲಿ ತೊಡಗಿದ್ದರು.

ನೈಟ್ ಮಾರ್ಕೆಟ್ : ರಾತ್ರಿ ವೇಳೆಯಲ್ಲಿ ಮಾತ್ರ ಚಾಲನೆಯಲ್ಲಿರೋದು ಈ ಮಾರ್ಕೆಟ್ ನ ಸ್ಪೆಶಾಲಿಟಿ. ಓಪನ್ ಏರ್ ಮಾರ್ಕೆಟ್ ಇದಾಗಿದ್ದು, ಶಾಪಿಂಗ್, ಈಟಿಂಗ್, ಎಲ್ಲವೂ ಇಲ್ಲಿ ಲಭ್ಯ. ಇದನ್ನ “ಪಾಸರ್ ಮಾಲಾಮ್” ಅಂತಲೂ ಕರೀತಾರೆ. ಮಲಯ್ ಭಾಷೆಯಲ್ಲಿ ಪಾಸರ್ ಅಂದ್ರೆ  ಬಜ಼ಾರ್, ಮಾಲಾಮ್ ಅಂದ್ರೆ ರಾತ್ರಿ ಎಂದರ್ಥ.

ಇವುಗಳಷ್ಟೆ ಅಲ್ಲದೆ ವಿಭಿನ್ನ ಗಿಡಮೂಲಿಕೆಗಳು ದೊರೆಯುವ “ ಮೆಡಿಕಲ್ ಹಾಲ್”ಇಲ್ಲಿ ತುಂಬಾ ಫೇಮಸ್. ಚೀನಿಯರಲ್ಲಿ ಬಹುತೇಕ ಮಂದಿ ಅಲೋಪತಿಗೆ ಮೊರೆ ಹೋಗದೆ, ಈಗಲೂ ಔಷಧಿಯುಕ್ತ ಪ್ರಾಣಿಗಳು ಹಾಗೂ ಗಿಡಮೂಲಿಕೆಗಳನ್ನ ಮುಂದುವರಿಸಿದ್ದಾರೆ.

ಆಧುನಿಕ ಸಿಂಗಪುರದಲ್ಲಿ ಚೈನಾ ಟೌನ್ ಮಾತ್ರ ತನ್ನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪರಂಪರೆಯಿಂದ ಬಂದಂತಹ ಬ್ರ್ಯಾಂಡ್ ಗಳು ಈಗಲೂ ಕಾಣಬಹುದು. ಸಿಂಗಪುರದ ನಂಬರ್ ಒನ್ ಬ್ರ್ಯಾಂಡ್ ಆರ್ಚರ್ಡ್ ಚಾಪ್ ಸ್ಟಿಕ್ ಇಲ್ಲಿ ತಯಾರಾಗುತ್ತೆ. ರೇಷ್ಮೆ, ಸಾಂಪ್ರದಾಯಿಕ ಕರಕುಶಲತೆ, ಬಂಗಾರ ಹಾಗೂ ಪಚ್ಚೆ ಕಲ್ಲಿನ ಆಭರಣಗಳನ್ನುಇಲ್ಲಿ ತಯಾರು ಮಾಡಲಾಗುತ್ತೆ.

ಚೀನಿಯರ ಹೊಸ ವರ್ಷದಂದು ಚೈನಾ ಟೌನ್  ಮದುಮಗಳಂತೆ ಸಿಂಗಾರಗೊಳ್ಳುತ್ತೆ. ಬಣ್ಣ ಬಣ್ಣದ ಪುಷ್ಪಗಳು, ದೀಪಾಲಂಕಾರಗಳು ಎಲ್ಲೆಡೆ ರಾರಾಜಿಸುತ್ತಿರುತ್ತೆ. ಸಿಂಹದ ನೃತ್ಯ, ಡ್ರ್ಯಾಗನ್ ಡ್ಯಾನ್ಸ್, ಚೈನೀಸ್ ಒಪೆರಾ ಪ್ರದರ್ಶನಗಳು ಹೊಸ ವರ್ಷದ ದಿನಗಳಲ್ಲಿ ಪ್ರತಿ ನಿತ್ಯ ನಡೀತವೆ. 200ಕ್ಕೂ ಅಧಿಕ ಅಂಗಡಿ ಮುಂಗಟ್ಟುಗಳು ಇಲ್ಲಿವೆ. ಹಬ್ಬ ಹರಿದಿನಗಳಂದು ಈ ಮಾರುಕಟ್ಟೆ ಸುತ್ತೊದೆ  ಒಂದು ರೋಮಾಂಚನಕಾರಿಯಾಗಿರುತ್ತೆ.

ವೇಗದ ಬೆಳವಣಿಗೆಯಲ್ಲೂ ಪರಂಪರೆಯ ಶ್ರೀಮಂತಿಕೆಯನ್ನ ಇಲ್ಲಿ ಕಾಣಬಹುದು. “ಫುಕ್ ಟಕ್ ಚಿ” ಮ್ಯೂಸಿಯಂ, ಎನ್ ಯು ಎಸ್ ಬಾಬ ಹೌಸ್,  ಚೈನಾಟೌನ್ ಹೆರಿಟೇಜ್ ಸೆಂಟರ್, ಸಿಂಗಪುರ್ ಸಿಟೀ ಗ್ಯಾಲರೀ, ಟಿಯಾನ್ ಹಾಕ್ ಕೆಂಗ್ ಟೆಂಪಲ್, ಪಿನಾಕಲ್ ಅಟ್ ಡಕ್ಸನ್, ಸ್ಕೈ ಬ್ರಿಡ್ಜ್, ಚೈನೀಸ್ ಎಂಪೋರೀಯಮ್ “ಯೂ ಹ್ವ” ಚೈನಾಟೌನ್ ನಲ್ಲಿದೆ. ಅಲ್ಲದೆ, ಇಡೀ ಚೈನಾ ಟೌನ್ ನಲ್ಲಿ ಉಚಿತ Wi- Fi ಸೌಲಭ್ಯ ಇರೋದ್ರಿಂದ ಯಾವುದೇ ಮಾಹಿತಿಯನ್ನ ತಮ್ಮ ಮೊಬೈಲ್ ನಲ್ಲಿ ಥಟ್ಟನೆ ಪಡೆದುಕೊಳ್ಳಬಹುದಾಗಿದೆ.

ಒಟ್ಟಾರೆ, ಸಾಂಪ್ರದಾಯಿಕ ವ್ಯಾಪಾರ ಅಭಿವೃದ್ಧಿ ಹೊಂದುತ್ತಿದೆಯೋ ಅಥವಾ ಆಧುನಿಕ ವ್ಯಾಪಾರವು ಸಾಂಪ್ರದಾಯಿಕ ಪ್ರಭಾವಕ್ಕೊಳಗಾಗಿದೆಯೋ… ಆದರೆ ಆಧುನಿಕ ಚೈನಾ ಟೌನ್ ಉದ್ದಕ್ಕೂ ಕಲೆ, ಸಾಹಿತ್ಯss, ಸಂಸ್ಕೃತಿ ಅನಾವರಣಗೊಂಡಿದೆ.

5 thoughts on “ಸುತ್ತೋಣ ಬನ್ನಿ ಸಿಂಗಾಪುರವನ್ನು!

Comments are closed.

Social Media Auto Publish Powered By : XYZScripts.com